ದಾವಣಗೆರೆಗೆ ಮೋದಿ: ಕಾರ್ಯಕರ್ತರ ಸಂಭ್ರಮ

7

ದಾವಣಗೆರೆಗೆ ಮೋದಿ: ಕಾರ್ಯಕರ್ತರ ಸಂಭ್ರಮ

Published:
Updated:
ದಾವಣಗೆರೆಗೆ ಮೋದಿ: ಕಾರ್ಯಕರ್ತರ ಸಂಭ್ರಮ

ದಾವಣಗೆರೆ: ‘ರೈತ ಬಂಧು ಯಡಿಯೂರಪ್ಪ ಸಮಾವೇಶ’ಕ್ಕೆ ಬೆಣ್ಣೆದೋಸೆ ನಗರಿ ಸಂಪೂರ್ಣ ಸಜ್ಜುಗೊಂಡಿದೆ. ನಗರದ ಪ್ರಮುಖ ವೃತ್ತಗಳು ಕೇಸರಿ ಬಾವುಟಗಳಿಂದ ಅಲಂಕೃತಗೊಂಡಿವೆ. ಸಮಾವೇಶಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸುತ್ತಿರುವುದರಿಂದ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

ವೇದಿಕೆಯಲ್ಲಿ 30 ಗಣ್ಯರಿಗೆ ಸ್ಥಾನ: ಸಮಾವೇಶದ ವೇದಿಕೆಯಲ್ಲಿ 30 ಗಣ್ಯರು ಕುಳಿತುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಕ್ಷ ಪ್ರಧಾನ ಮಂತ್ರಿ ಭದ್ರತಾ ಸಮಿತಿಗೆ ಮನವಿ ಸಲ್ಲಿಸಿದೆ. ಸಮಿತಿ ಒಪ್ಪಿಗೆ ಸಿಗಬೇಕಿದೆ ಎಂದು ಪಕ್ಷದ ಜಿಲ್ಲಾ ಘಟಕದ ಡಅಧ್ಯಕ್ಷ ಯಶವಂತರಾವ್ ಜಾಧವ್‌ ತಿಳಿಸಿದರು ಸಮಾವೇಶ ಮಧ್ಯಾಹ್ನ 3 ಆರಂಭವಾಗಲಿದೆ. ಮೋದಿ ಅವರು ಬರುವುದಕ್ಕೂ ಮೊದಲು ಬಿಜೆಪಿಯ ಮಾಜಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸುಮಾರು 1 ಗಂಟೆಗಳ ಕಾಲ ಭಾಷಣ ಮಾಡಲಿದ್ದಾರೆ. ಮೋದಿ ಅವರು ಬಂದ ನಂತರ ಯಡಿಯೂರಪ್ಪ ಮತ್ತು ಮೋದಿ ಇಬ್ಬರೇ ಮಾತನಾಡಲಿದ್ದಾರೆ. ಸದ್ಯಕ್ಕೆ 60 ಸಾವಿರ ಕುರ್ಚಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಎಲ್ಲೆಲ್ಲೂ ಖಾಕಿ ಕಣ್ಗಾವಲು: ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ನಗರದಾದ್ಯಂತ ಖಾಕಿ ಕಣ್ಗಾವಲು ಹಾಕಲಾಗಿದೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ಕರೆಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಅವರ ಕುಟುಂಬ ಸದಸ್ಯರ ಕಾರ್ಯಕ್ರಮಗಳಿಗೆ ಭದ್ರತೆ ನೀಡುವ ಎಸ್‌ಪಿಜಿ (ವಿಶೇಷ ಸುರಕ್ಷತಾ ಪಡೆ) ಅಧಿಕಾರಿಗಳು ವಾರದ ಹಿಂದೆಯೇ ನಗರಕ್ಕೆ ಬಂದಿದ್ದು, ಸಮಾರಂಭ ನಡೆಯುವ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವೇದಿಕೆ ಹಾಗೂ ಹೈಸ್ಕೂಲ್‌ ಮೈದಾನವನ್ನು ಇಂಚಿಂಚೂ ತಪಾಸಣೆ ನಡೆಸಿದ್ದಾರೆ.

ಪ್ರಧಾನಿ ವಾಹನ ಸಂಚರಿಸಲಿರುವ ಮಾರ್ಗಗಳಲ್ಲಿ ಬೇರೆ ವಾಹನ ಸಂಚಾರ ನಿಷೇಧಿಸಲಾಗಿದೆ. 400 ಬ್ಯಾರಿಕೇಡ್‌ ಗಳನ್ನು ನೆರೆಯ ಜಿಲ್ಲೆಗಳಿಂದ ತರಿಸಿ ಪ್ರಮುಖ ರಸ್ತೆಗಳಿಗೆ ಹಾಕಲಾಗಿದೆ. ನಾಕಾಬಂಧಿ ಹಾಕಲಾಗಿದ್ದು, ನಗರ ಪ್ರವೇಶಿಸುವ ಎಲ್ಲ ವಾಹನಗಳನ್ನು ತಡೆದು ನೋಂದಣಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ದುರ್ಗಾಂಬಿಕಾ ಜಾತ್ರೆ ಹಾಗೂ ರೈತಬಂಧು ಸಮಾ ವೇಶವೂ ಮಂಗಳವಾರವೇ ನಡೆಯುತ್ತಿರುವು ದರಿಂದ ನಗರಕ್ಕೆ ಜನಸಾಗರವೇ ಹರಿದು ಬರುತ್ತಿದೆ.

ಹೊರ ಊರುಗಳಿಂದ ಜಾತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹಳೆ ದಾವಣಗೆರೆಯ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಸೋಮವಾರ ಕಂಡುಬಂತು. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಖರೀದಿಯೂ ಜೋರಾಗಿದ್ದರಿಂದ ಮಂಡಿಪೇಟೆಯಲ್ಲಿ ಜನಜಂಗಳಿ ಇತ್ತು. ಪ್ರಧಾನಿ ಕಾರ್ಯಕ್ರಮ ಹಾಗೂ ಜಾತ್ರೆ ಒಟ್ಟಾಗಿ ಬಂದಿರುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಸಮಸ್ಯೆ ಎದುರಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು. ಹೆಚ್ಚು ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್‌.ಗುಳೇದ ‘ಪ್ರಜಾವಾಣಿ’ಗೆ ತಿಳಿಸಿದರು. ಛಾಯಾಚಿತ್ರ ಗ್ರಾಹಕರು, ನಾಗರಿಕರು ಡ್ರೋನ್‌ ಬಳಸದಂತೆ ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.ಸಂತ್ರಸ್ತ ಕುಟುಂಬಕ್ಕೆ ಭೇಟಿ, ಸಾಂತ್ವನ

ಬಿ.ಎಸ್‌.ಯಡಿಯೂರಪ್ಪ ಅವರು ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೆರೆಯಾಗಳಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ರಂಗಸ್ವಾಮಿ ಅವರ ಮನೆಗೆ ಮಂಗಳವಾರ ಬೆಳಿಗ್ಗೆ 11.30ರ ಸುಮಾರಿಗೆ ತೆರಳಿ, ಮೃತ ರೈತನ ಕುಟುಂಬಕ್ಕೆ ಸಾಂತ್ವನ ಹೇಳುವರು.

ಯಡಿಯೂರಪ್ಪ ಅವರೊಂದಿಗೆ ಸಂಸದರಾದ ಜಿ.ಎಂ.ಸಿದ್ದೇಶ್ವರ, ಶೋಭಾ ಕರಂದ್ಲಾಜೆ, ಮುಖಂಡರಾದ ಎಸ್.ಎ.ರವೀಂದ್ರನಾಥ್‌, ಬಸವರಾಜ ನಾಯ್ಕ, ಪ್ರೊ.ಲಿಂಗಣ್ಣ ಹಾಗೂ ಸ್ಥಳೀಯ ಮುಖಂಡರು ಜತೆಗೊಡಲಿದ್ದಾರೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾಹಿತಿ ನೀಡಿದರು.

ವಾಟ್ಸ್‌ಆ್ಯಪ್‌ ಆಹ್ವಾನ

ಸಮಾವೇಶಕ್ಕೆ ವಾಟ್ಸ್ಆ್ಯಪ್‌ ವಿಡಿಯೊ ಮೂಲಕ ಬಿಜೆಪಿ ಆಹ್ವಾನಿಸಿದೆ. ಇದರಲ್ಲಿ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು ಯಡಿಯೂರಪ್ಪ ಅವರ ಆಡಳಿತ ಅವಧಿಯ ಯೋಜನೆಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ, ಮೋದಿ ಅವರ ಕಾರ್ಯಕ್ರಮಗಳಿಂದ ಆದ ಪ್ರಯೋಜನಗಳನ್ನೂ ಸ್ಮರಿಸಿದ್ದಾರೆ. ಅವರೆಲ್ಲರೂ ಸಮಾವೇಶಕ್ಕೆ ಮೋದಿ ಹಾಗೂ ಯಡಿಯೂರಪ್ಪ ಅವರಿಗೆ ಸ್ವಾಗತ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry