ರಾಜಕೀಯ ಕ್ಷೇತ್ರ ಕಲುಷಿತ: ‘ಮುಖ್ಯಮಂತ್ರಿ’ ಚಂದ್ರು

7

ರಾಜಕೀಯ ಕ್ಷೇತ್ರ ಕಲುಷಿತ: ‘ಮುಖ್ಯಮಂತ್ರಿ’ ಚಂದ್ರು

Published:
Updated:
ರಾಜಕೀಯ ಕ್ಷೇತ್ರ ಕಲುಷಿತ: ‘ಮುಖ್ಯಮಂತ್ರಿ’ ಚಂದ್ರು

ಚಿಕ್ಕಮಗಳೂರು: ‘1980ರಿಂದ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇದ್ದೆ. ವೃತ್ತಿ ರಾಜಕಾರಣಿಯಾಗದಿದ್ದರೂ, ಕ್ಷೇತ್ರದೊಂದಿಗೆ ನಿರಂತರ ಸಂಬಂಧ ಹೊಂದಿದ್ದೇನೆ. ಹಿಂದೆ ರಾಜಕಾರಣದಲ್ಲಿ ವೃತ್ತಿಪರತೆ, ನೈತಿಕ ಮೌಲ್ಯಗಳು ಇದ್ದವು, ಈಗ ಇಲ್ಲ’ ಎಂದು ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಪ್ಪುಗಳನ್ನು ಮಾಡಲು ರಾಜಕಾರಣಿಗಳು ಅಳಕುತ್ತಿದ್ದರು. ಮಾಡಿದ ತಪ್ಪಿಗೆ ಕ್ಷಮೆಯಾಚಿಸುವುದು, ಪಶ್ಚಾತ್ತಾಪಡುವುದು ನಿರಂತರವಾಗಿ ಇತ್ತು. 2000ನೇ ಇಸವಿ ನಂತರ ರಾಜಕಾರಣ ಕಲುಷಿತವಾಗಿದೆ. ಸ್ವಾರ್ಥ, ಕುಟುಂಬ ರಾಜಕಾರಣ, ಆಸ್ತಿ, ಅಂತಸ್ತು, ಹಣ ಇವೇ ಮುಖ್ಯವಾಗಿವೆ. ಅಭಿವೃದ್ಧಿ, ದೇಶದ ಕಡೆ ಗಮನ ಕಡಿಮೆಯಾಗಿದೆ’ ಎಂದು ಹೇಳಿದರು.

‘ಬಿಜೆಪಿ ದೊಡ್ಡ ಶಕ್ತಿಯಾಗಿ ಬೆಳೆದ ನಂತರ, ಕೋಮುಸೌಹಾರ್ದ ಪೂರ್ಣವಾಗಿ ಹದಗೆಟ್ಟಿದೆ. ಬಿಜೆಪಿಯವರ ಶಿಸ್ತು, ಕಾರ್ಯತತ್ಪರತೆ ಖುಷಿ ನೀಡುತ್ತವೆ. ಹಿಂದೂ, ಹಿಂದುತ್ವ, ಕೋಮುವಾದ ಧ್ಯೇಯೋದ್ದೇಶಗಳನ್ನು ಬೇರೆ ರೀತಿ ಅರ್ಥೈಸಬೇಕು. ವಿಭಿನ್ನ ಸಂಸ್ಕೃತಿ, ಜಾತಿ, ಭಾಷೆ, ಸಮುದಾಯದ ಒಕ್ಕೂಟ ವ್ಯವಸ್ಥೆ ನಮ್ಮದು. ಕೆಲವರನ್ನು ದ್ವೇಷ ಮಾಡುವುದು, ಧಿಕ್ಕರಿಸುವುದು ಸರಿಯಲ್ಲ’ ಎಂದರು.

‘ರಾಜಕಾರಣಿಗಳು, ಶ್ರೀಮಂತರು, ಅಧಿಕಾರಿಗಳು, ಉದ್ಯಮಿಗಳು ತಪ್ಪು ಮಾಡಿದರೂ, ಕಾನೂನಿನ ಕುಣಿಕೆಯಿಂದ ನುಣುಚಿಕೊಂಡರೆ ಜನತೆಗೆ ತಪ್ಪು ಸಂದೇಶಗಳು ರವಾನೆಯಾಗುತ್ತವೆ. ಮುಖ್ಯಮಂತ್ರಿ, ಪ್ರಧಾನಿ ತಪ್ಪು ಮಾಡಿದರೆ ಅವರಿಗೂ ಶಿಕ್ಷೆಯಾಗುತ್ತದೆ ಎಂಬ ಗ್ಯಾರಂಟಿ ನಂಬಿಕೆ ಈಗ ಇಲ್ಲ. ಅಪರಾಧ ಮಾಡಿ ಜೈಲಿಗೆ ಹೋಗಿ ಬರುವುದನ್ನು ನೋಡುತ್ತಿದ್ದೇವೆ. ಕಾನೂನು ಎಲ್ಲರಿಗೂ ಒಂದೇ ಎಂಬ ನಂಬಿಕೆ ಮರೆಯಾಗಿದೆ. ಅಪರಾಧ ಮಾಡಿದವರೇ ನೀತಿ ಹೇಳುವ ದುರಂತವನ್ನು ಕಾಣುತ್ತಿದ್ದೇವೆ’ ಎಂದರು.

‘ಬಾಲಿವುಡ್‌ ನಟಿ ಶ್ರೀದೇವಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಬಾಲನಟಿಯಾಗಿ ಪ್ರವೇಶಿಸಿ ದಿಗ್ಗಜರ ಜತೆ ನಟಿಸಿ ಪ್ರಶಸ್ತಿಗಳನ್ನು ಪಡೆದುಕೊಂಡರು. ಬಹಳ ಸಾಧನೆ ಮಾಡಿದ್ದಾರೆ. ಅವರ ದಿಢೀರ್‌ ಸಾವು ಬಹಳ ನೋವುಂಟು ಮಾಡಿದೆ’ ಎಂದರು.

‘ಶ್ರೀದೇವಿ ಅಪರೂಪದ ನಟಿ. ಅವರ ಪಾತ್ರಗಳು ಚಿರಂತನ. 54 ವರ್ಷ ಸಾಯುವ ವಯಸ್ಸು ಅಲ್ಲ’ ಎಂದರು ‘ಮಾಧ್ಯಮ ಕ್ಷೇತ್ರದಲ್ಲಿ ವೇಗವಾಗಿ ಬದಲಾವಣೆಗಳು ಆಗುತ್ತಿವೆ. ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಸಂತಸದ ಸಂಗತಿ, ಆದರೆ, ಸುದ್ದಿ ವಿಚಾರದಲ್ಲಿ ಅಪಾಯಕಾರಿ ಅಂಶಗಳೇ ಹೆಚ್ಚಾಗಿವೆ. ಸುದ್ದಿಗಳು, ವೈಭವೀಕರಣ ದುಷ್ಕೃತ್ಯಗಳಿಗೆ ದಾರಿ ಮಾಡಿಕೊಡುತ್ತಿವೆ ಎನಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry