‘ಮಂಟಪದ ಭಗವಾಧ್ವಜ ತೆರವು: ಖಂಡನೀಯ’

7

‘ಮಂಟಪದ ಭಗವಾಧ್ವಜ ತೆರವು: ಖಂಡನೀಯ’

Published:
Updated:

ದಾವಣಗೆರೆ: ‘ಜಾತ್ರೆಯ ಪ್ರಯುಕ್ತ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನದ ಎದುರು ನಿರ್ಮಿಸಿರುವ ವಿಶಾಲ ಮಂಟಪದ ಮೇಲೆ ಅಳವಡಿಸಿದ್ದ ಭಗವಾಧ್ವಜವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರು ತೆರವುಗೊಳಿಸಿರುವುದು ಸರಿಯಲ್ಲ’ ಎಂದು ದೇವಿ ಜಾತ್ರೆಯ ಕುಸ್ತಿ ಸಮಿತಿ ಸದಸ್ಯ ಯಶವಂತರಾವ್‌ ಜಾಧವ್‌ ಖಂಡಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವಿಯ ಪ್ರತಿ ಜಾತ್ರೆಯ ಸಮಯದಲ್ಲಿ ನಿರ್ಮಿಸುವ ಮಂಟಪದ ಮೇಲೆ ಭಗವಾಧ್ವಜವನ್ನು ಅಳವಡಿಸಲಾಗುತ್ತದೆ. ಅಂತೆಯೇ ಈ ಬಾರಿ ಕೂಡ ಧ್ವಜವನ್ನು ಅಳವಡಿಸಲಾಗಿತ್ತು. ಆದರೆ, ಏಕಾಏಕಿ ಅದನ್ನು ತೆರವುಗೊಳಿಸಲಾಗಿದೆ. ಇದರಿಂದ ಸಮಸ್ತ ಹಿಂದೂ ಬಾಂಧವರ ಮನಸ್ಸಿಗೆ ನೋವುಂಟಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದರು.

ಹಲವು ವರ್ಷಗಳಿಂದ ರೈತರ, ಶಾನಭೋಗರು, ಗೌಡ್ರು, ಬಣಕಾರರು, ಬಾಬುದಾರರು ಹಾಗೂ ವಿವಿಧ ಸಮುದಾಯಗಳ ಮುಖಂಡರು ಸಾಂಪ್ರದಾಯಿಕವಾಗಿ ದೇವಿ ಜಾತ್ರೆಯನ್ನು ಆಚರಿಸುತ್ತಾ ಬಂದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಶಾಮನೂರು ಶಿವಶಂಕರಪ್ಪ ಅವರು ದೇವಸ್ಥಾನದ ವಿಷಯದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವಸ್ಥಾನದ ಸಮಿತಿಯ ಟ್ರಸ್ಟ್‌ನಲ್ಲಿಯೂ ಅವರು ಕಾಂಗ್ರೆಸ್‌ ಕಾರ್ಯಕರ್ತರನ್ನೇ ನೇಮಕ ಮಾಡಿಕೊಳ್ಳುವ ಮೂಲಕ ದೇವಸ್ಥಾನವನ್ನು ಕಾಂಗ್ರೆಸ್‌ ಕಚೇರಿಯನ್ನಾಗಿ ಪರಿವರ್ತಿಸಿದ್ದಾರೆ ಎಂದು ದೂರಿದರು.

ಯಾವುದೇ ಬೈಲಾ ಇಲ್ಲದೇ ತಮಗೆ ಇಷ್ಟ ಬಂದ ರೀತಿಯಲ್ಲಿ ರಚಿಸಿರುವ ಟ್ರಸ್ಟ್‌ ಅನ್ನು ಕೂಡಲೇ ವಜಾಗೊಳಿಸಿ, ದೇವಸ್ಥಾನಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದಿರುವವರನ್ನು ಟ್ರಸ್ಟ್‌ಗೆ ಸೇರಿಸಿಕೊಳ್ಳಬೇಕು. ನಿರ್ಲಕ್ಷಿಸಿದ್ದರೆ ಟ್ರಸ್ಟ್‌ ವಿಸರ್ಜನೆಗಾಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ದೇವಸ್ಥಾನಕ್ಕೆ ವಾರ್ಷಿಕ ಕೋಟ್ಯಂತರ ಆದಾಯ ಬರುತ್ತದೆ. ಆ ಹಣವು ಕೂಡ ವ್ಯವಸ್ಥಿತವಾಗಿ ದುರ್ಬಳಕೆಯಾಗುತ್ತಿದೆ. ಹೊಂಡದ ವೃತ್ತದ ಬಳಿಯ ದುರ್ಗಾಂಬಿಕಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಈ ಬಗ್ಗೆ ಚಿಂತನೆ ನಡೆಸದೇ, ದೇವಸ್ಥಾನಕ್ಕೆ ಸಂಬಂಧಿಸಿದ ₹ 1.50 ಕೋಟಿ ಹಣದಲ್ಲಿ ಆ ಶಾಲೆಯ ಮೇಲೆ ಮತ್ತೊಂದು ಕಟ್ಟಡ ನಿರ್ಮಿ ಸುತ್ತಿರುವುದು ಖಂಡನೀಯ ಎಂದರು. ಗೌಡ್ರು ರಾಮಣ್ಣ, ಗೌಡ್ರು ರೇವಣಸಿದ್ದಪ್ಪ, ತಿಪ್ಪೇಸ್ವಾಮಿ, ರಮೇಶ್‌ನಾಯ್ಕ, ಟಿಂಕರ್‌ ಮಂಜಣ್ಣ, ರಾಜನಹಳ್ಳಿ ಶಿವಕುಮಾರ್ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ತಾಕತ್ತಿದ್ದರೆ ವಜಾ ಮಾಡಲಿ’

‘ನಗರ ದೇವತೆ ಜಾತ್ರೆಯು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದ್ದಲ್ಲ. ಎಲ್ಲಾ ಧರ್ಮ ಹಾಗೂ ಸಮುದಾಯದ ಜನರು ಆಚರಿಸುವ ಹಬ್ಬವಾಗಿದೆ. ಮಂಟಪದ ಮೇಲೆ ಬಿಜೆಪಿ ಬಾವುಟ ಹಾಕಿಸಿದ್ದರು. ಅದನ್ನು ತೆಗೆಸಿದೆ. ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್‌ ಕಾನೂನು ಬದ್ಧವಾಗಿಯೇ ರಚಿಸಲಾಗಿದೆ. ತಾಕತ್ತಿದ್ದರೆ ಅವರು ವಜಾ ಮಾಡಲಿ’ ಎಂದು ಟ್ರಸ್ಟ್‌ನ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry