ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಖರ ವಿಚಾರಗಳ ನಿಷ್ಠುರವಾದಿ: ಮಗನ ಕಣ್ಣಲ್ಲಿ ಎ.ಕೆ.ಸುಬ್ಬಯ್ಯ

Last Updated 27 ಆಗಸ್ಟ್ 2019, 11:55 IST
ಅಕ್ಷರ ಗಾತ್ರ

‘ಚಳವಳಿಗಾರ, ಹೋರಾಟಗಾರ, ನಿಷ್ಠುರವಾದಿ ಎಂದೆಲ್ಲಾ ನಾನು ಅಪ್ಪನನ್ನು ನೋಡಬಹುದಾದರೂ ಅಪ್ಪ ನನ್ನ ಪಾಲಿಗೊಂದು ವಿಸ್ಮಯ ವ್ಯಕ್ತಿತ್ವ’ ಎಂದೇ ತಮ್ಮ ತಂದೆಯನ್ನು ವಕೀಲ ಮತ್ತು ಎ.ಕೆ.ಸುಬ್ಬಯ್ಯ ಅವರ ಪುತ್ರಎ.ಎಸ್‌.ಪೊನ್ನಣ್ಣ ನೆನೆಯುತ್ತಾರೆ. ಈ ಬರಹ ಫೆ 28, 2018ರಂದು ಮೊದಲ ಬಾರಿ ಪ್ರಕಟವಾಗಿತ್ತು.

---

ನನ್ನಪ್ಪ ಅಜ್ಜಿಕುಟೀರ ಕಾರ್ಯಪ್ಪ ಸುಬ್ಬಯ್ಯ (ಎ.ಕೆ.ಸುಬ್ಬಯ್ಯ) ಈಗ 83ರ ಹೊಸ್ತಿಲಲ್ಲಿ ಇದ್ದಾರೆ. ಹುಟ್ಟಿದ್ದು ವಿರಾಜಪೇಟೆ ತಾಲ್ಲೂಕಿನ ಕೋಣಗೇರಿಯಲ್ಲಿ, 1934ರ ಆಗಸ್ಟ್‌ 8ರಂದು. ಅಪ್ಪನಿಗೆ ಪ್ರಕೃತಿಯ ಮಡಿಲಲ್ಲಿ ಉಸಿರಾಡುವುದು ಎಂದರೆ ಎಲ್ಲಿಲ್ಲದ ಉತ್ಸಾಹ. ರಾಸುಗಳು ಎಂದರೆ ಅಪಾರ ಪ್ರೀತಿ. ಪ್ರಕೃತಿ, ಪ್ರಾಣಿಗಳ ಜೊತೆಗಿನ ಕಕ್ಕುಲಾತಿಯೇ ಅವರ ಇಂದಿನ ಜೀವನ ಪ್ರೀತಿಗೂ ಕಾರಣ ಎನಿಸುತ್ತದೆ. ಈ ಅಂತಃಕರಣದಿಂದಲೋ ಏನೋ ಅವರು ತಮ್ಮ ಸಂಘರ್ಷಮಯ ಜೀವನದುದ್ದಕ್ಕೂ ಯಾವುದೇ ಸಂದರ್ಭವನ್ನು ದಿಟ್ಟವಾಗಿ ಎದುರಿಸುವ ಸ್ಥೈರ್ಯ ಹೊಂದಿದ್ದಾರೆ.

ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪದವಿ. ನಂತರ ಅದೇ ಕಾಲೇಜಿನಲ್ಲಿ ಕಾನೂನು ಪದವಿ ಅಧ್ಯಯನ ಮುಗಿಸಿ 1963ರಲ್ಲಿ ಸನ್ನದು ನೋಂದಣಿ ಮಾಡಿಸಿದರು. 1959ರಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಪ್ರಜಾ ಸೋಷಲಿಸ್ಟ್‌ ಪಾರ್ಟಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸುವಾಗಲೇ ರಾಜಕೀಯ ಪ್ರವೇಶ. 1966ರಲ್ಲಿ ಜನಸಂಘದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ.

ಚಳವಳಿಗಾರ, ಹೋರಾಟಗಾರ, ನಿಷ್ಠುರವಾದಿ ಎಂದೆಲ್ಲಾ ನಾನು ಅಪ್ಪನನ್ನು ನೋಡಬಹುದಾದರೂ ಅಪ್ಪ ನನ್ನ ಪಾಲಿಗೊಂದು ವಿಸ್ಮಯ ವ್ಯಕ್ತಿತ್ವ. ಅಂದುಕೊಂಡ ನಿರ್ಧಾರಗಳಿಗೆ ರಾಜಿಯಾಗದ ಹಟವಾದಿ. ನಂಬಿದ ಮೌಲ್ಯಗಳಿಗೆ ಯಾವತ್ತೂ ಚ್ಯುತಿ ಉಂಟು ಮಾಡದೆ ಎಲ್ಲ ಹಂತಗಳಲ್ಲೂ ಅವುಗಳನ್ನು ಪಾಲಿಸಿಕೊಂಡು ಬಂದ ಛಲಗಾರ. ಬಹುಶಃ ಈ ಪದಗಳೆಲ್ಲಾ ಹೊಗಳಿಕೆ ಎನಿಸಬಹುದಾದರೂ ಅವರಿರುವುದೇ ಹಾಗೆ ಎಂಬುದು ಮಾತ್ರ ವಾಸ್ತವ. ಅವರಿಗೆ ಯಾರೂ ಮೌಲ್ಯಗಳನ್ನು ಕಲಿಸಿಕೊಡಲಿಲ್ಲ ಎಂದೇ ನನ್ನ ಭಾವನೆ. ಪ್ರಾಯಶಃ ಅವರೇ ಅವನ್ನೆಲ್ಲಾ ಕಂಡುಕೊಂಡಿದ್ದಾರೆ.

ಬೆಂಗಳೂರಿನ ಆರ್.ಟಿ.ನಗರದ ಮನೆಯಲ್ಲಿ ಸದ್ಯ ಡಯಾಲಿಸಿಸ್‌ ಪಡೆಯುತ್ತಿರುವ ಅಪ್ಪನಿಗೆ ಓದು, ಬಂದವರೊಡನೆ ಹರಟೆ, ಹಳೆಯ ನೆನಪುಗಳನ್ನು ಕೆದಕಿ ವಿಹರಿಸುವುದೇ ಜೀವನವಾಗಿದೆ. ಇದು ಒಂದರ್ಥದಲ್ಲಿ ಗೃಹಬಂಧನ ಎನಿಸಿದ್ದರೂ ಅದನ್ನು ಎದುರಿಸುವುದಕ್ಕೆ ಅವರಲ್ಲಿ ಯಾವುದೇ ಅಳುಕಿಲ್ಲ.

ಅವರೊಬ್ಬ ಆಕಸ್ಮಿಕ ವಕೀಲ. ಪರಿಸ್ಥಿತಿಯ ಶಿಶುವಿನಂತೆ ರೂಪುಗೊಂಡ ರಾಜಕಾರಣಿ. ಮನೆಯಲ್ಲಿ ಎಂದಿಗೂ ನಮ್ಮೊಂದಿಗೆ ಅಷ್ಟಾಗಿ ಬೆರೆತವರೇ ಅಲ್ಲ. ಕುಟುಂಬಕ್ಕೆ ಎಂದು ಯಾವತ್ತೂ ಸಮಯವನ್ನು ಮೀಸಲಿಟ್ಟವರೇ ಅಲ್ಲ. ಯಾವಾಗಲೂ ವಕೀಲಿಕೆ, ಸಾರ್ವಜನಿಕ ಜೀವನವೇ ಅವರ ಪಾಲಿನ ಚಟುವಟಿಕೆ. ನಾವು ಐವರು ಗಂಡು ಮಕ್ಕಳು. ನಮಗೆಲ್ಲಾ ಏನಿದ್ದರೂ ಅಮ್ಮನೊಂದಿಗೇ ಒಡನಾಟ. ಅಮ್ಮನ ಮನೆಯ ಕಡೆಯವರೇ ಹೆಚ್ಚು ಆತ್ಮೀಯ.

ಅಪ್ಪನ ಸಾರ್ವಜನಿಕ ಜೀವನದ ಚಟುವಟಿಕೆಗಳು ನಮ್ಮ ಮೇಲೆ ಗಾಢವಾದ ಪ್ರಭಾವ ಬೀರಿವೆ. ಅದು 1983–84ರ ಸಮಯ. ಅಪ್ಪನನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಹೇಳಬೇಕು ಎಂದರೆ ಅಪ್ಪ ಕರ್ನಾಟಕದ ಬಿಜೆಪಿ ಬಂಬಲಿಗರ ಪಾಲಿಗೆ ಸಾಕ್ಷಾತ್‌ ವಾಜಪೇಯಿಯೇ ಆಗಿದ್ದರು. ಇಟ್ಟಿಗೆ ಮೇಲೆ ಇಟ್ಟಿಗೆ ಪೇರಿಸಿ ಕಟ್ಟಿದ ಮನೆಯಂತೆ ಅವರು ಪಕ್ಷವನ್ನು ಬೆಳೆಸಿದ್ದರು. ಎಲ್ಲ ಸಮಯದಲ್ಲೂ ನಮ್ಮ ಮನೆ ಜನರಿಂದ ತುಂಬಿರುತ್ತಿತ್ತು. ಅಪ್ಪನ ಕೆಂಡದಂತಹ ಮಾತುಗಳು, ವಿಚಾರಗಳು ಪಕ್ಷದಲ್ಲಿ ಅವರಿಗೆ ಭಾರಿ ಗೌರವ ದೊರಕಿಸಿಕೊಟ್ಟಿದ್ದವು. ಹೀಗಾಗಿ ಉಚ್ಚಾಟನೆ ಅಪ್ಪನ ಬೆಂಬಲಿಗರಿಗೆ ಆಘಾತ ಉಂಟು ಮಾಡಿತ್ತು. ಅವರೆಲ್ಲಾ ಆಕ್ರೋಶದಿಂದ ಕುದಿಯುತ್ತಿದ್ದರು. ಈ ಸಂದರ್ಭದಲ್ಲಿ ಅವರು, ಅಂದಿನ ರಾಷ್ಟ್ರೀಯ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವಿಸ್ತೃತವಾದ ಪತ್ರವೊಂದನ್ನು ಬರೆದು ತಮಗಾದ ಅನ್ಯಾಯದ ವಿರುದ್ಧ ಕಳಹೆ ಊದಿದ್ದರು. “Rss the Whipping Hand of the Bjp” ಎಂಬ ಹೆಸರಿನಲ್ಲಿ ಈ ಪತ್ರವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ.

ಬಿಜೆಪಿಯಿಂದ ಉಚ್ಚಾಟಿತರಾದ ನಂತರ ಅಪ್ಪ 1984ರಲ್ಲಿ ‘ಕನ್ನಡ ನಾಡು’ ಪ್ರಾದೇಶಿಕ ಪಕ್ಷ ಕಟ್ಟಿದರು. ಈ ಪಕ್ಷದ ಸ್ಥಾಪನೆಯ ಸಂದರ್ಭದಲ್ಲಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಲಾಗಿತ್ತು. ಕರ್ನಾಟಕದ ರಾಜಕಾರಣದಲ್ಲಿ ಅದೊಂದು ಉತ್ಸಾಹದ ಪರ್ವ ಆಗಿತ್ತು. ದುರಂತವೆಂದರೆ ಆ ಪಕ್ಷವನ್ನು ಬೆಳೆಸಲು ಆಗಲಿಲ್ಲ. ಅಪ್ಪ ಕಾಲಾನಂತರ ಕಾಂಗ್ರೆಸ್‌ ಸೇರಿದರು.

1975 ರಿಂದ 1977ರ ನಡುವಿನ 21 ತಿಂಗಳ ತುರ್ತು ಪರಿಸ್ಥಿತಿ ಕಾಲದಲ್ಲಿ ಅಪ್ಪ 18 ತಿಂಗಳ ಕಾಲ ಜೈಲು ವಾಸ ಅನುಭವಿಸಿದರು. ಈ ಸಂದರ್ಭದಲ್ಲಿ ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಅಮ್ಮ ಇದನ್ನು ದಿಟ್ಟವಾಗಿ ಎದರುಸಿದರು.

ಕನ್ನಡದ ಆರಾಧ್ಯದೈವ ಎಂದೇ ಬಿಂಬಿಸಲಾಗಿರುವ ಡಾ. ರಾಜ್‌ಕುಮಾರ್‌ ಅವರ ಅಭಿಮಾನಿಗಳನ್ನು ಅಪ್ಪ ಎದುರು ಹಾಕಿಕೊಂಡ ಪ್ರಸಂಗ ನಮ್ಮ ಕುಟುಂಬಕ್ಕೆ ಮರೆಯಲಾಗದ ಘಟನೆ. ಅದು ಹೇಗೆ ರಾಜ್‌ಕುಮಾರ್‌ ಅವರ ಅಭಿಮಾನಿಗಳನ್ನು ಅವರು ಎದುರು ಹಾಕಿಕೊಂಡರೊ ಎಂಬುದು ನನಗೆ ಅಷ್ಟಾಗಿ ಖಚಿತವಿಲ್ಲ. ಒಟ್ಟಿನಲ್ಲಿ ನಮ್ಮ ಮನೆಯ ಸದಸ್ಯರೆಲ್ಲರ ಪಾಲಿಗೆ ಅದೊಂದು ಕಹಿ ಗಳಿಗೆಯಾಗಿತ್ತು ಎಂಬುದಂತೂ ಸತ್ಯ. ಅಂದಿನ ದಿನಗಳಲ್ಲಿ ಅಪ್ಪ ಹೊರಗೆ ಹೋದರೆ ವಾಪಸು ಮನೆಗೆ ಬರುವಾಗ ಕಾರಿನ ಗಾಜುಗಳು ಪುಡಿಪುಡಿಯಾಗಿರುತ್ತಿದ್ದವು.

ನಾನು ಲಾ ಕಾಲೇಜು ಸೇರಿದ ಮೇಲೆಯೇ ಅಪ್ಪನ ಜೊತೆಗೆ ಹೆಚ್ಚು ನಿಕಟವಾದದ್ದು. ಮಾತು, ಚರ್ಚೆ, ವಿಚಾರಗಳು ಮಿಳಿತವಾದದ್ದು. ನಾನು ಕಾನೂನು ಪದವಿ ಪೂರೈಸಿದ ನಂತರ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗುತ್ತೇನೆ ಎಂದಾಗ ಅಪ್ಪ ಕಡ್ಡಿ ಮುರಿದಂತೆ ಬೇಡ ಎಂದುಬಿಟ್ಟರು. ಅಂದು ಯಾಕೆ ಆ ರೀತಿ ಹೇಳಿದರು ಎಂಬುದು ನನಗಿನ್ನೂ ರಹಸ್ಯವಾಗಿಯೇ ಉಳಿದಿದೆ.

ಅಪ್ಪ ಅಸ್ಖಲಿತ ಮಾತುಗಾರ. ಪ್ರಖರ ವಿಚಾರಗಳನ್ನು ಎಗ್ಗಿಲ್ಲದೆ ಮಂಡಿಸಬಲ್ಲ ನಿಶ್ಚಯವಾದಿ. ಐದು ಅಡಿ ಎಂಟು ಇಂಚು ಎತ್ತರದ ಆಜಾನುಬಾಹು ಅಪ್ಪ ಇಂದು ವಯೋಸಹಜ ಕಾಯಿಲೆಗಳಿಂದ ಕುಗ್ಗಿದ್ದಾರೆ. ಅವರ ದೇಹದ ತೂಕ 50 ಕೆ.ಜಿಗೆ ಇಳಿದಿದೆ. ಹೃದ್ರೋಗನ್ನೇನೊ ಗೆದ್ದಿದ್ದಾರೆ. ಮಧುಮೇಹವನ್ನು ನಿಯಂತ್ರಣದಲ್ಲಿಯೇ ಇರಿಸಿಕೊಂಡಿದ್ದಾರೆ. ಗಂಟಲು ಕ್ಯಾನ್ಸರ್‌ ಅನ್ನೂ ಎದುರಿಸಿದ್ದಾರೆ. ಆದರೆ, ಈಗ ಕಿಡ್ನಿ ಸಮಸ್ಯೆಯಿಂದ ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಹೊರಗೆ ಅಡ್ಡಾಡಲು ಆಗದೆ ಒಂದೇ ಕಡೆ ಇರಬೇಕಾದ ಅನಿವಾರ್ಯತೆ. ಇವ್ಯಾವೂ ಅವರನ್ನು ವಿಚಲಿತರನ್ನಾಗಿ ಮಾಡಿಲ್ಲ.

ಬದುಕು ಹೀಗೆಯೇ ಏರುಪೇರುಗಳಿಂದ ಕೂಡಿರುತ್ತದೆ. ಅದನ್ನು ಎದೆಗೆ ಎದೆಕೊಟ್ಟು ಎದುರಿಸಿ ನಡೆಯಬೇಕು ಎಂಬುದೇ ಅವರ ಬೀಜಮಂತ್ರ.

(ಲೇಖಕರು ಹೆಚ್ಚುವರಿ ಅಡ್ವೊಕೇಟ್‌ ಜನರಲ್, ಕರ್ನಾಟಕ ಹೈಕೋರ್ಟ್‌)

ವಿಡಿಯೊ ಕೃಪೆ: facebook.com/thedeccannews

ಸಮಗ್ರ ಬರಹ ಲೋಕಾರ್ಪಣೆ
ಎ.ಕೆ. ಸುಬ್ಬಯ್ಯ ಅಭಿನಂದನಾ ಸಮಾರಂಭ: ಅಭಿನಂದನೆ ಮತ್ತು ಅಭಿನಂದನಾ ಗ್ರಂಥ ‘ದಾರಿದೀಪ’ ಲೋಕಾರ್ಪಣೆ- ಮುಖ್ಯಮಂತ್ರಿ ಸಿದ್ದರಾಮಯ್ಯ, ಅಭಿನಂದನಾ ನುಡಿ– ಪ್ರೊ.ರವಿವರ್ಮ ಕುಮಾರ್, ಸಾಹಿತಿ ದೇವನೂರು ಮಹಾದೇವ ಅವರು ‘ಸೌಹಾರ್ದ ಸೆಲೆ’ (ಸಮಗ್ರ ಬರಹ), ರೈತನಾಯಕಿ ಚುಕ್ಕಿ ನಂಜುಂಡಸ್ವಾಮಿ ‘ನಿರ್ಭೀತಿಯ ಹೆಜ್ಜೆಗಳು’ (ಜೀವನ ಚರಿತ್ರೆ) ಬಿಡುಗಡೆ ಮಾಡಲಿದ್ದಾರೆ. ಸ್ಥಳ– ಜ್ಞಾನಜ್ಯೋತಿ ಸಭಾಂಗಣ, ಸೆಂಟಲ್ ಕಾಲೇಜು ಆವರಣ,ಮಂಗಳವಾರ(25/2/2018) ಸಂಜೆ 5.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT