4

ರಾಹುಲ್–ಶಾ ಜಟಾಪಟಿ

Published:
Updated:
ರಾಹುಲ್–ಶಾ ಜಟಾಪಟಿ

ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮುಂದುವರಿಸಿದ್ದಾರೆ.

ಮುಂಬೈ– ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಜನಾಶೀರ್ವಾದ ಯಾತ್ರೆಯ ಎರಡನೇ ದಿನ ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿವಿಧ ಕಡೆ ಮಾತನಾಡಿದ ರಾಹುಲ್, ‘ನಾನು ದೇಶದ ಪ್ರಧಾನಿ ಅಲ್ಲ, ಪ್ರಧಾನ ಕಾವಲುಗಾರ (ಚೌಕಿದಾರ) ಎಂದು ನರೇಂದ್ರ ಮೋದಿ ಹೇಳಿದ್ದರು, ಆದರೆ, ಉದ್ಯಮಿ ನೀರವ್ ಮೋದಿ ಪ್ರಕರಣದಲ್ಲಿ ಈ ಕಾವಲುಗಾರ ತುಟಿ ಬಿಚ್ಚುತ್ತಿಲ್ಲ’ ಎಂದು ದೂರಿದರು.

’ಮೋದಿ ಕೊಟ್ಟ ಭರವಸೆಯಂತೆ ನಡೆದುಕೊಂಡಿಲ್ಲ, ಅವರು ಹೇಳುವುದೆಲ್ಲ ಸುಳ್ಳು, ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ₹ 22 ಸಾವಿರ ಕೋಟಿ ವಂಚಿಸಿದ ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ತಮ್ಮ ಮೂಗಿನ ಕೆಳಗಡೆ ಈ ವಂಚನೆ ಹೇಗೆ ನಡೆಯಿತು ಎಂದು ಪ್ರಧಾನಿ ಬಹಿರಂಗಪಡಿಸಲಿ’ ಎಂದು ಸವಾಲು ಹಾಕಿದರು.

ಬೀದರ್ ಜಿಲ್ಲೆ ಹುಮ್ಮಾಬಾದ್ ಪಟ್ಟಣದಲ್ಲಿ ಕಬ್ಬು ಬೆಳೆಗಾರರೊಂದಿಗೆ ಸಂವಾದ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಕೇಂದ್ರ ಸರ್ಕಾರ ಉದ್ಯಮಿಗಳ ಒಂದು ಪೈಸೆ ಸಾಲವನ್ನೂ ಮನ್ನಾ ಮಾಡಿಲ್ಲ. ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಉದ್ಯಮಿಗಳ ಸಾಲ ಮನ್ನಾ ಮಾಡಿರುವ ದಾಖಲೆ ಒದಗಿಸಿದರೆ ಬಹಿರಂಗ ಕ್ಷಮೆ ಕೇಳಲು ಸಿದ್ಧ’ ಎಂದರು.

‘ಬಿಜೆಪಿಯು ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿದೆ. ಆದರೆ ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ರಾಹುಲ್‌ ಹೇಳಿಕೆ ಕೊಡುತ್ತಿದ್ದಾರೆ. ಉದ್ಯಮಿಗಳಿಗೆ ತೆರಿಗೆ ಭಾರ ಕಡಿಮೆ ಮಾಡಿದ್ದೇವೆಯೇ ಹೊರತು ತೆರಿಗೆ ವಿನಾಯಿತಿ ನೀಡಿಲ್ಲ’ ಎಂದು ಹೇಳಿದರು.

ರೈತರು ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದಾಗ, ‘ಸಾಲ ಮನ್ನಾ ಸುಲಭದ ಮಾತಲ್ಲ. ಸ್ವಾಮಿನಾಥನ್‌ ವರದಿಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರು ಈಗಾಗಲೇ ರೈತರ ಉತ್ಪಾದನಾ ವೆಚ್ಚಕ್ಕಿಂತ ಒಂದೂ‌ವರೆ ಪಟ್ಟು ಹೆಚ್ಚು ಬೆಲೆ ಕೊಡಲು ಒಪ್ಪಿಕೊಂಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಮತ್ತೆ ಬಸವಣ್ಣನ ವಚನ

ಪ್ರಧಾನಿ ಮೋದಿ ಕಾರ್ಯ ವೈಖರಿಯನ್ನು ಬಸವಣ್ಣನ ವಚನ ಬಳಸಿ ಭಾನುವಾರವೂ ರಾಹುಲ್ ಟೀಕಿಸಿದರು.

ಇವನಾರವ.... ಇವನಾರವ... ವಚನ ಬಳಕೆಯಿಂದಾದ ತಪ್ಪಿನ ಅರಿವು ಅದ ಕಾರಣದಿಂದ ಅವರು ಆ ವಚನ ಬಳಸಲಿಲ್ಲ. ‘ಬದಲಿಗೆ ನುಡಿದಂತೆ ನಡೆ’ ಎಂಬ ಮಾತನ್ನು ಹಲವು ಬಾರಿ ಎಲ್ಲ ಕಡೆ ಉದ್ಘರಿಸಿದರು. ‘ಕಾಯಕವೇ ಕೈಲಾಸ, ಶರಣು ಶರಣಾರ್ಥಿ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ‘ಮೋದಿ ಈ ಭಾಗಕ್ಕೆ ಬಂದಾಗ ನುಡಿದಂತೆ ನಡೆಯುವಂತೆ ಹೇಳಿ’ ಎಂದು ಸಲಹೆ ನೀಡಿದರು.

‘ನಾವೆಲ್ಲರೂ ಒಂದೇ, ನಮ್ಮೆಲ್ಲರ ಹೃದಯದಲ್ಲಿ ಭಗವಂತನಿದ್ದಾನೆ ಎಂದು ಬಸವಣ್ಣ ಹೇಳಿದ್ದಾರೆ, ಚಿಕ್ಕಪಡಸಲಗಿ ಬ್ಯಾರೇಜ್ ನೋಡಿದ ಮೇಲೆ ಈ ಮಾತಿನ ಸತ್ಯ ಗೊತ್ತಾಯಿತು’ ಎಂದು ಬಾಗಿನ ಅರ್ಪಿಸಿದ ಬಳಿಕ ತಿಳಿಸಿದರು.

ಸೀರೆ ಭಾಗ್ಯ

ಜನಾಶೀರ್ವಾದ ಯಾತ್ರೆಗೆ ಬಂದ ಮಹಿಳೆಯರಿಗೆ ಸೀರೆ ಭಾಗ್ಯ ಲಭಿಸಿತು. ಬಾಗಲಕೋಟೆ ಜಿಲ್ಲೆಯ ಚಿಕ್ಕಪಡಸಲಗಿ ಗ್ರಾಮದಲ್ಲಿ ಸಮಾವೇಶಕ್ಕೆ ಬಂದ ಸುಮಾರು 20 ಸಾವಿರ ಮಹಿಳೆಯರಿಗೆ ಸೀರೆ ವಿತರಿಸಲಾಯಿತು.

‘ಬಾಗಿನ ತುಂಬುವ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೀರೆ ನೀಡಲಾಗಿದೆ. ಈ ಬಗ್ಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಸಮರ್ಥನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry