‘ಗ್ರೀನ್ ಕಾರಿಡಾರ್‌’ಗೂ ₹25 ಸಾವಿರ ಶುಲ್ಕ!

7
ಆರೋಗ್ಯ, ಸಾರಿಗೆ ಅಧಿಕಾರಿಗಳ ಜತೆ ಸಂಚಾರ ಪೊಲೀಸರ ಚರ್ಚೆ

‘ಗ್ರೀನ್ ಕಾರಿಡಾರ್‌’ಗೂ ₹25 ಸಾವಿರ ಶುಲ್ಕ!

Published:
Updated:
‘ಗ್ರೀನ್ ಕಾರಿಡಾರ್‌’ಗೂ ₹25 ಸಾವಿರ ಶುಲ್ಕ!

ಬೆಂಗಳೂರು: ಅಂಗಾಂಗ ರವಾನೆ ವೇಳೆ ಆಂಬುಲೆನ್ಸ್‌ಗಳಿಗೆ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ಕಲ್ಪಿಸುವ ‘ಗ್ರೀನ್‌ ಕಾರಿಡಾರ್‌’ಗೆ ₹25 ಸಾವಿರ ಶುಲ್ಕ ವಿಧಿಸಲು ನಗರದ ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ.

ಈ ಬಗ್ಗೆ ಆರೋಗ್ಯ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಿರುವ ಪೊಲೀಸರು, ಪ್ರಸ್ತಾವವೊಂದನ್ನು ಸಿದ್ಧಪಡಿಸಿ ಗೃಹ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.

ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯ, ಯಕೃತ್‌ (ಲಿವರ್‌) ಸೇರಿದಂತೆ ಹಲವು ಅಂಗಾಂಗಗಳನ್ನು ಬೇರೊಬ್ಬ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. ಅಂಥ ಅಂಗಾಂಗಗಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ತ್ವರಿತವಾಗಿ ರವಾನಿಸಬೇಕಾಗುತ್ತದೆ. ಇದಕ್ಕೆ ಸಂಚಾರ ಪೊಲೀಸರು ‘ಗ್ರೀನ್‌ ಕಾರಿಡಾರ್’ (ಸಿಗ್ನಲ್ ಮುಕ್ತ ಸಂಚಾರ) ವ್ಯವಸ್ಥೆಯನ್ನು ಕಲ್ಪಿಸುತ್ತಾರೆ.  ಇದಕ್ಕೆ ಸದ್ಯ ಯಾವುದೇ ಶುಲ್ಕ ವಿಧಿಸುತ್ತಿಲ್ಲ.

ಆದರೆ, ಅಂಗಾಂಗಗಳ ಕಸಿ ಹಾಗೂ ಸಾಗಣೆ ಹೆಸರಿನಲ್ಲೇ ಆಸ್ಪತ್ರೆಯವರು ರೋಗಿಗಳಿಂದ ₹2 ಲಕ್ಷದಿಂದ ₹10 ಲಕ್ಷದವರೆಗೆ ಶುಲ್ಕ ಪಡೆದುಕೊಳ್ಳುತ್ತಿದ್ದಾರೆ. ಪೊಲೀಸರು ಉಚಿತವಾಗಿ ಕಲ್ಪಿಸುವ ‘ಗ್ರೀನ್‌ ಕಾರಿಡಾರ್‌’ನಲ್ಲಿ ಸಂಚರಿಸುವ ಆಂಬುಲೆನ್ಸ್‌ಗೂ ಹಣ ವಸೂಲಿ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಪೊಲೀಸರು, ಈ ವ್ಯವಸ್ಥೆಗೆ ಶುಲ್ಕ ವಿಧಿಸುವ ಪ್ರಸ್ತಾವ ಸಿದ್ಧಪಡಿಸುತ್ತಿದ್ದಾರೆ.

‘ನಗರದಲ್ಲಿ ತಿಂಗಳಿಗೆ 3ರಿಂದ 4 ಆಸ್ಪತ್ರೆಗಳಿಂದ ಅಂಗಾಂಗ ರವಾನೆ ಆಗುತ್ತದೆ. ನಗರದಲ್ಲಿ ಮೊದಲೇ ವಾಹನ ದಟ್ಟಣೆ ಜಾಸ್ತಿ ಇದೆ.  ಗ್ರೀನ್‌ ಕಾರಿಡಾರ್‌ ವ್ಯವಸ್ಥೆ ಕಲ್ಪಿಸುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಮತ್ತಷ್ಟು ತೊಂದರೆ ಆಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಶುಲ್ಕ ವಿಧಿಸುವ ಬಗ್ಗೆ ಸಾರಿಗೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ’ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್‌.ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ರೋಗಿಗಳ ಸ್ಥಳಾಂತರಕ್ಕೆ ಸಲಹೆ:

ಕಳೆದ ವರ್ಷದಲ್ಲಿ 17 ಬಾರಿ ಅಂಗಾಂಗಗಳ ಸಾಗಣೆಗೆ ಗ್ರೀನ್ ಕಾರಿಡಾರ್‌ ವ್ಯವಸ್ಥೆಯನ್ನು ಪೊಲೀಸರು ಮಾಡಿಕೊಟ್ಟಿದ್ದರು. ಪ್ರಸಕ್ತ ವರ್ಷದಲ್ಲಿ 7 ಬಾರಿ ಅಂಥ ವ್ಯವಸ್ಥೆ ಕಲ್ಪಿಸಲಾಗಿದೆ.

‘ಅತೀ ಗಂಭೀರವಲ್ಲದ ಪ್ರಕರಣದಲ್ಲೂ ಆಸ್ಪತ್ರೆಯವರು ಕಾರಿಡಾರ್‌ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಅಂಗಾಂಗಳ ಸಾಗಣೆ ಬದಲು ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯನ್ನೇ ಆಂಬುಲೆನ್ಸ್‌ನಲ್ಲಿ ಸಾಗಣೆ ಮಾಡುವಂತೆ ಆಸ್ಪತ್ರೆಯವರಿಗೆ ಸಲಹೆ ನೀಡಿದ್ದೇವೆ. ಆದರೆ, ಅದು ಸಾಧ್ಯವಿಲ್ಲವೆಂದು ಅವರು ಹೇಳುತ್ತಿದ್ದಾರೆ. ರೋಗಿಯನ್ನು ಸಾಗಿಸಿದರೆ ಹೆಚ್ಚು ಶುಲ್ಕ ವಿಧಿಸಲು ಬರುವುದಿಲ್ಲ. ಕೆಲ ಆಸ್ಪತ್ರೆಯವರು ಪ್ರಚಾರಕ್ಕಾಗಿ ಅಂಗಾಂಗಗಳ ಸಾಗಣೆ ಮಾಡುತ್ತಿರುವುದು ಗೊತ್ತಾಗಿದೆ’ ಎಂದು ಅವರು ದೂರಿದರು.

‘ಅಂಗಾಂಗ ಸಾಗಣೆ ಆಂಬುಲೆನ್ಸ್‌ ರಸ್ತೆಯಲ್ಲಿ ಸಾಗುವಾಗ ಸಾರ್ವಜನಿಕರು, ಎಷ್ಟೇ ತೊಂದರೆಯಾದರೂ ಮಾನವೀಯತೆ ದೃಷ್ಟಿಯಿಂದ ನಿಮಿಷಗಟ್ಟಲೇ ಕಾಯುತ್ತ ನಿಲ್ಲುತ್ತಾರೆ. ಅಂಥ ಆಂಬುಲೆನ್ಸ್‌ಗಳ ಓಡಾಟವೇ ಜಾಸ್ತಿಯಾದರೆ ಸಾರ್ವಜನಿಕರ ಆಕ್ರೋಶಗೊಳ್ಳುವ ಸಾಧ್ಯತೆಯೂ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ಆಸ್ಪತ್ರೆಗಳಿಗೆ ಪತ್ರ

ಅಂಗಾಂಗಗಳ ಕಸಿ ಪ್ರಕರಣಗಳಲ್ಲಿ ರೋಗಿಗಳಿಂದ ಆಸ್ಪತ್ರೆಯವರು ಸಂಗ್ರಹಿಸಿದ ಶುಲ್ಕದ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಸಂಬಂಧ ಆಸ್ಪತ್ರೆಗಳಿಗೆ ಪತ್ರ ಬರೆದಿರುವ ಅವರು, ರಶೀದಿ ಸಮೇತ ಶುಲ್ಕದ ಮಾಹಿತಿ ನೀಡುವಂತೆ ಕೋರಿದ್ದಾರೆ.

ರೋಗಿಗಳಿಗೆ ಆರ್ಥಿಕ ಹೊರೆ

ಅಂಗಾಂಗಗಳ ಕಸಿಗೆ ಆಸ್ಪತ್ರೆಯವರು ಸದ್ಯ ರೋಗಿಗಳ ಸಂಬಂಧಿಕರಿಂದ ಶುಲ್ಕ ಪಡೆಯುತ್ತಿದ್ದಾರೆ. ಗ್ರೀನ್ ಕಾರಿಡಾರ್‌ಗೆ ಶುಲ್ಕ ವಿಧಿಸುವುದರಿಂದ  ರೋಗಿಗಳಿಗೆ ಹೊರೆಯಾಗುವ ಸಾಧ್ಯತೆ ಇದೆ.

‘ಪ್ರಾಣ ಉಳಿಸಿಕೊಳ್ಳಲು ಲಕ್ಷಗಟ್ಟಲೇ ಹಣ ಕೊಟ್ಟು ಅಂಗಾಂಗಗಳ ಕಸಿ ಮಾಡಿಸಿಕೊಳ್ಳುತ್ತೇವೆ. ಕಾರಿಡಾರ್‌ಗಾಗಿ ಶುಲ್ಕ ವಿಧಿಸಿದರೆ, ಅದನ್ನೂ ನಾವೇ ಕಟ್ಟಬೇಕು. ಈ ಪ್ರಸ್ತಾವ ಸಿದ್ಧಪಡಿಸುವಾಗ ಪೊಲೀಸರು, ನಮ್ಮ ಅಭಿಪ್ರಾಯವನ್ನೂ ಪಡೆದುಕೊಳ್ಳಬೇಕು’ ಎಂಬುದು ರೋಗಿಗಳ ಸಂಬಂಧಿಕರ ಒತ್ತಾಯ.

* ಗ್ರೀನ್ ಕಾರಿಡಾರ್‌ಗೆ ಶುಲ್ಕ ವಿಧಿಸುವ ಸಂಬಂಧ ಚರ್ಚೆ ನಡೆದಿದೆ. ಅದರ ಸಾಧಕ– ಬಾಧಕಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. 

– ಆರ್‌.ಹಿತೇಂದ್ರ, ನಗರ ಹೆಚ್ಚುವರಿ ಪೊಲೀಸ್‌ ಕಮಿಷನರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry