ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿರಕ್ತ ಮಠ ಪರಂಪರೆಗೆ ಸಂದ ಗೌರವ’

Last Updated 27 ಫೆಬ್ರುವರಿ 2018, 9:40 IST
ಅಕ್ಷರ ಗಾತ್ರ

ಬಳ್ಳಾರಿ: ಬಾಳೆಹೊನ್ನೂರಿನ ರಂಭಾಪುರಿ ಮಹಾಪೀಠದಲ್ಲಿ ಫೆ.28ರಂದು ನಡೆಯಲಿರುವ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ಇಲ್ಲಿನ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ. ಪಂಚಪೀಠಗಳ ಪರಂಪರೆಯಲ್ಲಿ ಒಂದಾದ ರಂಭಾಪುರಿ ಪೀಠವು ಮೊದಲ ಬಾರಿಗೆ ವಿರಕ್ತಮಠ ಪರಂಪರೆಗೆ ಸೇರಿದ ಸ್ವಾಮೀಜಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷ.

‘ಈ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಎರಡೂ ಪರಂಪರೆಯ ನಡುವೆ ಸಾಮರಸ್ಯಕ್ಕೆ ನಾಂದಿ ಹಾಡಿದಂತಾಗಿದೆ. ಸಾಮರಸ್ಯವನ್ನು ಗಟ್ಟಿಗೊಳಿಸಲು ಸಾರಥ್ಯವನ್ನು ವಹಿಸುವ ಜವಾಬ್ದಾರಿಯನ್ನೂ ಪ್ರಶಸ್ತಿ ಮೂಲಕ ನೀಡಿದಂತಾಗಿದೆ’ ಎಂಬುದು ಸಂಗನಬಸವ ಸ್ವಾಮೀಜಿ ಖಚಿತ ಅಭಿಪ್ರಾಯ.

ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸಂಗನಬಸವ ಸ್ವಾಮೀಜಿ, ‘ಪ್ರಶಸ್ತಿಗೆ ಆಯ್ಕೆ ಮಾಡಬಹುದು ಎಂದು ಕನಸು–ಮನಸಿನಲ್ಲೂ ಇರಲಿಲ್ಲ. ಪ್ರಶಸ್ತಿ ಮೂಲಕ ಜವಾಬ್ದಾರಿ ಹೆಚ್ಚಿದೆ’ ಎಂದರು.

‘ಎರಡೂ ಪರಂಪರೆಗಳ ನಡುವೆ ಸಾಮರಸ್ಯ ಸಾಧಿಸಲು ಬಹಳ ಹಿಂದೆಯೇ ಹಾನಗಲ್‌ ಕುಮಾರಸ್ವಾಮಿ ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಈಗ ಆ ಸಾಧ್ಯತೆಯ ಬಾಗಿಲು ತೆರೆದಂತಾಗಿದೆ’ ಎಂದರು.

‘ಮಠಾಧಿಪತಿಗಳಲ್ಲಿ ಒಗ್ಗಟ್ಟು ಏರ್ಪಡಬೇಕಾಗಿದೆ. ಅದಕ್ಕಾಗಿ ಪಂಚಪೀಠ ಮತ್ತು ವಿರಕ್ತಮಠದ ಎಲ್ಲ ಜಗದ್ಗುರುಗಳು ಸೇರಿ ರಾಜ್ಯದಲ್ಲೆಡೆ, ಅದರಲ್ಲೂ ವೀರಶೈವ ಲಿಂಗಾಯತರು ಹೆಚ್ಚಿರುವ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಹಮ್ಮಿಕೊಳ್ಳಬೇಕು. ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಸಿದ್ಧತೆ ಆರಂಭವಾಗಲಿದೆ’ ಎಂದು ತಿಳಿಸಿದರು.

‘ಪಂಚಪೀಠಾಧಿಪತಿಗಳ ಗುರುಗಳು ವಿರಕ್ತ ಪರಂಪರೆಗೆ ಸೇರಿದವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈಗ ಅವರದ್ದೇ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಯಾರೂ ಹಿಂಜರಿಯಲು ಸಾಧ್ಯವಿಲ್ಲ’ ಎಂದು ಹೇಳಿದರು.

ಸಂತಸ: ‘ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಮಠದ ಭಕ್ತರಲ್ಲಿ ಸಂತಸ ಮನೆ ಮಾಡಿದೆ. ವೀರಶೈವ–ಲಿಂಗಾಯತ ಬೇರೆ–ಬೇರೆ ಎಂದು ಪ್ರತಿಪಾದಿಸುವವರಿಗೆ ಮಾತ್ರ ಸಂತಸವಾಗಿರಲಿಕ್ಕಿಲ್ಲ. ಬೇರೆ ಎನ್ನುವವರ ವಾದ ಗೆಲ್ಲುವುದಿಲ್ಲ. ಏಕೆಂದರೆ ಯಾವುದೇ ಧರ್ಮವನ್ನು ಸ್ವತಂತ್ರ ಎಂದು ನಿರ್ಣಯಿಸುವ ಹಕ್ಕನ್ನು ಸಂವಿಧಾನದಲ್ಲಿ ಯಾರಿಗೂ ನೀಡಿಲ್ಲ’ ಎಂದು ಸ್ವಾಮೀಜಿ ಪ್ರತಿಪಾದಿಸಿದರು.

ಮೊದಲು ‘ಪ್ರಜಾವಾಣಿ’ ಓದು

ಬಳ್ಳಾರಿ: ‘ದಿನವೂ ಹಲವು ಪತ್ರಿಕೆಗಳನ್ನು ಓದಿದರೂ, ಮೊದಲಿಗೆ ಓದುವುದು ‘ಪ್ರಜಾವಾಣಿ’ಯನ್ನೇ. ಅದರಲ್ಲೂ ಸಂಪಾದಕೀಯ ಮೊದಲ ಓದು. ನಂತರ ಉಳಿದಿದ್ದು. ಇತರೆ ಪತ್ರಿಕೆಗಳಲ್ಲೂ ಸಂಪಾದಕೀಯವನ್ನೇ ಮೊದಲು ಓದುತ್ತೇನೆ’ ಎಂದು ಸ್ವಾಮೀಜಿ ಹೇಳಿದರು.

80ರಲ್ಲೂ ಉತ್ಸಾಹದ ಬುಗ್ಗೆ...

80ರ ವಯಸ್ಸಿನಲ್ಲೂ ಅವರು ಕೊಟ್ಟೂರುಸ್ವಾಮಿ ಮಠದ 25 ಶಾಖಾಮಠಗಳ ಜೊತೆಗೆ, ಗದಗ ಜಿಲ್ಲೆಯ ಹಾಲಕೆರೆ ಅನ್ನದಾನೇಶ್ವರ ಮಠದ ಪೀಠಾಧಿಪತಿಯಾಗಿ ಅಲ್ಲಿನ 35 ಶಾಖಾ ಮಠಗಳು, ಧಾರ್ಮಿಕ ಕಾರ್ಯಕ್ರಮಗಳು, ಅವುಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳನ್ನು ಸಂಘಟಿಸುತ್ತಾರೆ.

ಬಾದಾಮಿ ತಾಲ್ಲೂಕಿನಲ್ಲಿರುವ ಶ್ರೀಮದ್ವೀರಶೈವ ಶಿವಯೋಗ ಮಂದಿರದ ಅಧ್ಯಕ್ಷರೂ ಆಗಿರುವ ಅವರು ಅಲ್ಲಿಗೂ ಪ್ರತಿ ಅಮಾವಾಸ್ಯೆಯಂದು ಕಡ್ಡಾಯವಾಗಿ ಭೇಟಿ ನೀಡುತ್ತಾರೆ.

ನಾಲ್ಕು ವರ್ಷದ ಹಿಂದೆ ಅವರ ಹೃದಯಕ್ಕೆ ಸ್ಟೆಂಟ್‌ ಅಳವಡಿಸಲಾಗಿದೆ. ಆದರೂ ಅದಮ್ಯ ಉತ್ಸಾಹಿಯಾಗಿರುವ ಅವರ ಸಮುದಾಯದ ಸೇವೆಯ ಕಾರಣಕ್ಕೆ ಅವರಿಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿಯನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT