ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿನಿ, ಕೇಂದ್ರ ಸಚಿವ ಹೆಗಡೆ ವಾಗ್ವಾದ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮಡಿಕೇರಿ: ‘ವಿದ್ಯಾರ್ಥಿಗಳು ಸೇರಿರುವ ಕಡೆ ರಾಜಕೀಯ ಭಾಷಣ ಮಾಡುವುದಿಲ್ಲ ಎನ್ನುತ್ತೀರಾ? ಆದರೆ, ನಿಮ್ಮ ಇಡೀ ಮಾತು ರಾಜಕೀಯ ಪ್ರೇರಿತವಾಗಿದೆಯಲ್ಲಾ...’

–ಇದು ಕೇಂದ್ರ ಕೌಶಾಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರನ್ನು ವಿದ್ಯಾರ್ಥಿನಿಯೊಬ್ಬಳು ಪ್ರಶ್ನಿಸಿದ ರೀತಿ.

ನಗರದಲ್ಲಿ ಸೋಮವಾರ ಕೇಂದ್ರದ ಕೌಶಲಾಭಿವೃದ್ಧಿ ಸಚಿವಾಲಯ ಆಯೋಜಿಸಿದ್ದ ಸಂವಾದವು ವಿದ್ಯಾರ್ಥಿನಿ ಹಾಗೂ ಕೇಂದ್ರ ಸಚಿವರ ನಡುವೆ ವಾಗ್ವಾದಕ್ಕೆ ವೇದಿಕೆಯಾಯಿತು.

ಉದ್ಘಾಟನಾ ಭಾಷಣದ ಬಳಿಕ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿನಿ ರಮೀಜಾ ಆಕ್ಷೇಪಿಸಿದ್ದು ಸಚಿವರಿಗೆ ಸಿಟ್ಟು ತರಿಸಿತು.

‘ಸಮಾಜದಲ್ಲಿ ವಾದ ಮತ್ತು ವಿವಾದ ಎರಡೂ ಇದೆ. ವಾದಕ್ಕೆ ಉಲ್ಟಾ ಮಾತನಾಡಿದರೆ ವಿವಾದ ಹುಟ್ಟಿಕೊಳ್ಳಲಿದೆ. ಮತ್ತೊಂದು ವಿತಂಡವಾದ. ವಿತಂಡಕ್ಕೆ ಅರ್ಥವೂ ಇಲ್ಲ, ಉತ್ತರವೂ ಇರುವುದಿಲ್ಲ. ಇದು ಮೇಲ್ನೋಟಕ್ಕೆ ಮಾತ್ರ ಸುಂದರವಾಗಿ ಕಾಣಿಸುತ್ತದೆ’ ಎಂದು ಹೆಗಡೆ ತಿರುಗೇಟು ನೀಡಿದರು.

ಆಗ ಸಭೆಯಲ್ಲಿದ್ದ ಬಿಜೆಪಿ ನಗರಸಭೆ ಸದಸ್ಯರು, ಪಕ್ಷದ ಮುಖಂಡರು ಚಪ್ಪಾಳೆ ತಟ್ಟಿ ಶಿಳ್ಳೆ ಹಾಕಿದರು.
‘ಕಾರ್ಯಕ್ರಮದ ಉದ್ದೇಶವನ್ನು ಎಲ್ಲರೂ ಅರ್ಥೈಸಿಕೊಂಡಿದ್ದಾರೆ. ಕನ್ನಡಕದ ಕಣ್ಣುಗಳಿಗೆ ಉತ್ತರಿಸುವ ಅವಶ್ಯಕತೆಯಿಲ್ಲ. ನಿಮ್ಮ ಭಾಷೆಯಲ್ಲೇ ಉತ್ತರಿಸಬೇಕಿದೆ’ ಎಂದು ವಿದ್ಯಾರ್ಥಿನಿಗೆ ಹೇಳಿದರು.

‘ರಾಜಕೀಯ ಹೇಳಬೇಕೆಂದರೆ ಈಗ ಮಾತು ಆರಂಭಿಸುತ್ತೇನೆ. ಬಿಜೆಪಿ ಸರ್ಕಾರವೇ ಹಲವು ಯೋಜನೆ ಜಾರಿಗೆ ತಂದಿದ್ದು. ಹಿಂದಿನ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಯೋಗ್ಯತೆ ಹಾಗೂ ಕಲ್ಪನೆ ಎರಡೂ ಇರಲಿಲ್ಲ. ‘ಸ್ವಯಂ’ ಪೋರ್ಟಲ್‌ನಲ್ಲಿ ಒಂದೂವರೆ ಸಾವಿರ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದೂ ಬಿಜೆಪಿ ಸರ್ಕಾರದ ಕೊಡುಗೆಯೇ’ ಎಂದು ಕಾಲೆಳೆದರು.

‘70 ವರ್ಷ ಆಳ್ವಿಕೆ ಮಾಡಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಸೈನಿಕರಿಗೆ ಕುಡಿಯಲು ನೀರು ಸಹ ನೀಡಿರಲಿಲ್ಲ. ಮೋದಿ ಪ್ರಧಾನಿ ಆದ ಬಳಿಕ ಪೈಪ್‌ಲೈನ್‌ ಮೂಲಕ
ಗಡಿಭಾಗದ ಸೈನಿಕರಿಗೆ ಕುಡಿಯುವ ನೀರು ಕಲ್ಪಿಸಿದೆವು. ಹಿಂಬಾಗಿಲ ರಾಜಕಾರಣ ನಮಗೆ ಗೊತ್ತಿಲ್ಲ. ಸರ್ಕಾರದ ಭಿಕ್ಷೆಯಿಂದ ಬದುಕಬೇಕೆಂದರೆ ಅದಕ್ಕೆ ನೀವೇ ಹೊಣೆ’ ಎಂದು ಸಂವಾದದಲ್ಲಿ ಪ್ರಸ್ತಾಪಿಸಿದರು.

‘ಜೂನಿಯರ್‌ ಕಾಲೇಜುವರೆಗೆ ವೈ–ಫೈ ವ್ಯವಸ್ಥೆ ಕಲ್ಪಿಸುವ ಆಲೋಚನೆ ಮಾಡಲೂ ಬಿಜೆಪಿ ಸರ್ಕಾರವೇ ಬರಬೇಕಾಯಿತು. ಕಾಂಗ್ರೆಸ್‌ಗೆ ಏಕೆ ಇಂತಹ ಆಲೋಚನೆ ಹೊಳೆದಿರಲಿಲ್ಲ’ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT