ಇಂಡಿಯನ್‌ ಸೂಪರ್ ಲೀಗ್: ಬಿಎಫ್‌ಸಿಗೆ ಸುಲಭ ಜಯ

7

ಇಂಡಿಯನ್‌ ಸೂಪರ್ ಲೀಗ್: ಬಿಎಫ್‌ಸಿಗೆ ಸುಲಭ ಜಯ

Published:
Updated:
ಇಂಡಿಯನ್‌ ಸೂಪರ್ ಲೀಗ್: ಬಿಎಫ್‌ಸಿಗೆ ಸುಲಭ ಜಯ

ಭುವನೇಶ್ವರ: ಇಂಡಿಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಪ್ಲೇ ಆಫ್‌ ಹಂತಕ್ಕೆ ತಲುಪಿ ನಿರಾಳವಾಗಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದವರು ಭಾನುವಾರ ಸುಲಭ ಜಯ ಸಾಧಿಸಿದರು.

ಇಲ್ಲಿನ ಕಳಿಂಗ ಕ್ರಿಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಈ ತಂಡ ಜೆಮ್‌ಶೆಡ್‌ಪುರ ಎಫ್‌ಸಿ ವಿರುದ್ಧ 2–0 ಗೋಲುಗಳಿಂದ ಗೆದ್ದಿತು. ಮಿಕು (23ನೇ ನಿಮಿಷ, ಪೆನಾಲ್ಟಿ) ಮತ್ತು ನಾಯಕ ಸುನಿಲ್ ಚೆಟ್ರಿ (34ನೇ ನಿಮಿಷ) ಬಿಎಫ್‌ಸಿ ಪರ ಗೋಲು ಗಳಿಸಿದರು.

ಈ ಜಯದೊಂದಿಗೆ ಸತತ ಏಳು ಜಯ ಗಳಿಸಿದ ತಂಡ 17 ಪಂದ್ಯಗಳಲ್ಲಿ 12 ಗೆಲುವಿನೊಂದಿಗೆ ಪಾಯಿಂಟ್‌ ಗಳಿಕೆಯನ್ನು 37ಕ್ಕೆ ಏರಿಸಿಕೊಂಡು ಅಗ್ರ ಸ್ಥಾನವನ್ನು ಮತ್ತಷ್ಟು ಭದ್ರವಾಗಿಸಿತು. ಬೆಂಗಳೂರಿನಲ್ಲಿ ಮಾರ್ಚ್ ಒಂದರಂದು ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ ಬೆಂಗಳೂರು ತಂಡ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ.

ಮತ್ತೆ ಮಿಕು ಮ್ಯಾಜಿಕ್: 23ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಮಿಕು, ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಅನುಭವಿ ಗೋಲ್‌ಕೀಪರ್ ಸುಬ್ರತಾ ಪಾಲ್ ಅವರನ್ನು ಚಾಣಾಕ್ಷತನದಿಂದ ವಂಚಿಸಿದ ಮಿಕು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ನಾಯಕ ಮುನ್ನಡೆಯನ್ನು ಹೆಚ್ಚಿಸಿದ ನಂತರ ರಕ್ಷಣೆಗೆ ಒತ್ತು ನೀಡಿದ ಬಿಎಫ್‌ಸಿ ಎದುರಾಳಿಗಳು ಮೇಲುಗೈ ಸಾಧಿಸದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಅಬ್ಬರಿಸಿದ ಎಫ್‌ಸಿ ಗೋವಾ: ಪುಣೆಯ ಶಿವ ಛತ್ರಪತಿ ಕ್ರೀಡಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಅಬ್ಬರಿಸಿದ ಎಫ್‌ಸಿ ಗೋವಾ ತಂಡ ಆತಿಥೇಯ ಎಫ್‌ಸಿ ಪುಣೆ ಸಿಟಿ ತಂಡವನ್ನು 4–0ಯಿಂದ ಮಣಿಸಿ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡಿತು.

ಗೋವಾ ಪರ ಫೆರಾನ್ ಕೊರೊ ಮಿನಾಸ್ ಎರಡು ಗೋಲು (58 ಹಾಗೂ 65ನೇ ನಿಮಿಷ) ಗಳಿಸಿದರೆ ಮ್ಯಾನ್ಯುಯೆಲ್ ಲ್ಯಾನ್ಜರೊಟ್ (28ನೇ ನಿಮಿಷ) ಮತ್ತು ಹ್ಯುಗೊ ಬೌಮಾಸ್ (47ನೇ ನಿಮಿಷ) ತಲಾ ಒಂದೊಂದು ಗೋಲು ದಾಖಲಿಸಿದರು.

ಈ ಜಯದೊಂದಿಗೆ ಗೋವಾ ಆಡಿದ 16 ಪಂದ್ಯಗಳಲ್ಲಿ ಏಳು ಗೆಲುವಿನೊಂದಿಗೆ 24 ಪಾಯಿಂಟ್‌ಗಳನ್ನು ಗಳಿಸಿತು. ಕಳೆದ ಐದು ಪಂದ್ಯಗಳಲ್ಲಿ ಈ ತಂಡ ಗೆಲುವು ಗಳಿಸಿರಲಿಲ್ಲ. ಮುಂದಿನ ಎರಡು ಪಂದ್ಯಗಳಲ್ಲಿ ಗೆದ್ದರೆ ತಂಡ ಪ್ಲೇ ಆಫ್‌ಗೆ ಏರಲಿದೆ. ಪುಣೆ ಪ್ಲೇ ಆಫ್‌ಗೆ ಸಾಗಬೇಕಾದರೆ ಮುಂದಿನ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಲೇಬೇಕು.

ಜಯ ತಂದುಕೊಟ್ಟ ಪೆನಾಲ್ಟಿ ಕಿಕ್: ಎರಡು ಪೆನಾಲ್ಟಿ ಗೋಲುಗಳು ಗೋವಾಗೆ ಗೆಲುವು ತಂದುಕೊಟ್ಟವು. 28ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಮಿಡ್‌ಫೀಲ್ಡರ್ ಮ್ಯಾನ್ಯು ಯೆಲ್ ಲ್ಯಾನ್ಜರೊಟ್ ಆರಂಭಿಕ ಮುನ್ನಡೆ ತಂದುಕೊಟ್ಟರು. 65ನೇ ನಿಮಿಷದಲ್ಲಿ ಗೋವಾಗೆ ಮತ್ತೊಂದು ಪೆನಾಲ್ಟಿ ಅವಕಾಶ ಸಿಕ್ಕಿತು. ಈ ಬಾರಿ ಕೊರೊಮಿನಾಸ್‌ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸಿ ಸಂಭ್ರಮಿಸಿದರು.

15 ಗೋಲುಗಳ ಸರ ದಾರ ಕೊರೊಮಿನಾಸ್ ಪ್ರಸಕ್ತ ಲೀಗ್‌ನಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿಯತ್ತ ಮುನ್ನುಗ್ಗುತ್ತಿರುವ ಕೊರೊಮಿನಾಸ್ ಗೋಲು ಗಳಿಕೆಯನ್ನು 15ಕ್ಕೆ ಏರಿಸಿಕೊಂಡರು. 16 ಪಂದ್ಯ ಗಳಲ್ಲಿ ಅವರು ಒಟ್ಟು 15 ಗೋಲು ಗಳಿಸಿದ್ದಾರೆ.

12 ಗೋಲು ಗಳಿಸಿರುವ ಬೆಂಗಳೂರು ಎಫ್‌ಸಿಯ ಮಿಕು ಎರಡನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry