ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಶಾಹಿ ಬಿಗಿ ಹಿಡಿತ: ಶಸ್ತ್ರಾಸ್ತ್ರ ಖರೀದಿಗೆ ಗ್ರಹಣ

Last Updated 26 ಫೆಬ್ರುವರಿ 2018, 19:46 IST
ಅಕ್ಷರ ಗಾತ್ರ

ನವದೆಹಲಿ: ಅಧಿಕಾರಶಾಹಿಯ ಗೋಜಲುಗಳಿಂದಾಗಿ ಸೇನೆಯ ಶಸ್ತ್ರಾಸ್ತ್ರ ಖರೀದಿ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ ಎಂಬ ವರದಿಯೊಂದು ಸೋರಿಕೆಯಾಗಿದೆ. ರಕ್ಷಣಾ ಖಾತೆಯ ರಾಜ್ಯ ಸಚಿವ ಸುಭಾಶ್‌ ಭಾಮ್ರೆ ಈ ವರದಿಯನ್ನು ಸಿದ್ಧಪಡಿಸಿದ್ದಾರೆ.

‘ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಲು ಹಲವು ಕೇಂದ್ರಗಳಿವೆ. ಕೆಲವು ವ್ಯವಸ್ಥೆಗಳು ವಿಸ್ತೃತವಾಗಿವೆ. ಉತ್ತರದಾಯಿತ್ವದ ಯಾವುದೇ ಒಂದು ಕೇಂದ್ರ ಇಲ್ಲ. ನಿರ್ಧಾರ ಕೈಗೊಳ್ಳುವ ಹಲವು ಮಂದಿ ಇದ್ದಾರೆ. ಪ್ರಕ್ರಿಯೆಗಳು ಪುನರಾವರ್ತನೆ ಆಗುತ್ತಿರುತ್ತವೆ. ಸಂಬಂಧಪಟ್ಟವರ ಪ್ರತಿಕ್ರಿಯೆಗಳು ಬಹಳ ವಿಳಂಬವಾಗುತ್ತವೆ. ಇದರ ಮೇಲೆ ನೇರ ನಿಗಾ ವ್ಯವಸ್ಥೆಯೇ ಇಲ್ಲ. ಯೋಜನೆ ಆಧರಿತ ಕ್ರಮ ಕೈಗೊಳ್ಳುವಿಕೆಯೂ ಇಲ್ಲ. ಖರೀದಿ ಯೋಜನೆಗೆ ತ್ವರಿತವಾಗಿ ಮಂಜೂರಾತಿ ನೀಡುವ ಬದಲು ತಪ್ಪು ಹುಡುಕುವ ಮನೋಭಾವವೇ ಹೆಚ್ಚು ಇದೆ. ಹಾಗಾಗಿ ಶಸ್ತ್ರಾಸ್ತ್ರ ಖರೀದಿ ದೊಡ್ಡ ಗೋಜಲಿನ ಗೂಡಾಗಿದೆ’ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಸೋರಿಕೆಯಾಗಿರುವ ವರದಿಯ ಬಗ್ಗೆ ರಕ್ಷಣಾ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಖರೀದಿ ಪ್ರಕ್ರಿಯೆಯನ್ನು ಉತ್ತಮಪಡಿಸುವುದಕ್ಕೆ ಯಾವ ಕ್ರಮ ಅನುಸರಿಸಬೇಕು ಎಂಬುದನ್ನು ಸೂಚಿಸುವ ಆಂತರಿಕ ವರದಿ ಇದು. ಏನು ನಡೆಯುತ್ತಿದೆ ಎಂಬುದನ್ನು ವರದಿಯಲ್ಲಿ ವಿಮರ್ಶಾತ್ಮಕವಾಗಿ ವಿಶ್ಲೇಷಿಸಲಾಗಿದೆ ಅಷ್ಟೇ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ‘ಭಾರತದಲ್ಲಿ ತಯಾರಿಸಿ’ ಯೋಜನೆಗೆ ಸರ್ಕಾರ ಭಾರಿ ಪ್ರಚಾರ ನೀಡಿದೆ. ಆದರೆ ರಕ್ಷಣಾ ಸಲಕರಣೆ ಕ್ಷೇತ್ರದಲ್ಲಿ ಈ ಯೋಜನೆ ವೇಗ ಪಡೆದುಕೊಂಡಿಲ್ಲ. ಜಲಾಂತರ್ಗಾಮಿ ಮತ್ತು ಯುದ್ಧ ವಿಮಾನ ತಯಾರಿಕೆಯಂತಹ ಹಲವು ಯೋಜನೆಗಳು ಅಧಿಕಾರಶಾಹಿಯ ಹಿಡಿತದಿಂದಾಗಿ ನನೆಗುದಿಗೆ ಬಿದ್ದಿವೆ.

ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ 144 ರಕ್ಷಣಾ ಖರೀದಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಅದರಲ್ಲಿ ಯಶಸ್ವಿಯಾದ ಯೋಜನೆಗಳ ಪ್ರಮಾಣ ಶೇ 8ರಿಂದ 10ರಷ್ಟು ಮಾತ್ರ. ಕಂಪನಿಯು ಪ್ರಸ್ತಾವನೆ ಕಳುಹಿಸಿ ಸಂಬಂಧಪಟ್ಟ ಹಣಕಾಸು ಸಮಿತಿಯು ಅನುಮೋದನೆ ನೀಡುವುದಕ್ಕೆ 2 ರಿಂದ 15 ಪಟ್ಟು ವಿಳಂಬ ಆಗುತ್ತಿದೆ ಎಂದು ವರದಿ ಪ್ರಕಟಿಸಿರುವ ಸುದ್ದಿ ವಾಹಿನಿ ಹೇಳಿದೆ.

‘ಒಂದು ಯೋಜನೆಗೆ 17 ವಾರಗಳಲ್ಲಿ ಹಣಕಾಸು ಅನುಮೋದನೆ ದೊರೆತಿದೆ. ಇದು ಅತ್ಯಂತ ಕನಿಷ್ಠ ಅವಧಿ. ಅನುಮೋದನೆಗೆ ತೆಗೆದುಕೊಂಡ ಗರಿಷ್ಠ ಅವಧಿ 422 ವಾರಗಳು’ ಎಂದೂ ವರದಿ ತಿಳಿಸಿದೆ.

ಒಂದೇ ಎಂಜಿನ್‌ನ ಯುದ್ಧ ವಿಮಾನ ಖರೀದಿಯ ಪ್ರಸ್ತಾವವನ್ನು ಸರ್ಕಾರ ಕೆಲವೇ ದಿನಗಳ ಹಿಂದೆ ಕೈಬಿಟ್ಟಿದೆ. ಮತ್ತೊಂದು ಸುತ್ತಿನ ಟೆಂಡರ್‌ ಕರೆಯಲು ಸಿದ್ಧತೆ ನಡೆಸಿದೆ. ಅಂತಹ ಸಂದರ್ಭದಲ್ಲಿಯೇ ಈ ವರದಿ ಸೋರಿಕೆ ಆಗಿದೆ.

ವಾಯುಪಡೆಗೆ ಮಧ್ಯಮ ಗಾತ್ರದ ಬಹುಪಯೋಗಿ ಯುದ್ಧ ವಿಮಾನ ಖರೀದಿಯ ಪ್ರಕ್ರಿಯೆಯನ್ನು 2001ರಲ್ಲಿ ಆರಂಭಿಸಲಾಗಿದೆ. ಆದರೆ ಅದು ಇನ್ನೂ ಅಂತಿಮಗೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT