7

‘ನನ್ನ ಗಮನ ಎಂದಿಗೂ ಸಂಗೀತದತ್ತಲೇ’

Published:
Updated:
‘ನನ್ನ ಗಮನ ಎಂದಿಗೂ ಸಂಗೀತದತ್ತಲೇ’

ಕೆಲವರ ಬಗೆಗೆ ಮಾಹಿತಿ ನೀಡಿ ವಿವರವಾಗಿ ಪರಿಚಯಿಸಬೇಕು ಎಂದಿಲ್ಲ. ಅವರ ಹೆಸರು ಕಿವಿಗೆ ಬಿದ್ದರೇ ಸಾಕು, ಅವರ್‍ಯಾರು ಎಂಬುದನ್ನು ಅರಿಯಲು. ಅಂತಹವರ ಸಾಲಿನಲ್ಲಿ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್‌ ಮೊದಲಿಗರಾಗುತ್ತಾರೆ.

ಈ ‘ಸಂಗೀತದ ಕೋಗಿಲೆ’ ಈಚೆಗೆ ನಗರದ ಫೀನಿಕ್ಸ್‌ಮಾರ್ಕೆಟ್‌ ಸಿಟಿಯಲ್ಲಿ ನಡೆದ ‘ಅಲೈವ್‌ ಇಂಡಿಯಾ ಇನ್‌ ಕನ್ಸರ್ಟ್‌’ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ತಮ್ಮ ಹಳೆ ಹಾಗೂ ಹೊಸ ‘ದೀವಾನಿ ಮಸ್ತಾನಿ’, ‘ಜಾದೂ ಹೇ ನಶಾ’, ‘ಘೂಮರ್‌’ ಹಾಡುಗಳನ್ನು ತಮ್ಮ ಅದ್ಭುತ ಕಂಠಸಿರಿಯಲ್ಲಿ ಪ್ರೇಕ್ಷಕರಿಗೆ ಉಣಬಡಿಸಿದರು.

ಈ ಸಂದರ್ಭದಲ್ಲಿ ಅಭಿಮಾನಿಗಳ ಜನಸಾಗರದ ನಡುವೆಯೂ ಕೊಂಚ ಬಿಡುವು ಮಾಡಿಕೊಂಡು ರಜಿತಾ ಮೆನನ್‌ ಜೊತೆ ಹರಟಿದ ಅವರು ಸಂಗೀತ, ವೃತ್ತಿ ಜೀವನದ ಬಗ್ಗೆ ಮಾತನಾಡಿದರು.

* ಬಿಡುವಿದ್ದಾಗ ಯಾವ ಬಗೆಯ ಸಂಗೀತ ಕೇಳುತ್ತೀರಿ?

ಎಲ್ಲಾ ಶೈಲಿಯ ಸಂಗೀತ ನನಗೆ ಇಷ್ಟವಾಗುತ್ತದೆ. ಶಾಸ್ತ್ರೀಯ ಸಂಗೀತದಿಂದ ಠುಮ್ರಿವರೆಗೆ, ಬಡೇ ಗುಲಾಮ್‌ ಆಲಿ ಖಾನ್‌ರಿಂದ ಬೇಗಂ ಅಖ್ತರ್‌, ಲತಾ ಮಂಗೇಶ್ಕರ್‌ರಿಂದ ಸಮಕಾಲೀನ ಸಂಗೀತದವರೆಗೆ ಎಲ್ಲರ ಹಾಡುಗಳನ್ನು ಕೇಳುತ್ತೇನೆ. ಜಸ್ಟಿನ್‌ ಬೀಬರ್‌ ಕೂಡ ನನಗಿಷ್ಟ. ಯಾವಾಗ ಯಾವ ಬಗೆಯ ಸಂಗೀತ ಕೇಳುತ್ತೇನೆ ಎಂಬುದು ನನ್ನ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿರ್ದಿಷ್ಟವಾಗಿ ಒಂದು ಪ್ರಕಾರದ ಹಾಡನ್ನೇ ಕೇಳುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ.

* 14 ಭಾಷೆಗಳಲ್ಲಿ ಹಾಡಿದ್ದೀರಿ? ಆಯಾ ಭಾಷೆಗಳಲ್ಲಿ ಪದಗಳ ಉಚ್ಛಾರಣೆ ಬಗ್ಗೆ ಹೇಗೆ ಕಲಿಯುತ್ತೀರಿ?

ನಾನು ತೀಕ್ಷ್ಣ ವೀಕ್ಷಕಿ. ಹೊಸ ವಿಚಾರ ಕಲಿಯುವಾಗ ನಾನು ಸಂಪೂರ್ಣ ಗಮನ ಕೊಡುತ್ತೇನೆ. ಹೊಸ ಭಾಷೆಯಲ್ಲಿ ಹಾಡುವಾಗ ಸಂಗೀತ ಸಂಯೋಜಕನ ಬೆಂಬಲ ಇರುತ್ತದೆ. ಇನ್ನು ನಾನು ಹಾಡುವಾಗ ಬಾಷೆ ಉಚ್ಛಾರಣೆ ಬಗ್ಗೆ ತಿಳಿಸಿಕೊಡಲು ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ. ನಾನು ಆಯಾ ಭಾಷೆಗಳ ಪದಗಳನ್ನು ಸರಿಯಾಗಿ ಬರೆದಿಟ್ಟುಕೊಂಡು, ಅದು ಪಕ್ಕಾ ಆದ ಬಳಿಕ ಹಾಡುತ್ತೇನೆ.

* ನಿಮ್ಮ ವೃತ್ತಿ ಜೀವನದ ಮರೆಯಲಾಗದ ಕ್ಷಣ?

ಇಂತಹ ಕ್ಷಣಗಳು ಅನೇಕ ಇವೆ. ಸಂಗೀತ ಕ್ಷೇತ್ರದಲ್ಲಿ ನನ್ನ ಪಯಣ ಅದ್ಭುತವಾದದ್ದು. ಇದರಲ್ಲಿ ಒಂದು ಕ್ಷಣವನ್ನು ಹೆಕ್ಕಿ ತೆಗೆಯಲು ತುಂಬ ಕಷ್ಟ. ಈಗ ಹೇಳಲೇಬೇಕು ಎಂದಾದರೆ ಹಿನ್ನೆಲೆ ಗಾಯಕಿಯಾಗಿ ನಾನು ಪದಾರ್ಪಣೆ ಮಾಡಿದ ಕ್ಷಣವೇ ಮರೆಯಲಾಗದ್ದು. ‘ದೇವದಾಸ್‌’ ಚಿತ್ರದ ಮೂಲಕ ನನ್ನ ಸಂಗೀತ ಪಯಣ ಆರಂಭವಾಯಿತು. ಇದನ್ನೇ ನಾನು ನನ್ನ ಜೀವನದ ಪ್ರಮುಖ ಕ್ಷಣ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ.

* ಒಬ್ಬ ಕಲಾವಿದೆಯಾಗಿ, ಯಾವ ಸವಾಲುಗಳನ್ನು ನೀವು ಎದುರಿಸಿದ್ದೀರಿ?

ಪ್ರತಿದಿನವೂ ಸವಾಲೇ. ನಾನು ಇಷ್ಟು ಮಾಡಿದ್ದು ಸಾಕೇ, ನಿನ್ನೆಗಿಂತಾ ಇಂದು ಉತ್ತಮ ಎನ್ನುವಂಥ ಕೆಲಸ ಮಾಡಿದ್ದೇನೆಯೇ, ಎಂಬ ಪ್ರಶ್ನೆಯನ್ನು ನಾನು ನಿತ್ಯ ಕೇಳಿಕೊಳ್ಳುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry