7

ಪರಾರಿಯಾದರೆ ಸೊತ್ತು ಜಪ್ತಿ

Published:
Updated:
ಪರಾರಿಯಾದರೆ ಸೊತ್ತು ಜಪ್ತಿ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಜ್ರ ಉದ್ಯಮಿ ನೀರವ್‌ ಮೋದಿ ₹11,400 ಕೋಟಿ ವಂಚನೆ ಮಾಡಿ ಪರಾರಿಯಾಗಿರುವುದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಇಂತಹ ಅಪರಾಧಗಳನ್ನು ನಿರ್ವಹಿಸಲು ಮಸೂದೆಯೊಂದನ್ನು ಸಿದ್ಧಪಡಿಸಿದೆ.

ಪರಾರಿಯಾದ ಆರ್ಥಿಕ ಅಪರಾಧಿಗಳ ಮಸೂದೆ ಬಜೆಟ್‌ ಅಧಿವೇಶನದ ಮುಂದುವರಿದ ಭಾಗದಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ. ಆರ್ಥಿಕ ಅಪರಾಧಗಳನ್ನು ಎಸಗಿ (ಹಣ ವಂಚನೆ, ಸಾಲ ಮರು ಪಾವತಿ ಮಾಡದಿರುವುದು ಇತ್ಯಾದಿ) ದೇಶಬಿಟ್ಟು ಪರಾರಿಯಾಗುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ನೀಡುವ ಪ್ರಸ್ತಾವ ಈ ಮಸೂದೆಯಲ್ಲಿ ಇದೆ.

₹100 ಕೋಟಿಗಿಂತ ಹೆಚ್ಚಿನ ವಂಚನೆ ಆರೋಪ ಪ್ರಕರಣಗಳಿಗೆ ಇದು ಅನ್ವಯ ಆಗಲಿದೆ. ‘ಆರ್ಥಿಕ ಅಪರಾಧ ಎಸಗಿ ಪರಾರಿಯಾದವರು’ ಎಂದು ಘೋಷಿಸುವಂತೆ ಮತ್ತು ಅವರ ಹೆಸರಿನಲ್ಲಿ ಇರುವ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅರ್ಜಿ ಹಾಕಲು ಕೇಂದ್ರದ ಹಣಕಾಸು ಗುಪ್ತಚರ ಘಟಕಕ್ಕೆ ಅಧಿಕಾರ ನೀಡುವುದು ಮಸೂದೆಯ ಉದ್ದೇಶ. 

ಕಾನೂನು ಸಚಿವಾಲಯವು ಮಸೂದೆಯನ್ನು ಪರಿಶೀಲಿಸಿದೆ. ಮಸೂದೆಯನ್ನು ಅಂತಿಮಗೊಳಿಸಲು ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಕಾನೂನಿನಲ್ಲಿ ಕೆಲವು ವಿನಾಯಿತಿಗಳನ್ನು ನೀಡುವುದಕ್ಕಾಗಿ ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

‘ಬ್ಯಾಂಕ್‌ಗೆ ಭಾರಿ ಮೊತ್ತವನ್ನು ನೀರವ್‌ ಮೋದಿ ವಂಚಿಸಿರುವುದು ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಹಾಗಾಗಿ ಸಾಧ್ಯವಾ

ದಷ್ಟು ಬೇಗನೆ ಮಸೂದೆಯನ್ನು ಸಿದ್ಧಪಡಿಸಿ ಮಂಡಿಸಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ಬಯಸಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುಮಾರು ಒಂದು ತಿಂಗಳ ಬಿಡುವಿನ ಬಳಿಕ ಸಂಸತ್ತಿನ ಬಜೆಟ್‌ ಅಧಿವೇಶನ ಮಾರ್ಚ್‌ 5ರಿಂದ ಪುನರಾರಂಭಗೊಳ್ಳಲಿದೆ. ಕಲಾಪದ ಪಟ್ಟಿಯಲ್ಲಿ ಈ ಮಸೂದೆಯನ್ನು ಸೇರಿಸಲಾಗಿಲ್ಲ. ಆದರೆ ಈ ಮಧ್ಯದಲ್ಲಿ ಬ್ಯಾಂಕುಗಳಿಗೆ ವಂಚನೆ ಮಾಡಿದ ಹಲವು ಪ್ರಕರಣಗಳು ಬಯಲಾದ ಕಾರಣ ಕೊನೆ ಕ್ಷಣದಲ್ಲಿ ಈ ಮಸೂದೆಯನ್ನು ಕಲಾಪ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ.

ಆರ್ಥಿಕ ಅಪರಾಧ ಎಸಗಿ ಪರಾರಿಯಾದವರನ್ನು ವಿಚಾರಣೆಗೆ ಒಳಪಡಿಸುವಂತಹ ಕಾನೂನು ಈಗ ಭಾರತದಲ್ಲಿ ಇಲ್ಲ. ದೇಶ ತೊರೆದಿರುವ ಉದ್ಯಮಿಗಳಾದ ವಿಜಯ ಮಲ್ಯ ಮತ್ತು ಲಲಿತ್‌ ಮೋದಿ ಅವರನ್ನು ಬ್ಯಾಂಕುಗಳು ನೀಡಿರುವ ಸಾಲ ವಸೂಲಿ ಮತ್ತು ಹಣಕಾಸು ಸಂಸ್ಥೆಗಳ ಕಾಯ್ದೆ, ಷೇರು ಮತ್ತು ಹಣಕಾಸು ಆಸ್ತಿ ಮರು ನಿರ್ಮಾಣ ಹಾಗೂ ಷೇರು ಹಿತಾಸಕ್ತಿ ಜಾರಿ ಕಾಯ್ದೆಗಳ ಅಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಎನ್‌ಬಿಎಫ್‌ಸಿ ಎಚ್ಚರಿಕೆ

ದೇಶದ 9,491 ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ‘ಗರಿಷ್ಠ ಅಪಾಯ ಸಾಧ್ಯತೆಯ ಹಣಕಾಸು ಸಂಸ್ಥೆಗಳು’ ಎಂದು ಹಣಕಾಸು ಗುಪ್ತಚರ ಘಟಕ (ಎಫ್‌ಐಯು) ಗುರುತಿಸಿದೆ. ಈ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

₹110 ಕೋಟಿ ವಂಚಿಸಿದ ಸಕ್ಕರೆ ಕಾರ್ಖಾನೆ

ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ಗೆ (ಒಬಿಸಿ) ₹110 ಕೋಟಿ ನಷ್ಟು ಉಂಟು ಮಾಡಿದ ಆರೋಪದಲ್ಲಿ ಸಿಂಭಾವಲಿ ಶುಗರ್ಸ್‌ (ದೇಶದ ಅತ್ಯಂತ ದೊಡ್ಡ ಸಕ್ಕರೆ ಕಾರ್ಖಾನೆಗಳಲ್ಲಿ ಒಂದು) ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ.

ಪ್ರಸ್ತಾವಗಳೇನು

* ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲು ಅವಕಾಶ

* ಈ ಘೋಷಣೆಯ ತಕ್ಷಣವೇ ಆ ವ್ಯಕ್ತಿ ಭಾರತದಲ್ಲಿ ಹೊಂದಿರುವ ಎಲ್ಲ ಆಸ್ತಿಯ ಮುಟ್ಟುಗೋಲು ಅಧಿಕಾರ

* ಎಲ್ಲ ಆಸ್ತಿ ಯಾವುದೇ ತೊಡಕು ಇಲ್ಲದೆ ಭಾರತ ಸರ್ಕಾರದ ವಶಕ್ಕೆ

* ಇಂತಹ ಆಸ್ತಿ ಅಥವಾ ಕಂಪನಿಯ ಪ್ರವರ್ತಕರು, ಷೇರುದಾರರು ಅಥವಾ ಅಧಿಕಾರಿಗಳು ಸರ್ಕಾರದ ಕ್ರಮದ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶ ಇಲ್ಲ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry