ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೂಗುವ ದಾರಿ’ಯಲ್ಲಿ ಮರಗಳ ಜತೆ ಮಾತು!

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹೀಗೊಮ್ಮೆ ಕಲ್ಪಿಸಿಕೊಳ್ಳಿ. ನೂರಾರು ಕಿಲೋಮೀಟರ್ ದೂರದಿಂದ ಪ್ರಯಾಣ ಮಾಡಿ ಹೈರಾಣಾಗಿ, ಇನ್ನುಮುಂದೆ ಪ್ರಯಾಣ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ತಲುಪಿರ್ತೀರಿ. ಅಷ್ಟರಲ್ಲಿ ತಣ್ಣನೆಯ, ಸುವಾಸನೆಭರಿತ ಗಾಳಿ ಬೀಸುತ್ತದೆ. ಹಾಗೇ ಮುಂದೆ ಹೋಗುತ್ತಿದ್ದರೆ ರಸ್ತೆಯಂಚಿನ ಪೊದೆಗಳಿಂದ ಅದ್ಯಾವುದೋ ಕಾಡು ಪ್ರಾಣಿಯ ಓಟ. ಜೀಜಿಂಬೆ, ಹಕ್ಕಿಗಳ ಚಿಲಿಪಿಲಿ ಸದ್ದು. ಹಚ್ಚ ಹಸುರಿನ ಪೈರಿನ ಗದ್ದೆಯಂಚಿನಲ್ಲಿ ಸಾಗುವ ನದಿಯ ಜುಳುಜುಳು ನಾದ. ಕೊನೆಗೆ ಆಕಾಶವೇ ಕಾಣದಂತೆ ವ್ಯಾಪಿಸಿಕೊಂಡಿರುವ ಮರಗಳ ಆಶ್ರಯದಲ್ಲಿ ವಿಶ್ರಾಂತಿ!

ಈ ಎಲ್ಲ ಕಲ್ಪನೆಗಳೂ ಸಾಕಾರಗೊಳ್ಳಲು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಕುವೇಶಿಯಲ್ಲಿ ‘ಕೆನೋಪಿ ವಾಕ್’ ಪ್ರದೇಶಕ್ಕೆ ಪ್ರವಾಸ ಮಾಡಬೇಕು. ಮರದಲ್ಲಿ ನಿರ್ಮಿಸಿದ ದೇಶದ ಮೊದಲ ಹಾಗೂ ವಿಶ್ವದ ಮೂರನೇ (ಮಲೇಷ್ಯಾ ಮತ್ತು ಆಸ್ಟ್ರೇಲಿಯಾ ಮೊದಲ ಎರಡು ದೇಶಗಳು) ಆಕರ್ಷಣೆ ಇದಾಗಿದೆ.

ಕಾಳಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯ ಸಮೀಪ ನಿರ್ಮಿಸಲಾದ ಕೆನೋಪಿ ಮೇಲಿನ 240 ಮೀಟರ್ ನಡಿಗೆಯಲ್ಲಿ ನಮ್ಮೆಲ್ಲಾ ಆಯಾಸ ನೀಗಿರುತ್ತದೆ. ಬೆಟ್ಟದ ಮೇಲಿಂದ ಸುಮಾರು 250 ಮೀಟರ್‌ ಕೆಳಗೆ ನಡೆದರೆ ಅತ್ಯಮೂಲ್ಯ ಜಗತ್ತು ಕೈಬೀಸಿ ಕರೆಯುತ್ತದೆ. ಕೆನೋಪಿಯ ಮೊದಲ ಮೆಟ್ಟಿಲಿನ ಮೇಲೇರಿ ಹೋಗಿ ಪ್ಲಾಟ್‌ಫಾರ್ಮ್‌ಗೆ ತಲುಪಿದಾಗ ಕಾಡಿನ ತೀವ್ರತೆ ಅರಿವಾಗುತ್ತದೆ. ಒಂದು ಮರದಿಂದ ಮತ್ತೊಂದು ಮರಕ್ಕೆ ಸುಮಾರು 30 ಅಡಿಗಳಷ್ಟು ಎತ್ತರದಲ್ಲಿ ತೂಗುಸೇತುವೆ ಮೇಲೆ ಒಂದೊಂದೇ ಹೆಜ್ಜೆ ಇಡುತ್ತಿದ್ದರೆ ಮರಗಳು ನಮ್ಮೊಂದಿಗೆ ಏನೋ ಹೇಳುತ್ತಿವೆ ಎನ್ನುವ ಭಾವನೆ ಮೂಡುತ್ತದೆ!

ಸುರಹೊನ್ನೆ ಮರಗಳ ಆಶ್ರಯ: ‘ಕೆನೋಪಿ ನಿರ್ಮಾಣಕ್ಕೆ ಬೆಳೆದಿರುವ ಮರಗಳು ಅಗತ್ಯ. ಅದಕ್ಕೆ ಅರಣ್ಯ ಇಲಾಖೆಯ ತಜ್ಞರ ಜತೆಗೆ ಸೇರಿ ಸುರ ಹೊನ್ನೆ ಮರಗಳಿರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡ್ವಿ’ ಎನ್ನುತ್ತಾ ಮಾತಿಗಿಳಿದವರು ಅದರ ನಿರ್ಮಾಣ ಮಾಡಿದ ಮೈಸೂರಿನ ‘ಔಟ್‌ಬ್ರೇಕ್ ಅಡ್ವೆಂಚರ್ಸ್‌’ನ ಅಲೀಂ ಮತ್ತು ಭರತ್.

‘ಅವು ಬಹಳ ಗಟ್ಟಿ. ಆದರೆ, ಬಾಗಿಸಲು ಸಾಧ್ಯವಾಗುವ ಮರಗಳು. ನಿರ್ದಿಷ್ಟ ಎತ್ತರವನ್ನು ಗುರುತು ಮಾಡಿಕೊಂಡು ಕಾಮಗಾರಿ ಆರಂಭಿಸಿದೆವು. ಕೆನೋಪಿಯಿಂದ ಮರಗಳಿಗೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಉಕ್ಕಿನ ಹಗ್ಗ ಬಿಗಿಯುವ ಜಾಗದಲ್ಲಿ ಮರದ ಕವಚ ಅಳವಡಿಸಿದ್ದೇವೆ. ಇವು ಈಗಾಗಲೇ ಬೆಳೆದಿರುವ ಮರಗಳಾಗಿರುವ ಕಾರಣ ಪ್ಲಾಟ್‌ಫಾರ್ಮ್‌ಗೆ ತೊಂದರೆಯಿಲ್ಲ. ಅಗತ್ಯವಿದ್ದರೆ ಸ್ಕ್ರೂ ಸಡಿಲಿಸಿ ಹೊಂದಾಣಿಕೆ ಮಾಡಬಹುದು. ಸ್ಥಳೀಯವಾಗಿ ಸಿಗುವ ಕರಿಮತ್ತಿ ಪ್ರಭೇದದ ಮರಗಳ ಹಲಗೆಯನ್ನೇ ದಾರಿಗೆ ಬಳಸಲಾಗಿದ್ದು, ಸೂಕ್ತ ನಿರ್ವಹಣೆಯಿದ್ದರೆ ಅವು ಐದು ವರ್ಷ ಬಾಳಿಕೆ ಬರುತ್ತವೆ’ ಎಂದು ಅವರು ವಿವರಿಸಿದರು.

ಕುವೇಶಿಯೇ ಏಕೆ? ದಾಂಡೇಲಿ ಸುತ್ತಮುತ್ತ ಕಾಳಿ ಹುಲಿ ಸಂರಕ್ಷಿತಾರಣ್ಯ (ಕೆಟಿಆರ್‌) ಇರುವ ಕಾರಣ ಅಲ್ಲಿ ಈ ರೀತಿಯ ಕಾಮಗಾರಿಗೆ ಅವಕಾಶವಿರ ಲಿಲ್ಲ. ಹೀಗಾಗಿ ಸ್ಥಳ ಅರಸುತ್ತ ಬಂದಾಗ ದೊರೆತಿದ್ದೇ ಕೆಟಿಆರ್‌ ವ್ಯಾಪ್ತಿಗೆ ಸೇರದ ಕುವೇಶಿ. ಅಲ್ಲದೇ ಇದು ‘ದಿ ಗ್ರೇಟ್ ಕೆನರಾ ಟ್ರೇಲ್ಸ್‌’ನ ಕೊನೆಯ ಭಾಗದಲ್ಲಿ ಇರುವುದೂ ಅನುಕೂಲವಾಯಿತು ಎನ್ನುತ್ತಾರೆ ಭರತ್.

ಕುಣಗಿನಿ ಅರಣ್ಯ ಚೆಕ್‌ಪೋಸ್ಟ್‌ನಲ್ಲಿ ನಾವು ಬಂದ ವಾಹನವನ್ನು ನಿಲ್ಲಿಸಿ, ಅಲ್ಲಿಂದ ಅರಣ್ಯ ಇಲಾಖೆಯ ವಾಹನದಲ್ಲಿ ಸಾಗಬೇಕು. ಈ ಪ್ರದೇಶದಲ್ಲಿ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ. ಆದ್ದರಿಂದ ಗುಂಪಿನ ಸದಸ್ಯರ ಜತೆಗೇ, ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಇರುವುದು ಉತ್ತಮ. 

ಕೆನೋಪಿ ವಾಕ್ ನಿರ್ಮಾಣದ ರೂವಾರಿಗಳಾದ ಅಲೀಂ ಮತ್ತು ಭರತ್ ಮೆಕಾನಿಕಲ್ ಎಂಜಿನಿಯರ್‌ಗಳು. ‘ಮೊದಲಿನಿಂದಲೇ ಸಾಹಸ ಪ್ರವೃತ್ತಿಯ ಚಟುವಟಿಕೆಗಳಲ್ಲಿ ಆಸಕ್ತರಾಗಿರುವ ನಮಗೆ ಇದು ಮೊದಲನೇ ನಿರ್ಮಾಣ ಅನುಭವ’ ಎನ್ನುತ್ತಾರೆ ಅವರು.

‘2016ರಲ್ಲಿ ದಾಂಡೇಲಿ ಹಕ್ಕಿ ಹಬ್ಬದಲ್ಲಿ ಕೆನೋಪಿ ವಾಕ್ ನಿರ್ಮಾಣದ ಬಗ್ಗೆ ಸಚಿವ ಆರ್.ವಿ.ದೇಶಪಾಂಡೆ ಅವರ ಜತೆ ಪ್ರಸ್ತಾಪಿಸಿದ್ದೆವು. ಅವರು ಅದನ್ನು ಪರಿಶೀಲಿಸಿ ಸರ್ಕಾರಕ್ಕೆ ಕಳುಹಿಸಿ ಯೋಜನೆ ಜಾರಿ ಮಾಡಿ ಕಾಮಗಾರಿ ಕೈಗೊಳ್ಳಲು ಸೂಚಿಸಿದರು’ ಎಂದು ಮಾಹಿತಿ ಹಂಚಿಕೊಂಡರು.

‘ಇಂಥ ಕೆನೋಪಿಗಳನ್ನು ನಾವು ಆಸ್ಟ್ರೇಲಿಯಾ ಮತ್ತು ಮಲೇಷ್ಯಾದಲ್ಲಿ ನೋಡಿದ್ದೆವು. ಅವುಗಳ ಬಗ್ಗೆ ಅಲ್ಲಿಯೇ ಅಧ್ಯಯನ ಮಾಡಿ ಇಲ್ಲಿ 2016ರ ಮಾರ್ಚ್‌ ಕೊನೆ ವಾರದಲ್ಲಿ ಕೆಲಸ ಆರಂಭಿಸಿದೆವು. ಒಟ್ಟು 12 ಜನ ಇದರ ನಿರ್ಮಾಣದಲ್ಲಿ ತೊಡಗಿದ್ದೆವು. ದಿನಗಟ್ಟಲೆ ಸುರಿವ ಮಳೆಯ ನಡುವೆ ಕೆಲಸ ಮಾಡಲು ಸಾಧ್ಯವೇ ಇರಲಿಲ್ಲ. ಆದ್ದರಿಂದ ನಂತರವೇ ಕಾಮಗಾರಿ ಮುಂದುವರಿಸಿದೆವು’ ಎಂದು ವಿವರಿಸಿದರು.

ಹಾವು, ಚೇಳು ಕಾಟ: ‘ಈ ಕಾಡಿನ ಮಧ್ಯೆ ಒಂದು ವಾರಕ್ಕಿಂತ ಹೆಚ್ಚು ದಿನ ವಾಸ ಮಾಡಲಾಗುತ್ತಿರಲಿಲ್ಲ. ಅದಕ್ಕೆ ಸಿಬ್ಬಂದಿಯನ್ನು ವಾರದಿಂದ ವಾರಕ್ಕೆ ಬದಲಾವಣೆ ಮಾಡ್ತಿದ್ವಿ. ನಮ್ಮ ಜತೆ ನೆಲದ ಮೇಲೆ ತರಗೆಲೆ ರಾಶಿಯಲ್ಲಿ ಕಾಲಿಟ್ಟುಕೊಂಡು ಕೆಲಸ ಮಾಡ್ತಿದ್ದ ಒಬ್ಬರಿಗೆ ಹಾವೋ, ಚೇಳೋ ಕಡಿದಿತ್ತು. ತಕ್ಷಣ ಅವರನ್ನು ಇಲ್ಲಿಂದ ಕರ್ಕೊಂಡು ಹೋಗಿ ಮೈಸೂರಿಗೆ ಬಿಟ್ಟು ಬಂದ್ವಿ. ಇರುವೆ, ಗೆದ್ದಲು, ವಿಷಕಾರಿ ಜೇಡ, ಹುಳ ಸರ್ವೇ ಸಾಮಾನ್ಯವಾಗಿ ಕಂಡಿದ್ದವು’ ಎಂದು ನಿರ್ಮಾಣ ಕಾಲದ ಕಹಿ ಅನುಭವವನ್ನೂ ಹಂಚಿಕೊಂಡರು.

‘ಕೆಲವು ಕಾಮಗಾರಿಗಳಿಗೆ ಅಂತಿಮ ಸ್ಪರ್ಶ ಆಗಬೇಕಿದೆ. ಮಾರ್ಚ್ ತಿಂಗಳ ಅಂತ್ಯದೊಳಗೆ ಪ್ರವಾಸಿಗರು ಭೇಟಿ ನೀಡಬಹುದು. ಅದಕ್ಕೆ ಪ್ರವೇಶ ದರ ನಿಗದಿ ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಿದೆ’ ಎಂದು ಮಾಹಿತಿ ನೀಡಿದರು ವಲಯ ಅರಣ್ಯಾಧಿಕಾರಿ ಓ.ಪಾಲಯ್ಯ.

ಏನು ಮಾಡಬಹುದು?

ಕೆನೋಪಿ ವಾಕ್, ತೂಗು ಸೇತುವೆ ಮಾದರಿಯಲ್ಲಿರುವ ನಿರ್ಮಾಣ. ಅದರ ಪ್ಲಾಟ್‌ಫಾರ್ಮ್‌ಗೆ ಒಂದು ಬಾರಿ 10 ಮಂದಿ ಹೋಗಬಹುದು. ಆದರೆ, ಸೇತುವೆ ಮೇಲೆ ಒಂದು ಬಾರಿಗೆ ಇಬ್ಬರು ಮಾತ್ರ ಸಾಗಬಹುದು. ಪ್ಲಾಟ್‌ಫಾರ್ಮ್ ಮೇಲೆ ಕುಳಿತೂ ವಿಶ್ರಾಂತಿ ಮಾಡಬಹುದು.

ನಡೆಯುವಾಗ ಸೇತುವೆ ಓಲಾಡುತ್ತದೆ. ಆದ್ದರಿಂದ ಅದರ ಮೇಲೆ ಓಡುವುದು, ಕುಣಿಯುವುದು ಮಾಡಬಾರದು. ಕೆನೋಪಿ ವಾಕ್ ದಟ್ಟಾರಣ್ಯದ ನಡುವೆ ಇದೆ ಎಂಬುದನ್ನು ಮರೆಯಬಾರದು.

ಯಾರಿಗೆ ಸೂಕ್ತವಲ್ಲ?: ಎತ್ತರದ ಬಗ್ಗೆ ಭಯ ಇರುವವರು, 12 ವರ್ಷದ ಒಳಗಿನ ಮಕ್ಕಳು, ಹೃದಯ ಹಾಗೂ ಉಸಿರಾಟ ಸಮಸ್ಯೆ ಇರುವವರು ಕೆನೋಪಿ ವಾಕ್ ಮಾಡದಿರುವುದು ಉತ್ತಮ ಎಂದು ಅಲ್ಲಲ್ಲಿ ಅಳವಡಿಸಿರುವ ಫಲಕಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಭಾಗದಲ್ಲಿ ಯಾವುದೇ ಕಂಪನಿಯ ಮೊಬೈಲ್ ನೆಟ್‌ವರ್ಕ್‌ ಸಿಗುವುದಿಲ್ಲ. ಒಂದುವೇಳೆ, ದಾರಿ ತಪ್ಪಿದರೆ ಅಥವಾ ಅವಶ್ಯವಿದ್ದರೆ ಸಂಪರ್ಕಿಸಲು ಕಷ್ಟಸಾಧ್ಯ. ಆದ್ದರಿಂದ ಗುಂಪಾಗಿ ಹೋಗುವಂತೆ ಸಲಹೆ ನೀಡುತ್ತಾರೆ ಅರಣ್ಯಾಧಿಕಾರಿಗಳು.

ಮಾರ್ಗ ಸೂಚಿ: 
ಕ್ಯಾಸೆಲ್‌ರಾಕ್‌ನಿಂದ ಹಾಗೂ ಗೋವಾ ಗಡಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಕುವೇಶಿ ಗ್ರಾಮವು ದಾಂಡೇಲಿಯಿಂದ 65 ಕಿ.ಮೀ ದೂರದಲ್ಲಿದೆ. ಗಣೇಶಗುಡಿ, ಜಗಲ್‌ಬೇಟ ಮೂಲಕ ಸಾಗಿ ಕುಣಿಗಿನಿ ಚೆಕ್‌ಪೋಸ್ಟ್‌ಗೆ ತಲುಪಬೇಕು. ಕೆನೋಪಿ ವಾಕ್‌ ಅಲ್ಲಿಂದ 8 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT