ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದೌರ್ಜನ್ಯ ತಡೆಗೆ ಬಿಗಿ ಕಾನೂನು ಅಗತ್ಯ

Last Updated 27 ಫೆಬ್ರುವರಿ 2018, 10:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಹೆಣ್ಣಿನ ಮೇಲಿನ ದೌರ್ಜನ್ಯ ತಡೆಗೆ ಮತ್ತಷ್ಟು ಕಠಿಣ ಕಾನೂನುಗಳ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.

ನಗರದ ಎಸ್‌ ಜೆ ಎಂ ಕಾನೂನು ಕಾಲೇಜಿನಲ್ಲಿ ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಎಸ್ ಜೆ ಎಂ ಮಹಿಳಾ ಕಲಾ ಮಹಾವಿದ್ಯಾಲಯ ಮತ್ತು ಕಾನೂನು ಕಾಲೇಜು ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಮಹಿಳಾ ರಕ್ಷಣಾ ಕಾನೂನುಗಳು – ಪರಿಣಾಮ ಮತ್ತು ಪರಿಹಾರಗಳು’ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾಭಾವಿಕವಾಗಿ ಮಹಿಳೆಯರ ರಕ್ಷಣೆಯಾಗಬೇಕು. ಅದಕ್ಕಾಗಿ ಕಾನೂನುಗಳು ಬೇಕಾಗಿಲ್ಲ. ಆದರೆ, ದುಷ್ಟ ಜನರು ಹುಟ್ಟಿಕೊಂಡಿದ್ದರಿಂದ ಕಾನೂನುಗಳು ಹುಟ್ಟಿಕೊಂಡವು’ ಎಂದ ಅವರು, ‘ಮಹಿಳೆಯರ ರಕ್ಷಣೆಗೆ ಈಗಾಗಲೇ ಕಾನೂನುಗಳನ್ನು ರೂಪಿಸಲಾಗಿದೆ. ಆದರೆ, ಯಾವ ಕಾಯ್ದೆಯೂ ದುರುಪಯೋಗವಾಗಬಾರದು. ಕಾಯ್ದೆ ಬಗ್ಗೆ ತಿಳಿವಳಿಕೆ ಇರಬೇಕು. ಇಲ್ಲದೇ ಹೋದರೆ ಕಾಯ್ದೆ ಬಗ್ಗೆ ಇರುವ ಗೌರವ ಹೊರಟು ಹೋಗುತ್ತದೆ’ ಎಂದರು.

ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸ ಅವರು ಮಹಿಳಾ ರಕ್ಷಣಾ ಕಾನೂನುಗಳು-ಪರಿಣಾಮ ಮತ್ತು ಪರಿಹಾರಗಳು ಕುರಿತು ಮಾತನಾಡಿ, ‘ಎಲ್ಲ ಧರ್ಮ, ಜಾತಿಯಲ್ಲೂ ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಸಾಕಷ್ಟು ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಹೊರಗಡೆ ಮಾತ್ರವಲ್ಲ, ಕುಟುಂಬದಲ್ಲಿಯೂ ಸಾಕಷ್ಟು ದೌರ್ಜನ್ಯಗಳು ನಡೆಯುತ್ತವೆ. ಇಂಥವುಗಳನ್ನು ಕಾನೂನಿನ ಜತೆಗೆ ತಡೆಗಟ್ಟುವ ಜತೆಗೆ, ಸೌಹಾರ್ದ, ಸಹಬಾಳ್ವೆ ಮೂಲಕ, ದೌರ್ಜನ್ಯಗಳು ನಡೆಯದಂತೆಯೂ ಎಚ್ಚರ ವಹಿಸಬೇಕು’ ಎಂದರು.

ಮಹಿಳೆಯರು ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ. ಆದರೆ, ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ಭ್ರೂಣಹತ್ಯೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

‘ಕೌಟುಂಬಿಕ ದೌರ್ಜನ್ಯ ನಡೆದಾಗ, ಇರುವ ಕಾಯ್ದೆಗಳಿಂದ ರಕ್ಷಣೆ ಪಡೆಯಬೇಕು. ಈ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ವಿಚಿತ್ರ ಎಂದರೆ, ಕಾನೂನು ಅರಿವಿರುವ ಎಷ್ಟೋ ಹೆಣ್ಣು ಮಕ್ಕಲು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಬಹಳಷ್ಟು ಮಂದಿ ಕಾನೂನನ್ನೇ ಉಲ್ಲಂಘಿಸುತ್ತಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಮಹಿಳೆಯರು ತಮ್ಮ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳಬೇಕು. ಹೆಣ್ಣು ತಾನು ಪ್ರಶ್ನಾತೀತವಾಗಬೇಕು. ಕಾನೂನಿನ ಮೂಲಕ ಮಹಿಳೆಯರಿಗೆ ಜಾಗೃತಿಯನ್ನು ಮೂಡಿಸಬೇಕು. ಕಾನೂನನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಸ್‌ಜೆಎಂ ಮಹಿಳಾ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಸಿ. ಬಸವರಾಜಪ್ಪ ಮಾತನಾಡಿದರು. ಎಸ್‌ಜೆಎಂ ವಿದ್ಯಾಪೀಠದ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ. ಇ. ಚಿತ್ರಶೇಖರ್, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಇದ್ದರು. ಡಾ. ರೇವಯ್ಯ ಒಡೆಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್.ಜೆ.ಎಂ. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎನ್. ವಿಶ್ವನಾಥ್ ಸ್ವಾಗತಿಸಿದರು. ಪವಿತ್ರ ಮತ್ತು ರೋಜಾ ಪ್ರಾರ್ಥಿಸಿದರು. ಶಾಂಭವಿ ಮತ್ತು ಭಾರ್ಗವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT