ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಭಾಷೆ ಬಲ್ಲರು ಈ ಊರ ಜನರು

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಇತ್ತ ಯೆ, ಎವಡಕೊತು ಕುಟ್ಟ ಗೆಲ್ತಾಸು’ ಎಂದು ಮನ್ನುಬಾಯಿ ತನ್ನ ಮೊಮ್ಮಗಳಿಗೆ ಮರಾಠಿಯಲ್ಲಿ ಕರೆದಾಗ, ಪಕ್ಕದ ಮನೆ ಲಕ್ಷ್ಮಮ್ಮ ‘ಊಟ್ಲಿವಾಲಿ ಪನ್ನಿನಿ, ಪಡಿಸಿನಿ ಇರುಕುನು’ ಎಂದು ತನ್ನ ಮಗನಿಗೆ ತಮಿಳಿನಲ್ಲಿ ಗದರಿಸುತ್ತಿದ್ದರು. ಅಷ್ಟೊತ್ತಿಗೆ ಅಲ್ಲಿಂದ ಬಂದ ಸಾವಿತ್ರಮ್ಮ ‘ಅದೇಂತಾ ಅಣಪಕಾಯಿಲು ಮಿದೆನಾ, ಗಾಳಿಕಿ ಇಡೆಂಡಾ’ ಎಂದು ತೆಲುಗಿನಲ್ಲಿ ಮಾತಿಗಿಳಿದರು.

ಇದೆಲ್ಲ ನೋಡುತ್ತ ನಿಂತಿದ್ದ ನನಗೆ, ‘ಕೇಳಿದಿರಾ ನಮ್ಮೂರ ಜನಗಳ ಭಾಷಾ ವೈವಿಧ್ಯವನ್ನು’ ಎಂದು ಅಚ್ಚಗನ್ನಡದಲ್ಲಿ ಹೆಮ್ಮೆಯಿಂದ ಹೇಳಿದರು ಕದರಿನತ್ತ ಹಳ್ಳಿಯ ಶ್ರೀರಾಮ್‌ ವೈ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿಯಲ್ಲಿ ಕದರಿನತ್ತ ಎಂಬ ಊರಿದೆ. ಇದು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಗಳು ಸಂಧಿಸುವ ಪ್ರದೇಶಕ್ಕೆ ಹತ್ತಿರವಿದೆ. ಹಾಗಾಗಿ ಇಲ್ಲಿನ ಜನರೆಲ್ಲರೂ ಬಹುಭಾಷಾ ಪರಿಣಿತರಾಗಿದ್ದಾರೆ. ಆಶ್ಚರ್ಯವೆಂದರೆ, ಇಲ್ಲಿ ಮರಾಠಿಗರ ಮನೆಗಳು ಹೆಚ್ಚಿವೆ. ಅದರಿಂದಾಗಿ, ಸ್ಥಳೀಯರು ಮರಾಠಿ ಮಾತುಗಳನ್ನೂ ಆಡುತ್ತಾರೆ.

ದಕ್ಷಿಣ ಕರ್ನಾಟಕದ ಈ ಗಡಿಯೂರಿಗೂ ಮರಾಠಿಗರಿಗೂ ಏನು ಸಂಬಂಧ, ಇವರು ಯಾವಾಗ ಬಂದಿರಬಹುದು ಎಂಬುದರ ಬಗ್ಗೆ ಊರ ಜನರೇ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ‘ರಾಜರ ಕಾಲದಲ್ಲಿ ಕುರಿಗಾಹಿಗಳಾಗಿಯೊ, ಸೈನಿಕರಾಗಿಯೊ ಅಥವಾ ವ್ಯಾಪಾರಿಗಳಾಗಿಯೊ ಮರಾಠರು ಇತ್ತ ಬಂದಿರಬಹುದು’ ಎಂದು ಊಹಾತ್ಮಕ ಉತ್ತರ ನೀಡುತ್ತಾರೆ ಅವರು.

ಇದೊಂದೇ ಊರಂತಲ್ಲ. ಈ ಪ್ರದೇಶದ ದೊಡ್ಡಪಣಹಳ್ಳಿ, ಬೋಡಪಟ್ಟಿ, ಕೊಳಮೂರು, ಎರಗೋಳ, ಕನುಮನಹಳ್ಳಿ, ನಾಡಗುಮ್ಮನಹಳ್ಳಿ, ಚೆತಗುಟ್ಟಹಳ್ಳಿ, ಹೆಬ್ಬುರಿಗಳಲ್ಲಿಯೂ ನಾಲ್ಕೈದು ಭಾಷೆಗಳನ್ನು ಆಡುವವರು ಹೆಚ್ಚಿದ್ದಾರೆ.

ನೆರೆರಾಜ್ಯಗಳ ನುಡಿಗಳ ಪ್ರಭಾವದಿಂದ ತಮಿಳು, ತೆಲುಗಿನ ಪದಗಳು ಇಲ್ಲಿನವರ ನಾಲಿಗೆಯ ತುದಿಯಲ್ಲಿವೆ. ಊರಲ್ಲಿ ಅರ್ಧದಷ್ಟು ಮರಾಠಿಗರು ಇರುವುದರಿಂದ ಅವರ ಭಾಷೆಯೂ ರೂಢಿಯಾಗಿದೆ. ಇಲ್ಲಿ ಕನ್ನಡ ಮಾಧ್ಯಮ ಶಾಲೆಯಿದೆ. ಹಾಗಾಗಿ ನಮ್ಮ ನಾಡ ನುಡಿಯನ್ನು ಇವರು ಮರೆತಿಲ್ಲ. ಊರಿನ ಆರು ಯುವಕರು ಕಾಲೇಜು ಮೆಟ್ಟಿಲೇರಿದ್ದಾರೆ. ಅವರಿಗೆ ಹಿಂದಿ ಮತ್ತು ಇಂಗ್ಲಿಷ್‌ ಪರಿಚಯವಾಗಿವೆ. ಹಾಗಾಗಿ ‘ನಾವು ಷಟ್‌ಭಾಷೆ ಬಲ್ಲವರು’ ಎಂಬ ಹೆಮ್ಮೆ ಅವರಲ್ಲಿ ಮನೆಮಾಡಿದೆ.

ಊರಲ್ಲಿನ ಪರಿಶಿಷ್ಟ ಜಾತಿಯವರು ತಮಿಳನ್ನು ಹೆಚ್ಚು ಬಳಸಿದರೆ, ತಿಗಳ ಸಮುದಾಯದವರು ತೆಲುಗಿನಲ್ಲಿ ವ್ಯವಹರಿಸಲು ಮೊದಲ ಆದ್ಯತೆ ನೀಡುತ್ತಾರೆ. ಇಲ್ಲಿ ಒಂದೇ ಮುಸ್ಲಿಂ ಕುಟುಂಬವಿದೆ. ಅದರ ಸದಸ್ಯೆಯಾದ ಫಾತಿಮಾ ತನಗೆ ಗೊತ್ತಿರುವ ಹಿಂದಿ ಮಿಶ್ರಿತ ಉರ್ದುವನ್ನು ಬಲ್ಲವರೊಂದಿಗೆ ಬಳಸುತ್ತಾರೆ. ‘ಊರ ನ್ಯಾಯಪಂಚಾಯ್ತಿ, ಮದುವೆ ಮತ್ತು ಹಬ್ಬ–ಹರಿದಿನದ ಆಚರಣೆಗಳಲ್ಲಿ ತೆಲುಗು ಮತ್ತು ತಮಿಳು ಜಾನಪದದ ಗೀತೆಗಳನ್ನು ಹಾಡುತ್ತೇವೆ’ ಎಂದರು ಟೈಲರ್‌ ವೆಂಕಟೇಶ್‌.

ಊರ ಅಂಗಡಿಯ ಒಡತಿಯಾದ ಜಯಲಕ್ಷ್ಮಿ ಯಾವ ಸಮುದಾಯದವರು ಬಂದು, ಯಾವ ಭಾಷೆಯಲ್ಲಿ ವಸ್ತುಗಳನ್ನು ಕೇಳುತ್ತಾರೊ, ಅದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ‘ಯುವ ಜನರು ಕನ್ನಡಕ್ಕಿಂತ ತಮಿಳು, ತೆಲುಗು ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಅವುಗಳನ್ನು ನೋಡಲು ಬಂಗಾರಪೇಟೆ, ಆಂಧ್ರದ ಕುಪ್ಪಂ, ತಮಿಳುನಾಡಿನ ಕೃಷ್ಣಗಿರಿಗೂ ಹೋಗಿ ಬರುತ್ತಾರೆ’ ಎಂದು ಯುವಕ ಶಕ್ತಿ ತಿಳಿಸಿದರು.

‘ಆಂಧ್ರದ ಹಳ್ಳಿಯವಳಾದ ನನಗೆ ತೆಲುಗು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಮದುವೆಯಾಗಿ ಈ ಊರಿಗೆ ಬಂದ ಮೇಲೆ ಇಲ್ಲಿನವರ ಜತೆ ಮಾತನಾಡುತ್ತಲೇ ಭಾಷೆಗಳನ್ನು ಕಲಿತೆ’ ಎಂದು ಅರವತ್ತೈದರ ಇಳಿವಯಸ್ಸಿನ ಮುನಿಯಮ್ಮ ಹೇಳಿದರು.

ಮರಾಠಿಯಾಡುವ ಎಲ್ಲೊಜಿರಾವ್‌, ತಿಮ್ಮೊಜಿರಾವ್‌, ಲಚುಮಬಾಯಿ ಹಾಗೂ ಧರ್ಮಬಾಯಿ ಅವರಿಗೆ ತೆಲುಗು, ತಮಿಳಿನ ಜನಪದ ಹಾಡುಗಳು ಬರುತ್ತವೆ. ಮನವಿ ಮಾಡಿದಾಗ, ಲಚುಮಬಾಯಿ ತಮ್ಮ ತೊಡೆ ಮೇಲಿದ್ದ ಕೂಸು ಮೊಮ್ಮಗಳನ್ನು ನೋಡಿಕೊಂಡು, ‘ದೂರಿ..ದೂರಿ. ದೂರಮ್ಮ..ದೂರಿ’ ಎಂದು ತೆಲುಗಿನ ಲಾಲಿ ಪದದ ಒಂದೆರಡು ಸಾಲುಗಳನ್ನು ರಾಗವಾಗಿ ಹಾಡಿದರು.

ತಮಿಳುನಾಡಿನಿಂದ ಒಂದು ಕಿ.ಮೀ. ಮತ್ತು ಆಂಧ್ರಪ್ರದೇಶದ ಗಡಿಯಿಂದ 3 ಕಿ.ಮೀ. ಅಂತರವಿರುವ ಈ ಊರಿನಲ್ಲಿ ಸುಮಾರು ನೂರು ಮನೆಗಳಿವೆ. 450 ನಿವಾಸಿಗಳಿದ್ದಾರೆ. ಒಂದು ಕುಟುಂಬಕ್ಕೆ ಸರಾಸರಿ ಮೂರು ಎಕರೆ ಒಣ ಜಮೀನಿದೆ. ಅದರಲ್ಲೇ ಹೊಟ್ಟೆಗಾಗಿ ಭತ್ತ, ರಾಗಿ, ಅಲಸಂದೆ, ಉಲುಲಿ, ತೊಗರಿ ಬೆಳೆಯುತ್ತಾರೆ. ಆಶ್ರಯ, ಆರೋಗ್ಯ ಮತ್ತು ಮಕ್ಕಳ ಅಕ್ಷರ ಜ್ಞಾನದ ವೆಚ್ಚಕ್ಕೆಂದು ವಯಸ್ಕರು ಕೂಲಿ ಅರಸಿ ಬೆಂಗಳೂರಿಗೆ ದಿನಾಲೂ ಹೋಗಿ ಬರುತ್ತಾರೆ. ಹದಿನೈದು ಕಿ.ಮೀ. ಅಂತರದಲ್ಲಿ ಇರುವ ಕಾಮಸಮುದ್ರದಿಂದ ರಾಜಧಾನಿಗೆ ರೈಲುಗಳು ಇರುವುದರಿಂದ ಅವರಿಗೆ ಅನುಕೂಲವಾಗಿದೆ.

ಈ ಊರಿನ ಮೊದಲ ಸ್ನಾತಕೋತ್ತರ ಪದವೀಧರ ಶ್ರೀರಾಮ್‌ ವೈ. ನೇತೃತ್ವದಲ್ಲಿ ನಾಲ್ಕು ವರ್ಷಗಳ ಕಾಲ ಸಾರಿಗೆ ಸಚಿವರ ಗಮನ ಸೆಳೆದು, ಊರಿಗೆ ಟಾರು ರಸ್ತೆ ಮಾಡಿಸಿಕೊಂಡಿದ್ದಾರೆ. ದಿನಕ್ಕೆರಡು ಬಾರಿ ಬಸ್ಸು ಬಂದು ಹೋಗುತ್ತದೆ. ಊರಿಗೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕು, ಯುವಕರಿಗೆ ಕೆಲಸ ಸಿಗುವಂತಾಗಲು ತಾಲ್ಲೂಕಿನಲ್ಲಿ ಉದ್ಯಮಗಳನ್ನು ಸ್ಥಾಪಿಸಬೇಕು ಎಂಬುದು ಇಲ್ಲಿನವರ ಒತ್ತಾಯವಾಗಿದೆ.

ಇಲ್ಲಿನ ಮಹಿಳೆಯರಿಗೆ ಕನಿಷ್ಠವೆಂದರೂ ನಾಲ್ಕು ಭಾಷೆಗಳು ಬರುತ್ತವೆ. ವಿವಿಧ ಚಾನೆಲ್‌ಗಳಲ್ಲಿ ಧಾರಾವಾಹಿ, ಸಿನಿಮಾ ನೋಡಲು ಭಾಷಾಆಯ್ಕೆಯ ಅವಕಾಶ ಸಿಕ್ಕಿರುವುದರಿಂದ ಅವರಲ್ಲಿ ಸಂತಸ ಕೊಂಚ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT