ರಾಜ್ಯದಲ್ಲಿ ರಾಹುಲ್‌, ಶಾ ಹವಾ ನಡೆಯೋಲ್ಲ : ಎಚ್‌.ಡಿ.ಕುಮಾರಸ್ವಾಮಿ

7
ಕಾಂಗ್ರೆಸ್‌, ಬಿಜೆಪಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

ರಾಜ್ಯದಲ್ಲಿ ರಾಹುಲ್‌, ಶಾ ಹವಾ ನಡೆಯೋಲ್ಲ : ಎಚ್‌.ಡಿ.ಕುಮಾರಸ್ವಾಮಿ

Published:
Updated:
ರಾಜ್ಯದಲ್ಲಿ ರಾಹುಲ್‌, ಶಾ ಹವಾ ನಡೆಯೋಲ್ಲ : ಎಚ್‌.ಡಿ.ಕುಮಾರಸ್ವಾಮಿ

ಯಾದಗಿರಿ: ‘ಬಿಜೆಪಿಯ ಅಮಿತ್‌ ಶಾ ಎಷ್ಟೇ ಗುಡಿ ಗುಂಡಾರ ಸುತ್ತಿದರೂ, ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಎಷ್ಟೇ ಡಬ್ಬಾ ಅಂಗಡಿ, ಡಾಬಾಗಳಲ್ಲಿ ಟಿಫಿನ್‌ ತಿಂದು ಟೀ, ಕಾಫಿ ಕುಡಿದರೂ ರಾಜ್ಯದಲ್ಲಿ ಅವರ ಹವಾ ನಡೆಯೋಲ್ಲ’ ಎಂದು ಜೆಡಿಎಸ್ ರಾಜ್ಯ ಘಟಕ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಜಿಲ್ಲೆಯ ಶಹಾಪುರ ತಾಲ್ಲೂಕಿನ ಭೀಮರಾನಗುಡಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಎರಡೂ ರಾಷ್ಟ್ರೀಯ ಪಕ್ಷದ ನಾಯಕರು ರಾಜ್ಯದಲ್ಲಿನ ಮಠ, ಮಂದಿರ, ಮಸೀದಿಗಳಿಗೆ ಭೇಟಿ ಕೊಟ್ಟು ಜನರ ಭಾವನಾತ್ಮಕ ಸಂಬಂಧಗಳೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ. ಇವರ ಸೋಗಲಾಡಿತನ ರಾಜ್ಯದ ಜನರಿಗೆ ಗೊತ್ತಿಲ್ಲ ಅಂದುಕೊಂಡಿದ್ದಾರೆ. ಕನ್ನಡಿಗರು ಅಷ್ಟೊಂದು ಮೂರ್ಖರಲ್ಲ ಎಂಬುದನ್ನು ಈಗಿನ ಚುನಾವಣೆ ನಿರ್ಧರಿಸಲಿದೆ’ ಎಂದು ಕುಟುಕಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನಿ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಮಿತ್ ಶಾ ಹೇಳುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ಗೆ ಮತ್ತೆ ಅಧಿಕಾರ ನೀಡಿ ನಾವು ಬಗೆಹರಿಸುತ್ತೇವೆ ಎಂಬುದಾಗಿ ರಾಹುಲ್‌ ಗಾಂಧಿ ಹೇಳುತ್ತಿದ್ದಾರೆ. ಇವರಿಗೆ ಮಹದಾಯಿ ಒಂದು ಅಂತರರಾಜ್ಯ ಸಮಸ್ಯೆ ಎಂಬುದು ಗೊತ್ತಿಲ್ಲವೇ? ಒಕ್ಕೂಟ ವ್ಯವಸ್ಥೆಯಲ್ಲಿ ಅಂತರರಾಜ್ಯ ಸಮಸ್ಯೆಗಳನ್ನು ಕೇಂದ್ರ ಮಧ್ಯೆ ಪ್ರವೇಶಿಸಿ ಬಗೆಹರಿಸುವುದು ಸಾಂವಿಧಾನಿಕ ನಿಯಮವಿದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತಿರುವ ವಿಷಯ. ಅಮಿತ್‌ ಶಾ ಮತ್ತು ರಾಹುಲ್ ಗಾಂಧಿ ಅವರು ಮಹದಾಯಿ ವಿಚಾರದಲ್ಲಿ ಬಾಲಿಶ ಹೇಳಿಕೆಗಳನ್ನು ನೀಡುತ್ತಿರುವುದು ಮುಜುಗರ ಉಂಟು ಮಾಡಿದೆ’ ಎಂದು ಮೂದಲಿಸಿದರು.

ಒಂದು ಸೀಟು ಕೊಡಿ : ‘ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಒಂದು ಸೀಟು ಬಿಟ್ಟುಕೊಡುವಂತೆ ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸಿದ್ದೇನೆ. ಬಿಟ್ಟು ಕೊಡದಿದ್ದರೆ ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಲಿದೆ. ಕೌರವರಿಗೆ ಐದು ಗ್ರಾಮ ಬಿಟ್ಟುಕೊಡುವಂತೆ ಪಾಂಡವರು ಕೇಳಿದ ನಂತರವೂ ಹಠಹಿಡಿದ ಕೌರವರ ಸ್ಥಿತಿ ಏನಾಯಿತು ಎಂಬುದು ತಿಳಿದೆಯಲ್ಲ. ಅಂತಹ ಸ್ಥಿತಿಯನ್ನು ಕಾಂಗ್ರೆಸ್ ತಂದುಕೊಳ್ಳಲಿದೆ’ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.

‘ಸಾಲಮನ್ನಾ ಮಾಡುವ ಮೂಲಕ ರೈತರ ಆತ್ಮಹತ್ಯೆ ತಡೆಗಟ್ಟುವ ಬದಲು ರೈತರ ಮನೆಯಿಂದ ಮುಷ್ಟಿ ಅಕ್ಕಿ ಸಂಗ್ರಹಿಸಿ ರೈತರೊಂದಿಗೆ ಊಟ ಮಾಡಲು ನಿರ್ಧರಿಸುವ ಬಿಜೆಪಿಯದು ಚುನಾವಣಾ ಗಿಮಿಕ್‌’ ಎಂದು ಟೀಕಿಸಿದ ಅವರು, ‘ರೈತರು ಆತ್ಮಹತ್ಯೆ ಮಾಡಿಕೊಂಡಾಗ ರೈತರ ನೆರವಿಗೆ ಧಾವಿಸದವರು ಈಗ ರೈತ ಕುಟುಂಬಗಳ ಮುಂದೆ ಮೊಸಳೆ ಕಣ್ಣೀರು ಸುರಿಸಲು ಮುಂದಾಗಿದ್ದಾರೆ’ ಎಂದು ಛೇಡಿಸಿದರು.

‘ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ಕಟ್ಟುವ ಉದ್ದೇಶದಿಂದ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಜತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಬಿಎಸ್‌ಪಿಯ 20 ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry