ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವು, ಹಣ್ಣು ದುಬಾರಿ: ತರಕಾರಿ ಧಾರಣೆ ಸ್ಥಿರ

Last Updated 27 ಫೆಬ್ರುವರಿ 2018, 9:56 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಮದುವೆ ಮತ್ತಿತರ ಶುಭ ಸಮಾರಂಭಗಳು ಆರಂಭಗೊಳ್ಳುತ್ತಿದ್ದು, ಕಡಿಮೆ ಬೆಲೆಯಲ್ಲಿ ತರಕಾರಿ, ಹೂವು ಹಣ್ಣುಗಳು ಲಭಿಸುತ್ತಿರುವುದು ಜನರಿಗೆ ನೆಮ್ಮದಿ ನೀಡಿದೆ. ಆದರೆ, ಬೇಸಿಗೆ ಆರಂಭವಾಗುತ್ತಿರುವುದರಿಂದ ಕೆಲವು ತರಕಾರಿಗಳ ಪೂರೈಕೆಯಲ್ಲಿ ಕೊರತೆ ಉದ್ಭವಿಸಬಹುದು. ಅಲ್ಲದೆ, ಸಮಾರಂಭಗಳು ಹೆಚ್ಚಾಗುವುದರಿಂದ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗಬಹುದು ಎಂಬ ಕಳವಳವೂ ಗ್ರಾಹಕರಲ್ಲಿದೆ.

ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದರು. ಕೆಲವು ತರಕಾರಿಗಳು ಪ್ರತಿ ಕೆ.ಜಿಗೆ ₹ 50 ರಿಂದ 60ಕ್ಕೆ ಮಾರಾಟವಾಗುತ್ತಿದ್ದವು. ನಂತರದ ದಿನಗಳಲ್ಲಿ ಬೆಲೆ ಕುಸಿತ ಉಂಟಾಯಿತು.

ಪ್ರಸಕ್ತ ಸಾಲಿನಲ್ಲಿ ಸುರಿದ ಮಳೆ ಸ್ಥಳೀಯವಾಗಿ ಮತ್ತು ನೆರೆಯ ಜಿಲ್ಲೆಗಳಲ್ಲಿ ತರಕಾರಿ ಬೆಳೆಯಲು ರೈತರನ್ನು ಪ್ರೇರೇಪಿಸಿತು. ಈ ಬಾರಿ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಇದರಿಂದ ಮಾರುಕಟ್ಟೆಗೆ ಪೂರೈಕೆ ಹೆಚ್ಚಿದೆ. ಬೆಲೆ ಇಳಿಕೆಗೆ ಇದೇ ಮುಖ್ಯ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಕಳೆದ ವಾರಕ್ಕೆ ಹೋಲಿಸಿದರೆ ಒಂದೆರಡು ತರಕಾರಿಗಳನ್ನು ಹೊರತುಪಡಿಸಿ ಉಳಿದೆಲ್ಲ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಬೀಟ್‌ರೂಟ್‌, ಬಿಳಿಬದನೆಕಾಯಿ, ಸೌತೆಕಾಯಿ, ಆಲೂಗಡ್ಡೆ, ಬೆಂಡೆಕಾಯಿ, ಹಸಿಮೆಣಸಿಕಾಯಿ ಕೆ.ಜಿ ₹ 20ರಂತೆ ಮಾರಾಟ ಮಾಡಲಾಗುತ್ತಿದೆ. ನುಗ್ಗೆಕಾಯಿ ₹ 120, ತೆಂಗಿನಕಾಯಿ ಒಂದಕ್ಕೆ ₹ 40ರಿಂದ 50 ಧಾರಣೆಯಿದೆ.

‘ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ನಗರದೆಲ್ಲೆಡೆ ದೂಳು ಹೆಚ್ಚಾಗುತ್ತಿದೆ. ಇದರಿಂದ ತರಕಾರಿ ಬೆಲೆ ಇಳಿಕೆಯಾಗಿದ್ದರೂ ಬೀದಿ ಬದಿಯಲ್ಲಿ ಹಾಗೂ ತಳ್ಳುವ ಗಾಡಿಯಲ್ಲಿ ಮಾರಾಟಕ್ಕಿಟ್ಟಿರುವ ತರಕಾರಿಯನ್ನು ಕೊಳ್ಳಲು ಗ್ರಾಹಕರು ಹಿಂಜರಿಯುತ್ತಿದ್ದಾರೆ. ಗ್ರಾಮೀಣ ಗ್ರಾಹಕರು ಸಂಖ್ಯೆ ಕ್ಷೀಣಿಸುತ್ತಿದೆ. ಹಾಗಾಗಿ, ರಾತ್ರಿ ವೇಳೆಗೆ ಕೆಲವು ತರಕಾರಿಯನ್ನು ಕೆ.ಜಿಗೆ ₹ 5ರಿಂದ 10ಕ್ಕೆ ಮಾರಾಟ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ನಷ್ಟವಾಗುತ್ತಿದೆ’ ಎಂದು ವ್ಯಾಪಾರಿ ಕುಮಾರ್ ಹೇಳಿದರು.

ಇಳಿಯುತ್ತಿರುವ ಟೊಮೆಟೊ: ಎರಡು ವಾರಗಳಿಂದ ಟೊಮೆಟೊ ಧಾರಣೆ ಏಕಾಏಕಿ ಇಳಿಕೆಯಾಗಿರುವುದರಿಂದ ರೈತರು ಬೆಳೆ ಬೆಳೆಯುವುದಕ್ಕೆ ಹಾಕಿದ ಖರ್ಚು ಕೂಡ ಬಾರದಂತೆ ಆಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಟೊಮೆಟೊ ಕೆ.ಜಿಗೆ ₹ 15ರಿಂದ 20ಕ್ಕೆ ಮಾರಾಟವಾದರೆ, ಎರಡನೇ ದರ್ಜೆಯ ಟೊಮೆಟೊ ₹ 5 ರಿಂದ 10ರಂತೆ ಮಾರಾಟವಾಗುತ್ತಿದೆ. ಇದು ಗ್ರಾಹಕರಿಗೆ ಖುಷಿ ನೀಡಿದರೂ, ರೈತರನ್ನು ಕಂಗೆಡಿಸಿದೆ.

ಹಣ್ಣು, ಹೂವು ಬೆಲೆ ಏರಿಕೆ: ಶುಭ ಸಮಾರಂಭಗಳು ಹಾಗೂ ಹಬ್ಬಗಳು ಆರಂಭವಾಗುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂವಿನ ಧಾರಣೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದೆ. ಇದು ಗ್ರಾಹಕರಲ್ಲಿ ತುಸು ತಳಮಳ ಮೂಡಿಸಿದೆ. ಕಳೆದ ವಾರ ಕೆ.ಜಿಗೆ ₹ 40 ರಿಂದ 50ಕ್ಕೆ ಮಾರಾಟವಾಗುತ್ತಿದ್ದ ಏಲಕ್ಕಿ ಬಾಳೆ ಹಣ್ಣಿ ಬೆಲೆ ಈ ವಾರ ₹ 60 ತಲುಪಿದೆ. ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ಇದೆ.

‘ಚೆಂಡು ಹೂವು ₹ 10, ಮಲ್ಲಿಗೆ ₹ 20ರಿಂದ 30, ಕಾಕಡ ₹ 20ರಿಂದ 30, ಕನಕಾಂಬರ ₹ 30ರಿಂದ 50 ಹಾಗೂ ಹೂವಿನ ಹಾರಕ್ಕೆ ₹ 50ರಿಂದ 300ರವರೆಗೂ ಬೆಲೆ ನಿಗದಿಪಡಿಸಲಾಗಿದೆ. ಗುಲಾಬಿ ಒಂದಕ್ಕೆ ₹ 5ರಿಂದ 10ಕ್ಕೆ ಮಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ’ ಎಂದು ಹೂವಿನ ವ್ಯಾಪಾರಿ ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು.

ತರಕಾರಿ ಬೆಲೆ (ಕೆಜಿಗೆ)

ಬೂದುಗುಂಬಳ ಕಾಯಿ  ₹ 20
ಸಿಹಿಕುಂಬಳ ಕಾಯಿ  ₹ 15
ಬೀನ್ಸ್‌   ₹ 40
ಕ್ಯಾರೆಟ್‌   ₹ 30
ಮೂಲಂಗಿ   ₹ 30
ಹಸಿಶುಂಠಿ   ₹ 50
ತೊಂಡೆ   ₹ 30
ದಪ್ಪಮೆಣಸಿಕಾಯಿ  ₹ 30

ಹಣ್ಣಿನ ಧಾರಣೆ (ಕೆಜಿಗೆ)

ಸೇಬು  ₹100 ರಿಂದ 120
ಕಿತ್ತಳೆ  ₹ 60 ರಿಂದ 80
ಮೊಸಂಬಿ  ₹ 80
ದ್ರಾಕ್ಷಿ  ₹100
ದಾಳಿಂಬೆ  ₹ 80
ಸಪೋಟ  ₹ 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT