ಬಿಸಿಯೂಟ ಅವ್ಯವಸ್ಥೆ; ವಿದ್ಯಾರ್ಥಿಗಳ ಆಕ್ರೋಶ

7

ಬಿಸಿಯೂಟ ಅವ್ಯವಸ್ಥೆ; ವಿದ್ಯಾರ್ಥಿಗಳ ಆಕ್ರೋಶ

Published:
Updated:
ಬಿಸಿಯೂಟ ಅವ್ಯವಸ್ಥೆ; ವಿದ್ಯಾರ್ಥಿಗಳ ಆಕ್ರೋಶ

ಗದಗ: ‘ಬಿಸಿಯೂಟದಲ್ಲಿ ಹುಳಗಳು ಇರುತ್ತವೆ. ತರಕಾರಿ, ಧಾನ್ಯಗಳನ್ನು ಸ್ವಚ್ಛ ಮಾಡದೆ ಅಡುಗೆ ತಯಾರಿಸುತ್ತಾರೆ. ಇದನ್ನು ಸೇವಿಸಿದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಶಿಕ್ಷಕರು ನಮ್ಮನ್ನೇ ದಬಾಯಿಸುತ್ತಾರೆ’ ಎಂದು ಆಕ್ರೋಶಪಡಿಸಿ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ತಾಲ್ಲೂಕಿನ ಹಾತಲಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

‘ಈ ಎಲ್ಲ ಸಮಸ್ಯೆಗಳಿಗೆ ಮುಖ್ಯ ಶಿಕ್ಷಕಿಯೇ ನೇರ ಹೊಣೆ. ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಗುಣಮಟ್ಟದ ಬಿಸಿಯೂಟ ನೀಡಬೇಕು ಮತ್ತು ಶಾಲೆಗೆ ಮೂಲ ಸೌಕರ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಮೊದಲು ಗ್ರಾಮ ಪಂಚಾಯ್ತಿ ಎದುರು ಮಕ್ಕಳು ಪ್ರತಿಭಟನೆ ನಡೆಸಿದರು. ನಂತರ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರನ್ನು ಶಾಲೆಗೆ ಕರೆದುಕೊಂಡು ಶಾಲೆಗೆ ಬಂದು, ಶಾಲಾ ಅವ್ಯವಸ್ಥೆಯ ನೈಜ ದರ್ಶನ ಮಾಡಿಸಿದರು.

‘ಬಿಸಿಯೂಟದಲ್ಲಿ ಹುಳುಗಳು ಇವೆ ಎಂದರೆ, ನಿಮ್ಮ ಅಪ್ಪ, ಅವ್ವಾ ಬಂದು ಸ್ವಚ್ಛ ಮಾಡುತ್ತಾರೆ ಎಂದು ಶಿಕ್ಷಕರು ನಮ್ಮನ್ನು ನಿಂದಿಸುತ್ತಾರೆ. ಶಾಲೆಯಲ್ಲಿರುವ ಶೌಚಾಲಯವನ್ನು ಸ್ವಚ್ಛಗೊಳಿಸಿ ತಿಂಗಳುಗಳೇ ಕಳೆದಿವೆ. ಶಾಲೆ ಎದುರಿನ ಬಯಲಿನಲ್ಲೇ ಮೂತ್ರ ವಿಸರ್ಜನೆ, ಶೌಚಕ್ಕೆ ಹೋಗಬೇಕು. ಇಡೀ ಶಾಲಾ ಆವರಣವೇ ಗಲೀಜಾಗಿದೆ. ಕೆಲವು ಶಿಕ್ಷಕರು ತರಗತಿ ಕೋಣೆಯಲ್ಲಿ ವಿದ್ಯಾರ್ಥಿನಿಯರ ಜತೆಗೆ ಅಸಭ್ಯವಾಗಿ ವರ್ತಿಸುತ್ತಾರೆ. ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ.

ಇಂತಹ ಶಾಲೆ, ಶಿಕ್ಷಕರು ನಮಗೆ ಬೇಕಿಲ್ಲ. ಎಲ್ಲ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದು ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿದ ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಖಾನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಸಿ.ನಾಗರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಎಸ್.ತಳವಾರ ಅವರ ಮುಂದೆ ಮನವಿ ಮಾಡಿಕೊಂಡರು.

‘ಕುಳಿತು ಮಾತನಾಡಿ ಎಲ್ಲ ಸಮಸ್ಯೆಗಳನ್ನು ಪರಿಹರಿಸೋಣ ಬನ್ನಿ ಎಂದು ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿದರು. ಬಳಿಕ ಸಂಧಾನ ಸಭೆ ನಡೆಯಿತು. ಗ್ರಾಮಸ್ಥರು ಶಾಲೆಯ ಅವ್ಯವಸ್ಥೆಯನ್ನು ತೆರೆದಿಟ್ಟರು. ಮಕ್ಕಳ ಸಮಸ್ಯೆಗೆ ಸ್ಪಂದಿಸದ ಮುಖ್ಯ ಶಿಕ್ಷಕಿ ಕ್ಷಮೆ ಯಾಚಿಸಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಪಟ್ಟು ಹಿಡಿದರು.

ಆದರೆ, ‘ನನ್ನ ಸೇವೆ ಇನ್ನು 2 ತಿಂಗಳು ಮಾತ್ರ ಇದೆ. ಕಳೆದ 10 ವರ್ಷಗಳಿಂದ ಈ ಶಾಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಗ್ರಾಮಸ್ಥರು, ಮಕ್ಕಳ ಎದುರು ಕ್ಷಮೆ ಯಾಚಿಸುವುದಿಲ್ಲ’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಎಫ್.ಎಸ್.ಗಜ್ಜಲರ ಹೇಳಿದರು.

ಮಾತಿನ ಚಕಮಕಿ: ಇದರಿಂದ ಪ್ರತಿಭಟನಾಕಾರರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ, ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಕ್ಕಳು ಧಿಕ್ಕಾರ ಕೂಗುತ್ತಾ ಸಭೆಗೆ ನುಗ್ಗಿದ್ದರು. ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು.

‘ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆದು ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ‘ಶಿಕ್ಷಕರಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಲು ಹಾಗೂ ಸಮಸ್ಯೆಗಳನ್ನು ಬಗೆಹರಿಸಲು ಒಂದು ಬಾರಿ ಅವಕಾಶ ನೀಡಬೇಕು’ ಎಂದು ಡಿ.ಎಸ್.ತಳವಾರ ಮನವಿ ಮಾಡಿದರು.

‘ನಾವು ಶಾಲೆಯಲ್ಲಿ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿ ಕೊಡುತ್ತೇವೆ. ನೀವು ಮುಖ್ಯ ಶಿಕ್ಷಕರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು, ಅಡುಗೆ ಸಿಬ್ಬಂದಿ ಬದಲಿಸಬೇಕು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಎನ್.ಜಾಲಮ್ಮನವರ ಅಧಿಕಾರಿಗಳಿಗೆ ಹೇಳಿದರು.

‘ಕೆಲಸದಿಂದ ಅಡುಗೆ ಸಿಬ್ಬಂದಿ ತೆಗೆದು ಹಾಕಿದರೆ ಶಾಲೆಯಲ್ಲಿ ತೊಂದರೆ ಆಗುತ್ತದೆ. ಗ್ರಾಮ ಪಂಚಾಯ್ತಿ ಸಭೆಯಲ್ಲಿ ಠರಾವು ಪಾಸ್‌ ಮಾಡಿ, ಹೊಸ ಸಿಬ್ಬಂದಿ ನೇಮಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಹೇಳಿದರು.

ಸ್ಫೂರ್ತಿ ಸಂಸ್ಥೆಯ ಶಿಲಾ ಕಲಾಲ, ಸವಿತಾ ಕಲಾಲ, ಜಯ ಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಸುಗ್ರಾಮ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಹಾಗೂ 60ಕ್ಕೂ ಹೆಚ್ಚು ಮಕ್ಕಳು ಈ ಸಂದರ್ಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry