3

ಬಿಬಿಎಂಪಿ ಬಜೆಟ್‌ ನಾಳೆ ಮಂಡನೆ

Published:
Updated:
ಬಿಬಿಎಂಪಿ ಬಜೆಟ್‌ ನಾಳೆ ಮಂಡನೆ

ಬೆಂಗಳೂರು: ಬಿಬಿಎಂಪಿಯ 2018–19ನೇ ಸಾಲಿನ ಬಜೆಟ್‌ ಇದೇ 28ರಂದು ಮಂಡನೆಯಾಗಲಿದೆ.

ಕೌನ್ಸಿಲ್‌ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 11ಕ್ಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಮಹಾದೇವ ಮಂಡಿಸಲಿರುವ ಬಜೆಟ್‌ ಗಾತ್ರ ₹10 ಸಾವಿರ ಕೋಟಿ ಮುಟ್ಟುವ ನಿರೀಕ್ಷೆ ಇದೆ. ವಿಧಾನಸಭಾ ಚುನಾವಣೆ ಇರುವುದರಿಂದ ಮಧ್ಯಮ ವರ್ಗಕ್ಕೆ ಅನುಕೂಲವಾಗುವ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.

ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ 150 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ ಟಾಪಿಂಗ್‌ ರಸ್ತೆಗಳನ್ನಾಗಿ ಪರಿವರ್ತಿಸುವುದು, 25 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಯೋಜನೆಯಡಿ ಅಭಿವೃದ್ಧಿ ಹಾಗೂ ಎಂಟು ವಲಯಗಳಲ್ಲಿ ಹೆಲಿಪ್ಯಾಡ್‌ ನಿರ್ಮಿಸುವ ಯೋಜನೆ ಘೋಷಿಸುವ ನಿರೀಕ್ಷೆ ಇದೆ.

ಈ ಸಲ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ. ಮಹಿಳೆಯರಿಗೆ 1,000 ಪಿಂಕ್‌ ಆಟೊ ಹಾಗೂ ಟ್ಯಾಕ್ಸಿಗಳ ವಿತರಣೆಗೆ ₹25 ಕೋಟಿ, ಒಂಟಿ ಮನೆಗೆ ನೀಡುತ್ತಿದ್ದ ₹4 ಲಕ್ಷ ಸಹಾಯಧನವನ್ನು ₹5 ಲಕ್ಷಕ್ಕೆ ಹೆಚ್ಚಳ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರ ಮನೆಗಳ ಮೇಲೆ ಸೌರಶಕ್ತಿ ಫಲಕ ಅಳವಡಿಸಲು ₹50 ಕೋಟಿ ನೀಡುವಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯು ಕೋರಿದೆ.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ನೂರು ವಿದ್ಯಾರ್ಥಿಗಳಿಗೆ ಕ್ರಮವಾಗಿ ತಲಾ ₹25 ಸಾವಿರ ಹಾಗೂ ₹35 ಸಾವಿರ ವಿದ್ಯಾರ್ಥಿ ವೇತನ ನೀಡುವುದು, ಬಿಬಿಎಂಪಿ ಶಾಲೆಗಳ ಆಟದ ಮೈದಾನಗಳಲ್ಲಿ ಮಲ್ಟಿ ಜಿಮ್‌ ಸ್ಥಾಪನೆಗೆ ₹4 ಕೋಟಿ, ಅಂತರ್‌ಶಾಲಾ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜನೆಗೆ ₹75 ಲಕ್ಷ, ಶಾಲಾ–ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಎಲ್‌ಇಡಿ ಮೂಲಕ ಉಪನ್ಯಾಸ ನೀಡಲು ₹3 ಕೋಟಿ ನೀಡುವಂತೆ ಶಿಕ್ಷಣ ಸ್ಥಾಯಿ ಸಮಿತಿಯು ಕೋರಿದೆ.

ಪಾಲಿಕೆ ವ್ಯಾಪ್ತಿಯ ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸುವ ಗಂಡು ಹಾಗೂ ಹೆಣ್ಣು ಮಗುವಿಗೆ ಬಾಂಡ್‌ ನೀಡುವ ಯೋಜನೆಯನ್ನು ಆರೋಗ್ಯ ಸ್ಥಾಯಿ ಸಮಿತಿ ರೂಪಿಸಿದೆ. ಮೊದಲ ಮಗುವಿಗೆ ₹5 ಸಾವಿರದಿಂದ ₹10 ಸಾವಿರ ಮೊತ್ತದ ಬಾಂಡ್‌ ನೀಡಲಾಗುತ್ತದೆ. 18 ವರ್ಷವಾದ ಬಳಿಕ ಪಾಲಕರಿಗೆ ಕನಿಷ್ಠ ₹1 ಲಕ್ಷ ಮೊತ್ತ ನೀಡಲಾಗುತ್ತದೆ. ಈ ಸೌಲಭ್ಯ ಪಡೆಯಲು ಬಿಪಿಎಲ್‌ ಕಾರ್ಡ್‌ದಾರರಾಗಿರಬೇಕು.

ವೈದ್ಯಕೀಯ ನೆರವಿನ ಮೊತ್ತ ಹೆಚ್ಚಳ, ಪ್ರತಿ ವಾರ್ಡ್‌ನಲ್ಲಿ ಐವರು ಹೃದ್ರೋಗಿಗಳಿಗೆ ಉಚಿತವಾಗಿ ಸ್ಟೆಂಟ್‌ ಅಳವಡಿಕೆ, ಡಯಾಲಿಸಿಸ್ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡುವುದು ಹಾಗೂ 100 ಬೈಕ್ ಆಂಬುಲೆನ್ಸ್ ಸೇವೆ ಘೋಷಿಸುವ ನಿರೀಕ್ಷೆ ಇದೆ.

ಶೇ 32ರಷ್ಟು ಅನುಷ್ಠಾನ’

ಬಿಬಿಎಂಪಿ 2017–18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳ ಪೈಕಿ ಕೇವಲ ಶೇ 32ರಷ್ಟು ಅನುಷ್ಠಾನಗೊಂಡಿವೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.

2016–17ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ₹7,300 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್‌ ಘೋಷಿಸಲಾಗಿತ್ತು. ಈ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಮುಗಿಯುವ ಹಂತದಲ್ಲಿವೆ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಯಾವ ಕಾಮಗಾರಿಗಳೂ ಮುಗಿಯುವ ಹಂತ ತಲುಪಿಲ್ಲ ಎಂದು ಹೇಳಿದರು.

ನಗರದಲ್ಲಿ ಸುಮಾರು 93 ಕಿ.ಮೀ. ಉದ್ದದ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಈವರೆಗೆ 13 ಕಿ.ಮೀ. ಉದ್ದದ ರಸ್ತೆಗಳನ್ನು ಮಾತ್ರ ವೈಟ್‌ಟಾಪಿಂಗ್‌ ಮಾಡಲಾಗಿದೆ. ₹1,400 ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆಗಳಿಗೆ ಡಾಂಬರೀಕರಣ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ, ಆ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಈಜಿಪುರ ಒಳವರ್ತುಲ ರಸ್ತೆಯಿಂದ ಕೋರಮಂಗಲದ ಕೇಂದ್ರೀಯ ಸದನದವರೆಗಿನ ಮೇಲ್ಸೇತುವೆ, ಶಿವಾನಂದ ವೃತ್ತದ ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ ಇನ್ನೂ ಮಣ್ಣಿನ ಪರೀಕ್ಷಾ ಕಾರ್ಯ ನಡೆಯುತ್ತಿದೆ. ಹರಳೂರು ಜಂಕ್ಷನ್‌ ಕೆಳಸೇತುವೆಯ ಮಣ್ಣಿನ ಪರೀಕ್ಷೆಯನ್ನೂ ನಡೆಸಿಲ್ಲ. ರಾಜ್ಯ ಸರ್ಕಾರ ಘೋಷಿಸಿರುವ ಯೋಜನೆಗಳು ಜಾರಿಗೊಳ್ಳಲು 4–5 ವರ್ಷಗಳು ಬೇಕಾಗುತ್ತವೆ ಎಂದು ವಿವರಿಸಿದರು.

ಕಲ್ಯಾಣ ಕಾರ್ಯಕ್ರಮಗಳ ಪೈಕಿ ಶೇ 20ರಷ್ಟೂ ಅನುಷ್ಠಾನಗೊಂಡಿಲ್ಲ ಎಂದು ದೂರಿದರು.

ಕಾರ್ಯಕ್ರಮಗಳ ಅನುಷ್ಠಾನ ಆಗಿದೆ: ಎಂ.ಕೆ.ಗುಣಶೇಖರ್‌

ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಶೇ 50ಕ್ಕಿಂತ ಹೆಚ್ಚಿನ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಎಂ.ಕೆ.ಗುಣಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ವಾರ್ಡ್‌ನಲ್ಲಿ ಇಬ್ಬರು ಹೃದ್ರೋಗಿಗಳಿಗೆ ಉಚಿತವಾಗಿ ಸ್ಟೆಂಟ್‌ ಅಳವಡಿಕೆ, ಶಿಕ್ಷಣ ಇಲಾಖೆಗೆ ಪ್ರತ್ಯೇಕ ಖಾತೆ ತೆರೆಯುವುದು, ಇಂದಿರಾ ಕ್ಯಾಂಟೀನ್‌ ಆರಂಭ, ಆನ್‌ಲೈನ್‌ ಮೂಲಕ ಖಾತಾ ವರ್ಗಾವಣೆ, ನಕ್ಷೆ ಮಂಜೂರು, ವೈಟ್‌ಟಾಪಿಂಗ್‌ ಕಾಮಗಾರಿ, ಬಹುಹಂತದ ಕಾರ್‌ ಪಾರ್ಕಿಂಗ್‌, ತೋಟಗಾರಿಕೆ, ಅರಣ್ಯೀಕರಣ ಹಾಗೂ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆಯಲ್ಲಿ ಬಹುಹಂತದ ಕಾರ್‌ ಪಾರ್ಕಿಂಗ್‌ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಜಯಮಹಲ್‌ ವಾರ್ಡ್‌ನಲ್ಲಿ ₹24 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುತ್ತದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರು ವಿನಾಕಾರಣ ಆರೋಪ ಮಾಡುತ್ತಾರೆ. ಬಿಜೆಪಿಯ ಅವಧಿಯಲ್ಲಿ ಶೇ 32ರಷ್ಟು ಅನುಷ್ಠಾನಗೊಂಡಿತ್ತು ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry