7

ಪ್ರಚಾರದ ಕೊರತೆಯಲ್ಲಿ ಪ್ರವಾಸಿ ತಾಣಗಳು

Published:
Updated:
ಪ್ರಚಾರದ ಕೊರತೆಯಲ್ಲಿ ಪ್ರವಾಸಿ ತಾಣಗಳು

ಕಾರವಾರ: ‘ನಮ್ಮ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಅವುಗಳಿಗೆ ಸೂಕ್ತ ಪ್ರಚಾರ ಸಿಕ್ಕಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು  ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತದ ಜಂಟಿಯಾಗಿ ನಿರ್ಮಿಸಿದ ಕಲ್ಲಿನ

ಶಿಲ್ಪಗಳ ‘ರಾಕ್ ಗಾರ್ಡನ್‌’ ಅನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ  ಪ್ರವಾಸೋದ್ಯಮ ಯಾವ ಮಟ್ಟದಲ್ಲಿ ಬೆಳೆಯಬಹುದಿತ್ತೋ ಅಷ್ಟು ಅಭಿವೃದ್ಧಿ ಕಂಡಿಲ್ಲ. ಇಲ್ಲಿ ಇರುವಷ್ಟು ‍ಉದ್ಯೋಗಾವಕಾಶಗಳು ಮತ್ಯಾವ ಕ್ಷೇತ್ರದಲ್ಲೂ ಇಲ್ಲ. ಇನ್ನಷ್ಟು ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕರಾವಳಿ ವಲಯ ನಿಯಂತ್ರಣ ಕಾಯ್ದೆಯ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ಸುತ್ತಲೂ ಬೆಟ್ಟ, ನದಿಗಳು ಮತ್ತು ಸಮುದ್ರದಿಂದ ಆವೃತವಾಗಿರುವ ಕಾರವಾರ ‘ಕರ್ನಾಟಕದ ಕಾಶ್ಮೀರ’ ಎಂದೇ ಪ್ರಸಿದ್ಧವಾಗಿದೆ. ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನಾಲ್ಕು ವರ್ಷಗಳಿಂದ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ. ಇಂದು ಪ್ರವಾಸಿಗರನ್ನು ಆಕರ್ಷಿಸುವ ರಾಜ್ಯಗಳ ಪೈಕಿ ನಮ್ಮ ರಾಜ್ಯ ಮೊದಲ ಸಾಲಿನಲ್ಲಿದೆ’ ಎಂದು ಅವರು ಬಣ್ಣಿಸಿದರು.

‘ಮೀನುಗಾರರು ಮೀನು ಹಿಡಿದಾಗ ಕುಟುಂಬದಲ್ಲಿ ಉಂಟಾಗುವ ಸಂಭ್ರಮದ ವಾತಾವರಣ, ಬುಡಕಟ್ಟು ಜನಾಂಗಗಳಾದ ಕುಣಬಿ, ಗೊಂಡಾ, ಹಾಲಕ್ಕಿ ಒಕ್ಕಲಿಗರ ಜೀವನ ಶೈಲಿಯನ್ನು ರಾಕ್‌ ಗಾರ್ಡನ್‌ನಲ್ಲಿ ಸುಂದರವಾಗಿ ಬಿಂಬಿಸಲಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.

ಶಾಸಕ ಸತೀಶ್ ಸೈಲ್ ಮಾತನಾಡಿ, ‘ಪ್ರವಾಸೋದ್ಯಮ ಅಭಿವೃದ್ಧಿಗೆ ಇಂತಹ ಕಾರ್ಯಗಳು ಅಗತ್ಯ. ಉದ್ಯಾನದ ಅಗತ್ಯ ನಿರ್ವಹಣೆಯ ಬಗ್ಗೆಯೂ ಜಿಲ್ಲಾಡಳಿತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ‘ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು 10 ಕ್ಲಸ್ಟರ್‌ಗಳಲ್ಲಿ ಬಿಂಬಿಸುವ ಮಾದರಿಯ ಪ್ರತಿಮೆ ಮತ್ತು ಗುಡಿಸಲುಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಪ್ರವಾಸಿಗರು ನಮ್ಮ ನಗರದಲ್ಲಿ ಒಂದು ದಿನ ಉಳಿದುಕೊಂಡು ವಿಶ್ರಾಂತಿ ಪಡೆಯುವಷ್ಟು ತಾಣಗಳ ನಿರ್ಮಾಣವಾಗಬೇಕು. ಇದು ನಮ್ಮ ಗುರಿಯಾಗಿದೆ’ ಎಂದು ತಿಳಿಸಿದರು.

ಉದ್ಯಾನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಹಾಗೂ ಕಲಾವಿದರಾದ ಮೋಹನ್ ಸೋನಾ ಹಾಗೂ ಸುದೇಶ್ ಅವರನ್ನು ಸಚಿವರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಕುಣಬಿ ಜನಾಂಗದ ಫಲಾನುಭವಿಗಳಿಗೆ ಕುಮ್ರಿ ಭೂಮಿಯ ಹಕ್ಕುಪತ್ರ ಹಸ್ತಾಂತರಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ ಇದ್ದರು.

‘ಶೇ 50ರಷ್ಟು ವೆಚ್ಚ ಭರಿಸಲು ಸಿದ್ಧ’

‘ಕಾರವಾರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಯುದ್ಧ ವಿಮಾನ ವಸ್ತು ಸಂಗ್ರಹಾಲಯದ ವಿಮಾನದ ಸಾಗಣೆಯ ಶೇ 50ರಷ್ಟು ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಸೂಕ್ತ ಸ್ಥಳ ಹುಡುಕುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ’ ಎಂದು ಸಚಿವ ಆರ್‌.ವಿ. ದೇಶಪಾಂಡೆ ಸುದ್ದಿಗಾರರಿಗೆ ತಿಳಿಸಿದರು.

ಫೆ.24ರಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಗರಕ್ಕೆ ಬಂದಿದ್ದಾಗ TU 142M ಮಾದರಿಯ ವಿಮಾನವನ್ನು ನೀಡಲು ರಕ್ಷಣಾ ಇಲಾಖೆ ತಯಾರಿದೆ. ಅದರ ಸಾಗಣೆಯ ಅರ್ಧದಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ಹೇಳಿದ್ದರು. ಈ ಮಾದರಿಯ ವಿಮಾನವು ತಮಿಳುನಾಡಿನ ಅರಕ್ಕೋಣಮ್ ನೌಕಾನೆಲೆಯಲ್ಲಿ ಇದೆ.

* * 

6 ಎಕರೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ <br/>₹ 1 ಕೋಟಿ ಮತ್ತು ಸಿಎಸ್‌ಆರ್‌ ಅಡಿ <br/>₹ 1.65 ಕೋಟಿ ಅನುದಾನ ಸಿಕ್ಕಿದೆ ಎಸ್.ಎಸ್. ನಕುಲ್ ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry