ಮಕ್ಕಳನ್ನು ಜಡ್ಜ್‌ ಮಾಡುವುದು ಕಷ್ಟ

7

ಮಕ್ಕಳನ್ನು ಜಡ್ಜ್‌ ಮಾಡುವುದು ಕಷ್ಟ

Published:
Updated:
ಮಕ್ಕಳನ್ನು ಜಡ್ಜ್‌ ಮಾಡುವುದು ಕಷ್ಟ

ಸಂಗೀತ ಕ್ಷೇತ್ರದಲ್ಲಿನ ನಿಮ್ಮ ಅನುಭವದ ಬಗ್ಗೆ ಹೇಳಿ

‘ಚಂದನ’ ವಾಹಿನಿಯ ‘ಎಂಎಸ್‌ಐಎಲ್ ನಿತ್ಯೋತ್ಸವ’ ನಾನು ಮೊದಲ ಬಾರಿಗೆ ಟಿವಿಯಲ್ಲಿ ಹಾಡಿದ ಕಾರ್ಯಕ್ರಮ. ಇದು ಕನ್ನಡದ ಭಾವಗೀತೆಗಳ ಮೊದಲ ರಿಯಾಲಿಟಿ ಷೋ. ಆ ಕಾರ್ಯಕ್ರಮದಲ್ಲಿ ಫೈನಲ್‌ವರೆಗೆ ಬಂದಿದ್ದೆ. ನನ್ನನ್ನು ಜನ ಗುರುತಿಸುವಂತೆ ಮಾಡಿದ ಕಾರ್ಯಕ್ರಮ ಇದು. ‘ಈ–ಟಿವಿ’ಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರೊಡನೆ ಹಾಡಿದ್ದು ಜೀವಮಾನದ ಶ್ರೇಷ್ಠ ಅನುಭವ. ನನ್ನ ಭಾಗ್ಯಕ್ಕೆ ಮತ್ತೆ ಟಾಪ್ 10 ಬೆಸ್ಟ್ ಸಿಂಗರ್ಸ್ ಎಂದು ಮತ್ತೊಮ್ಮೆ ಎಸ್‍ಪಿಬಿಯವರೊಂದಿಗೆ ಹಾಡಿಸಿದರು. ಇದಾದ ಮೇಲೆ ಹಲವು ವಾಹಿನಿಗಳಲ್ಲಿ ಅವಕಾಶ ದೊರೆಯಿತು.

ಈಗ ಜ್ಯೂರಿ ಆಗಿದ್ದೀರಿ...

ಟಿ.ವಿ. ರಿಯಾಲಿಟಿ ಷೋನಲ್ಲಿ ಜ್ಯುರಿಯಾಗುವುದು ಒಂದು ರೀತಿಯ ಜವಾಬ್ದಾರಿ. ಮೊದಲ ಬಾರಿ ಕರೆ ಬಂದಾಗ ಸಂತಸವಾಯಿತು. ಜನಪ್ರಿಯ ಕಾರ್ಯಕ್ರಮದಲ್ಲಿ ಆ ಸ್ಥಾನದಲ್ಲಿ ಕೂರುವುದು ಭಾಗ್ಯವೇ ಸರಿ. ಈ ಸ್ಥಾನ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿತು.

ಮಕ್ಕಳನ್ನು ಜಡ್ಜ್ ಮಾಡುವ ಸವಾಲಿನ ಬಗ್ಗೆ ಹೇಳಿ...

ಮಕ್ಕಳನ್ನು ಜಡ್ಜ್ ಮಾಡುವುದು ಸವಾಲಿನ ಕೆಲಸ. ಇದೊಂದು ಸ್ಪರ್ಧೆಯಾದ್ದರಿಂದ ಸ್ಪರ್ಧಾತ್ಮಕ ದೃಷ್ಟಿಕೋನ ಅಗತ್ಯ. ಮಕ್ಕಳು ಸಾಮಾನ್ಯವಾಗಿ ಹೆಚ್ಚು ತಪ್ಪು ಮಾಡುವುದಿಲ್ಲ. ಹಿಂದಿನ ಎಪಿಸೋಡ್‌ನಲ್ಲಿ ಚೆನ್ನಾಗಿ ಹಾಡಿದವರು ಒಂದು ಹಂತದಲ್ಲಿ ಸ್ವಲ್ಪಮಟ್ಟಿಗೆ ವಿಫಲರಾಗಬಹುದು. ಮಕ್ಕಳಿಗೆ ಕಡಿಮೆ ಅಂಕ ದೊರೆತರೆ ಅವರ ಪ್ರತಿಕ್ರಿಯೆ ಬದಲಾಗುತ್ತದೆ. ನಮ್ಮ ಕಿವಿ ಶುದ್ಧವಿರಬೇಕು, ಸಂಪೂರ್ಣವಾಗಿ ಗಾಯನದಲ್ಲಿ ತೊಡಗಿಸಿಕೊಂಡಿರಬೇಕು. ಕೆಲವು ಮಕ್ಕಳು ಸಂಗೀತದ ಶಿಕ್ಷಣವಿಲ್ಲದಿದ್ದವರೂ ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಪ್ರಸ್ತುತಪಡಿಸುತ್ತಾರೆ. ಭಾಷಾ ಶುದ್ಧಿ ಅಗತ್ಯ. ಹೀಗೆ ಹಲವು ಅಂಶಗಳು ಆ ಕ್ಷಣದಲ್ಲಿ ಗಣನೆಗೆ ಬರುತ್ತವೆ.

ಅಂಕ ಹೇಗೆ ಕೊಡ್ತೀರಿ?

ಹಾಡಿನ ಶೈಲಿ, ಹಾಡುವಾಗ ಶ್ರುತಿ, ತಾಳ, ಭಾವ, ಅನುಭವಿಸುವ ರೀತಿ, ಸ್ಪರ್ಧಿಗಳ ದನಿಗೆ ಹೊಂದಬಹುದೇ, ಹೀಗೆ ಹಲವು ಅಂಶಗಳನ್ನು ಹಾಡಿ, ಮುಗಿಸುವಷ್ವರಲ್ಲಿ ಎಲ್ಲವನ್ನೂ ನಿರ್ಣಯಿಸಿ ಅಂಕಗಳನ್ನು ಕೊಡುತ್ತೇವೆ. ಒಮ್ಮೊಮ್ಮೆ ಒಬ್ಬರಿಗೊಬ್ಬರು ಮಾತನಾಡಿಕೊಂಡು, ಚರ್ಚಿಸುತ್ತೇವೆ.

ಜ್ಯೂರಿಗಳು ಇರಬೇಕೆ?

ಜ್ಯೂರಿಗಳು ಇರುವುದರಿಂದ ಕಲೆಕ್ಟಿವ್ ರಿಸಲ್ಟ್ ಕೊಡಲು ಅನುಕೂಲವಾಗುತ್ತದೆ. ಜ್ಯುರಿಯಲ್ಲಿ ಅನುಭವಿ ಹಾಡುಗಾರರು, ಸಂಯೋಜಕರು, ವಾದ್ಯಗಾರರು, ತಂತ್ರಜ್ಞರು ಇದ್ದಾರೆ. ಅವರ ಸಲಹೆಗಳು ಕೊಡುವುದರಿಂದ ಸ್ಪರ್ಧಿಗಳಿಗೆ ತಿದ್ದಿಕೊಳ್ಳಲು ಅನುಕೂಲ. ಕಾರ್ಯಕ್ರಮಕ್ಕೂ ಇಷ್ಟು ಜನರನ್ನು ತೊಡಗಿಸಿಕೊಂಡ ಹೆಗ್ಗಳಿಕೆ ಇರುತ್ತದೆ.

ಹಾಡುವಾಗ ಮಕ್ಕಳ ಮನಸ್ಥಿತಿ ಹೇಗಿರುತ್ತದೆ?

ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಮಕ್ಕಳಿಗೆ ಕಡಿಮೆ ಸಮಯದಲ್ಲಿ ಕಲಿಯುವ ಒತ್ತಡ ಇರುತ್ತದೆ. ಅವರು ಗಾಯನದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು. ಗಾಯನವನ್ನು ಮತ್ತಷ್ಟು ಉತ್ತಮಗೊಳಿಸುವುದರ ಕಡೆಗೂ ಗಮನ ಹರಿಸಬೇಕಿರುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿರುತ್ತದೆ. ದೈನಂದಿನ ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಬೇಕಿರುತ್ತದೆ.

ಮಕ್ಕಳ ಮೇಲೆ ವಿಪರೀತ ಒತ್ತಡ ಇರುತ್ತೆ ಅಲ್ವಾ?

ಷೋನಲ್ಲಿ ಹಾಡಬೇಕೆಂಬ ಆಸೆಯೊಂದಿಗೆ ಬರುವ ಮಕ್ಕಳು, ನಂತರದ ಹಂತದಲ್ಲಿ ತಮಗೆ ಅರಿವಿಲ್ಲದೆಯೇ ಇತರರ ನಿರೀಕ್ಷೆಗಳಿಂದ ಒತ್ತಡಕ್ಕೆ ಒಳಗಾಗಿರುತ್ತಾರೆ. ಹಾಡುವಾಗ ಅದನ್ನು ಅವರು ತೋರಿಸಿಕೊಳ್ಳುವುದಿಲ್ಲ.

ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೇಗೆ ಮಾಡಬಹುದು

ಕನ್ನಡದ ಚಲನಚಿತ್ರಗೀತೆಗಳಲ್ಲದೇ ಎಲ್ಲಾ ಪ್ರಕಾರದ ಗೀತೆಗಳನ್ನೂ ಒಂದೊಂದು ಸುತ್ತಿನಲ್ಲಿ ಅಳವಡಿಸಿದರೆ ಕಾರ್ಯಕ್ರಮ ವಿಭಿನ್ನವಾಗುತ್ತದೆ. ಹಾಡುವವರಿಗೂ ವೈವಿಧ್ಯತೆ ಇರುತ್ತದೆ. ವೀಕ್ಷಕರಿಗೂ ಒಂದು ಬದಲಾವಣೆ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry