ಮಯಂಕ್ ಬ್ಯಾಟಿಂಗ್ ಮತ್ತು ಧ್ಯಾನ

7

ಮಯಂಕ್ ಬ್ಯಾಟಿಂಗ್ ಮತ್ತು ಧ್ಯಾನ

Published:
Updated:
ಮಯಂಕ್ ಬ್ಯಾಟಿಂಗ್ ಮತ್ತು ಧ್ಯಾನ

ಶತಮಾನಗಳ ಹಿಂದೆ ಗೌತಮ ಬುದ್ಧ ತೋರಿಸಿದ ಧ್ಯಾನದ ದಾರಿ ‘ವಿಪಸ್ಸನಾ’ ಇಂದಿನ ಆಧುನಿಕ ಕ್ರಿಕೆಟ್‌ನಲ್ಲಿ ಸಾಧನೆ ಮಾಡಲೂ ಕಾರಣವಾಗಬಲ್ಲದೇ?

ಹೌದು; ಕರ್ನಾಟಕ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಬ್ಯಾಟ್‌ನಿಂದ ಸತತವಾಗಿ ರನ್‌ಗಳ ಹೊಳೆ ಹರಿಯಲು ಈ ಧ್ಯಾನವೇ ಕಾರಣವಂತೆ. ಮಯಂಕ್ ಅವರ ತಂದೆ ಅನುರಾಗ್ ಅಗರವಾಲ್ ಈ ವಿಷಯವನ್ನು ಸಂತಸದಿಂದ ಹಂಚಿಕೊಳ್ಳುತ್ತಾರೆ.

ಈ ಬಾರಿಯ ದೇಶಿ ಕ್ರಿಕೆಟ್ ಋತುವಿನುದ್ದಕ್ಕೂ ಎದುರಾಳಿ ತಂಡದ ಬೌಲರ್‌ಗಳಿಗೆ ತಲೆನೋವಾಗಿರುವವರು ಮಯಂಕ್.  ರಣಜಿ ಟ್ರೋಫಿ ಟೂರ್ನಿಯಲ್ಲಿ 1160 ರನ್‌ಗಳನ್ನು ಪೇರಿಸಿದ್ದರು. ಅದರಲ್ಲಿ ಒಂದು ತ್ರಿಶತಕವೂ ಇತ್ತು.

ಇದೀಗ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿಯೂ ಅವರದ್ದೇ ಸದ್ದು.  ಒಟ್ಟು ಮೂರು ಶತಕ ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿರುವ ಮಯಂಕ್ ಆರು ಪಂದ್ಯಗಳಿಂದ 552 ರನ್‌ಗಳನ್ನು (ಕ್ವಾರ್ಟರ್‌ಫೈನಲ್ ವರೆಗೆ) ಗಳಿಸಿದ್ದಾರೆ. ಇದೂ ಕೂಡ ದಾಖಲೆಯಾಗಿದೆ.

ಆದರೆ 2015 ಮತ್ತು 2016ರಲ್ಲಿ ಅವರು ಏಳುಬೀಳುಗಳನ್ನು ಕಂಡಿದ್ದರು. ಇಷ್ಟೊಂದು ನಿರಂತರ ರನ್ ಗಳಿಕೆ ಸಾಧ್ಯವಾಗಿರಲಿಲ್ಲ. ತಾಂತ್ರಿಕವಾಗಿ ಉತ್ಕೃಷ್ಠತೆ ಇತ್ತು. ಆಪಾರ ಪರಿಶ್ರಮದಿಂದ ಅಭ್ಯಾಸವನ್ನೂ ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಫಲ ಸಿಕ್ಕಿರಲಿಲ್ಲ. ದೈಹಿಕವಾಗಿ ಸಬಲರಾಗಿದ್ದರೂ ಮಾನಸಿಕವಾದ ಗಟ್ಟಿತನ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವ ಸವಾಲು ಅವರ ಮುಂದಿತ್ತು. ಅದಕ್ಕಾಗಿಯೇ ಮಯಂಕ್ ಮನಸ್ಸು ವಿಪಸ್ಸನಾ ಧ್ಯಾನದತ್ತ ಹೊರಳಿತು.

‘ಮುಂಬೈನಲ್ಲಿ ಡಾ. ಕುಮಾರ್ ಅವರ ಬಳಿ ಹತ್ತು ದಿನಗಳ ವಿಪಸ್ಸನ ಧ್ಯಾನವನ್ನು ಕಲಿತು ಬಂದ ಮಯಂಕ್ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಬಾಲ್ಯದಿಂದಲೂ ಶಿಸ್ತು ಮತ್ತು ಬದ್ಧತೆಯನ್ನು ರೂಢಿಸಿಕೊಂಡಿರುವ ಮಯಂಕ್ ಈಗ ಪರಿಪೂರ್ಣತೆಯತ್ತ ಹೆಜ್ಜೆಯಿಟ್ಟಿದ್ದು ನೋಡಿ ಖುಷಿಯಾಗುತ್ತದೆ’ ಎಂದು ಅನುರಾಗ್ ಹೇಳುತ್ತಾರೆ.

ವಿಪಸ್ಸನಾ ಎಂದರೆ ನಮ್ಮೊಳಗಿನ ಶಕ್ತಿಯನ್ನು ಧ್ಯಾನದ ಮೂಲಕ ಅರ್ಥೈಸಿಕೊಳ್ಳುವುದು. ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವತ್ತ ಶ್ರಮಿಸುವುದು. ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತ, ಸುಧಾರಣೆಗಳನ್ನು ಮಾಡಿಕೊಳ್ಳುತ್ತ, ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳುವ ಸಾಧನ ಈ ಧ್ಯಾನ ಎಂದು ಬೌದ್ಧಧರ್ಮ ಹೇಳುತ್ತದೆ.

‘ಮಯಂಕ್ ಉತ್ತಮ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆತ ಸ್ನೇಹಜೀವಿ. ಸಂಬಂಧಗಳಿಗೆ ಹೆಚ್ಚು ಗೌರವ ಕೊಡುವ ವ್ಯಕ್ತಿ. ಏನೆಲ್ಲ ಸಾಧನೆ ಮಾಡಿದರೂ ಅಹಂಕಾರವನ್ನು ಹತ್ತಿರ ಸುಳಿಯಲು ಬಿಟ್ಟಿಲ್ಲ. ತಂಡದ ನಾಯಕ ಆರ್. ವಿನಯಕುಮಾರ್, ಹಿರಿಯ ಆಟಗಾರ ರಾಹುಲ್ ದ್ರಾವಿಡ್ ಮತ್ತು ಕೋಚ್ ಆರ್‌.ಎಕ್ಸ್‌. ಮುರಳಿ ಅವರ ಮಾರ್ಗದರ್ಶನವೂ ಪ್ರಮುಖ ಪಾತ್ರವಹಿಸಿವೆ‘ ಎಂದ ಅನುರಾಗ್ ವಿವರಿಸುತ್ತಾರೆ.

ಕೋಚ್ ಮುರಳಿ ಪ್ರಭಾವ: ಪ್ರತಿಯೊಬ್ಬ ಕ್ರಿಕೆಟಿಗನ ಜೀವನದಲ್ಲಿ ಏರಿಳಿತಗಳು ಸಹಜ. ಅದನ್ನು ಮಯಂಕ್ ಕೂಡ ಅನುಭವಿಸಿದ್ದಾರೆ. 2013ರಲ್ಲಿ ಮೈಸೂರಿನಲ್ಲಿ ಜಾರ್ಖಂಡ್ ಎದುರಿನ ರಣಜಿ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದರು. ಇನಿಂಗ್ಸ್‌ ಆರಂಭಿಸಿದ್ದ ಅವರು 90 ರನ್‌ಗಳಿಗೆ ಔಟಾಗಿದ್ದರು. ಆನಂತರ ತಂಡದ ಗೆಲುವಿಗೆ ಹಲವು ಮಹತ್ವದ ಕಾಣಿಕೆಗಳನ್ನು ನೀಡಿದ್ದರು. ಪ್ರತಿಯೊಂದು ಹಂತದಲ್ಲಿಯೂ ಅವರಿಗೆ ಕೋಚ್ ಆರ್.ಎಕ್ಸ್‌. ಮುರಳಿ ಮಾರ್ಗದರ್ಶಕರಾಗಿದ್ದರು.

ಮಯಂಕ್ ಅವರು ಜೂನಿಯರ್ ಕ್ರಿಕೆಟ್ ಆಡುವ ದಿನಗಳಿಂದಲೂ ಮುರಳಿ ಮಾರ್ಗದರ್ಶನ ನೀಡಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ಪೂರ್ಣಾವಧಿ ಕೋಚ್  ಆಗಿ ಅವರಿಗೆ ತರಬೇತಿ ನೀಡುತ್ತಿದ್ದಾರೆ.

‘ಇವತ್ತಿನ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ದೈಹಿಕ ಬಲದ ಜೊತೆಗೆ ಮಾನಸಿಕ ಗಟ್ಟಿತನವೂ ಪ್ರಮುಖವಾಗಿದೆ. ಕಡಿಮೆ ರನ್ ಗಳಿಸಿ ಔಟಾದಾಗ ಆವರಿಸುವ ಬೇಸರವನ್ನು ಕಳಚಿಕೊಳ್ಳುವ ಬಗೆಯನ್ನು ಮಯಂಕ್ ಕಲಿತಿದ್ದಾರೆ. ಅದರಿಂದಾಗಿ ಮುಂದಿನ ಸವಾಲಿಗೆ ಸಿದ್ಧವಾಗುವ ಸಕಾರಾತ್ಮಕ ಮನಸ್ಥಿತಿ ನಿರ್ಮಿಸಿಕೊಳ್ಳುತ್ತಾರೆ. ಆದ್ದರಿಂದಲೇ ಅವರ ಬ್ಯಾಟ್‌ನಿಂದ ರನ್‌ಗಳು ಸರಾಗವಾಗಿ ಹರಿಯುತ್ತಿವೆ. ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗುತ್ತಿದೆ’ ಎಂದು ಮುರಳಿ ಹೇಳುತ್ತಾರೆ.

ಹೋದ ನವೆಂಬರ್ 1ರಂದು ಪುಣೆಯಲ್ಲಿ ನಡೆದಿದ್ದ ಮಹಾರಾಷ್ಟ್ರ ಎದುರಿನ ರಣಜಿ ಪಂದ್ಯದಲ್ಲಿ ಅವರು ಬರೋಬ್ಬರಿ 12 ಗಂಟೆ ಕ್ರೀಸ್‌ನಲ್ಲಿದ್ದರು. ತ್ರಿಶತಕ ಬಾರಿಸಿದ್ದರು. ಅಷ್ಟಕ್ಕೆ ತೃಪ್ತಿಯಾಗದ ಅವರು ನಂತರದ ಪಂದ್ಯಗಳಲ್ಲಿಯೂ ಮಿಂಚಿದ್ದರು. ಆದರೆ ನಾಕೌಟ್ ಹಂತದ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿರಲಿಲ್ಲ. ಆದರೆ ಆ ಕೊರಗನ್ನು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸರಿದೂಗಿಸಿದ್ದಾರೆ.  ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದಾರೆ. ವೈಫಲ್ಯದ ಸುಳಿಯಿಂದ ಯಶಸ್ಸಿನ ಶಿಖರಕ್ಕೇರುವ ಮತ್ತು ಆ ಎತ್ತರವನ್ನು ಸತತವಾಗಿ ಕಾಪಾಡಿಕೊಳ್ಳುವತ್ತ ‘ಧ್ಯಾನಸ್ಥ’ರಾಗಿದ್ಧಾರೆ.

***

ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ಎಲ್ಲ ಅರ್ಹತೆಯೂ ಮಯಂಕ್ ಅವರಿಗೆ ಇದೆ. ಆಯ್ಕೆದಾರರು ಚಿತ್ತ ಹರಿಸಬೇಕು.  ಆಫ್‌ಸೈಡ್‌ ಡ್ರೈವ್‌ಗಳನ್ನು ನಿಖರವಾಗಿ ಆಡುವ ಮಯಂಕ್ ವಿಶ್ವದ ಯಾವುದೇ ಬೌಲರ್‌ ಎದುರು ಕೂಡ ಮಿಂಚಬಲ್ಲರು.

–ಆರ್‌.ಎಕ್ಸ್‌. ಮುರಳಿ, ಕೋಚ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry