ಕಡಿಮೆ ನೀರಿನಲ್ಲೂ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪು

7

ಕಡಿಮೆ ನೀರಿನಲ್ಲೂ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪು

Published:
Updated:
ಕಡಿಮೆ ನೀರಿನಲ್ಲೂ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪು

ವಿಜಯಪುರ: ಅಂತರ್ಜಲ ಕುಸಿಯುತ್ತಿರುವ ಮತ್ತು ಮಳೆ ನೀರಿನ ಕೊರತೆಯ ಹಿನ್ನೆಲೆಯಲ್ಲಿ ರೇಷ್ಮೆಯನ್ನೇ ನಂಬಿದ ಬಹುತೇಕ ರೈತರಿಗೆ ಗುಣಿ ಕಡ್ಡಿ (ಸಾಲು ಕಡ್ಡಿ) ಪದ್ಧತಿಯು ವರದಾನವಾಗಿದ್ದು, ಭಟ್ರೇನಹಳ್ಳಿ ಗ್ರಾಮದ ಸಮೀಪ ರೈತರು ಈ ಪದ್ಧತಿಯ ಮೂಲಕ ಕಡಿಮೆ ನೀರಿನಲ್ಲೂ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾ ಮಾದರಿಯಾಗಿದ್ದಾರೆ.

ಕುಸಿದ ಅಂತರ್ಜಲ ಮಟ್ಟ, ವಿದ್ಯುತ್ ಕೈಕೊಡುವುದು, ಕೂಲಿ ಕಾರ್ಮಿಕರ ಸಮಸ್ಯೆಗಳು ಕಳೆದ ಐದಾರು ವರ್ಷಗಳಿಂದ ಜಿಲ್ಲೆಯ ರೈತರನ್ನು ಬೆಂಬಿಡದೆ ಕಾಡುತ್ತಿವೆ. ಇಂತಹ ಸಮಸ್ಯೆಗಳ ವಿರುದ್ಧ ಸದಾ ಸೆಣಸಾಡುವ ಬುದ್ಧಿವಂತ ರೈತರು ನೆಲಮೂಲದ ದೇಸಿ ಜ್ಞಾನವನ್ನು ಬಳಸಿ ಅಲ್ಲಲ್ಲಿ ತಕ್ಕ ಮಟ್ಟಿನ ಯಶಸ್ಸನ್ನು ಕಂಡುಕೊಳ್ಳುತ್ತಿದ್ದಾರೆ ಎಂದು ರೈತ ಮುಖಂಡ ನಾರಾಯಣಸ್ವಾಮಿ ಹೇಳುತ್ತಾರೆ.

10 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಪಾತದಲ್ಲಿ ಒಂದು ಎಕರೆಗೆ 436 ಹಿಪ್ಪುನೇರಳೆ ಸಸಿಗಳನ್ನು ಈ ಪದ್ಧತಿಯಲ್ಲಿ ನಾಟಿ ಮಾಡಬಹುದಾಗಿದೆ. ಮೂರರಿಂದ ನಾಲ್ಕು ಅಡಿ ಆಳವಾಗಿ ಗುಣಿ ತೆಗೆದು ಹಿಪ್ಪುನೇರಳೆ ನಾರನ್ನು ನಾಟಿ ಮಾಡಿ ಅದು ಬೆಳೆದಂತೆಲ್ಲಾ ಕೊಟ್ಟಿಗೆ ಗೊಬ್ಬರ, ಮಣ್ಣು, ಹಸಿರೆಲೆ ಸೊಪ್ಪು ಮೊದಲಾದವುಗಳನ್ನು ತುಂಬಿಸುತ್ತಾ ಕವಲುಗಳನ್ನು ಕತ್ತರಿಸುತ್ತಾ ಮರದಂತೆ ಎತ್ತರಗೊಳಿಸಬೇಕು.

ಮೊದಲ ವರ್ಷ ಬೆಳೆ ಸಿಗುವುದಿಲ್ಲ. ನಂತರ ಸೊಪ್ಪು ಸಿಗಲು ಪ್ರಾರಂಭವಾಗುತ್ತದೆ. ತಾಳ್ಮೆಯಿದ್ದವರಿಗೆ ಅಧಿಕ ಫಲ ಎಂಬಂತಹುದು ಈ ವಿಧಾನ ಎನ್ನುವುದು ರೈತ ಮುಖಂಡರ ಅಭಿಪ್ರಾಯ.

ಈ ಪದ್ಧತಿಯಲ್ಲಿ ಕೂಲಿ ಆಳಿನ ಉಳಿತಾಯವಾಗುತ್ತದೆ. ಬೇರು ಆಳದಲ್ಲಿರುವುದರಿಂದ ಕಡಿಮೆ ನೀರಿದ್ದರೂ ಸಾಕು, ಸೊಪ್ಪು ಕೊಯ್ಯುವ ಖರ್ಚು ಕಡಿಮೆ, ದಿನಕ್ಕೆರಡು ಬಾರಿ ಸೊಪ್ಪನ್ನು ರೇಷ್ಮೆ ಹುಳುವಿಗೆ ನೀಡಿದರೂ ಸಾಕು ಎಂದರು.

ಸಾಲುಕಡ್ಡಿ ಪದ್ಧತಿಯಲ್ಲಿ ಬುಡ ಭಾಗದ ಹಣ್ಣೆಲೆ, ಮಣ್ಣೆಲೆ, ಚಿಕ್ಕ ಚಿಕ್ಕ ರೆಂಬೆ ಸೇರಿ ಪ್ರತಿಶತ 20 ರಿಂದ 30 ರಷ್ಟು ಪೋಲಾಗಲಿದೆ. ಮರ ಪದ್ಧತಿಯಲ್ಲಿ ಸೊಪ್ಪಿನ ಇಳುವರಿ ಹೆಚ್ಚಾಗಲಿದೆ. ಜತೆಗೆ ಕಳೆ ಸಮಸ್ಯೆ ಇರುವುದಿಲ್ಲ ಎಂದರು.

ಹಿಪ್ಪು ನೇರಳೆ ಮರಗಳ ಮಧ್ಯೆ ಅಂತರ ಬೆಳೆಯಾಗಿ ಜೋಳ, ರಾಗಿ, ಸಾಮೆ, ನವಣೆ, ದ್ವಿದಳ ಧಾನ್ಯಗಳಾದ ತೊಗರಿ, ಕಡಲೆ, ಅಲಸಂದೆ, ಅವರೆ, ನೆಲಗಡಲೆ, ಉದ್ದು ಬೆಳೆ ಬೆಳೆಯಬಹುದಾಗಿದೆ. ಜತೆಗೆ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆಗೆ ವಿಪುಲ ಅವಕಾಶಗಳಿವೆ ಎಂದರು. ಕಡಿಮೆ ನೀರು, ಕಡಿಮೆ ಶ್ರಮ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ರೇಷ್ಮೆಗೂಡು ಉತ್ಪಾದನೆಯೂ ಸಾಧ್ಯವಿದೆ ಎಂದರು.

ಉತ್ತಮ ಲಾಭ

ಸಾವಯವ ಕೃಷಿ ತಜ್ಞ ಹುಲುನಾಚೇಗೌಡ ಹೇಳುವಂತೆ, ಹಿಪ್ಪು ನೇರಳೆಯನ್ನು ಸಾವಯವ ಕೃಷಿ ಮೂಲಕ ಮರಗಳಾಗಿ ಬೆಳೆಸಿ ನಿರ್ವಹಣೆ ಮಾಡುವುದು ಸುಲಭ. ಉತ್ತಮ ಲಾಭ ಕೂಡ ದೊರೆಯಲಿದೆ ಎಂದರು.

ಆರಂಭದ ಮೂರು ವರ್ಷ ಗಿಡಗಳನ್ನು ನಿರ್ವಹಿಸಿದರೆ ಮುಂದಿನ 30 ವರ್ಷಗಳ ಕಾಲ ನಿರಂತರವಾಗಿ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಸಿಗಲಿದೆ ಎನ್ನುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry