ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಅವ್ಯವಹಾರ: ಆರೋಪ

7

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಅವ್ಯವಹಾರ: ಆರೋಪ

Published:
Updated:
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಅವ್ಯವಹಾರ: ಆರೋಪ

ರಾಯಚೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸುತ್ತಿರುವ ರಾಯಚೂರು ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಿಸಿ–ರಸ್ತೆ ಕಾಮಗಾರಿಯಲ್ಲಿ ಸುಮಾರು ₹20 ಕೋಟಿ ಮೊತ್ತದ ಅವ್ಯವಹಾರ ಆಗಿದ್ದು, ಇದಕ್ಕೆ ಮಾಜಿ ಶಾಸಕ ಡಾ.ಶಿವರಾಜ ಪಾಟೀಲ ಹೊಣೆಗಾರರಾಗಿದ್ದಾರೆ ಎಂದು ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷ ವಿರೂಪಾಕ್ಷಪ್ಪ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿಯ ಡಿಪಿಆರ್‌ ಪಡೆದುಕೊಳ್ಳಲಾಗಿದೆ ಹಾಗೂ ವಾಸ್ತವದಲ್ಲಿ ನಡೆದ ಕಾಮಗಾರಿಯ ಅಳತೆ ಮಾಡಲಾಗಿದೆ. ಅವ್ಯವಹಾರ ನಡೆದಿರುವುದು ನಿಚ್ಚಳವಾಗಿ ಕಾಣುತ್ತಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬಸವೇಶ್ವರ ವೃತ್ತ ಹಾಗೂ ನಂದೀಶ್ವರ ದೇವಸ್ಥಾನ ಪಕ್ಕದಲ್ಲಿ ಕಲ್ವರ್ಟ್‌ ಸೇತುವೆ ನಿರ್ಮಾಣಕ್ಕೆ ಸುಮಾರು ₹11 ಕೋಟಿ ಮೀಸಲಿಡಲಾಗಿದೆ. ಈ ಮುಂಚೆಯೇ ಲೋಕೋಪಯೋಗಿ ಇಲಾಖೆಯು ನಿರ್ಮಿಸಿರುವ ಸೇತುವೆಗಳನ್ನು ಉಳಿಸಿಕೊಂಡು ರಸ್ತೆ ಕಾಮಗಾರಿ ಮಾಡಿ, ಹಣ ನುಂಗಿಹಾಕಲಾಗಿದೆ. ರಸ್ತೆಯುದ್ದಕ್ಕೂ 172 ವಿದ್ಯುತ್‌ ಕಂಬಗಳನ್ನು ಹೊಸದಾಗಿ ಹಾಕುವುದಕ್ಕೆ ಕೋಟ್ಯಂತರ ಮೊತ್ತ ತೋರಿಸಲಾಗಿದೆ. ವಾಸ್ತವವಾಗಿ ಈ ಮೊದಲು ಇದ್ದ ವಿದ್ಯುತ್‌ ಕಂಬಗಳನ್ನೆ ಕಿತ್ತಿಟ್ಟು, ಮತ್ತೆ ಅಳವಡಿಸಿದ್ದಾರೆ. ಅನೇಕ ಕಡೆ ಡಿಪಿಆರ್‌ನಲ್ಲಿ ಕಾಣಿಸಿದಷ್ಟು ಸಿಸಿ ರಸ್ತೆ ವಿಸ್ತಾರವಾಗಿಲ್ಲ ಎಂದು ತಿಳಿಸಿದರು.

ಕೊಳೆಗೇರಿ ನಿವಾಸಿಗಳು ಮನೆ ನಿರ್ಮಿಸುವುದಕ್ಕೆ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಸರ್ಕಾರವು ₹3.73 ಲಕ್ಷ ಅನುದಾನ ಒದಗಿಸುತ್ತಿದೆ. ಆದರೆ ಮಂಡಳಿಯು ಕೇವಲ ₹1.43 ಲಕ್ಷ ಮಾತ್ರ ಫಲಾನುಭವಿಗಳಿಗೆ ಕೊಡುತ್ತಿದೆ. ಈ ಮನೆಗಳ ನಿರ್ಮಾಣದ ಮುಖ್ಯ ಗುತ್ತಿಗೆದಾರ ಹೈದರಾಬಾದ್‌ನಿಂದ ರಾಯಚೂರಿಗೆ ಬಂದಿಲ್ಲ. ನಗರಸಭೆ ಸದಸ್ಯ ಮೊಹ್ಮದ್‌ ಶಾಲಂ ಅವರಿಗೆ ಉಪಗುತ್ತಿಗೆ ವಹಿಸಿದೆ. ಫಲಾನುಭವಿಯು ₹45 ಸಾವಿರ ಮೊತ್ತ ಕಟ್ಟಿದ ಮೇಲೆ ಸಾಧಾರಣ ಮನೆ ನಿರ್ಮಿಸಿ ಕೊಡುತ್ತಿದ್ದಾರೆ ಎಂದರು.

ಮನೆಗಳನ್ನು ವೈಯಕ್ತಿಕವಾಗಿ ನಿರ್ಮಿಸುವುದಕ್ಕೆ ನಿರ್ದೇಶನವಿದ್ದರೂ ಸಾಮೂಹಿಕವಾಗಿ ಮನೆಗಳನ್ನು ನಿರ್ಮಿಸಿ ಹಣವನ್ನು ಎತ್ತಿ ಹಾಕಲಾಗುತ್ತಿದೆ. ನಗರಸಭೆಗೆ ಬರುತ್ತಿದ್ದ ಎಸ್‌ಎಫ್‌ಸಿ ಅನುದಾನದಲ್ಲಿ ಹಾಗೂ ಹಣಕಾಸು ಸಾಮಾನ್ಯ ಮೂಲಕ ₹48 ಲಕ್ಷ ಹಣ ಪಡೆದು ರಾಯಚೂರು ನಗರದ ಇಂದಿರಾ ಕ್ಯಾಂಟಿನ್‌ಗಳಿಗೆ ಕೊಡಲಾಗಿದೆ ಎಂದು ತಿಳಿಸಿದರು.

ಈ ರೀತಿ ಮಾಜಿ ಶಾಸಕರ ಅವಧಿಯಲ್ಲಿ ನಗರದ ಕಾಮಗಾರಿಗಳಲ್ಲಿ ಇನ್ನೂ ಅನೇಕ ಅವ್ಯವಹಾರಗಳು ನಡೆದಿವೆ. ದಾಖಲೆಗಳ ಸಮೇತ ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು. ಅವ್ಯವಹಾರ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ. ಜೆಡಿಎಸ್‌ನಿಂದ ಶೀಘ್ರದಲ್ಲೆ ಹೋರಾಟ ಆರಂಭಿಸಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry