4

ಕಾಟಾರಿನ ‘ರೆಡ್‌ಲೇಡಿ’

Published:
Updated:
ಕಾಟಾರಿನ ‘ರೆಡ್‌ಲೇಡಿ’

ಕೃಷಿಯನ್ನು ಸರಿಯಾಗಿ ನಿರ್ವಹಿಸಿದರೆ ಅದು ರೈತನ ಕುಟುಂಬವನ್ನು ಕೈಹಿಡಿದು ಮುನ್ನಡೆಸುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಮೈಸೂರು ಜಿಲ್ಲೆಯ ನಂಜನಗೂಡು ಪಕ್ಕದ ಕಾಟಾರು ಎಂಬ ಗ್ರಾಮದ ಮಲ್ಲಮ್ಮ.

ಈ ಕೃಷಿಕ ಮಹಿಳೆಯ ಕುಟುಂಬದಲ್ಲಿ ಒಟ್ಟು ಆರು ಜನ ಸದಸ್ಯರಿದ್ದು, ಜೀವನ ನಿರ್ವಹಣೆಗಾಗಿ ಅವರು ತರಕಾರಿಯಂತಹ ಅಲ್ಪಾವಧಿ ಬೆಳೆಗಳನ್ನೇ ನೆಚ್ಚಿಕೊಂಡಿದ್ದರು. 2014ರಲ್ಲಿ ಅವರು ತಮ್ಮ ಮನೆಯ ಅಕ್ಕಪಕ್ಕದ ಹದಿಮೂರು ಮಂದಿ ಸಮಾನ ಮನಸ್ಕ ಮಹಿಳೆಯರನ್ನು ಒಟ್ಟು ಸೇರಿಸಿ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘ ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಅಧ್ಯಯನ ಪ್ರವಾಸ ಮತ್ತು ಕೃಷಿ ಸಂಬಂಧಿತ ಕಾರ್ಯಗಾರಗಳಿಂದ ಪ್ರೇರಿತರಾಗಿ ತಾವೂ ಯಾಕೆ ಭಿನ್ನ ಬೆಳೆಗಳನ್ನು ಬೆಳೆಯಬಾರದು ಎಂದು ಯೋಚಿಸತೊಡಗಿದರು.

ತಮಗಿರುವ ಒಟ್ಟು ಮೂರು ಎಕರೆ ಜಮೀನಿನ ಪೈಕಿ ಒಂದು ಎಕರೆ ಜಮೀನಿನಲ್ಲಿ ಪಪ್ಪಾಯಿ ಹಣ್ಣಿನ ಗಿಡಗಳನ್ನು ಬೆಳೆಯಲು ನಿರ್ಧರಿಸಿದರು. ಕುಟುಂಬದಲ್ಲಿ ನಾಲ್ಕು ಮಂದಿ ಸದಸ್ಯರು ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಕಾರಣದಿಂದ ಕೃಷಿಗಾಗಿ ಹೊರಗಿನಿಂದ ಕಾರ್ಮಿಕರನ್ನು ಬಳಸಿಕೊಳ್ಳುವ ಪ್ರಮೇಯವೂ ಬರಲಿಲ್ಲ. ಹೀಗೆ ಸ್ವತಃ ಕೃಷಿ ಕೆಲಸಗಳನ್ನು ನಿರ್ವಹಣೆ ಮಾಡತೊಡಗಿದರು.

ತಮಿಳುನಾಡಿನಿಂದ ‘ರೆಡ್‍ಲೇಡಿ’ ತಳಿಯ 950 ಸಸಿಗಳನ್ನು ತಲಾ ₹12ಕ್ಕೆ ಒಂದರಂತೆ ಖರೀದಿಸಿ ತಂದರು. ಗಿಡದಿಂದ ಗಿಡಕ್ಕೆ ಆರು ಅಡಿ, ಸಾಲಿನಿಂದ ಸಾಲಿಗೆ ಏಳು ಅಡಿ ಅಳತೆಯಲ್ಲಿ ಸಂಪೂರ್ಣ ಸಾವಯವ ಗೊಬ್ಬರವನ್ನು ಹಾಕಿ ನಾಟಿ ಮಾಡಿದರು.

ನಾಟಿ ಮಾಡಿದ ಆರು ತಿಂಗಳಿಗೆ ಪಪ್ಪಾಯಿ ಗಿಡಗಳು ಹಣ್ಣುಗಳನ್ನು ಬಿಟ್ಟವು. ಒಂದೊಂದು ಹಣ್ಣು ಪಪ್ಪಾಯಿ ಎರಡರಿಂದ ಮೂರು ಕೆ.ಜಿವರೆಗೂ ತೂಗುತ್ತಿದ್ದು, ಪ್ರತಿ ಕೆ.ಜಿ.ಗೆ ₹20 ದರ ಸಿಕ್ಕಿತು. ಗಿಡಗಳಿಗೆ ನೀರುಣಿಸಲು ಹನಿ ನೀರಾವರಿ ವ್ಯವಸ್ಥೆ ಗಾಗಿ ₹45 ಸಾವಿರ ಖರ್ಚು ಮಾಡಿದ್ದರು. ಮೊದಲ ಫಸಲಿನಲ್ಲೇ ಸರಿ ಸುಮಾರು ₹2 ಲಕ್ಷದವರೆಗೆ ಆದಾಯವನ್ನು ಪಡೆದಿದ್ದಾರೆ. ಅದರಲ್ಲಿ ನಿವ್ವಳ ವರಮಾನ ₹1.50 ಲಕ್ಷ ಎಂದು ಹೇಳುವ ಮಲ್ಲಮ್ಮ ಅಕ್ಕಪಕ್ಕದ ರೈತರಲ್ಲಿ ಸೋಜಿಗ ಮೂಡಿಸಿದ್ದಾರೆ.

ಆರಂಭಿಕ ಯಶಸ್ಸಿನಿಂದ ಉತ್ತೇಜನಗೊಂಡ ಮಲ್ಲಮ್ಮ, ತಮ್ಮ ಪೂರ್ತಿ ಮೂರೂ ಎಕರೆ ಭೂಮಿಯಲ್ಲಿ 2,900 ರೆಡ್‍ಲೇಡಿ ಪಪ್ಪಾಯಿ ಸಸಿಗಳನ್ನು ತಮಿಳುನಾಡಿನಿಂದಲೇ ಖರೀದಿಸಿ ತಂದು ಸಮರ್ಪಕವಾಗಿ ನಾಟಿ ಮಾಡಿದರು. ಪಪ್ಪಾಯಿ ಕಾಯಿ ಬಿಡುವ ಹಂತದಲ್ಲಿಯೇ ಉತ್ತಮ ಪೋಷಕಾಂಶವಿರುವ ಗೊಬ್ಬರವನ್ನು ಕೊಟ್ಟರು. ಇದುವರೆಗೂ ಸುಮಾರು 10 ಬಾರಿ ಫಸಲು ಕಟಾವಿಗೆ ಬಂದಿದೆ. ತಮ್ಮ ಪಪ್ಪಾಯಿ ತೋಟವನ್ನು ₹3.50 ಲಕ್ಷಕ್ಕೆ ಹೊರಗುತ್ತಿಗೆ ನೀಡಿದರು. ವಾರ್ಷಿಕವಾಗಿ ಲೆಕ್ಕಾಚಾರ ಮಾಡುವಾಗ ಇಳುವರಿಯ ಒಟ್ಟು ಮೊತ್ತ ₹5 ಲಕ್ಷವನ್ನು ದಾಟಬಹುದು ಎಂದು ಮಲ್ಲಮ್ಮ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ನಾವು ಇದುವರೆಗೂ ಬೆಳೆಯುತ್ತಿದ್ದ ತರಕಾರಿ ಬೆಳೆಗಳಿಗೆ ಹೋಲಿಕೆ ಮಾಡಿದರೆ ಇಲ್ಲಿ ಅತ್ಯಧಿಕ ಇಳುವರಿ ಇದ್ದು, ಕೆಲಸಗಾರರ ಸಮಸ್ಯೆ ಎದುರಾಗುವುದೇ ಇಲ್ಲ ಎಂದು ಅವರು ಹೇಳುತ್ತಾರೆ. ಅಲ್ಲದೇ ಪಪ್ಪಾಯಿ ಹಳದಿ ಬಣ್ಣಕ್ಕೆ ತಿರುಗುವ ಮೊದಲೇ ಕಟಾವು ಮಾಡುವುದರಿಂದ ಇವುಗಳನ್ನು ವಿವಿಧ ಬಗೆಯ ಔಷಧಿ ಹಾಗೂ ಕಾಸ್ಮೆಟಿಕ್ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ. ಪಪ್ಪಾಯಿಯು ಸೌಂದರ್ಯ ಮತ್ತು ಆರೋಗ್ಯವರ್ಧಕ ಹಣ್ಣಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಸಮಸ್ಯೆಯೇ ಇರುವುದಿಲ್ಲ ಎನ್ನುತ್ತಾರೆ. ಅಲ್ಲದೇ ಪಪ್ಪಾಯಿಯನ್ನು ದಿನನಿತ್ಯ ಎಲ್ಲಾ ವಯೋಮಾನದವರೂ ಆಹಾರ ಪದಾರ್ಥವಾಗಿ ಬಳಕೆ ಮಾಡುವುದರಿಂದ ಬೇಡಿಕೆ ಇಲ್ಲವೆ ಧಾರಣೆ ಕುಸಿತದ ಭಯವೂ ಇಲ್ಲ ಎಂದು ತಿಳಿಸುತ್ತಾರೆ.

ಸಂಘಕ್ಕೆ ಸೇರಿದ ನಂತರ ಪ್ರಥಮ ಹಂತದಲ್ಲಿ ₹15 ಸಾವಿರ, ದ್ವಿತೀಯ ಹಂತದಲ್ಲಿ ₹ 30 ಸಾವಿರ ಮತ್ತು ತೃತೀಯ ಹಂತದಲ್ಲಿ ₹ 40 ಸಾವಿರ ಸಾಲವನ್ನು ಪಡೆದಿದ್ದರು. ಜೊತೆಗೆ ಎರಡು ಹಸುಗಳನ್ನು ಸಾಕುತ್ತಾ ಹೈನುಗಾರಿಕೆಯನ್ನು ಶುರು ಮಾಡಿದ್ದರು.

ಮನೆ ಕಟ್ಟಲು ನಿರ್ಧರಿಸಿರುವ ಮಲ್ಲಮ್ಮ, ಪತಿಗೆ ಬೈಕ್‌ ಖರೀದಿಸಿ ಕೊಟ್ಟಿದ್ದಾರೆ. ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಮಾಡಿಸುವ ಇರಾದೆಯನ್ನೂ ಹೊಂದಿದ್ದಾರೆ. ಇನ್ನಷ್ಟು ವೈವಿಧ್ಯದ ಕೃಷಿಯನ್ನು ಅಳವಡಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry