ಬೆಳಗದ ಹೈಮಾಸ್ಟ್‌ ದೀಪ; ತಪ್ಪದ ತೊಂದರೆ

7

ಬೆಳಗದ ಹೈಮಾಸ್ಟ್‌ ದೀಪ; ತಪ್ಪದ ತೊಂದರೆ

Published:
Updated:

ಗೌರಿಬಿದನೂರು: ಪಟ್ಟಣದ ಹೃದಯ ಭಾಗವಾದ ವಿ.ವಿ.ಪುರಂನ ಎಚ್.ಎನ್. ಕಲಾಭವನದ ಆವರಣದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ದುರಸ್ತಿಗೆ ಬಂದು ತಿಂಗಳು ಕಳೆದರೂ ಈವರೆಗೆ ನಗರಸಭೆ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದಾಗಿ ಇಲ್ಲಿಯ ಜನರು ಕಗ್ಗತ್ತಲ ನಡುವೆ ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ.

ಪ್ರತಿವಾರ ಎರಡರಿಂದ ಮೂರು ಕಾರ್ಯಕ್ರಮಗಳು ಕಲಾಭವನ ದಲ್ಲಿ ನಡೆಯುತ್ತವೆ. ಅವುಗಳಲ್ಲಿ ಪಾಲ್ಗೊಳ್ಳಲು ಅಥವಾ ವೀಕ್ಷಿಸಲು ಇಲ್ಲಿ ನೂರಾರು ಜನರು ಬರುತ್ತಲೇ ಇರುತ್ತಾರೆ. ಇಂತಹ ಪ್ರಮುಖ ಸ್ಥಳದಲ್ಲಿರುವ ಹೈಮಾಸ್ಟ್ ದೀಪ ದುರಸ್ತಿಗೆ ನಗರಸಭೆ ಮುಂದಾಗದಿರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.

ಒಂದು ವರ್ಷದ ಹಿಂದೆಯಷ್ಟೇ ನಗರಸಭೆಯಿಂದ ₹ 3.5 ಲಕ್ಷ ಖರ್ಚು ಮಾಡಿ ಈ ದೀಪ ಅಳವಡಿಸಲಾಗಿತ್ತು. ಕೇವಲ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಕಾರ್ಯ ನಿರ್ವಹಿಸಿ ಪದೇ ಪದೇ ಕೆಡುತ್ತಿರುವ ದೀಪದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ನೀಡದಿರುವುದು ಅಸಮಾಧಾನ ಮೂಡಿಸಿದೆ.

ಸದ್ಯ ಕಲಾಭವನದ ಬಳಿ ರಾತ್ರಿ ವೇಳೆ ಓಡಾಡಲು ಅಥವಾ ಕಾರ್ಯಕ್ರಮಕ್ಕೆ ಬರಲು ಭಯಪಡುವಂತಾಗಿದೆ. ಈ ಬಗ್ಗೆ ಅನೇಕ ಬಾರಿ ಸ್ಥಳೀಯರು ನಗರಸಭೆ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಬದಲಾಗಿ ಜಾಣ ಕುರುಡತನ ಪ್ರದರ್ಶನವಾಗುತ್ತಿದೆ ಎನ್ನುವುದು ದೂರುದಾರರ ಅಳಲು.

ಗುತ್ತಿಗೆದಾರರು ಕಳಪೆ ಗುಣಮಟ್ಟದ ದೀಪ ಅಳವಡಿಸಿದ ಕಾರಣದಿಂದಲೇ ಕೆಡುತ್ತಿದೆ. ದೀಪವು ಇದ್ದೂ ಇಲ್ಲದಂತಾದ ವಾತಾವರಣ ಇದೆ. ಇನ್ನಾದರೂ ನಗರಸಭೆಯವರು ಎಚ್ಚೆತ್ತು ಕೊಂಡು ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ದೀಪ ಸುಸಜ್ಜಿತ ವಾಗಿಡಲು ಕ್ರಮ ಕೈಗೊಳ್ಳ ಬೇಕು ಎನ್ನುವುದು ಹಿರಿಯರಾದ ವಿಶ್ವನಾಥ್‌, ವೆಂಕಟೇಶರೆಡ್ಡಿ ಅವರ ಒತ್ತಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry