‘ಶಂಕರಾಚಾರ್ಯರ ಡಿಎನ್‌ಎ ನಿಮ್ಮಲ್ಲೂ ಇದೆ’

7

‘ಶಂಕರಾಚಾರ್ಯರ ಡಿಎನ್‌ಎ ನಿಮ್ಮಲ್ಲೂ ಇದೆ’

Published:
Updated:
‘ಶಂಕರಾಚಾರ್ಯರ ಡಿಎನ್‌ಎ ನಿಮ್ಮಲ್ಲೂ ಇದೆ’

ಬೆಂಗಳೂರು: ‘ಬ್ರಾಹ್ಮಣರೆಂದರೆ ಬ್ರಹ್ಮಜ್ಞಾನಿಗಳು. ಆದಿ ಶಂಕರಾಚಾರ್ಯರ ಡಿಎನ್‌ಎ ವಂಶವಾಹಿ ನಿಮ್ಮಲ್ಲೂ ಅಲ್ಪಸ್ವಲ್ಪ ಇದೆ. ಆ ಬ್ರಹ್ಮಜ್ಞಾನದ ಕೊಡುಗೆಯನ್ನು ಮುಂದಿನ ಪೀಳಿಗೆಗೂ ಕೊಡಬೇಕು’ ಎಂದು ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಹವ್ಯಕ ಸಮಾಜದ ವಕೀಲರಿಗೆ ಕಿವಿಮಾತು ಹೇಳಿದರು.

ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯರಾದ ಅವರು ಭಾನುವಾರ ‘ಹವ್ಯಕ ನ್ಯಾಯ ಸಮಾವೇಶ‘ ಉದ್ಘಾಟಿಸಿ, ‘ಜಾತಿಯಿಂದ ಯಾರೂ ಬ್ರಾಹ್ಮಣ ಎನಿಸುವುದಿಲ್ಲ. ಪುರದ ಹಿತ ಬಯಸುವವನೇ ಪುರೋಹಿತ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ ಎ.ಪಿ.ಜೆ.ಅಬ್ದುಲ್ ಕಲಾಂ’ ಎಂದು ಬಣ್ಣಿಸಿದರು.

‘ಶೇ 3ರಷ್ಟು ಇರುವ ಬ್ರಾಹ್ಮಣರಲ್ಲಿ ವ್ಯಾಜ್ಯಕರ್ತರು ಕಡಿಮೆ. ಆದರೆ, ವಕೀಲರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಕ್ಷಿದಾರರು ನಿಮ್ಮನ್ನೇ ಏಕೆ ಹುಡುಕಿಕೊಂಡು ಬರುತ್ತಾರೆ, ನಿಮ್ಮ ಮೇಲೆ ಏಕೆ ಅಷ್ಟೊಂದು ವಿಶ್ವಾಸ ಇಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅವರನ್ನು ಉದ್ಧಾರ ಮಾಡುವ ಬ್ರಹ್ಮಜ್ಞಾನ ನಿಮ್ಮದಾಗಿಸಿಕೊಳ್ಳಿ’ ಎಂದು ಚಂದ್ರಶೇಖರ್ ಸಲಹೆ ನೀಡಿದರು.

‘ಇಂದು ನ್ಯಾಯಶಾಸ್ತ್ರ ಕೇವಲ ಸಿವಿಲ್, ಕ್ರಿಮಿನಲ್ ಎಂಬ ಹಳೆಯ ಸಾಂಪ್ರದಾಯಿಕ ಶೈಲಿಗೆ ಸೀಮಿತವಾಗಿಲ್ಲ. ಪರಿಸರ, ಆಡಳಿತ, ಭೂ ನ್ಯಾಯಮಂಡಳಿ... ಹೀಗೆ ಹತ್ತಾರು ವಿಭಾಗಗಳಲ್ಲಿ ಕವಲೊಡೆದಿದ್ದು ಪ್ರತ್ಯೇಕತೆಯ ನೈಪುಣ್ಯತೆ ಬಯಸುತ್ತಿದೆ. ಆದ್ದರಿಂದ ಇಂದಿನ ಯುವ ವಕೀಲರು ಪ್ರಕರಣದಿಂದ ಹೊರತಾದ ಹೆಚ್ಚುವರಿ ಅಂಶಗಳನ್ನು ಅಧ್ಯಯನ ಮಾಡುವ ಮೂಲಕ ಪ್ರತಿಯೊಂದು ಕೇಸನ್ನೂ ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದರು.

‘ವಕೀಲರು ತಮ್ಮ ವಾದ ಮಂಡನೆಗೆ ಪೂರ್ವನಿದರ್ಶನ ಹುಡುಕುವುದು ಎಂದರೆ ಅದು, ಮಹಿಳೆಯರು ಸೀರೆಗೆ ಹೊಂದುವ ಬಣ್ಣದ ಬ್ಲೌಸ್ ಹುಡುಕಿದಂತೆ ಇರಬೇಕು’ ಎಂದರು.

ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ನಿರ್ದೇಶಕ ಮಹೇಶ್ ಕಜೆ, ಹಿರಿಯ ವಕೀಲ ಜಿ.ಕೃಷ್ಣಮೂರ್ತಿ, ಎಸ್‌.ವಿ.ಶಾಸ್ತ್ರಿ, ಎಚ್‌.ವಿ.ಹೆಗಡೆ, ಶಂಕರ ಪಿ. ಹೆಗಡೆ, ವೈ.ಕೆ.ಎನ್‌.ಶರ್ಮಾ, ದಿನೇಶ್ ಎಂ.ಭಟ್, ನಾರಾಯಣ ಶರ್ಮಾ, ಪಿ.ಎನ್‌.ಮನಮೋಹನ್‌ ಮತ್ತು ಸತೀಶ್‌ ಭಟ್‌ ಇದ್ದರು.

‘ಹವ್ಯಕರು ಭಿನ್ನಾಭಿಪ್ರಾಯ ಬದಿಗೊತ್ತಬೇಕು’

ಹವ್ಯಕ ಸಮಾಜದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಸೂಚ್ಯವಾಗಿ ಪ್ರಸ್ತಾಪಿಸಿದ ಚಂದ್ರಶೇಖರ್, ‘ಹವ್ಯಕರು ಒಗ್ಗಟ್ಟಿನಿಂದ ಮುಂದುವರಿಯಬೇಕು’ ಎಂದರು.

‘ನೀವು ಯಾರೂ ಬೆಂಗಳೂರಿಗರಲ್ಲ. ಕಡಲತಡಿ ಹಾಗೂ ಆಸುಪಾಸಿನ ಜಿಲ್ಲೆಗಳವರು. ಅಲ್ಲಿಂದ ಇಷ್ಟು ದೂರ ಬಂದು ಸ್ವಸಾಮರ್ಥ್ಯದ ಮೇಲೆ ಬೆಳೆದಿರುವ ನೀವು ನಿಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸ್ವಯಂ ಶಕ್ತಿಯಿಂದ ಬಲಿಷ್ಠರಾಗಬೇಕು’ ಎಂದರು.

ಈ ಮಾತನ್ನು ನೆರೆದಿದ್ದ ಸಭಿಕರು ಭಾರಿ ಕರತಾಡನದ ಮೂಲಕ ಸ್ವಾಗತಿಸಿದರು.

* ಶಾಸನಸಭೆಯಲ್ಲಿ ಒಳ್ಳೆಯ ವಕೀಲರು ಇರಬೇಕು. ಇದಕ್ಕೆ ಯಾವುದೇ ಪಕ್ಷಭೇಧ ಬೇಡ.

–ಎ.ವಿ.ಚಂದ್ರಶೇಖರ್, ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry