‘ಹ್ಯಾಟ್ರಿಕ್‌ ವೀರ’ನಿಗೆ ಕಾದಿದೆ ಅಗ್ನಿಪರೀಕ್ಷೆ

7

‘ಹ್ಯಾಟ್ರಿಕ್‌ ವೀರ’ನಿಗೆ ಕಾದಿದೆ ಅಗ್ನಿಪರೀಕ್ಷೆ

Published:
Updated:
‘ಹ್ಯಾಟ್ರಿಕ್‌ ವೀರ’ನಿಗೆ ಕಾದಿದೆ ಅಗ್ನಿಪರೀಕ್ಷೆ

ಬೆಂಗಳೂರು: ರಾಜಧಾನಿಯಲ್ಲಿ ಜೆಡಿಎಸ್‌ ಗೆದ್ದಿದ್ದ ಮೂರು ಕ್ಷೇತ್ರಗಳಲ್ಲಿ ಚಾಮರಾಜಪೇಟೆಯೂ ಒಂದು. ಇಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಬಿ.ಜೆಡ್‌.ಜಮೀರ್‌ ಅಹಮದ್‌ ಖಾನ್‌ ಪಕ್ಷದಿಂದ ದೂರವಾಗಿ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಹಾಗಾಗಿ ಈ ಬಾರಿ ಇಲ್ಲಿನ ರಾಜಕೀಯ ಸಮೀಕರಣ ಬದಲಾಗಿದೆ.

ಮೂರು ದಶಕಗಳಲ್ಲಿ ಇಲ್ಲಿ ರಾಜ್ಯದ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಗೆದ್ದುಬಂದಿದ್ದಾರೆ. 1994ರಲ್ಲಿ ಇಲ್ಲಿ ಪ್ರಮೀಳಾ ನೇಸರ್ಗಿ ಬಿಜೆಪಿಯಿಂದ ಗೆದ್ದಿದ್ದರು. 1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ವಿ.ದೇವರಾಜ್‌ ಗೆದ್ದಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಎಸ್‌.ಎಂ.ಕೃಷ್ಣ ಗೆದ್ದರು. ಅವರು ರಾಜ್ಯಪಾಲರಾಗಿ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ 2005ರಲ್ಲಿ ಉಪಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಜಮೀರ್‌ ಮೊದಲ ಬಾರಿ ಜಯ ಗಳಿಸಿದ್ದರು.

ಮರುವಿಂಗಡಣೆ ಬಳಿಕ ಅವರು ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಸಮೀಪದ ಪ್ರತಿಸ್ಪರ್ಧಿ ಜಿ.ಎ.ಬಾವಾ ಅವರನ್ನು 30,162 ಮತಗಳ ಅಂತರದಿಂದ ಸೋಲಿಸಿದ್ದರು.

2016ರ ರಾಜ್ಯಸಭಾ ಚುನಾವಣೆಯ ನಂತರದ ರಾಜ್ಯ ರಾಜಕೀಯ ಬೆಳವಣಿಗೆಗಳಿಂದಾಗಿ ಈ ಕ್ಷೇತ್ರವೂ ಕುತೂಹಲ ಕೆರಳಿಸಿದೆ. ಜೆಡಿಎಸ್‌ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ಜಮೀರ್‌ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣಕ್ಕೆ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರಿಗೆ ಉದ್ಯಮಿಯಾಗಿರುವ ಅವರು ಶಾಸಕರ ಅನುದಾನ ಬಳಕೆಗಿಂತ ಹೆಚ್ಚಾಗಿ ‘ವೈಯಕ್ತಿಕ ನೆರವು’ಗಳ ಮೂಲಕವೇ ಜನರ ಮನ ಗೆಲ್ಲುವ ಪ್ರಯತ್ನದಲ್ಲಿ ತೊಡಗಿದ್ದಾರೆ. ‘ಹುಟ್ಟುಹಬ್ಬ’ ಆಚರಣೆ ಅವರ ರಾಜಕೀಯ ‘ಪ್ರಭಾವ’ಕ್ಕೆ ಕನ್ನಡಿ ಹಿಡಿಯುತ್ತದೆ.

ಜಮೀರ್‌ಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್‌ನ ಕೆಲ ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮನ್ನು ವಿಶ್ವಾಸಕ್ಕೆ ಪಡೆಯದೆಯೇ ಪಕ್ಷವು ಅವರಿಗೆ ಮಣೆ ಹಾಕಿರುವುದು ಪಕ್ಷದ ಸ್ಥಳೀಯ ಮುಖಂಡರ ಮುನಿಸಿಗೂ ಕಾರಣವಾಗಿದೆ.

‘ಮತದಾರರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಜಿ.ಎ. ಬಾವಾ ಐದು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಸೋತ ಬಳಿಕವೂ ಪಕ್ಷದ ಸಂಘಟನೆಯನ್ನು ಚೆನ್ನಾಗಿ ಮಾಡಿದ್ದರು. ಸರ್ಕಾರದ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ನಮ್ಮನ್ನು ವಿಶ್ವಾಸಕ್ಕೆ ಪಡೆಯದೆಯೇ ಅಭ್ಯರ್ಥಿಯನ್ನು ಹೈಕಮಾಂಡ್‌ ಬದಲಾಯಿಸಬಾರದು’ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಪೆದ್ದರಾಜು ಒತ್ತಾಯಿಸಿದರು.

‘ಇಲ್ಲಿ ನಮ್ಮ ಪಕ್ಷದ ಒಬ್ಬ ಕಾರ್ಪೊರೇಟರ್‌ ಕೂಡಾ ಇರಲಿಲ್ಲ. ಸಂಘಟಿತ ಪ್ರಯುತ್ನದಿಂದಾಗಿ ಮೂರು ಮಂದಿ ಪಾಲಿಕೆ ಸದಸ್ಯರಾಗಿದ್ದಾರೆ. ಪಕ್ಷವನ್ನು ಬೆಳೆಸಲು ಶ್ರಮಿಸಿದ್ದೇನೆ. ಹಾಗಾಗಿ ನಾನೂ ಟಿಕೆಟ್‌ ಆಕಾಂಕ್ಷಿ. ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆ ನೋಡೋಣ’ ಎಂದು ಬಾವಾ ತಿಳಿಸಿದರು. 

ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ವಿ.ಗಣೇಶ್‌ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಾಜಿ ಉಪಮೇಯರ್‌ ಲಕ್ಷ್ಮೀನಾರಾಯಣ, ಶ್ರೀನಿವಾಸ್‌ ಹುಚ್ಚಯ್ಯ, ಲಹರಿ ವೇಲು ಅವರೂ ಇಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು.

ಎರಡು ಬಾರಿ ಕಾರ್ಪೊರೇಟರ್‌ ಆಗಿದ್ದ ಗಣೇಶ್‌ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಕೊಳೆಗೇರಿಗಳ ನಿವಾಸಿಗಳ ಜತೆಗೂ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ. ಗಣೇಶೋತ್ಸವ, ಅಣ್ಣಮ್ಮ ಉತ್ಸವ, ರಾಜ್ಯೋತ್ಸವಗಳನ್ನು ಏರ್ಪಡಿಸುವ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ.

‘ಸ್ಥಳೀಯರಿಗೆ ಟಿಕೆಟ್‌ ನೀಡಿದರೆ ಒಳ್ಳೆಯದು ಎಂಬ ಭಾವನೆ ಪಕ್ಷದ ಕಾರ್ಯಕರ್ತರಲ್ಲಿದೆ. ಇದಕ್ಕೆ ಪಕ್ಷದ ಮುಖಂಡರು ಮನ್ನಣೆ ನೀಡುತ್ತಾರೆ ಎಂಬ ನಿರೀಕ್ಷೆ ನನ್ನದು. ಶಾಸಕರು ಮತದಾರರ ಸಂಪರ್ಕಕ್ಕೇ ಸಿಗುತ್ತಿಲ್ಲ. ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಅಸಮಾಧಾನವಿದೆ’ ಎಂದು ಗಣೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಘಪರಿವಾರದ ಶಕ್ತಿಕೇಂದ್ರವಾದ ‘ಕೇಶವ ಶಿಲ್ಪ’ ಇರುವುದು ಚಾಮರಾಜಪೇಟೆಯಲ್ಲೇ. ಹಾಗಾಗಿ, ಈ ಕ್ಷೇತ್ರದಲ್ಲಿ ಹೇಗಾದರೂ ಮಾಡಿ ’ಕಮಲ’ವನ್ನು ಅರಳಿಸಬೇಕು ಎಂದು ‘ಸ್ವಯಂಸೇವಕರು’ ಪಣತೊಟ್ಟಿದ್ದಾರೆ. ಕೊಳೆಗೇರಿ ನಿವಾಸಿಗಳ ಮಕ್ಕಳಿಗೆ ಟ್ಯೂಷನ್‌ ಹೇಳಿಕೊಡುವುದು, ಆರೋಗ್ಯ ಶಿಬಿರಗಳನ್ನು ನಡೆಸುವುದು, ಹಬ್ಬ ಹರಿದಿನಗಳನ್ನು ಆಚರಿಸುವುದು... ಮುಂತಾದ ಕಾರ್ಯಕ್ರಮಗಳ ಮೂಲಕ ಜನರ ಒಲವು ಗಳಿಸುವ ಯತ್ನದಲ್ಲಿ ತೊಡಗಿದ್ದಾರೆ.

ಇಲ್ಲಿನ ರಾಮೇಶ್ವರ ಗುಡಿಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಪಾಲಿಕೆ ಮುಂದಾದಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಹೋರಾಟಕ್ಕೆ ಮಣಿದು ಪಾಲಿಕೆ ಈ ಪ್ರಸ್ತಾವ ಕೈಬಿಟ್ಟಿತು. ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು, ಹಿಂದೂ ಮತಗಳ ಧ್ರುವೀಕರಣವಾಗುವಂತೆ ಮಾಡಲು ಬಿಜೆಪಿಯವರು ಸದ್ದಿಲ್ಲದೇ ಕೆಲಸ ಮಾಡುತ್ತಿದ್ದಾರೆ.

ಜಮೀರ್‌ಗೆ ಕಾಂಗ್ರೆಸ್‌ ಟಿಕೆಟ್‌ ಇನ್ನೂ ಖಚಿತವಾಗಿಲ್ಲ. ಒಂದು ವೇಳೆ  ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರೂ ಅವರು ಇಲ್ಲಿ ಅಗ್ನಿಪರೀಕ್ಷೆ ಎದುರಿಸಬೇಕಾದ ಸ್ಥಿತಿ ಇದೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ2013ರ ಚುನಾವಣೆಯ ಚಿತ್ರಣ

1.08 ಲಕ್ಷ -ಚಲಾಯಿತ ಮತಗಳು20 -ಅಭ್ಯರ್ಥಿಗಳು ಕಣದಲ್ಲಿದ್ದರು
ಅಭ್ಯರ್ಥಿ

ಪಕ್ಷ

ಮತ

ಶೇಕಡಾ (ಒಟ್ಟು ಚಲಾಯಿತ ಮತದಲ್ಲಿ)

ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌

ಜೆಡಿಎಸ್‌

56339

52.32

ಜಿ.ಎ.ಬಾವಾ

ಕಾಂಗ್ರೆಸ್‌

26177

24.31

ಬಿ.ವಿ.ಗಣೇಶ್‌

ಬಿಜೆಪಿ

17720

16.46

 

2008ರ ಚುನಾವಣೆಯ ಚಿತ್ರಣ

88,831 -ಚಲಾಯಿತ ಮತಗಳು

16 -ಅಭ್ಯರ್ಥಿಗಳು ಕಣದಲ್ಲಿದ್ದರು
ಅಭ್ಯರ್ಥಿ

ಪಕ್ಷ

ಮತ

ಶೇಕಡಾ (ಒಟ್ಟು ಚಲಾಯಿತ ಮತದಲ್ಲಿ)

ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌

ಜೆಡಿಎಸ್‌

43004

48.41

ವಿ.ಎಸ್‌.ಶ್ಯಾಮಸುಂದರ್‌

ಬಿಜೆಪಿ

23414

26.36

ಸಯೀದ್‌ ಅಹಮದ್‌

ಕಾಂಗ್ರೆಸ್‌

15229

17.147 -ಕ್ಷೇತ್ರದಲ್ಲಿರುವ ವಾರ್ಡ್‌ಗಳು

3 -ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್‌ಗಳಿದ್ದಾರೆ

2 -ವಾರ್ಡ್‌ಗಳಲ್ಲಿ ಬಿಜೆಪಿ ಸದಸ್ಯರಿದ್ದಾರೆ

2-ವಾರ್ಡ್‌ಗಳಲ್ಲಿ ಜೆಡಿಎಸ್‌ ಸದಸ್ಯರಿದ್ದಾರೆ

ವಾರ್ಡ್‌ಗಳು: ಪಾದರಾಯನಪುರ, ಜಗಜೀವನ್‌ರಾಮ್‌ನಗರ, ರಾಯಪುರ, ಛಲವಾದಿಪಾಳ್ಯ, ಕೆ.ಆರ್‌.ಮಾರುಕಟ್ಟೆ, ಚಾಮರಾಜಪೇಟೆ, ಆಜಾದ್‌ನಗರ

* ಬೆಂಗಳೂರು ಕೋಟೆ, ಕೆ.ಆರ್‌.ಮಾರುಕಟ್ಟೆ, ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ಟಿಪ್ಪು ಅರಮನೆ, ವಾಣಿವಿಲಾಸ ಆಸ್ಪತ್ರೆ, ಕಿಮ್ಸ್‌ ಆಸ್ಪತ್ರೆ, ಬೆಂಗಳೂರು ವೈದ್ಯಕೀಯ ಕಾಲೇಜು ಆಸ್ಪತ್ರೆ, ಮಿಂಟೊ ಕಣ್ಣಿನ ಆಸ್ಪತ್ರೆ, ಕನ್ನಡ ಸಾಹಿತ್ಯ ಪರಿಷತ್‌, ಸಂಸ್ಕೃತ ವಿಶ್ವವಿದ್ಯಾಲಯಗಳು ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

* ಸತತ ಮೂರು ಚುನಾವಣೆಗಳಲ್ಲಿ ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆದ್ದಿದ್ದಾರೆ

* ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿರುವ ಜಮೀರ್‌

* ಜಮೀರ್‌ಗೆ ಟಿಕೆಟ್‌ ನೀಡದಂತೆ ಸ್ಥಳೀಯ ಕಾಂಗ್ರೆಸ್‌ ನಾಯಕರ ಒತ್ತಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry