ಮನೆ ಅಂಗಳದಲ್ಲಿ ಆಡು; ಕೈತುಂಬಾ ಕಾಸು ನೋಡು

7

ಮನೆ ಅಂಗಳದಲ್ಲಿ ಆಡು; ಕೈತುಂಬಾ ಕಾಸು ನೋಡು

Published:
Updated:
ಮನೆ ಅಂಗಳದಲ್ಲಿ ಆಡು;  ಕೈತುಂಬಾ ಕಾಸು ನೋಡು

ಪ್ರಾಯೋಗಿಕವಾಗಿ ತಲಾ ಹತ್ತು ಟಗರು ಹಾಗೂ ಹೋತಗಳನ್ನು ಸಾಕಿ ಅವುಗಳ ಮಾರಾಟದಿಂದ ಬಂದ ಲಾಭದಲ್ಲೇ ಸುಮಾರು ನೂರು ಆಡುಗಳನ್ನು ಸಾಕಿ, ಅವುಗಳನ್ನೂ ಮಾರಾಟ ಮಾಡಿದಾಗ ಸಿಕ್ಕಿದ್ದು ಕೈತುಂಬಾ ಹಣ. ಆಡು ಸಾಕಾಣಿಕೆ ಮಾಡಿದ ಆ ಮಹಿಳೆ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ.

ಏಳನೇ ತರಗತಿ ಓದಿರುವ ಅವರೊಬ್ಬ ಗೃಹಿಣಿ. ಕುಟುಂಬದ ನಿತ್ಯದ ಕೆಲಸಗಳೊಂದಿಗೆ ಆಡು ಸಾಕಾಣಿಕೆ ಕಸುಬನ್ನೂ ನಿರ್ವಹಿಸುವ ಮೂಲಕ ಕುಟುಂಬದ ಆರ್ಥಿಕ ಸಬಲತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೌದು, ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಗ್ರಾಮದ ಗೀತಾ ಸಿದ್ದಪ್ಪ ನಡಹಟ್ಟಿ ಎಂಬುವವರೇ ಆ ಸಾಧಕ ಮಹಿಳೆ.

ಪತಿ ಸಿದ್ದಪ್ಪ ಸ್ವಯಂ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಬೆಳಿಗ್ಗೆ ಒಂದಿಷ್ಟು ಹಸಿ ಮೇವು ತಂದಿಟ್ಟು ತಮ್ಮ ಕರ್ತವ್ಯಕ್ಕೆ ಹೋಗುತ್ತಾರೆ. ಇತ್ತ ಗೀತಾ ತಮ್ಮ ಕುಟುಂಬದ ಕೆಲಸಗಳನ್ನು ಮುಗಿಸಿ ಮೇವು ಕತ್ತರಿಸುವುದು, ಆಡುಗಳಿಗೆ ಕಾಲ ಕಾಲಕ್ಕೆ ಮೇವು ಹಾಕುವುದು, ನೀರು ಕೊಡುವುದು... ಹೀಗೆ ಎಲ್ಲ ಕೆಲಸ ಮಾಡುತ್ತಾರೆ.

ಗೀತಾ ಅವರ ಬಳಿ ಸದ್ಯ ನೂರಕ್ಕೂ ಹೆಚ್ಚು ಆಡುಗಳಿವೆ. ಅವುಗಳ ಸಾಕಾಣಿಕೆಗಾಗಿ ಸುಸಜ್ಜಿತ ಶೆಡ್‌ ನಿರ್ಮಿಸಿದ್ದಾರೆ. ನೆಲದಿಂದ ಸುಮಾರು ಐದು ಅಡಿ ಎತ್ತರದಲ್ಲಿ ಆಡುಗಳು ನಿಂತುಕೊಳ್ಳಲು ವ್ಯವಸ್ಥೆ ಮಾಡಿದ್ದು, ಆಡಿನ ಹಿಕ್ಕೆ, ಮೂತ್ರ ಇತರ ತ್ಯಾಜ್ಯ ಕೆಳಕ್ಕೆ ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ಸ್ಥಳದಲ್ಲಿ ನಾಟಿ ಕೋಳಿಗಳ ಸಾಕಾಣಿಕೆ ಮಾಡಿದ್ದಾರೆ. ಅವುಗಳಿಗೆ ಅಲ್ಲಿಯೇ ಕಾಳು ಕಡಿ ನೀಡುತ್ತಾರೆ. ಕೋಳಿಗಳು ಆಡುಗಳ ಹಿಕ್ಕೆಗಳಲ್ಲಿ ಉತ್ಪತ್ತಿಯಾಗುವ ಕ್ರಿಮಿಕೀಟಗಳನ್ನೂ ಭಕ್ಷಿಸುವುದರಿಂದ ಅಲ್ಲಿ ಸ್ವಚ್ಛತೆಯನ್ನೂ ಕಾಪಾಡಿದಂತಾಗುತ್ತದೆ. ಅಲ್ಲದೆ, ಕೋಳಿಗಳ ಮಾರಾಟದಿಂದಲೂ ಆದಾಯ ಗಳಿಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಿರಂತರ ಅನಾವೃಷ್ಟಿ, ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕದ ಸಂಕಷ್ಟಗಳಿಂದ ರೋಸಿ ಹೋಗಿದ್ದ ಗೀತಾ ಕೃಷಿಗೆ ಉಪಕಸುಬಾಗಿ ಆಡು ಸಾಕಾಣಿಕೆ ಆಯ್ದುಕೊಂಡಿದ್ದರು. ಆಗ ಅವರು ಹಾಕಿದ್ದು ಪ್ರಾರಂಭಿಕ ಬಂಡವಾಳ ಕೇವಲ ₹ 50 ಸಾವಿರ. ಒಂದು, ಒಂದೂವರೆ ವರ್ಷ ಅವುಗಳನ್ನು ಸಾಕಿ, ಅವುಗಳ ಮಾರಾಟದಿಂದ ಬಂದ ಆದಾಯದಲ್ಲಿ ರಾಜಸ್ಥಾನದಿಂದ ಶಿರೋಹಿ ತಳಿಯ ಹೋತಗಳನ್ನು ಖರೀದಿಸಿದ್ದರು. ಸರಾಸರಿ ₹ 4,000ಕ್ಕೆ ಒಂದರಂತೆ ಹೋತವನ್ನು ಖರೀದಿಸಿದ್ದ ಅವರು, ಒಂದೂವರೆ ವರ್ಷದ ಬಳಿಕ ಅವುಗಳನ್ನು ಮಾರಾಟ ಮಾಡಿದಾಗ ಪ್ರತಿಯೊಂದಕ್ಕೆ ಅವರಿಗೆ ಸಿಕ್ಕ ಆದಾಯ ಸರಾಸರಿ ₹ 20 ಸಾವಿರ.

ಗೀತಾ ಅವರು ಜವಾರಿ ತಳಿಯ ಆಡುಗಳನ್ನೂ ಸಾಕಿದ್ದಾರೆ. ಆಫ್ರಿಕನ್‌ ಬಯೋರ್ ತಳಿಯ ಹೋತದಿಂದ ಜವಾರಿ ಆಡುಗಳಿಗೆ ಕ್ರಾಸಿಂಗ್ ಮಾಡಿಸುತ್ತಿದ್ದು, ಅವುಗಳಿಂದ ಆಫ್ರಿಕನ್ ಬಯೋರ್ ತಳಿಯನ್ನೇ ಹೋಲುವ ಮರಿಗಳು ಜನಿಸುತ್ತಿವೆ. ಸದ್ಯ ಇವರ ಬಳಿ 35 ಹೋತ, 60 ಆಡುಗಳು ಮತ್ತು 25ಕ್ಕೂ ಹೆಚ್ಚು ಮರಿಗಳಿವೆ.

‘ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿರುವ ಎರಡು ಎಕರೆ ಭೂಮಿ ಇದೆ. ಸಕಾಲದಲ್ಲಿ ಮಳೆಯಾಗದೇ ಬೆಳೆದು ನಿಂತ ಬೆಳೆ ಬಾಡಿ ಹೋಗಿ ಆರ್ಥಿಕ ನಷ್ಟ ಅನುಭವಿಸುವುದು ಸಾಮಾನ್ಯ. ಹೀಗೆ ಬಾಡಿ ಹೋಗುವ ಹಸಿ ಮೇವನ್ನು ಆಡು ಸಾಕಾಣಿಕೆಗಾಗಿ ಬಳಸಬಹುದು, ಆಡು ಸಾಕಾಣಿಕೆಯಿಂದ ಆದಾಯ ಗಳಿಸಬಹುದು ಎಂಬ ಯೋಚನೆಯೊಂದಿಗೆ ಪ್ರಾಯೋಗಿಕವಾಗಿ ಆರಂಭಿಸಿದ ಆಡು ಸಾಕಾಣಿಕ ಕೃಷಿ ಇಂದು ವಾಣಿಜ್ಯಿಕ ಆಯಾಮ ಪಡೆದಿದೆ.

‘ಆಡುಗಳು ಆಗಾಗ ಜ್ವರ, ಶೀತ ಬಾಧೆಗೆ ಒಳಗಾಗುತ್ತವೆ. ಸೂಕ್ತ ವೈದ್ಯಕೀಯ ಕಾಳಜಿ, ಕಾಲ ಕಾಲಕ್ಕೆ ಮೇವು, ಉತ್ತಮ ಆರೈಕೆ ಮಾಡಿದರೆ ಆಡು ಸಾಕಾಣಿಕೆಯಿಂದ ಉತ್ತಮ ಆರ್ಥಿಕ ಲಾಭ ಪಡೆದುಕೊಳ್ಳಬಹುದಾಗಿದೆ’ ಎಂದು ಗೀತಾ ಹೇಳುತ್ತಾರೆ.

ಆಡುಗಳಿಗಾಗಿ ವಿಜಯಪುರದಿಂದ ತೊಗರಿ ಹೊಟ್ಟು ತರಿಸುತ್ತಾರೆ. ಸ್ಥಳೀಯವಾಗಿ ದೊರಕುವ ಸೊಯಾಬೀನ್, ಕಡಲೆ ಹೊಟ್ಟು ಸಂಗ್ರಹಿಸುತ್ತಾರೆ. ದಿನಕ್ಕೆ ಒಂದು ಹೊತ್ತು ಹಸಿ ಮೇವು, ಮಧ್ಯಾಹ್ನ ಹೊಟ್ಟು ಹಾಗೂ ರಾತ್ರಿ ಕಾಳುಕಡಿಗಳನ್ನು ಕೈ ತಿಂಡಿಯಾಗಿ ನೀಡುತ್ತಾರೆ.

‘ಆಡಿನ ಹಾಲು ಆರೋಗ್ಯಕ್ಕೆ ಉತ್ತಮ. ಔಷಧೀಯ ಗುಣಗಳೂ ಇದರಲ್ಲಿದೆ. ಆದರೆ, ಸ್ಥಳೀಯವಾಗಿ ಆಡಿನ ಹಾಲಿಗೆ ಮಾರುಕಟ್ಟೆ ಇಲ್ಲ. ಹೀಗಾಗಿ ಹಾಲನ್ನು ಸಂಪೂರ್ಣವಾಗಿ ಮರಿಗಳಿಗೆ ಬಿಡುತ್ತೇವೆ. ಇದರಿಂದ ಮರಿಗಳ ಬೆಳವಣಿಗೆಯೂ ಶೀಘ್ರವಾಗುತ್ತದೆ’ ಎಂದು ಅವರು ಹೇಳುತ್ತಾರೆ. ಸಂಪರ್ಕಕ್ಕೆ: 9731104052.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry