ಮುಳ್ಳಿನ ಪೊದೆಗೆ ಹಾರಿ ಹರಕೆ ತೀರಿಸಿದರು!

7

ಮುಳ್ಳಿನ ಪೊದೆಗೆ ಹಾರಿ ಹರಕೆ ತೀರಿಸಿದರು!

Published:
Updated:

ಯಳಂದೂರು: ಸಮೀಪದ ಗೂಳಿಪುರ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಬಿಸಿಲು ಮಾರಮ್ಮ ಜಾತ್ರೆಯು ಸಂಭ್ರಮ ಸಡಗರದಿಂದ ನೆರವೇರಿತು. ಹರಕೆ ಹೊತ್ತ ಭಕ್ತರು ಮುಳ್ಳಿನ ಪೊದೆಗಳಿಗೆ ಹಾರಿ ಹರಕೆ ತೀರಿಸುವ ಮೂಲಕ ಗಮನ ಸೆಳೆದರು.

ಜಿಲ್ಲೆಯಲ್ಲೇ ವಿಶಿಷ್ಟ ಆಚರಣೆಯೆಂದೇ ಗುರುತಾಗಿರುವ ಜಾತ್ರೋತ್ಸವದಲ್ಲಿ ನಾಯಕ ಸಮುದಾಯ ವಿಶಿಷ್ಟವಾಗಿ ಆಚರಿಸುತ್ತದೆ. ಹರಕೆ ಹೊತ್ತ ಭಕ್ತರು ಮಡೆಪೂಜೆ ನಡೆಸುತ್ತಾರೆ. ಇದಕ್ಕಾಗಿ ಗ್ರಾಮದ ಹೊರಭಾಗದ ಬಿಸಿಲು ಮಾರಮ್ಮ ದೇವಸ್ಥಾನವನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಲಾಗುತ್ತದೆ. ವಿಶೇಷ ಪೂಜೆ ಜರುಗಿದ ನಂತರ ಸಾಲಾಂಕೃತ ಸತ್ತಿಗೆ, ಸೂರಿಪಾನಿಗಳನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಮಧ್ಯಾಹ್ನ 3ಕ್ಕೆ ಮುಳ್ಳಿನ ಪೊದೆಗಳ ಬಳಿ ಬಂದ ಭಕ್ತರು ಮಾರಮ್ಮ, ಊರುಕಾತಮ್ಮ, ಕುಣಗಳ್ಳಿ ಮಾರಮ್ಮ, ಬಿಸಿಲು ಮಾರಮ್ಮ, ಕುಂಟ ಮಾರಮ್ಮ, ನಾಡಮೇಗಲಮ್ಮ,

ಮಂಟೇಸ್ವಾಮಿ ಪ್ರತಿನಿಧಿಗಳು ಮುಳ್ಳಿನ ಪೊದೆಗಳಿಗೆ ಹಾರುತ್ತಾರೆ. ಪೊದೆಗೆ ಬಿದ್ದವರನ್ನು ಎತ್ತಿಕೊಳ್ಳಲು ಇನ್ನಷ್ಟು ಮಂದಿ ಮುಗಿಬೀಳುವ ದೃಶ್ಯವನ್ನು ನೆರೆದಿದ್ದ ಭಕ್ತಾದಿಗಳು ಕಣ್ತುಂಬಿಕೊಂಡರು.

ನಂತರ ದೇವರಿಗೆ ಹೊಂಬಾಳೆಯನ್ನು ಅರ್ಪಿಸುವ ಮೂಲಕ ಪೂಜಾ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು. ಬೆಳಿಗ್ಗೆ ಯಿಂದಲೇ ದೇಗುಲದ ಮುಂಭಾಗ ಮಹಿಳೆಯರು ಬೆಲ್ಲದ ಅನ್ನ ಹಾಗೂ ತಂಬಿಟ್ಟು ತಯಾರಿಸಿ, ತಂಪಿನಾರತಿ ಪೂರೈಸಿದರು. ದೇವರಿಗೆ ನೈವೇದ್ಯ ನೀಡಿದ ನಂತರ ಗ್ರಾಮದಲ್ಲಿ ರಾತ್ರಿ ಮೆರವಣಿಗೆ ಮಾಡಲಾಗುತ್ತದೆ ಎನ್ನುತ್ತಾರೆ ಗ್ರಾಮದ ಬಂಗಾರನಾಯಕ ಮತ್ತು ಪಿ.ಎಂ. ನಾಯಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry