ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಪ್ರಯಾಣಿಸುವವರಿಗೆ ಸಾರಿಗೆ ಸೇವೆ

Last Updated 27 ಫೆಬ್ರುವರಿ 2018, 9:42 IST
ಅಕ್ಷರ ಗಾತ್ರ

ಬೀದರ್‌: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಮೇಲ್ದರ್ಜೆಯ ಸೇವೆ ಒದಗಿಸುವ ಜತೆಗೆ ರಾತ್ರಿ 9 ಗಂಟೆಯ ನಂತರವೂ ದೂರದ ನಗರಗಳಿಗೆ ಸಾರಿಗೆ ಸೇವೆ ಒದಗಿಸಲು ಮುಂದಾಗಿದೆ.

ಬೀದರ್ ವಿಭಾಗದಲ್ಲಿ ಒಟ್ಟು 550 ಬಸ್‌ಗಳಿವೆ. ಇವುಗಳಲ್ಲಿ 174 ಹೊಸ ಬಸ್‌ಗಳು ಇವೆ. ನಾಲ್ಕು ನಾನ್‌ ಏಸಿ ಸ್ಲೀಪರ್, 14 ರಾಜಹಂಸ ಮಾದರಿಯ ಬಸ್‌ಗಳು ಜಿಲ್ಲೆಯ ವಿವಿಧ ಘಟಕಗಳಿಗೆ ಬಂದಿವೆ. ರಾತ್ರಿ ವೇಳೆ ದೂರದ ನಗರಗಳಿಗೆ ಬಸ್‌ ಸಂಚಾರ ಆರಂಭಿಸಬೇಕು ಎನ್ನುವ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ಅಧಿಕಾರಿಗಳು ಮೊದಲ ಹಂತವಾಗಿ ಬೀದರ್‌ನಿಂದ ಬೆಂಗಳೂರು, ಪಣಜಿ, ಹೈದರಾಬಾದ್, ಮುಗಳಖೋಡ್‌ ಹಾಗೂ ಉದಗಿರ್‌ಗೆ ಬಸ್‌ ಆರಂಭಿಸಿದ್ದಾರೆ.

ಬೀದರ್‌–ಪಣಜಿ ‘ವೇಗದೂತ’ ಬಸ್ ಸಂಜೆ 5 ಗಂಟೆಗೆ ಬೀದರ್‌ನಿಂದ ಹೊರಟು ಕಲಬುರ್ಗಿ, ಜೇವರ್ಗಿ, ವಿಜಯಪುರ, ಜಮಖಂಡಿ, ಲೋಕಾಪುರ, ಯರಗಟ್ಟಿ, ಬೆಳಗಾವಿ, ಖಾನಾಪುರ ಮಾರ್ಗವಾಗಿ ಬೆಳಿಗ್ಗೆ 11.30ಕ್ಕೆ ಪಣಜಿ ತಲುಪಲಿದೆ. ಇದೇ ಬಸ್ ಸಂಜೆ 6.15ಕ್ಕೆ ಪಣಜಿಯಿಂದ ಹೊರಟು ಬೆಳಿಗ್ಗೆ 10 ಗಂಟೆಗೆ ಬೀದರ್‌ ತಲುಪುತ್ತಿದೆ.

ಬೀದರ್‌–ಸುರೇಗೊಂಡನಕೊಪ್ಪ (ದಾವಣಗೆರೆ ಜಿಲ್ಲೆ) ಬೆಳಿಗ್ಗೆ 8 ಗಂಟೆಗೆ ಬೀದರ್‌ನಿಂದ ಹೊರಟು ಕಲಬುರ್ಗಿ, ಜೇವರ್ಗಿ, ಶಹಾಪುರ, ಸುರಪುರ, ಲಿಂಗಸೂರ, ಸಿಂಧನೂರ, ಗಂಗಾವತಿ, ಬುಕಸಾಗರ, ಕಮಲಾಪುರ, ಹೊಸಪೇಟೆ, ಮರಿಯಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಳ್ಳಿ ಮಾರ್ಗವಾಗಿ ರಾತ್ರಿ 1 ಗಂಟೆಗೆ ಸುರೇಗೊಂಡನಕೊಪ್ಪ ತಲುಪಲಿದೆ. ಇದೇ ಬಸ್‌ ಮಧ್ಯಾಹ್ನ 12 ಗಂಟೆಗೆ ಸುರೇಗೊಂಡನಕೊಪ್ಪದಿಂದ ಬಿಟ್ಟು ಬೆಳಗಿನ ಜಾವ 5 ಗಂಟೆಗೆ ಬೀದರ್‌ಗೆ ಬರಲಿದೆ.

ಬೀದರ್‌ನಿಂದ– ಬೆಂಗಳೂರಿಗೆ ಸಂಜೆ 6 ಹಾಗೂ ಸಂಜೆ 6.30ಕ್ಕೆ ಎರಡು ನಾನ್‌ ಏಸಿ ಸ್ಲೀಪರ್‌ ಬಸ್‌ , ಮಧ್ಯಾಹ್ನ 3.30 ಹಾಗೂ ಸಂಜೆ 4.30ಕ್ಕೆ ರಾಜಹಂಸ ಬಸ್‌ಗಳನ್ನು ಆರಂಭಿಸಲಾಗಿದೆ. ಭಾಲ್ಕಿ–ಮುಗಳಖೋಡ ಬಸ್‌ ಬೆಳಿಗ್ಗೆ 7.30ಕ್ಕೆ ಭಾಲ್ಕಿಯಿಂದ ಹೊರಟು ಸಂಜೆ 7 ಗಂಟೆಗೆ ಮುಗಳಖೋಡ ತಲುಪಲಿದೆ. ಬೆಳಿಗ್ಗೆ 7.30ಕ್ಕೆ ಮುಗಳಖೋಡದಿಂದ ಹೊರಟು ಸಂಜೆ 7 ಗಂಟೆಗೆ ಭಾಲ್ಕಿ ತಲುಪಲಿದೆ.

 ಬೆಳಗಾವಿ ಸಾರಿಗೆ ಘಟಕದ ಬಸ್‌ ರಾತ್ರಿ 10 ಗಂಟೆಗೆ ಬೀದರ್‌ನಿಂದ ಹೊರಟು ಕಲಬುರ್ಗಿ, ಜೇವರ್ಗಿ, ವಿಜಯಪುರ, ಜಮಖಂಡಿ, ಮುಧೋಳ, ಯರಗಟ್ಟಿ ಮಾರ್ಗವಾಗಿ ಬೆಳಿಗ್ಗೆ 8.30ಕ್ಕೆ ಬೆಳಗಾವಿ ತಲುಪುತ್ತಿದೆ. ಬೆಳಗಾವಿಯಿಂದ ರಾತ್ರಿ 10 ಗಂಟೆಗೆ ಬಿಟ್ಟು ಇದೇ ಮಾರ್ಗವಾಗಿ ಬೆಳಿಗ್ಗೆ 8.30ಕ್ಕೆ ಬೀದರ್‌ ತಲುಪುತ್ತಿದೆ.

ಗಡಿ ಜಿಲ್ಲೆಯವರಿಗೂ ಆದ್ಯತೆ

ಉದಗಿರ–ಹೈದರಾಬಾದ್‌ ‘ವೇಗದೂತ’ ಬಸ್ ಬೆಳಿಗ್ಗೆ 6 ಗಂಟೆಗೆ ಉದಗಿರ ಬಿಟ್ಟು ಮುರ್ಕಿ, ಔರಾದ್ ಮಾರ್ಗವಾಗಿ ಚಲಿಸಿ ಮಧ್ಯಾಹ್ನ 12.30ಕ್ಕೆ ಹೈದರಾಬಾದ್ ತಲುಪುತ್ತಿದೆ. ಇದೇ ಬಸ್‌ ಮಧ್ಯಾಹ್ನ 12.30ಕ್ಕೆ ಹೈದರಾಬಾದ್‌ನಿಂದ ಹೊರಟು 7ಗಂಟೆಗೆ ಉದಗಿರ ತಲುಪುತ್ತಿದೆ.

ಮಹಾರಾಷ್ಟ್ರದ ಮುಕ್ರಂಬಾದ್–ಔರಾದ್‌– ಹೈದರಾಬಾದ್‌ ನಡುವೆ ಬಸ್ ಓಡಿಸಲಾಗುತ್ತಿದ್ದು, ಬೆಳಿಗ್ಗೆ 5.30ಕ್ಕೆ ಮುಕ್ರಂಬಾದದಿಂದ ಹೊರಟು ಬೆಳಿಗ್ಗೆ 9 ಗಂಟೆಗೆ ಔರಾದ್‌ ಮಾರ್ಗವಾಗಿ ಹೊರಟು 11 ಗಂಟೆಗೆ ಹೈದರಾಬಾದ್‌ ತಲುಪಲಿದೆ. ಇನ್ನೊಂದು ಬಸ್‌ ಮಹಾರಾಷ್ಟ್ರದ ಮಾಳೆಗಾಂವದಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಬೆಳಿಗ್ಗೆ 7 ಗಂಟೆಗೆ ಔರಾದ್‌ಗೆ ಬಂದು ಅಲ್ಲಿಂದ ಮಧ್ಯಾಹ್ನ 12 ಗಂಟೆಗೆ ಹೈದರಾಬಾದ್‌ ತಲುಪುತ್ತಿದೆ. ಈ ಬಸ್‌ ಮಧ್ಯಾಹ್ನ 1 ಗಂಟೆಗೆ ಹೈದರಾಬಾದ್‌ನಿಂದ ಹೊರಡುತ್ತಿದೆ.

ರಾತ್ರಿ 10ರ ವರೆಗೆ ಸೇವೆ

ಬೀದರ್‌: ಪ್ರಯಾಣಿಕರ ಅನುಕೂಲಕ್ಕಾಗಿ ಬೀದರ್‌ ಕೇಂದ್ರ ಬಸ್‌ ನಿಲ್ದಾಣದಲ್ಲಿರುವ ಟಿಕೆಟ್‌ ಕೌಂಟರ್‌ ಅನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ವರೆಗೂ ತೆರೆದಿಡಲಾಗುತ್ತಿದೆ.

ಮೊದಲು ಬೆಳಿಗ್ಗೆ 10 ಗಂಟೆಯ ನಂತರ ಕೌಂಟರ್‌ ತೆರೆಯುತ್ತಿದ್ದ ಕಾರಣ ಖಾಸಗಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲ ಇರಲಿಲ್ಲ. ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಸಮಯವನ್ನು ವಿಸ್ತರಿಸಲಾಗಿದೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಾವಣಗೆರೆ, ಬಳ್ಳಾರಿಗೆ ಶೀಘ್ರ ಹೊಸ ಬಸ್

ಬೀದರ್: ದಾವಣಗೆರೆ ಹಾಗೂ ಬಳ್ಳಾರಿಗೆ ನಾನ್‌ ಎಸಿ ಸ್ಲೀಪರ್ ಕೋಚ್‌ ಬಸ್‌ಗಳನ್ನು ಓಡಿಸುವಂತೆ ಪ್ರಯಾಣಿಕರು ಮನವಿ ಮಾಡಿದ್ದಾರೆ. ಈ ಮಾರ್ಗದಲ್ಲಿ ಶೀಘ್ರದಲ್ಲೇ ನಾನ್‌ ಏಸಿ ಸ್ಲೀಪರ್ ಬಸ್‌ ಸಂಚಾರ ಆರಂಭಿಸಲಾಗುವುದು.

ಬೀದರ್‌– ಹೈದರಾಬಾದ್ ನಡುವೆ ರಾಜಹಂಸ ಬಸ್‌ಗಳನ್ನು ಓಡಿಸಲಾಗುವುದು ಎಂದು ತಿಳಿಸುತ್ತಾರೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಕೋಟ್ರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT