ಕುಗ್ಗಿದ ಮಹಾನಗರ ಪಾಲಿಕೆ ಬಜೆಟ್ ಗಾತ್ರ

7

ಕುಗ್ಗಿದ ಮಹಾನಗರ ಪಾಲಿಕೆ ಬಜೆಟ್ ಗಾತ್ರ

Published:
Updated:
ಕುಗ್ಗಿದ ಮಹಾನಗರ ಪಾಲಿಕೆ ಬಜೆಟ್ ಗಾತ್ರ

ಮಂಗಳೂರು: ಪ್ರತಿಪಕ್ಷಗಳ ಸದಸ್ಯರ ತೀವ್ರ ಆಕ್ಷೇಪದ ಮಧ್ಯೆಯೂ ಸೋಮವಾರ ಮಹಾನಗರ ಪಾಲಿಕೆಯ 2018–19 ನೇ ಸಾಲಿನ ಮುಂಗಡ ಪತ್ರವನ್ನು ಹಣಕಾಸು, ತೆರಿಗೆ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಮಂಡಿಸಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಬಜೆಟ್‌ ಮಂಡಿಸಿದ ಅವರು, ₹698.40 ಕೋಟಿ ಆದಾಯ ಹಾಗೂ ₹714.46 ಕೋಟಿ ವೆಚ್ಚದ ಆಯವ್ಯಯವನ್ನು ಮಂಡಿಸಿದರು. ಕಳೆದ ವರ್ಷಕ್ಕಿಂತ ಈ ಬಾರಿ ಬಜೆಟ್‌ ಗಾತ್ರ ಕುಗ್ಗಿರುವುದಕ್ಕೆ ಪ್ರತಿಪಕ್ಷಗಳ ಆಕ್ಷೇಪ ವ್ಯಕ್ತವಾಯಿತು.

ಒಟ್ಟು ₹698.40 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದ್ದು, ಒಟ್ಟು ₹714.46 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಈ ಬಾರಿ ಎಡಿಬಿ 2 ನೇ ಹಂತದ ಯೋಜನೆಯ ಅನುದಾನ ನೇರವಾಗಿ ಕೆಯುಎಫ್‌ಡಿಸಿಗೆ ಹಾಗೂ ನಗರೋತ್ಥಾನ 2 ಮತ್ತು 3 ನೇ ಹಂತದ ಅನುದಾನ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆಯಾಗಿದ್ದು, ಹೀಗಾಗಿ ಆದಾಯದ ನಿರೀಕ್ಷೆಯಲ್ಲಿ ಕಡಿಮೆಯಾಗಿದೆ ಎಂದರು.

ರಾಜ್ಯ ಸರ್ಕಾರದಿಂದ ವೇತನ ಅನುದಾನವಾಗಿ ₹35 ಕೋಟಿ, ವಿದ್ಯುತ್‌ ಅನುದಾನವಾಗಿ ₹47 ಕೋಟಿ, ಸ್ಟ್ಯಾಂಪ್‌ ಶುಲ್ಕ ₹4 ಕೋಟಿ, ಎಸ್‌ಎಫ್‌ಸಿ ಮುಕ್ತ ನಿಧಿಯಡಿ ₹25 ಕೋಟಿ, ಎಸ್‌ಎಫ್‌ಸಿ ಪ್ರೋತ್ಸಾಹಧನವಾಗಿ ₹2 ಕೋಟಿ, ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ₹2.25 ಲಕ್ಷ, ಕೇಂದ್ರ ಸರ್ಕಾರದಿಂದ ಅಮೃತ್‌ ಯೋಜನೆಯಡಿ ₹75 ಕೋಟಿ, 14ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಡಿ ₹17.76 ಕೋಟಿ, 14ನೇ ಹಣಕಾಸು ಯೋಜನೆಯ ಕಾರ್ಯನಿರ್ವಹಣೆ ಯೋಜನೆಯಡಿ ₹5 ಕೋಟಿ, ಸ್ವಚ್ಛ ಭಾರತ್‌ ಮಿಷನ್‌ ಅಡಿ ₹4.94 ಕೋಟಿ, ಶಾಸಕರ ಅನುದಾನದಿಂದ ₹1.35 ಕೋಟಿ, ತುಂಬೆ ಭೂಮಿ ಖರೀದಿಗೆ ₹15 ಕೋಟಿ, ನಲ್ಮ್‌ ಯೋಜನೆಯಡಿ ₹80 ಲಕ್ಷ, ಹೌಸಿಂಗ್ ಫಾರ್‌ ಆಲ್‌ ಯೋಜನೆಯಡಿ ₹14 ಕೋಟಿ ಅನುದಾನವನ್ನು ನಿರೀಕ್ಷಿಸಲಾಗಿದೆ.

ಪಾಲಿಕೆಯ ಮೂಲದಿಂದ ಉದ್ಯಮ ಪರವಾನಗಿ ನೀಡುವಾಗ ಭರಿಸಿಕೊಳ್ಳುವ ತ್ಯಾಜ್ಯ ಶುಲ್ಕದಿಂದ 2018–19 ರಲ್ಲಿ ಒಟ್ಟು 10 ಕೋಟಿ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.

ಹೊಸ ಯೋಜನೆಗಳು: ನೀರಿನ ಕರ, ಆಸ್ತಿ ತೆರಿಗೆ, ಉದ್ಯಮ ತೆರಿಗೆ ಸೇರಿದಂತೆ ಪಾಲಿಕೆಗೆ ಬರಬೇಕಾದ ಎಲ್ಲ ತೆರಿಗೆಗಳ ಪಾವತಿಗೆ ಬ್ಯಾಂಕ್‌ ಸಹಕಾರದೊಂದಿಗೆ ವಿಶೇಷ ಕೌಂಟರ್‌ ವ್ಯವಸ್ಥೆ ಮಾಡಲಾಗುವುದು. ಒಳಚರಂಡಿ ನಿರ್ವಹಣೆಯಲ್ಲಿ ತೊಡಗಿರುವ ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸಿ, ಈ ವಾಹನಗಳು ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಕರ್ತವ್ಯ ನಿರ್ವಹಿಸುವಂತೆ ಮಾಡಲು ನಿರ್ಧರಿಸಲಾಗಿದೆ.

ನಗರದ ಪ್ರಮುಖ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಸಿಎಸ್‌ಆರ್‌ ನಿಧಿ ಮತ್ತು ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇ–ಶೌಚಾಲಯಗಳನ್ನು ನಿರ್ಮಿಸಲಾಗುವುದು. ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲ ತೆರಿಗೆ ಪಾವತಿಯ ವಿವರಗಳ ಡಿಜಿಟಲೈಜೇಶನ್‌ ಮಾಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಒಳಚರಂಡಿ ಶುಲ್ಕವನ್ನು ನೀರಿನ ಶುಲ್ಕದ ಜತೆಗೆ ಸರ್ಕಾರಿ ಸುತ್ತೋಲೆಯಲ್ಲಿ ಸೂಚಿಸಿರುವ ದರದಂತೆಯೇ ಪ್ರತಿ ಬಳಕೆದಾರರಿಂದ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಜಾಹೀರಾತು ಶುಲ್ಕವನ್ನು ಹಾಗೂ ಅಂಗಡಿ ಬಾಡಿಗೆಗಳ ದರ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ.

ಖರ್ಚು: ಹೊರಗುತ್ತಿಗೆ ದಾರಿದೀಪ ನಿರ್ವಹಣೆಗೆ ₹5.85 ಕೋಟಿ, ಘನತ್ಯಾಜ್ಯ ವಿಲೇವಾರಿಗೆ ₹48.75 ಕೋಟಿ, ರೇಚಕ ಸ್ಥಾವರ/ ಗೇಟ್‌ ವಾಲ್ವ್‌ ಚಾಲನೆ ಕಾರ್ಯಕ್ಕೆ ₹5.50 ಕೋಟಿ, ಎಂಎಸ್‌ಟಿಪಿಎಲ್‌ಗೆ ಎಸ್‌ಟಿಪಿ ಸ್ಥಾವರದ ನಿರ್ವಹಣೆಗೆ ಶೇ 30 ರ ವಂತಿಗೆ ರೂಪದಲ್ಲಿ ₹2.25 ಕೋಟಿ, ಪಾಲಿಕೆಯ ಗಲ್‌ಫೀಟ್ ಮತ್ತು ಜೆಟ್‌ಸೆಕ್‌ ವಾಹನಗಳ ನಿರ್ವಹಣೆಗೆ ₹2.75 ಕೋಟಿ, ಪಾಲಿಕೆ ವೆಟ್‌ವೆಲ್‌ ನಿರ್ವಹಣೆಗೆ ₹1.50 ಕೋಟಿ, ಪುರಭವನ, ಈಜುಕೊಳ ನಿರ್ವಹಣೆಗೆ ₹1 ಕೋಟಿ, ಹೊರಗುತ್ತಿಗೆ ವಾಹನ ಬಾಡಿಗೆ ₹1.30 ಕೋಟಿ ಕಾಯ್ದಿರಿಸಲಾಗಿದೆ.

ಮಲೇರಿಯ ನಿಯಂತ್ರಣ ಕಾರ್ಯಕ್ರಮಗಳಿಗೆ ₹2.04 ಕೋಟಿ, ಬೀದಿ ನಾಯಿ ನಿಯಂತ್ರಣಕ್ಕೆ ₹15 ಲಕ್ಷ, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ₹10 ಲಕ್ಷ ನಿಗದಿಪಡಿಸಲಾಗಿದೆ.

ರಸ್ತೆಗಳ ಪುನರ್‌ ನವೀಕರಣ, ಪುನರ್‌ ಡಾಂಬರೀಕರಣ, ಫುಟ್‌ಪಾತ್ ನಿರ್ಮಾಣ, ಗುಂಡಿ ಮುಚ್ಚುವ ಕಾಮಗಾರಿಗೆ ₹12 ಕೋಟಿ, ರಸ್ತೆ ಮತ್ತು ಫುಟ್‌ಪಾತ್ ಅಭಿವೃದ್ಧಿ (ಕಾಂಕ್ರಿಟ್‌ ರಸ್ತೆ, ಕಾಲು ರಸ್ತೆ ಮತ್ತು ಇತರೆ)ಗೆ ₹25 ಕೋಟಿ, ರಸ್ತೆಗಳ ನಿರ್ವಹಣೆ (ಗ್ಯಾಂಗ್‌ ಮತ್ತು ವಾಹನ) ₹2.15 ಕೋಟಿ, ರಸ್ತೆಗಳ ವಿಸ್ತಾರ, ಪಾದಚಾರಿ ರಸ್ತೆ, ರಸ್ತೆ ಬದಿ ಚರಂಡಿ (ಎಫ್‌ಎಆರ್‌ ಅನುದಾನದಡಿ) ₹9 ಕೋಟಿ, ರಸ್ತೆಗಳ ನಾಮಫಲಕ ಅಳವಡಿಕೆ, ಎಚ್ಚರಿಕೆ ಫಲಕ ಅಳವಡಿಸಲು ₹1.25 ಕೋಟಿ ಮೀಸಲಿಡಲಾಗಿದೆ.

ಮೇಯರ್ ಕವಿತಾ ಸನಿಲ್‌, ಉಪಮೇಯರ್ ರಜನೀಶ್‌ ಕಾಪಿಕಾಡ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್‌ ರವೂಫ್‌, ನಾಗವೇಣಿ, ಸಬಿತಾ ಮಿಸ್ಕಿತ್‌, ಸಚೇತಕ ಎಂ.ಶಶಿಧರ್‌ ಹೆಗ್ಡೆ, ಆಯುಕ್ತ ಮುಹಮ್ಮದ್‌ ನಜೀರ್‌, ಸದಸ್ಯರು, ಅಧಿಕಾರಿಗಳು ಇದ್ದರು.

ಬಜೆಟ್‌ ವಿವರ

ವರ್ಷ                          2017–18                2018–19 (ಕೋಟಿ ₹ಗಳಲ್ಲಿ)

ಪ್ರಾರಂಭಿಕ ಶಿಲ್ಕು               285.60                  263.96

ಆದಾಯ

ರಾಜಸ್ವ ಸ್ವೀಕೃತಿ                310.70                  310.82

ಬಂಡವಾಳ ಸ್ವೀಕೃತಿ             252.42                  169.70

ಅಸಾಮಾನ್ಯ ಸ್ವೀಕೃತಿ           303.96                   217.86

ವರ್ಷದ ಆದಾಯ                867.09                  698.40

ಒಟ್ಟು ಶಿಲ್ಕು                     1152.70                 962.37

ಖರ್ಚು

ರಾಜಸ್ವ ಸ್ವೀಕೃತಿ                 223.38                  224.99

ಬಂಡವಾಳ ವೆಚ್ಚ                 402.61                  250.75

ಅಸಾಮಾನ್ಯ ವೆಚ್ಚ               326.53                  238.70

ಒಟ್ಟು ಖರ್ಚು                     952.53                  714.46

ಅಂತಿಮ ಶಿಲ್ಕು                   200.16                  247.91

* * 

ಪಾಲಿಕೆಯ ಸ್ವಂತ ಆದಾಯದಲ್ಲಿ ₹2.02 ಕೋಟಿ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದ್ದು, ₹4.32 ಕೋಟಿ ವೆಚ್ಚಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಪ್ರತಿಭಾ ಕುಳಾಯಿ

ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry