‘ಸ್ಮಾರ್ಟ್‌ ಸಿಟಿ’ ಕ್ಷೇತ್ರದಲ್ಲಿ ಚೆದುರಿದ ರಾಜಕೀಯ ನಿಲುವು

7

‘ಸ್ಮಾರ್ಟ್‌ ಸಿಟಿ’ ಕ್ಷೇತ್ರದಲ್ಲಿ ಚೆದುರಿದ ರಾಜಕೀಯ ನಿಲುವು

Published:
Updated:
‘ಸ್ಮಾರ್ಟ್‌ ಸಿಟಿ’ ಕ್ಷೇತ್ರದಲ್ಲಿ ಚೆದುರಿದ ರಾಜಕೀಯ ನಿಲುವು

ತುಮಕೂರು: ಜಿಲ್ಲೆಯ ಮೊದಲ ಮಹಿಳಾ ಶಾಸಕಿಯನ್ನು ಆಯ್ಕೆ ಮಾಡಿದ ಹೆಗ್ಗಳಿಕೆಯನ್ನು ತುಮಕೂರು ನಗರ ವಿಧಾನಸಭಾ ಕ್ಷೇತ್ರ ಹೊಂದಿದೆ. ಬಿಜೆಪಿ, ಜನತಾ ಪರಿವಾರ, ಕಾಂಗ್ರೆಸ್‌ ಮೂರು ಪಕ್ಷಗಳೂ ಆಯಾ ಕಾಲಘಟ್ಟದಲ್ಲಿ ಪ್ರಾಬಲ್ಯ ಮೆರೆದಿವೆ.

ಕ್ಷೇತ್ರ ಪುನರ್ ವಿಂಗಡನೆಗೂ ಮುನ್ನ ತುಮಕೂರು ನಗರ, ಊರ್ಡಿಗೆರೆ, ಕಸಬಾ ಹೋಬಳಿ (ಮಲ್ಲಸಂದ್ರ, ಹೆಗ್ಗೆರೆ) ಸೇರಿ ಕ್ಷೇತ್ರವಾಗಿತ್ತು. ಈಗ ಮಹಾನಗರ ಪಾಲಿಕೆಯ 35 ವಾರ್ಡ್‌ಗಳ ವ್ಯಾಪ್ತಿಯಲ್ಲಿ ವಿಸ್ತರಿಸಿಕೊಂಡಿದೆ.

1957ರಲ್ಲಿ ಪ್ರಜಾ ಸೋಷಲಿಸ್ಟ್‌ ಪಾರ್ಟಿಯ (ಪಿಎಸ್‌ಪಿ) ಜಿ.ಎನ್‌.ಪುಟ್ಟಣ್ಣ ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಿದ್ದರು. 1962ರ ಚುನಾವಣೆಯಲ್ಲಿ  ಪಕ್ಷೇತರರಾಗಿದ್ದ ಟಿ.ಎಸ್‌.ಮಲ್ಲಿಕಾರ್ಜುನಯ್ಯ ವಿರುದ್ಧ ಕಾಂಗ್ರೆಸ್‌ನ ಬಿ.ಸಿ.ಭಾಗೀರತಮ್ಮ ಗೆಲುವು ಸಾಧಿಸಿ ಜಿಲ್ಲೆಯ ಮೊದಲ ಮಹಿಳಾ ಶಾಸಕಿಯಾಗಿ ದಾಖಲೆ ಬರೆದರು. ಆದರೆ ಮತದಾರರು  ಈ ಸಂಪ್ರದಾಯವನ್ನು ಮುಂದುವರೆಸಲಿಲ್ಲ.

ಮತ್ತೆ 1967ರಲ್ಲಿ ಭಾಗೀರತಮ್ಮ ಅವರನ್ನು ಪಿಎಸ್‌ಪಿಯ ಬಿ.ಪಿ.ಗಂಗಾಧರ್‌  ಸೋಲಿಸಿದರು. ಕಾಂಗ್ರೆಸ್‌ ಮತ್ತು ಜನತಾ ಪರಿವಾರದ ನಡುವಿನ ಜಿದ್ದಾಜಿದ್ದಿ  ಎರಡು ದಶಕಕ್ಕೂ ಹೆಚ್ಚು ಕಾಲ ಕಾಣಬಹುದಾಗಿದೆ. ಮತದಾರರು ಬದಲಾವಣೆ ಬಯಸುತ್ತಲೇ ಬಂದಿದ್ದಾರೆ. ಜನತಾ ಪರಿವಾರ ಮತ್ತು ಬಿಜೆಪಿ ಜತೆಗಿನ ಒಳ ನಂಟು ಕಾಂಗ್ರೆಸ್‌ನ ಬೆನ್ನುಮೂಳೆ ಮುರಿದಿದೆ.

ಜನತಾ ದಳ ವಿಭಜನೆ ಇಲ್ಲಿ ಬಿಜೆಪಿ ತಳವೂರಲು ಕಾರಣವಾಯಿತು.  1994ರ ಚುನಾವಣೆಯಲ್ಲಿ  ಜೆಡಿಯು ಹಾಗೂ ಬಿಜೆಪಿ ಚುನಾವಣಾ ಒಪ್ಪಂದ ಮಾಡಿಕೊಂಡವು. ಕ್ಷೇತ್ರದಲ್ಲಿ ಜೆಎನ್‌ಪಿಯಲ್ಲಿ  ಗೆಲುವು ಸಾಧಿಸಿಕೊಂಡು ಬಂದಿದ್ದ ಲಕ್ಷ್ಮಿನರಸಿಂಹಯ್ಯ ಅವರಿಗೆ ನಗರ ಕ್ಷೇತ್ರಕ್ಕೆ ಕೊಕ್ ನೀಡಿ ಜೆಡಿಯು ಬೆಳ್ಳಾವಿ ಕ್ಷೇತ್ರದಿಂದ ಟಿಕೆಟ್‌ ನೀಡಿತು.  ಇದರ ಜತೆಗೆ ಕಾಂಗ್ರೆಸ್‌ನಿಂದ ಬಂಡಾಯವಾಗಿ ಕೆ.ಎನ್‌.ರಾಜಣ್ಣ (ಈಗಿನ ಮಧುಗಿರಿ ಶಾಸಕ)  ಸ್ಪರ್ಧೆ, ಹಿಂದೂ–ಮುಸ್ಲಿಂ ಮತಗಳ ವಿಭಜನೆ,  ನಗರದಲ್ಲಿ ನಡೆದ ಹಿಂದೂ–ಮುಸ್ಲಿಂ ಗಲಭೆ, ಈದ್ಗಾ ಮೈದಾನ ವಿಷಯ, ಬಾಬರಿ ಮಸೀದಿ ಘಟನೆಗಳನ್ನು ಬಳಸಿಕೊಂಡು ಬಿಜೆಪಿ ಗೆಲವು ಸಾಧಿಸಿತು.

ಈ ವಿಭಜನೆಯ ಲಾಭವನ್ನು ಎರಡು ದಶಕಕಾಲ ಬಿಜೆಪಿ ಪಡೆಯಿತು. ಎಸ್‌.ಶಿವಣ್ಣ ಸೋಲರಿಯದ ಸರದಾರನಾಗಿ ಸತತ ನಾಲ್ಕು ಸಲ ಶಾಸಕರಾಗಿ ವಿಜೃಂಭಿಸಿದರು. ಬಿಜೆಪಿ ನೆಲೆಯೂರಿದ ಬಳಿಕ ಜನತಾಪರಿವಾರ ತಲೆ ಎತ್ತಲು ಸಾಧ್ಯವೇ ಆಗಲಿಲ್ಲ.

2013ರ ಚುನಾವಣೆ: ಬಿಜೆಪಿಯಿಂದ ಎಸ್‌. ಶಿವಣ್ಣ, ಕೆಜೆಪಿಯಿಂದ ಜ್ಯೋತಿ ಗಣೇಶ್‌, ಕಾಂಗ್ರೆಸ್‌ನಿಂದ ಡಾ.ಎಸ್‌.ರಫೀಕ್‌ ಅಹ್ಮದ್‌, ಜೆಡಿಎಸ್‌ನಿಂದ ಗೋವಿಂದರಾಜು ಸ್ಪರ್ಧೆಯಲ್ಲಿದ್ದರು.

ನಗರ ಅಭಿವೃದ್ಧಿಪಡಿಸಿಲ್ಲ ಎಂಬ ಜನರ ಆಕ್ರೋಶ, ಪ್ರಬಲವಾದ ಜೆಡಿಎಸ್‌–ಕೆಜೆಪಿ , ಜೆಡಿಎಸ್‌ನೊಳಗಿನ ಭಿನ್ನಮತವು  ಕಾಂಗ್ರೆಸ್‌  ಗೆಲುವಿಗೆ ಕಾರಣವಾಯಿತು. ಡಾ.ರಫೀಕ್ ಅಹಮ್ಮದ್‌ ಶಾಸಕರಾಗಿ ಆಯ್ಕೆಯಾದರು. ಕೆಜೆಪಿಯ ಜ್ಯೋತಿಗಣೇಶ್‌ ಸಣ್ಣ ಅಂತರದಲ್ಲಿ ಸೋತರು.

2018ರ ಚುನಾವಣೆ: ಕಳೆದ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದ ಜ್ಯೋತಿ ಗಣೇಶ್‌ ಈಗ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ  ಟಿಕೆಟ್‌ ಆಕಾಂಕ್ಷಿ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬೆಂಬಲ ಇವರಿಗಿದೆ. ಜ್ಯೋತಿ ಗಣೇಶ್‌ ಬಿಜೆಪಿ ಅಭ್ಯರ್ಥಿ ಎಂದು ಪರಿವರ್ತನಾ ಯಾತ್ರೆ ವೇಳೆ ಯಡಿಯೂರಪ್ಪ ಘೋಷಿಸಿ ಹೋಗಿದ್ದಾರೆ.

ಕೆ.ಎಸ್‌.ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಎಸ್‌.ಶಿವಣ್ಣ ಸಹ ಟಿಕೆಟ್‌ ಆಕಾಂಕ್ಷಿ. ಸಂಘ ‍ಪರಿವಾರದ ಹಿನ್ನೆಲೆ, ರಾಷ್ಟ್ರೀಯ ನಾಯಕರೊಂದಿಗೆ ಹೊಂದಿರುವ ಸಂಬಂಧದ ಆಧಾರದಲ್ಲಿ ಟಿಕೆಟ್‌ ‍ಪಡೆಯುವ ಯತ್ನ ನಡೆಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್‌ ಸಿಗಬಹುದು ಎಂಬ ಕುತೂಹಲ ಕಾರ್ಯಕರ್ತರಲ್ಲಿದೆ. ಕಾರ್ಯಕರ್ತರಲ್ಲಿ ಒಳಬೇಗುದಿ ಮನೆ ಮಾಡಿದೆ. 

’ಕಳಪೆ ಕಾಮಗಾರಿ, ಭ್ರಷ್ಟಾಚಾರ, ಮುಸ್ಲಿಮರ ಓಲೈಕೆ, ಬಾಂಗ್ಲಾ ವಲಸಿಗರು ಅಕ್ರಮವಾಗಿ ನಗರದಲ್ಲಿ ವಾಸಿಸುತ್ತಿದ್ದಾರೆ,  ಮತದಾರರ ಪಟ್ಟಿಗೆ ನಕಲಿ ಹೆಸರು ಸೇರ್ಪಡೆ, ನಿರೀಕ್ಷೆಯಷ್ಟು ನಗರ ಅಭಿವೃದ್ಧಿ ಆಗಿಲ್ಲ’ ವಿಷಯಗಳನ್ನು ಬಿಜೆಪಿ ಚುನಾವಣಾ ವಿಷಯವಾಗಿಸಿದೆ.

‘ಶಾಸಕರು ಮುಸ್ಲಿಮರನ್ನು  ಹೆಚ್ಚು ಓಲೈಸುತ್ತಾರೆ. ಅವರಿಗೆ ಮತ ಕಡಿಮೆ ಬಿದ್ದಿದ್ದ ವಾರ್ಡ್‌, ಬೂತ್ ಗಳಿಗೆ ಭೇಟಿ ನೀಡಿಲ್ಲ. ಈ ಮೊದಲು ಯಾರೇ ಮೊಬೈಲ್‌ಗೆ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿದ್ದರು. ವಾಪಸ್‌ ಕರೆ ಮಾಡುತ್ತಿದ್ದರು. ಈಗ ಮೊದಲಿನಂತೆ ಇಲ್ಲ’ ಎಂದು ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು, ಮುಖಂಡರು ಹೇಳುತ್ತಾರೆ.

‘ಗಾಜಿನ ಮನೆ, ರೈಲ್ವೆ ಕೆಳ ಸೇತುವೆ, ರಸ್ತೆಗಳ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ದಿಬ್ಬೂರಿನಲ್ಲಿ 1200 ಆಶ್ರಯ ಮನೆಗಳ ನಿರ್ಮಾಣ’ ಮುಂತಾದ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರು ಮುಂದು ಮಾಡಿ ಚುನಾವಣಾ ಪ್ರಚಾರದಲ್ಲಿದ್ದಾರೆ. ವಕ್ಛ್‌ ಮಂಡಳಿ ಅಧ್ಯಕ್ಷ ಇಕ್ಬಾಲ್‌ ಅಹ್ಮದ್‌ ಸಹ ಟಿಕೆಟ್‌ ಆಕಾಂಕ್ಷಿ. ಇದು  ಕಾಂಗ್ರೆಸ್‌ನ ಒಳ ಬೇಗುದಿಗೆ ಕಾರಣವಾಗಿದೆ.

ಜೆಡಿಎಸ್‌ನಲ್ಲಿ  ಕಳೆದ ಸಲ ಸೋತಿದ್ದ ಗೋವಿಂದರಾಜು ಅವರನ್ನೇ ಅಭ್ಯರ್ಥಿಯಾಗಿ ಘೋಷಿಸಲಾಗಿದೆ ನರಸೇಗೌಡ, ಬೆಳ್ಳಿ ಲೋಕೇಶ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು.  ಗೋವಿಂದರಾಜು ’ಹಂಚಿಕೆ ’ ಮೂಲಕ ಮತದಾರರನ್ನು ಸೆಳೆಯುತ್ತಿದ್ದಾರೆ. ಯಾವುದೇ ವಿಚಾರವನ್ನು ಚುನಾವಣಾ ವಿಷಯವಾಗಿ ಮಾಡಿಲ್ಲ. ಆ ಪಕ್ಷ ಒಂದು ಗುಂಪಾಗಿ ಚುನಾವಣಾ ಪ್ರಚಾರ ನಡೆಸುತ್ತಿಲ್ಲ. ಅಸಮಾಧಾನ, ಮುಖಂಡರ ನಡುವೆ ಒಳಬೇಗುದಿ ಕಾಣುತ್ತಿದೆ.

ಕೆಟ್ಟ ಪರಿಸರದ ನಗರ

ಕಳೆದ ಚುನಾವಣೆಯಲ್ಲಿ ಅಭಿವೃದ್ಧಿಯೇ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಆದರೆ ಜನರು ನಿರೀಕ್ಷಿಸಿದಷ್ಟು ನಗರದ ಅಭಿವೃದ್ಧಿ ಸಾಧ್ಯವಾಗಿಲ್ಲ. ಪರಿಸರ ಪರಿಸ್ಥಿತಿ ಅಪಾಯದ ಮಟ್ಟದಲ್ಲಿದೆ ಎಂದು ಈಚೆಗೆ ಗ್ರೀನ್‌ ಪೀಸ್‌ ಸಂಸ್ಥೆ ವರದಿ ಬಹಿರಂಗಪಡಿಸಿದೆ. ಇದೇನೆ ಅಭಿವೃದ್ಧಿ ಎಂದು ಜನರು ಕೇಳುತ್ತಿದ್ದಾರೆ.

ಮಹಾನಗರ ಪಾಲಿಕೆ ಆವರಣದಲ್ಲಿ ಕೋರ್ಟ್‌ ಆದೇಶದ ನಡುವೆಯೂ ರಾತ್ರೋರಾತ್ರಿ ಮರಗಳನ್ನು ಕಡಿದು ಉರುಳಿಸಿದ್ದು ಸಹ  ಪರಿಸರವಾದಿಗಳನ್ನು ಕೆರಳಿಸಿದೆ.

ನಗರದಲ್ಲಿ ನಿರ್ಮಾಣ ಮಾಡಿರುವ ರಸ್ತೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪ ಸಾರ್ವತ್ರಿಕವಾಗಿದೆ.  ಸ್ಮಾರ್ಟ್‌ ಸಿಟಿ ಯೋಜನೆಯೂ  ಪ್ರಗತಿ ಕಂಡಿಲ್ಲ. ಕಳೆದ ವರ್ಷ ಡೆಂಗಿ ಜ್ವರದಿಂದ ಇಡೀ ನಗರ ನಲುಗಿತು. 

’ಮಹಾನಗರ ಪಾಲಿಕೆಯಲ್ಲಿ  ಕಾಂಗ್ರೆಸ್‌ ಜೆಡಿಎಸ್‌, ಬಿಜೆಪಿ ಜಂಟಿಯಾಗಿ ಅಧಿಕಾರ ನಡೆಸುತ್ತಿವೆ. ಇದು ಸಹ ನಗರ ಅಭಿವೃದ್ಧಿ ದಾರಿ ತಪ್ಪಲು ಕಾರಣ. ಮೂರು ಪಕ್ಷಗಳು ಅಧಿಕಾರದ ಆಸೆಗಾಗಿ ಜನ ಸಾಮಾನ್ಯರ ಹಿತ ಬಲಿಕೊಟ್ಟಿವೆ. ಮೂರು ಪಕ್ಷಗಳನ್ನು ಜನರು ತಿರಸ್ಕರಿಸಬೇಕು’  ಎನ್ನುತ್ತಾರೆ ಡಿವೈಎಫ್‌ಐ ಎಸ್‌.ರಾಘವೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry