ಶಾಂತಲೆಯ ಕೊಳ

7

ಶಾಂತಲೆಯ ಕೊಳ

Published:
Updated:
ಶಾಂತಲೆಯ ಕೊಳ

ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳೆಂದರೆ ಎಲ್ಲರೂ ಮೊದಲು ಹೆಸರಿಸುವುದು ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಎಂದೇ. ವಾಸ್ತುಶಿಲ್ಪದ ದೃಷ್ಟಿಯಿಂದ ನೋಡುವುದಾದರೆ ಇನ್ನೂ ಹತ್ತು ಹಲವು ಪ್ರೇಕ್ಷಣೀಯ ಸ್ಥಳಗಳಿದ್ದರೂ ಅವು ಯಾವುವೂ ಗಮನಕ್ಕೆ ಬಾರದಂತಿವೆ.

ಹೊಯ್ಸಳರ ರಾಜಧಾನಿಯಾಗಿದ್ದ ದ್ವಾರಸಮುದ್ರ ಅಥವಾ ಈಗಿನ ಹಳೇಬೀಡು ಜಗತ್ಪ್ರಸಿದ್ಧವಾದ ಪ್ರವಾಸಿ ಸ್ಥಳ. ಆದರೆ ಹಳೇಬೀಡಿನಲ್ಲಿರುವ ಮುಖ್ಯವಾದ ಹೊಯ್ಸಳೇಶ್ವರ ದೇವಾಲಯವನ್ನು ನೋಡಿದ ನಂತರ ಪ್ರವಾಸಿಗರು ಸಮೀಪದಲ್ಲಿರುವ ಬೇಲೂರಿಗೋ ಶ್ರವಣಬೆಳಗೊಳಕ್ಕೋ ಹೋಗಿಬಿಡುತ್ತಾರೆ ಅಥವಾ ಅವನ್ನು ನೋಡಿಯಾಗಿದ್ದರೆ ತಮ್ಮ ಊರುಗಳಿಗೋ ಅಥವಾ ಇತರೆ ಪ್ರವಾಸಿ ಸ್ಥಳಗಳಿಗೋ ಹೋಗಿಬಿಡುತ್ತಾರೆ.

ಹಳೇಬೀಡಿನಲ್ಲೇ ನೋಡಬೇಕಾದ ಇನ್ನೂ ಅನೇಕ ಶಿಲ್ಪಕಲಾ ರಚನೆಗಳಿದ್ದು ಅವುಗಳು ಅಜ್ಞಾತವಾಗಿಯೇ ಉಳಿದುಬಿಟ್ಟಿವೆ. ಅವುಗಳಲ್ಲೊಂದು ಹಳೇಬೀಡಿನ ಮಗ್ಗುಲಲ್ಲೇ ಇರುವ ಹುಲಿಕೆರೆ ಎಂಬ ಹಳ್ಳಿಯಲ್ಲಿರುವ ಅಪೂರ್ವ ವಿನ್ಯಾಸದ ಕೊಳ.

ಹುಲಿಕೆರೆ, ಹಿಂದೆ ದ್ವಾರಸಮುದ್ರದ ಒಂದು ಕೇರಿಯೇ ಆಗಿತ್ತು. ಅರಮನೆಯಿಂದ ಅನತಿ ದೂರದಲ್ಲಿತ್ತು. ಈಗಿನ ಹಳೇಬೀಡಾದರೂ ಅಂತಹ ದೂರವೇನಿಲ್ಲ. ಹಳೇ ಬೀಡಿನಿಂದ ಪುಷ್ಪಗಿರಿ ಮೂಲಕ ಹಗರೆಗೆ ಹೋಗುವ ಮಾರ್ಗದಲ್ಲಿ ಮೂರು ಕಿಲೋಮೀಟರ್ ಕ್ರಮಿಸಿ, ಎಡಕ್ಕೆ ತಿರುಗಿ ಒಂದು ಕಿಲೋ ಮೀಟರ್ ಸಾಗಿದರೆ ಹುಲಿಕೆರೆ ಸಿಗುತ್ತದೆ. ಇಲ್ಲಿದೆ ಹೊಯ್ಸಳ ನಿರ್ಮಾಣದ ಅಪರೂಪದ ಕೊಳ.

ಕ್ರಿಸ್ತಶಕ 1167ರಲ್ಲಿ ಹೊಯ್ಸಳರ ದೊರೆ ವೀರನರಸಿಂಹನ ಕಾಲದಲ್ಲಿ ಈ ಕೊಳ ನಿರ್ಮಾಣವಾಗಿದೆಯೆಂದೂ, ಚಟ್ಟೇಶ್ವರ ದೇವಾಲಯದ ಬಳಿ ಇದ್ದುದರಿಂದ ಈ ಕೊಳಕ್ಕೆ ಚಟ್ಟಸಮುದ್ರವೆಂಬ ಹೆಸರಿತ್ತೆಂದೂ ತಿಳಿದುಬರುತ್ತದೆ. ಈ ಕೊಳದ ಶುದ್ಧಜಲವನ್ನು ಚಟ್ಟೇಶ್ವರ ದೇವಾಲಯದ ಪೂಜೆಗೆ ಬಳಸಲಾಗುತ್ತಿತ್ತೆಂದೂ, ರಾಣಿವಾಸದವರ ಸ್ನಾನಕ್ಕಾಗಿ ಈ ಕೊಳವು ನಿರ್ಮಿತವಾಗಿತ್ತೆಂದೂ ಎರಡು ರೀತಿಯ ಹೇಳಿಕೆಗಳಿವೆ. ‘ಶಾಂತಲೆಯ ಕೊಳ’ ಎಂದೂ ಇದನ್ನು ಕರೆಯುತ್ತಾರೆ.

ಈ ಕೊಳದಲ್ಲಿ ಅಕನ್ಯ ಎಂಬ ದೇವತೆ ನೆಲೆಸಿದ್ದಾಳೆಂದೂ, ಅವಳ ಪರಿವಾರದ 26 ಜಲಕನ್ನಿಕೆಯರಿದ್ದಾರೆಂದೂ ಪ್ರತೀತಿಯಿದೆ.

ಈ ಕೊಳವು ಸುಮಾರು ಎಪ್ಪತ್ತು ಅಡಿ ಉದ್ದ ಅರವತ್ತು ಅಡಿ ಅಗಲ ಮತ್ತು ಮೂವತ್ತು ಅಡಿ ಆಳವಿದೆ. ನಾಲ್ಕು ದಿಕ್ಕುಗಳಲ್ಲೂ ಮೆಟ್ಟಿಲುಗಳಿದ್ದು ಕೆಳಗೆ ಹೋದಂತೆ ಕೊಳದ ಅಳತೆ ಕಿರಿದಾಗುತ್ತಾ ಹೋಗಿ ತಳದಲ್ಲಿ ಹನ್ನೆರಡು ಅಡಿ ಉದ್ದ, ಹತ್ತು ಅಡಿ ಅಗಲವಿದೆ.

ದ್ವಾರಸಮುದ್ರದ ದೊಡ್ಡ ಕೆರೆ ತುಂಬಿದರೆ ಈ ಕೊಳದಲ್ಲೂ ಮೇಲಿನ ತನಕ ನೀರಿರುತ್ತದೆ ಎನ್ನುತ್ತಾರೆ. ಆದರೀಗ ಸತತ ಮಳೆಯ ಅಭಾವ ಹಾಗೂ ನಿರ್ವಹಣೆಯ ಕೊರತೆಯಿಂದ ಕೊಳದಲ್ಲಿ ಹನಿ ನೀರಿಲ್ಲದೆ ಕಸದ ತೊಟ್ಟಿಯಾಗಿಬಿಟ್ಟಿದೆ ಎಂಬ ಮಾಹಿತಿಯಿದೆ. ಮೇಲಿನ ಹಂತದ ಆರು ಮೆಟ್ಟಿಲುಗಳನ್ನು ಇಳಿದರೆ ಕೊಳದ ನಾಲ್ಕು ಬದಿಯೂ ಪುಟ್ಟ ಪುಟ್ಟ ಗುಡಿಗಳಿರುವುದನ್ನು ಕಾಣಬಹುದು.

ಹನ್ನೊಂದು ಗುಡಿಗಳಿಗೆ ಆಕರ್ಷಕ ಗೋಪುರಗಳಿದ್ದು, ಗೋಪುರ ಗಳಿಲ್ಲದ ಹದಿನಾರು ಗುಡಿಗಳು ಮೆಟ್ಟಿಲುಗಳ ವಿನ್ಯಾಸದೊಳಗೆ ಸೇರಿಕೊಂಡಂತಿವೆ. ಇವುಗಳಲ್ಲಿ ಹಿಂದೆ ವಿಗ್ರಹಗಳಿದ್ದಿರಬಹುದು ಎನಿಸುತ್ತದೆ. ಅಕನ್ಯ ಎಂಬ ದೇವತೆ ಮತ್ತು ಅವಳ ಪರಿವಾರದ 26 ಜಲಕನ್ನಿಕೆಯರಿದ್ದರೆಂಬ ಹೇಳಿಕೆಗೆ ಈ ಗುಡಿಗಳ ಸಂಖ್ಯೆ ಸರಿಹೊಂದುವುದು ಕೇವಲ ಆಕಸ್ಮಿಕವಿರಲಾರದು.

ಈ ಕೊಳದಲ್ಲಿ ಅಸಂಖ್ಯ ಮೀನುಗಳಿದ್ದರೂ ಅವುಗಳನ್ನು ಯಾರೂ ಹಿಡಿದು ತಿನ್ನುವುದಿಲ್ಲವಂತೆ. ಹೆಣ್ಣು ಮಕ್ಕಳು ಹರಕೆ ಹೊತ್ತುಕೊಂಡರೆ ಮಕ್ಕಳಾಗುವುದೆಂದೂ ಹೇಳುತ್ತಾರೆ. ಹೊಯ್ಸಳರ ಕಾಲದ ಈ ವಿಶಿಷ್ಟ ವಿನ್ಯಾಸದ ಕೊಳ ಅವರ ಕಲೆಗಾರಿಕೆಗೊಂದು ಅಪರೂಪದ ಉದಾಹರಣೆಯಾಗಿದೆ. ಮಾಹಿತಿಯ ಮತ್ತು ಪ್ರಚಾರದ ಕೊರತೆಯಿಂದಾಗಿ ಇಂತಹ ಸ್ಥಳವು ಪ್ರವಾಸಿಗರ ನಿರ್ಲಕ್ಷಕ್ಕೆ ಒಳಗಾಗಿರುವುದು ಖೇದದ ಸಂಗತಿ. ಕೊಳದ ನಿರ್ವಹಣೆಯೂ ಸಮರ್ಪಕವಾಗಿಲ್ಲದೆ ಇರುವುದು, ಅಲ್ಲಿಗೆ ತಲುಪುವ ಮಾರ್ಗದ ಫಲಕ ಮತ್ತು ರಸ್ತೆ ಚೆನ್ನಾಗಿಲ್ಲದೆ ಇರುವುದು ಪ್ರವಾಸಿಗರನ್ನು ಸೆಳೆಯದಿರಲು ಕಾರಣವಿರಬಹುದು ಎನಿಸುತ್ತದೆ. ಹಳೇಬೀಡಿಗೆ ಬಂದ ಪ್ರವಾಸಿಗರು ಇಲ್ಲಿಗೂ ಬಂದು ಈ ಮನಮೋಹಕ ರಚನೆಯನ್ನು ನೋಡಿಕೊಂಡು ಹೋದರೆ ಅದು ಅವರ ಮನಸ್ಸಿನಲ್ಲಿ ಸದಾಕಾಲ ಉಳಿಯುವುದರಲ್ಲಿ ಸಂಶಯವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry