ತಂತ್ರಜ್ಞಾನ ಕ್ರಾಂತಿಯಿಂದ ಸವಾಲು

7

ತಂತ್ರಜ್ಞಾನ ಕ್ರಾಂತಿಯಿಂದ ಸವಾಲು

Published:
Updated:

ಮಂಗಳೂರು: ಪ್ರಸ್ತುತ ನಡೆಯುತ್ತಿರುವ ತಂತ್ರಜ್ಞಾನದ ಕ್ರಾಂತಿಯಿಂದ (ಇಂಡಸ್ಟ್ರಿ 4.0) ಆಗುತ್ತಿರುವ ಭಾರೀ ಬದಲಾವಣೆಯಲ್ಲಿ ಉದ್ಯೋಗ ಸೃಷ್ಟಿಗಿಂತ ಹೆಚ್ಚಾಗಿ ಉದ್ಯೋಗ ನಷ್ಟವೇ ಆದರೆ ಸಮಾಜದಲ್ಲಿ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾಗುವ ಅಪಾಯವಿದೆ ಎಂದು ಸಿಂಗಪುರದ ನಾನ್ಯಾಂಗ್‌ ತಾಂತ್ರಿಕ ವಿಶ್ವವಿದ್ಯಾಲಯದ ಅಧ್ಯಕ್ಷ ಪ್ರೊ.ಸುಬ್ರ ಸುರೇಶ್‌ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ 36ನೇ ಘಟಿಕೋತ್ಸವದಲ್ಲಿ ಸೋಮವಾರ ಅವರು ಗೌರವ ಡಾಕ್ಟರೇಟ್‌ ಸ್ವೀಕರಿಸಿ, ಘಟಿಕೋತ್ಸವ ಭಾಷಣ ಮಾಡಿದರು. ‘ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚಾದಲ್ಲಿ ಸಾಮಾಜಿಕ ವಾಗಿ ಮತ್ತು ರಾಜಕೀಯ ವಾಗಿ ಪಲ್ಲಟಗಳು ಆಗುವ ಸಂಭವವಿದೆ. ತಂತ್ರಜ್ಞಾನ ಬೆಳೆದಂತೆ ಋಣಾತ್ಮಕ ಪರಿಣಾಮಗಳು ಉಂಟಾಗುವುದನ್ನು ಇತಿಹಾಸದಲ್ಲಿ ನಾವು ಕಂಡಿದ್ದೇವೆ. ಆದ್ದರಿಂದ ‘ಯಶಸ್ಸು’ ಎನ್ನುವ ಪದಕ್ಕ ಸಂಬಂಧಿಸಿದ ಉತ್ತರವಿಲ್ಲದ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ’ ಎಂದು ಅವರು ಎಚ್ಚರಿಸಿದರು.

ಒಟ್ಟು 97 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು. 120 ವಿದ್ಯಾರ್ಥಿಗಳು 45 ಪದಕ ಮತ್ತು 75ಬಹುಮಾನಗಳನ್ನು ಪಡೆದಿದ್ದು, 5,929 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು. ಕುಲಪತಿ ಪ್ರೊ. ಕೆ. ಭೈರಪ್ಪ, ಕುಲಸಚಿವ ಡಾ. ನಾಗೇಂದ್ರ ಪ್ರಕಾಶ್‌ ಮತ್ತು ಪರೀಕ್ಷಾಂಕ ಕುಲಸಚಿವ ಪ್ರೊ. ಎ.ಎಂ. ಖಾನ್‌ ಇದ್ದರು.

ರ‍್ಯಾಂಕ್‌ ವಿಜೇತರ ಹರ್ಷ: ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡ ಶ್ರೀಗೌರಿಗೆ ಮುದ್ರಣ ಮಾಧ್ಯಮವೇ ಇಷ್ಟ. ಅವರು ಎಂಸಿಜೆಯಲ್ಲಿ ಐದು ನಗದು ಬಹುಮಾನ ಪಡೆದಿದ್ದಾರೆ. ಯೂತ್‌ ಫಾರ್‌ ಸೇವಾ ವತಿಯಿಂದ ನೀಡುವ ಯುವಚೇತನ ಪ್ರಶಸ್ತಿ ಗೆದ್ದವರು. ಲಂಬಾಣಿ ಸಂಸ್ಕೃತಿ, ಭಿಕ್ಷುಕರನ್ನು ಬಳಸಿಕೊಳ್ಳುವ ಮಾಫಿಯಾ ಕುರಿತು ಈಗಾಗಲೇ ಹುಬ್ಬಳ್ಳಿಯಲ್ಲಿ ವರದಿಗಾರಿಕೆ ಮಾಡಿದವರು. ಅಪ್ಪ ಶ್ರೀಪಾದ ಜೋಶಿ ಮತ್ತು ಅಮ್ಮ ಶ್ರೀದೇವಿ ಶಿಕ್ಷಣಕ್ಕೆ, ಮಗಳ ಓಡಾಟಕ್ಕೆ ಪ್ರೋತ್ಸಾಹ ನೀಡಿದವರು.

ಕನ್ನಡ ಎಂ.ಎ.ಯಲ್ಲಿ 1 ಚಿನ್ನ, ಐದು ನಗದು ಬಹುಮಾನ ಗೆದ್ದ ನವ್ಯಶ್ರೀ ಕೂಡ ಬಾಲ್ಯದಲ್ಲಿ ಬಡತನ ಕಂಡವರು. ಟ್ಯಾಂಕರ್‌ ಚಾಲಕ ಅಪ್ಪ ಸದಾಶಿವ ಅವರ ದುಡಿಮೆ ಶಿಕ್ಷಣಕ್ಕೆ ಸಾಲುತ್ತಿರಲಿಲ್ಲ. ಆದರೆ ಆ ಬಡತನವನ್ನು ದಾಟಿ ಅಕ್ಕ ಮತ್ತು ಅಣ್ಣ ಕೆಲಸಕ್ಕೆ ಸೇರಿದ್ದರಿಂದ ಇಂದು ನಾನು ನೆಮ್ಮದಿಯಿಂದ ಸ್ನಾತಕೋತ್ತರ ಪದವಿ ಪಡೆಯುವುದು ಸಾಧ್ಯವಾಯಿತು ಎನ್ನುವ ಅವರಿಗೆ ಉಪನ್ಯಾಸಕಿ ಆಗುವಾಸೆ.

ಸೇಂಟ್‌ ಫಿಲೋಮಿನಾ ಕಾಲೇಜಿನಲ್ಲಿ ಸಂಗೀತ, ನೃತ್ಯ ಮತ್ತು ಎನ್‌ಎಸ್‌ಎಸ್‌ನಲ್ಲಿ ಸಕ್ರಿಯಾಗಿದ್ದ ಪವಿತ್ರ ಅವರು ಓದಿನಲ್ಲೂ ಹುಶಾರು ಹುಡುಗಿ. ‘ಉಪನ್ಯಾಸಕರ ಮಾರ್ಗದರ್ಶನವೇ ರ‍್ಯಾಂಕ್‌ಗೆ ಕಾರಣ. ರ‍್ಯಾಂಕ್‌ ಬರುತ್ತದೆಂದು ನಿರೀಕ್ಷಿಸಿಯೇ ಇರಲಿಲ್ಲ ಎನ್ನುವ ಅವರು ಇದೀಗ ಪಿಎಚ್‌.ಡಿ ವಿದ್ಯಾರ್ಥಿನಿ.

ಹಗಲು ಕೆಲಸ ಮಾಡಿ ವಿಶ್ವವಿದ್ಯಾಲಯದ ಸಂಜೆ ಕಾಲೇಜಿನಲ್ಲಿ ಎಂಬಿಎ ಓದಿದ ನಿಶಾಂತ್‌ ರಾವ್‌ಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಹಂಬಲ. ಹಗಲೆಲ್ಲ ಐಸಿಐಸಿಐ ಬ್ಯಾಂಕ್‌ನಲ್ಲಿ ದುಡಿಯುವ ಅವರಿಗೆ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯೂ ಇದೆ. ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಆರಂಭವಾದ ಹಿಂದಿ ಎಂ.ಎ.ಯ ಮೊದಲ ಬ್ಯಾಚ್‌ನಲ್ಲಿ ಭವ್ಯ ಅವರು ನಾರಾಯಣ ರಾವ್‌ ಮಾಳಖೇಡ ಚಿನ್ನದ ಪದಕ ಪಡೆದಿದ್ದಾರ. ಶ್ರುತಿ ಎರಡನೇ ರ‍್ಯಾಂಕ್‌ ಮತ್ತು ನಮಿತಾ ಮೂರನೇ ರ‍್ಯಾಂಕ್‌ ಪಡೆದಿದ್ದಾರೆ.

ಚಿಕ್ಕಅಳುವಾರು ಸ್ನಾತಕೋತ್ತರ ಕೇಂದ್ರದಲ್ಲಿ ಇತಿಹಾಸದಲ್ಲಿ ಎಂ.ಎ. ಓದಿದ ಭರತ್‌ ಎ.ಸಿ. ಅವರು ಎರಡು ಚಿನ್ನದ ಪದಕ ಪಡೆದಿದ್ದಾರೆ. ಹಾಸ್ಟೆಲ್‌ನಲ್ಲಿ ಇದ್ದುದರಿಂದ ಓದಲು ತುಂಬ ಸಮಯ ಸಿಗುತ್ತಿತ್ತು ಎನ್ನುವ ಅವರೀಗ ಸಂಶೋಧನಾ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

* * 

ಮಾನವೀಯತೆ ಮತ್ತು ತಂತ್ರಜ್ಞಾನವನ್ನು ಸಮತೋಲನದಲ್ಲಿ ಕೊಂಡೊಯ್ದಾಗ ಮಾತ್ರ ಮಾನವ ಸಮುದಾಯಕ್ಕೆ ಅನುಕೂಲ ಮಾಡಿಕೊಡಬಹುದು

ಪ್ರೊ.ಸುಬ್ರ ಸುರೇಶ್‌

ಸಿಂಗಪುರದ ನಾನ್ಯಾಂಗ್‌ ತಾಂತ್ರಿಕ ವಿವಿ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry