ರೂಪಕಗಳ ಜುಗಲ್‌ಬಂದಿ

4

ರೂಪಕಗಳ ಜುಗಲ್‌ಬಂದಿ

Published:
Updated:
ರೂಪಕಗಳ ಜುಗಲ್‌ಬಂದಿ

ಕೆಲವೊಂದು ಕತೆಗಳು ಆಯಾ ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇನ್ನು ಕೆಲವು ಯಾವ ಕಾಲಕ್ಕಾದರೂ ಸಲ್ಲುತ್ತವೆ. ವ್ಯತ್ಯಾಸವಾಗುವುದು ಅದರ ಹಿನ್ನೆಲೆ, ಪ್ರದೇಶಗಳು ಮಾತ್ರ. ಮಾನವನ ವ್ಯಕ್ತಿತ್ವದ ಸಹಜ ಗುಣಗಳಾದ ಕಾಮ, ಕ್ರೋದ, ಮೋಹ, ಲೋಭ, ಮದ ಮತ್ತು ಮತ್ಸರಗಳು ಅನಾದಿ ಕಾಲದಿಂದ ವರ್ತಮಾನದವರೆಗೂ ವಿವಿಧ ಆಯಾಮಗಳಲ್ಲಿ ಸದಾ ಜೀವಂತವಾಗಿಯೇ ಇದೆ.

ಮನುಷ್ಯ ಈ ಸಹಜ ಗುಣಗಳನ್ನು ಪ್ರಖರವಾಗಿ ರೂಪಿಸಿ-ರಚಿಸಿದವರಲ್ಲಿ ಶೇಕ್ಸ್‌ಪಿಯರ್‌ ಪ್ರಮುಖರು. ಇವರು ರಚಿಸಿದ ನಾಟಕಗಳು ಜಗತ್ತಿನಾದ್ಯಂತ ಹೆಚ್ಚು ಖ್ಯಾತಿಗೊಳ್ಳುವಲ್ಲಿ ಪ್ರಮುಖ ಕಾರಣ, ಆ ನಾಟಕಗಳಲ್ಲಿ ಅವರು ಕಟ್ಟಿಕೊಡುವ ಮನುಷ್ಯ ಸ್ವಭಾವದ ರೂಪಕಗಳು. ಇವರ ನಾಟಕಗಳು ಜಗತ್ತಿನಾದ್ಯಂತ ಹಲವು ಭಾಷೆಗಳಿಗೆ ಆಯಾ ಪ್ರದೇಶಕ್ಕನುಗುಣವಾಗಿ ಭಾವಾಂತರಗೊಂಡಿವೆ. ಇದೇ ರೀತಿಯಲ್ಲಿ ಪ್ರಭಾವಿತವಾಗಿ ರೂಪಿತಗೊಂಡಿರುವ ಸಿನೆಮಾ ‘ಪಡ್ಡಾಯಿ‍’. ಇದು ಶೇಕ್ಸ್‌ಪಿಯರ್‌ನ ನಾಟಕಗಳಲ್ಲೇ ಹೆಚ್ಚು ಜನಪ್ರಿಯವಾಗಿರುವ ‘ಮ್ಯಾಕ್‍ಬೆತ್‌’ನಿಂದ ಸ್ಫೂರ್ತಿ ಪಡೆದಿರುವ ತುಳು ಸಿನಿಮಾ.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡ ಈ ಸಿನಿಮಾ ಹಲವು ಕಾರಣಗಳಿಂದಾಗಿ ವಿಶಿಷ್ಟ ಪ್ರಯತ್ನವಾಗಿ ಕಾಣುತ್ತದೆ. ಅದರಲ್ಲಿ ಬಹುಮುಖ್ಯವಾದುದು ನಿರೂಪಣೆ. ಭ್ರಮೆ ಹಾಗೂ ವಾಸ್ತವವನ್ನು ಯಾವುದೇ ರೀತಿಯ ಅತಿಭಾವುಕತೆಯ ಲೇಪವಿಲ್ಲದೇ ನೋಡುಗನನ್ನು ಹಲವು ಆಯಾಮಗಳಲ್ಲಿ ಚಿಂತಿಸುವಂತೆ ಮಾಡುವುದರ ಜೊತೆಗೆ, ಸಿನಿಮಾ ನೋಡಿ ಹೊರಬಂದ ಮೇಲೂ ಕಾಡುತ್ತದೆ. ಮಾಧವ ಹಾಗೂ ಸುಗಂಧಿ ಎಂಬ ಎರಡು ಮುಖ್ಯ ಪಾತ್ರಗಳು ಕೇವಲ ಪಾತ್ರವಾಗಿಯಷ್ಟೇ ಕಾಣದೆ ನಂಬಿಕೆ-ಮೋಸ, ಆಸೆ-ಅನಿವಾರ್ಯತೆ, ಕನಸು-ವಾಸ್ತವ, ಕಾಮ-ಕ್ರೌರ್ಯ, ಕ್ರೋದ-ಪಶ್ಚಾತ್ತಾಪ ಎಂಬ ದ್ವಂದ್ವಗಳ ರೂಪಕಗಳ ಜುಗಲ್‌ಬಂದಿಯಂತೆ ಪ್ರಸ್ತುತ ಪಡಿಸಿರುವುದು ಗಮನಿಸಬೇಕಾದ ಅಂಶ. ಈ ಎರಡು ಪಾತ್ರಗಳು ಅಮೂರ್ತವಾದ ಕಾಲದ ಹಿಡಿತದ ಚೌಕಟ್ಟಿನಲ್ಲಿ ಎದುರಿಸುವ ಸಂಘರ್ಷಗಳು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ ಚಿಂತಿಸುವಂತೆ ಮಾಡುತ್ತವೆ.

ಈ ಸಿನಿಮಾ ವಿಶೇಷವೆನಿಸಲು ಮತ್ತೊಂದು ಬಹುಮುಖ್ಯ ಕಾರಣ ಕಥೆಯ ಹಿನ್ನೆಲೆಯಲ್ಲಿರುವ ಕರಾವಳಿ. ಪ್ರಸ್ತುತ ಸನ್ನಿವೇಶದಲ್ಲಿ ಕರಾವಳಿ ಎಂದ ಕೂಡಲೇ ನೆನಪಾಗುವುದು ಕೋಮುವಾದ. ಅಷ್ಟರಮಟ್ಟಿಗೆ ಮಾಧ್ಯಮಗಳು ಹೊರಗಿನ ಜಗತ್ತಿಗೆ ಕರಾವಳಿಯ ಕುರಿತಂತೆ ಚಿತ್ರಣ ಕಟ್ಟಿಕೊಟ್ಟಿವೆ. ಈ ಚಿತ್ರಣಕ್ಕೆ ಅಪವಾದವೆಂಬಂತಿರುವ ‘ಪಡ್ಡಾಯಿ’ ಕೋಮುವಾದದ ಆಚೆಗಿನ ಕರಾವಳಿಯ ಪರಿಸರ, ವ್ಯಕ್ತಿಚಿತ್ರಣ ಹಾಗೂ ಅಲ್ಲಿಯ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ದುಬೈ ಮೋಹ, ಮುಂಬೈ ನಂಟು, ಮೀನುಗಾರಿಕೆಯ ಮೂಲಕ ಸಮುದ್ರದ ಮೇಲೆ ಹಿಡಿತ ಸಾಧಿಸಬೇಕೆನ್ನುವುದರ ಹಿಂದಿನ ರಾಜಕೀಯ ಸಂಘರ್ಷಗಳು, ಆಧುನಿಕ ಯಂತ್ರ ಆಧಾರಿತ ಮೀನುಗಾರಿಕೆಯಿಂದ ಪರಿಸರದ ಮೇಲಾಗುವ ಅಪಾಯದ ಕುರಿತು ಸಂಭಾಷಣೆಯ ಮೂಲಕ ದಾಟಿಸುವುದರ ಮೂಲಕ ಕರಾವಳಿಯ ಸಾಂಪ್ರದಾಯಿಕ ಬದುಕಿನಲ್ಲಿ ಆಗುತ್ತಿರುವ ಪಲ್ಲಟಗಳನ್ನು ಕಟ್ಟಿಕೊಡುವ ಪ್ರಯತ್ನವೂ ಈ ಸಿನೆಮಾದಲ್ಲಿ ಕಾಣಬಹುದು.

ಜಗತ್ತಿನ ಯಾವುದೋ ಮೂಲೆಯ ಪ್ರದೇಶದ ಹಿನ್ನೆಲೆಯ ಕತೆಯೊಂದನ್ನು ಇನ್ಯಾವುದೋ ಪ್ರದೇಶಕ್ಕೆ ಒಗ್ಗಿಸುವುದರಲ್ಲಿ ಬಹುಮುಖ್ಯ ಸವಾಲೆನಿಸುವುದು ಅದರ ಪ್ರಸ್ತುತಿ. ಕರಾವಳಿಯ ಆಧುನಿಕ ಪಲ್ಲಟಗಳನ್ನು ಸಹಜತೆ ಚೌಕಟ್ಟಿನ ಮೂಲಕ ಚಿತ್ರಿಸಲಾಗಿರುವ ‘ಪಡ್ಡಾಯಿ’ಯ ಕತೆ ಹಳೆಯದಾದರೂ ಮಾನವ ಸಹಜ ಗುಣಗಳನ್ನು ಕಟ್ಟಿಕೊಟ್ಟಿರುವ ರೀತಿ ಇಂದಿಗೂ ಪ್ರಸ್ತುತವೆನಿಸುತ್ತದೆ.

ಸಿನಿಮಾ: ಪಡ್ಡಾಯಿ

ಭಾಷೆ: ತುಳು

ನಿರ್ದೇಶನ: ಅಭಯ ಸಿಂಹ

ಮಂಸೋರೆ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry