ಜೀವ ಭಯದಲ್ಲೇ ಪ್ರಯಾಣಿಕರ ಸಂಚಾರ

7

ಜೀವ ಭಯದಲ್ಲೇ ಪ್ರಯಾಣಿಕರ ಸಂಚಾರ

Published:
Updated:
ಜೀವ ಭಯದಲ್ಲೇ ಪ್ರಯಾಣಿಕರ ಸಂಚಾರ

ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಶಿವಮೊಗ್ಗದ ಹೊಳೆ ಬಸ್‌ಸ್ಟಾಪ್‌ ಹಳೆಯ ಸೇತುವೆ ಇದೀಗ ಪ್ರಯಾಣಿಕರ ಪಾಲಿನ ಮೃತ್ಯುಕೂಪವಾಗುತ್ತಿದೆ. ಸುಮಾರು ನೂರು ವರ್ಷಗಳ ಹಿಂದೆಯೇ ತುಂಗಾ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದ್ದು, ಇಂದಿಗೂ ಇದು ಶಿವಮೊಗ್ಗ ಜನರೊಟ್ಟಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಈಗಲೂ ಸಾವಿರಾರು ಮಂದಿ ಈ ಸೇತುವೆಯನ್ನೇ ಆಶ್ರಯಿಸಿದ್ದಾರೆ. ಇಂತಹ ಸೇತುವೆಯಲ್ಲಿ ಇದೀಗ ಭಾರಿ ಗಾತ್ರದ ಗುಂಡಿಗಳು ಬಿದ್ದಿದ್ದು, ಪ್ರಯಾಣಿಕರು ಪ್ರಾಣಭಯದಿಂದ ಸಂಚರಿಸುವಂತಾಗಿದೆ.

ಈ ಸೇತುವೆ ಮೇಲೆಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದು ನಗರ ಮಧ್ಯಭಾಗದಲ್ಲೇ ಇರುವುದರಿಂದ ಸಂಚಾರ ಪ್ರಮಾಣ ಹೆಚ್ಚಾಗಿದೆ. ಇಂತಹ ಸೇತುವೆ ಇದೀಗ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳಗಾಗಿದೆ.

ತಿಂಗಳುಗಳೇ ಕಳೆದವು: ‘ಇಲ್ಲಿ ಬಿದ್ದಿರುವ ಹಲವು ಗುಂಡಿಗಳು ನಿನ್ನೆ ಮೊನ್ನೆ ಸೃಷ್ಟಿಯಾದವಲ್ಲ. ತಿಂಗಳುಗಳೇ ಕಳೆದಿವೆ. ಸವಾರರು ಸಹ ಇಲ್ಲಿನ ಸಮಸ್ಯೆಯ ಬಗ್ಗೆ ಗಮನ ಸೆಳೆಯುತ್ತಲೇ ಇದ್ದಾರೆ. ಇಂದು ಅಥವಾ ನಾಳೆ ಇಲ್ಲಿನ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುವ ವಿಶ್ವಾಸದಿಂದಲೇ ಸಂಚರಿಸುತ್ತಿದ್ದಾರೆ. ಆದರೆ, ದಿನಗಳು ಉರುಳುತ್ತಿವೆಯೇ ಹೊರತು ಸಮಸ್ಯೆಗಂತೂ ಪರಿಹಾರ ಸಿಕ್ಕಿಲ್ಲ. ನಿತ್ಯವೂ ಸಂಚರಿಸುವ ಪ್ರಯಾಣಿಕರಿಗೆ ಇಲ್ಲಿನ ಸಮಸ್ಯೆ ಮಾಮೂಲಿಯಾಗಿದ್ದು, ಎಲ್ಲೆಲ್ಲಿ ಗುಂಡಿಗಳು ಬಿದ್ದಿವೆ ಎಂದು ಅರಿತು ಗುಂಡಿಗಳನ್ನು ತಪ್ಪಿಸಿ ಸಂಚರಿಸುತ್ತಿದ್ದಾರೆ. ಆದರೆ, ಹೊಸದಾಗಿ ಬರುವ ಪ್ರಯಾಣಿಕರಂತೂ ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ’ ಎನ್ನುತ್ತಾರೆ ಪ್ರಯಾಣಿಕ ಬಸವರಾಜ್.

ದುರಂತಕ್ಕೆ ದಾರಿ: ‘ಸೇತುವೆ ಮೇಲೆ ದಿಢೀರ್‌ ಕಾಣುವ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಚಾಲಕರು ಅಪಘಾತ ಮಾಡಿಕೊಳ್ಳುತ್ತಾರೆ. ಸೈಕಲ್‌, ಬೈಕ್‌ ಹಾಗೂ ಲಘು ವಾಹನಗಳು ಒಂದೇ ಬಾರಿಗೆ ವೇಗ ಕಡಿಮೆ ಮಾಡಿದಾಗ ಹಿಂದಿನಿಂದ ಬರುತ್ತಿರುವ ಲಾರಿ, ಬಸ್‌ಗಳು ಡಿಕ್ಕಿ ಹೊಡೆಯುತ್ತಿವೆ. ವಾಹನ ಹಾಗೂ ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಸವಾರರು ತಡೆ ಗೋಡೆಗೆ ಡಿಕ್ಕಿ ಹೊಡೆದು ನದಿಯಲ್ಲಿ ಬಿದ್ದರೆ ದೊಡ್ಡ ಅನಾಹುತವಾಗುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಹಗಲಿನಲ್ಲಿ ಹೇಗೋ ಗುಂಡಿಗಳನ್ನು ತಪ್ಪಿಸಿ ಸಂಚರಿಸುತ್ತಿರುವ ಸವಾರರಿಗೆ ರಾತ್ರಿ ಪ್ರಯಾಣ ನಿದ್ದೆಗೆಡಿಸಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಹಮ್ಮದ್.

ಅಧಿಕಾರಸ್ತರ ಜಾಣಕುರುಡು: ‘ಶಿವಮೊಗ್ಗ ನಗರಕ್ಕೆ ಸಂಚಾರ ಕಲ್ಪಿಸುವ ಮುಖ್ಯ ಸೇತುವೆ ಇದಾಗಿರುವುದರಿಂದ ಸಚಿವರು, ಸಂಸದರು, ಶಾಸಕರು, ಪಾಲಿಕೆ ಸದಸ್ಯರು, ಅಧಿಕಾರಿಗಳು ಇದೇ ಸೇತುವೆಯಲ್ಲಿ ಸಂಚರಿಸುತ್ತಿದ್ದಾರೆ. ಇವರಿಗೂ ಇಲ್ಲಿನ ಸಮಸ್ಯೆ ಗಮನಕ್ಕೆ ಬಂದಿದೆ. ಆದರೂ ಇವರ‍್ಯಾರೂ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ’ ಸ್ಥಳೀಯ ಬೀಡಾ ಅಂಗಡಿ ಮಾಲೀಕ ಬಸವರಾಜಪ್ಪ.

‘ಇತ್ತೀಚೆಗೆ ಹಣ ಖರ್ಚು ಮಾಡಿ ಸೇತುವೆಯ ತಡೆಗೋಡೆಗಳಿಗೆ ಸುಣ್ಣಬಣ್ಣ ಬಳಿಯಲಾಯಿತು. ಸೇತುವೆ ಮೇಲಿದ್ದ ಮರಳು, ಮಣ್ಣು ತೆಗೆಯಲಾಯಿತು. ಈ ಸಂದರ್ಭದಲ್ಲಿ ಗುಂಡಿಗಳನ್ನು ಮುಚ್ಚಲಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದೆವು. ಆದರೆ ಯಾರೊಬ್ಬರೂ ಗುಂಡಿಗಳತ್ತ ತಮ್ಮ ಚಿತ್ತ ಹರಿಸಿಲ್ಲ. ಪರಿಣಾಮ ಸಮಸ್ಯೆ ಹಾಗೆಯೇ ಉಳಿದಿದೆ’ ಎಂದು ಆರೋಪಿಸುತ್ತಾರೆ ಪ್ರಯಾಣಿಕ ಮಂಜುನಾಥ್.

ಭಾರಿ ವಾಹನ ಸಂಚಾರ ಸ್ಥಗಿತ: ‘ಈ ಸೇತುವೆ ಹಳೆಯದಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಲಾರಿ ಸೇರಿದಂತೆ ದೊಡ್ಡ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಸೇತುವೆ ಬಳಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ. ಆದರೂ ಆಗಾಗ ದೊಡ್ಡ ಗಾತ್ರದ ವಾಹನಗಳು ಸಂಚರಿಸುತ್ತಲೇ ಇವೆ. ಇದು ಕೂಡ ಗುಂಡಿಗಳ ನಿರ್ಮಾಣಕ್ಕೆ ಮೂಲ ಕಾರಣವಾಗಿದೆ. ನೋಡಲು ಸಣ್ಣ ಸಮಸ್ಯೆಯಾದರೂ ದೊಡ್ಡ ಅನಾಹುತವನ್ನೇ ಸೃಷ್ಟಿಸಬಲ್ಲ ಗುಂಡಿಗಳನ್ನು ಮುಚ್ಚುವಲ್ಲಿ ಸಂಬಂಧಪಟ್ಟವರು ಮೀನಮೇಷ ಎಣಿಸುತ್ತಿರುವುದು ವಿಪರ್ಯಾಸವೇ ಸರಿ’ ಎನ್ನುತ್ತಾರೆ ಈ ಭಾಗದ ಪ್ರಯಾಣಿಕರು.

* * 

ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಸಮಸ್ಯೆ ಎದುರಿಸುತ್ತಿದ್ದಾರೆ. ನಮಗೂ ಸಂಚರಿಸಲು ಭಯವಾಗುತ್ತಿದೆ.

ಮಂಜುನಾಥ್‌,

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry