ತೆಲುಗು ಸುಂದರಿಯ ಫ್ಯಾಷನ್ ಲೋಕ

7

ತೆಲುಗು ಸುಂದರಿಯ ಫ್ಯಾಷನ್ ಲೋಕ

Published:
Updated:
ತೆಲುಗು ಸುಂದರಿಯ ಫ್ಯಾಷನ್ ಲೋಕ

ತನ್ನನ್ನು ತಾನು ‘ತ್ರಿಲೋಕ ಸುಂದರಿ’ ಎಂದೇ ಕರೆದುಕೊಳ್ಳಲು ಇಷ್ಟಪಡುವ ಈ ಸುಂದರಿ, ‘ಸೌಂದರ್ಯವೇ ಜಗತ್ತಿನ ಅತಿದೊಡ್ಡ ಆಸ್ತಿ’ ಎಂಬ ನಂಬಿಕೆ ಇರುವವರು.

ಹಾಲು ಬಿಳುಪು ಬಣ್ಣ, ಮುದ್ದಾದ ಮುಖ, ಹೊಳೆಯುವ ಕಣ್ಣುಗಳು, ಎತ್ತರದ ವ್ಯಕ್ತಿತ್ವ. ಇವೆಲ್ಲವೂ ಇವರ ಸೌಂದರ್ಯಕ್ಕೆ ಸಾಕ್ಷಿಯೂ ಹೌದು. ಮಾಡೆಲಿಂಗ್ ಸೆಳೆತವಿದ್ದರೂ ಆಪ್ತವಾದದ್ದು ಜಾಹೀರಾತು ಕ್ಷೇತ್ರ. ಜಾಹೀರಾತು ಕ್ಷೇತದಲ್ಲೇ ಇದ್ದುಕೊಂಡು ಹೆಸರು ಸಾಧಿಸಬೇಕು ಎಂದುಕೊಂಡಿರುವ ಇವರ ಹೆಸರು ಶಿರೀಷಾ ಪಾಟೀಲ್.

ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣದವರು. ಕೆಲ ವರ್ಷಗಳಿಂದ ನಗರದಲ್ಲೇ ನೆಲೆಸಿದ್ದಾರೆ. ಎಂಬಿಎ ಪದವೀಧರೆಯಾಗಿರುವ ಶಿರೀಷಾ ಪ್ರಸ್ತುತ ಟಿಸಿಎಸ್ ಕಂಪನಿಯ ಉದ್ಯೋಗಿ.

ಬಾಲ್ಯದಿಂದಲೂ ಇವರಿಗೆ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ವಿಶೇಷ ಒಲವು. ಅದುವೇ ಅವರನ್ನು ಫ್ಯಾಷನ್ ಜಗತ್ತಿನತ್ತ ಹೊರಳುವಂತೆ ಮಾಡಿತ್ತು. ಪತ್ರಿಕೆಯೊಂದರಲ್ಲಿ ಇವರು ರೂಪದರ್ಶಿಯಾಗಿದ್ದ ಫೋಟೊ ಪ್ರಕಟಗೊಂಡಿತ್ತು. ಅಲ್ಲಿಂದ ಮಾಡೆಲಿಂಗ್ ಪಯಣ ಆರಂಭವಾಗಿತ್ತು. ಮೊದಲ ಬಾರಿಗೆ ‘ಓನ್ಲಿ ವಿಮಲ್’ ಸೀರೆ ಜಾಹೀರಾತಿಗೆ ಆಯ್ಕೆಯಾದರು. ಆಗ ಅವರಿನ್ನು ಹತ್ತನೇ ತರಗತಿ ವಿದ್ಯಾರ್ಥಿನಿ. ಜಾಹೀರಾತಿನಲ್ಲಿ ನಟಿಸಬೇಕೆ, ಬೇಡವೇ ಎನ್ನುವ ಗೊಂದಲದಲ್ಲಿದ್ದಾಗ ತಂದೆ–ತಾಯಿ ಸಂಪೂರ್ಣ ಸಹಕಾರ ನೀಡಿ ಗೊಂದಲ ದೂರ ಮಾಡಿದ್ದರು. ಕಾಲೇಜಿನಲ್ಲಿ ಓದುತ್ತಿದ್ದಾಗ ಕಳಾನೀಕೇತನ್ ಸೀರೆ ಜಾಹೀರಾತಿಗೆ ಆಯ್ಕೆಯಾದರು, ಅಲ್ಲಿ ‘ಬೆಸ್ಟ್ ಕ್ಲಿಯರ್ ಫೇಸ್’ ಎಂಬ ಬಿರುದು ಇವರ ಮುಡಿಗೇರಿತು.

ಮದುವೆಯಾದ ಮೇಲೆ ಜಾಹೀರಾತು ನಟನೆಗೆ ಬ್ರೇಕ್ ನೀಡಿದ್ದರು. ಮಾಡೆಲಿಂಗ್ ಜೊತೆಗೆ ಹಾಡು ಕೇಳುವುದು, ಡಾನ್ಸ್ ಮಾಡುವುದು, ಮನೆ ಸ್ವಚ್ಛಗೊಳಿಸುವುದು, ಹೊಸ ಹೊಸ ಅಡುಗೆ ತಯಾರಿಸುವುದು ಇವರ ನೆಚ್ಚಿನ ಹವ್ಯಾಸಗಳು.

ಫ್ಯಾಷನ್ ಪರಿಭಾಷೆಯನ್ನು ಶಿರೀಷಾ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ‘ನಾವು ಧರಿಸಿರುವ ಬಟ್ಟೆ ಅಥವಾ ನಮ್ಮ ಹೊರನೋಟವನ್ನು ನೋಡಿ ಜನರು ವಾವ್ ಎನ್ನಬೇಕು. ಡ್ರೆಸ್‌, ಮೇಕಪ್‌, ಹೇರ್‌ಸ್ಟೈಲ್ ಹೀಗೆ ಯಾವುದನ್ನೇ ಆಗಲಿ ಇನ್ನೊಬ್ಬರು ಫಾಲೋ ಮಾಡಿದರೆ ಅದೇ ಫ್ಯಾಷನ್‌’ ಎನ್ನುತ್ತಾರೆ.

ಚಾಕೊಲೆಟ್ ಪ್ರಿಯೆಯಾಗಿರುವ ಇವರು ಫಿಟ್‌ನೆಸ್‌ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ. ತಿನ್ನುವ ಆಹಾರದಲ್ಲೇ ಸಮತೋಲನ ಕಾಯ್ದುಕೊಳ್ಳುತ್ತಾರೆ. ಬಾಯಿಗೆ ರುಚಿ ಎನ್ನಿಸಿದ ಆಹಾರಗಳೆಲ್ಲವನ್ನೂ ತಿನ್ನುವುದಿಲ್ಲ. ಜಿಮ್‌, ವ್ಯಾಯಾಮ ಎಂದು ದೇಹ ದಂಡಿಸದೆ ಆಹಾರದಲ್ಲೇ ಫಿಟನೆಸ್ ಕಾಪಾಡಿಕೊಳ್ಳುತ್ತಾರೆ. ಬೆಂಗಳೂರಿನ ಬಗ್ಗೆ ತುಂಬು ಅಭಿಮಾನದಿಂದ ಮಾತನಾಡುವ ಇವರು ‘ಹೊರರಾಜ್ಯದಿಂದ ಬಂದ ನನಗೆ ಈ ನಗರ ತುಂಬಾ ಸಹಾಯ ಮಾಡಿದೆ. ಇಲ್ಲಿ ಜಾಹೀರಾತು ಜಗತ್ತಿಗೆ ನನ್ನನ್ನು ನಾನು ಇನ್ನಷ್ಟು ತೆರೆದುಕೊಳ್ಳುವಂತೆ ಮಾಡಿದೆ. ಈಗಲೂ ನನಗೆ ಅನೇಕ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ’ ಎಂದು ಸಂತಸವನ್ನು ಹಂಚಿಕೊಳ್ಳುತ್ತಾರೆ.

‘ಜೀವನ ತುಂಬಾ ಚಿಕ್ಕದು, ಜೀವನದ ಪ್ರತಿ ಕ್ಷಣವನ್ನೂ ಎಂಜಾಯ್ ಮಾಡಬೇಕು, ಏನು ಶ್ರಮವಿಲ್ಲದೇ ಸುಮ್ಮನೆ ಇದ್ದುಕೊಂಡು ಸಾಧಿಸಬೇಕು ಎಂದುಕೊಂಡರೆ ಆಗುವುದಿಲ್ಲ. ಜೀವನದಲ್ಲಿ ಏಳು–ಬೀಳುಗಳನ್ನು ಸಮವಾಗಿ ಸ್ವೀಕರಿಸಬೇಕು. ಆಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಜೀವನದಲ್ಲಿ ನಾನು ಇರಿಸಿದ ಪ್ರತಿ ಹೆಜ್ಜೆಯಲ್ಲೂ ಯಶಸ್ಸು ಕಾಣಬೇಕು ಎನ್ನುವುದೇ ನನ್ನ ಕನಸು’ ಎನ್ನುತ್ತಾ ಮಾತು ಮುಗಿಸುತ್ತಾರೆ ಈ ಚೆಲುವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry