ಕತೆ ಹೇಳುತ್ತಾ ಪಾಠ ಮಾಡಿದ ಪರಿ

7

ಕತೆ ಹೇಳುತ್ತಾ ಪಾಠ ಮಾಡಿದ ಪರಿ

Published:
Updated:
ಕತೆ ಹೇಳುತ್ತಾ ಪಾಠ ಮಾಡಿದ ಪರಿ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಪ್ರೌಢಶಾಲೆಯ ಶಿಕ್ಷಣ ಮುಗಿಸಿದವನು ನಾನು. ಬಿ.ಎಸ್.ಎಸ್. ಎಂಬ ಸಂಕೇತದಲ್ಲಿ ಖ್ಯಾತರಾಗಿದ್ದ ನಮ್ಮ ಕನ್ನಡ ಮೇಷ್ಟ್ರು ಬೋರೇಗೌಡರು ನನ್ನ ಇಷ್ಟದ ಗುರುಗಳು.

ಅವರು ತರಗತಿಯಲ್ಲಿ ಮಹಾಭಾರತದ ಪಾತ್ರಗಳನ್ನು ಮನೋಜ್ಞವಾಗಿ ಪರಿಚಯಿಸುತ್ತಿದ್ದರು. ಅವರ ಪಾಠ ಇಂದಿಗೂ ಮನಸ್ಸಿನಲ್ಲಿ ನೆಲೆನಿಂತಿದೆ. ಮಹಾಭಾರತದ ಪರ್ವಗಳು, ಭೀಷ್ಮ, ವೇದವ್ಯಾಸ ಭಾರತ, ಕುಮಾರವ್ಯಾಸ ಭಾರತ ಮುಂತಾದ ಪುಸ್ತಕಗಳನ್ನು ಓದುವಂತೆ ಮಾಡಿದ್ದೂ ಅವರ ಕಥನ ಶೈಲಿಯೇ. ಕನ್ನಡ ವ್ಯಾಕರಣವನ್ನು ಸರಳವಾಗಿ ಅರ್ಥ ಮಾಡಿಸುತ್ತಿದ್ದ ರೀತಿಯಂತೂ ಅಮೋಘವಾಗಿತ್ತು.

ಅವರು ತರಗತಿಗೆ ಪ್ರವೇಶಿಸುತ್ತಿದ್ದಂತೆ ಮಹಾಭಾರತ ಕಥೆ ಹೇಳುವಂತೆ ನಾವೆಲ್ಲಾ ಬಲವಂತ ಮಾಡುತ್ತಿದ್ದೆವು. ಈಗ ನಾನು ನನ್ನ ವಿದ್ಯಾರ್ಥಿಗಳಿಗೆ ಪುರಾಣದ ಕತೆ ಹೇಳುತ್ತಾ ಕನ್ನಡದ ಬಗ್ಗೆ ಅಭಿಮಾನ, ಜ್ಞಾನ ಹೆಚ್ಚಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದೇನೆ. ಬೋರೇಗೌಡ ಮೇಷ್ಟ್ರು ನನಗೆ ಮಾದರಿ. ಒಂದು ದಿನ ಆಕಸ್ಮಿಕವಾಗಿ ಕ್ಯಾತನಹಳ್ಳಿಗೆ ಹೋಗಬೇಕಾಗಿತ್ತು. ಬಸ್ ಇಳಿಯುತ್ತಿದ್ದಂತೆಯೇ ನನ್ನ ಈ ನೆಚ್ಚಿನ ಮೇಷ್ಟ್ರ ಸಾವಿನ ಸುದ್ದಿ ತಿಳಿಯಿತು. ಅನಿರೀಕ್ಷಿತವಾಗಿ ಕ್ಯಾತನಹಳ್ಳಿಗೆ ಹೋಗಿದ್ದರೂ ಗುರುಗಳ ಅಂತಿಮ ದರ್ಶನದ ಅವಕಾಶ ಸಿಕ್ಕಿತು. ಇದೂ ಒಂದು ರೀತಿಯ ಋಣಾನುಬಂಧ ಅಂದುಕೊಳ್ಳುತ್ತೇನೆ.

ಪ್ರದೀಪ್ ಎನ್. ಚೆಲುವರಸನಕೊಪ್ಪಲು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry