ಚಂಪಾ, ರಾಮೇಗೌಡರಿಗೆ ಕರ್ನಾಟಕ ಮಹಾವಿಚಾರರತ್ನ ಪ್ರಶಸ್ತಿ

7

ಚಂಪಾ, ರಾಮೇಗೌಡರಿಗೆ ಕರ್ನಾಟಕ ಮಹಾವಿಚಾರರತ್ನ ಪ್ರಶಸ್ತಿ

Published:
Updated:
ಚಂಪಾ, ರಾಮೇಗೌಡರಿಗೆ ಕರ್ನಾಟಕ ಮಹಾವಿಚಾರರತ್ನ ಪ್ರಶಸ್ತಿ

ಬೆಂಗಳೂರು:  ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಹಾಗೂ ಪ್ರೊ.ಬೈರಮಂಗಲ ರಾಮೇಗೌಡ ಅವರಿಗೆ ಅಖಿಲ ಕರ್ನಾಟಕ ವಿಚಾರವಾದಿ ಸಂಘದ ವತಿಯಿಂದ ‘ಕರ್ನಾಟಕ ಮಹಾವಿಚಾರರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ₹5,000, ಸ್ಮರಣಿಕೆ ಹಾಗೂ ಪ್ರಸಂಶಾ ಪತ್ರ ಒಳಗೊಂಡಿದೆ.

ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಚಂಪಾ, ‘10 ಪರ್ಸೆಂಟ್‌ ಕಮಿಷನ್‌ ಸರ್ಕಾರ, 90 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂದು ರಾಜಕೀಯ ಪಕ್ಷಗಳು ಪರಸ್ಪರ ಕೆಸರು ಎರಚಿಕೊಳ್ಳುತ್ತಿವೆ. ಇಲ್ಲಿ ಲೂಟಿ ಆಗುತ್ತಿರುವವರು ನಾವು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ದುಡ್ಡೇ ಕೇಂದ್ರ ದ್ರವ್ಯವಾಗಿದೆ’ ಎಂದರು.

‘ಇಂದು ನಮ್ಮ ಬದುಕು ಎತ್ತ ಸಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಇವತ್ತಿನ ದುರಂತಕ್ಕೆ ನಿರ್ದಿಷ್ಟ ಕ್ಷೇತ್ರ ಇಲ್ಲ. ನಾವು ಸಮುದಾಯದ ಭಾಗ ಆಗಿರುವುದರಿಂದ ವೈಯಕ್ತಿಕ ಸಮಸ್ಯೆ ಎಂದು ಹೇಳಲು ಆಗುವುದಿಲ್ಲ. ನನ್ನ ಸಮಸ್ಯೆ ಸಮುದಾಯದ ಸಮಸ್ಯೆ. ಜತೆಗೆ ಬೆಂಗಳೂರು, ಕರ್ನಾಟಕದ ಸಮಸ್ಯೆಯೂ ಹೌದು’ ಎಂದರು. 

‘ಜಾತೀಯತೆ, ಕೋಮುವಾದಗಳು ಮಹಾನ್‌ ಪಿಡುಗುಗಳು. ಅವುಗಳು ಇಲ್ಲವಾಗಿದ್ದರೆ, ನಾವು ಇನ್ನೂ ಚೆನ್ನಾಗಿ ಇರುತ್ತಿದ್ದೆವು. ಬುದ್ಧ, ಬಸವ, ಅಂಬೇಡ್ಕರ್ ಎಂದು ನಾವು ಚಂದಕ್ಕೆ ಹೇಳುವುದಿಲ್ಲ. ಬಸವಣ್ಣನಿಗೆ ಬುದ್ಧ ಹಾದಿ ಮಾಡಿ ಕೊಟ್ಟ, ಅಂಬೇಡ್ಕರ್‌ಗೆ ಬಸವಣ್ಣ ಅನುವು ಮಾಡಿಕೊಟ್ಟ. ನಮ್ಮ ಇಡೀ ಪರಂಪರೆಯಲ್ಲಿ ವೈಚಾರಿಕ ಎಳೆ ಇದೆ’ ಎಂದರು.  

ಬೈರಮಂಗಲ ರಾಮೇಗೌಡ ಮಾತನಾಡಿ, ‘ವಿಚಾರವಾದಿಯಾಗಿ ಇರುವುದು ಕಷ್ಟದ ಹಾದಿ. ಕುವೆಂಪು ಕುರಿತು ನಮ್ಮ ಶಿಕ್ಷಕರು ಪಾಠ ಮಾಡದೇ ಇದ್ದಿದ್ದರೆ, ಮಹಾನ್‌ ವ್ಯಕ್ತಿಗಳ ಪರಿಚಯ ಆಗದೇ ಇದ್ದಿದ್ದರೆ, ನನ್ನಲ್ಲಿ ವೈಚಾರಿಕ ‍ಪ್ರಜ್ಞೆ ಮೂಡುತ್ತಿರಲಿಲ್ಲ’ ಎಂದು ತಿಳಿಸಿದರು.

‘ವೈಚಾರಿಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕು. ನನ್ನ ವಿದ್ಯಾರ್ಥಿಗಳಿಗೆ ವೈಚಾರಿಕತೆ ಕುರಿತು ಪಾಠ ಮಾಡಿದ್ದೇನೆ. ಅದನ್ನು ರೂಢಿಸಿಕೊಂಡವರು ಇಂದಿಗೂ ಅದನ್ನು ನೆನಪಿಸಿಕೊಳ್ಳುತ್ತಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry