ಸ್ಮಾರ್ಟ್‌ ತಂತ್ರಜ್ಞಾನ; ಅತಿಯಾದರೆ ಅಪಾಯ..!

7

ಸ್ಮಾರ್ಟ್‌ ತಂತ್ರಜ್ಞಾನ; ಅತಿಯಾದರೆ ಅಪಾಯ..!

Published:
Updated:
ಸ್ಮಾರ್ಟ್‌ ತಂತ್ರಜ್ಞಾನ; ಅತಿಯಾದರೆ ಅಪಾಯ..!

ರ್ಟ್‌ಫೋನ್‌ ಯುಗದೊಂದಿಗೆ ಪ್ರಾರಂಭವಾದ, ವರ್ಚುವಲ್‌ ತಂತ್ರಜ್ಞಾನ ಈ ಶತಮಾನದ ಬಹು ಬೇಡಿಕೆಯ ತಂತ್ರಜ್ಞಾನವಾಗಿ ಮಾರುಕಟ್ಟೆ ವಿಸ್ತರಿಸಿಕೊಂಡಿದೆ. ಇಂಟರ್‌ನೆಟ್‌ ಎಂಬ ಅನಂತ ಸಾಧ್ಯತೆ ಬಳಸಿಕೊಂಡು ನಾವು ವಾಸಿಸುವ ಮನೆ, ನಿತ್ಯ ಜೀವನದ ಪ್ರತಿಯೊಂದು ಕೆಲಸವನ್ನೂ ಗ್ಯಾಜೆಟ್‌ಗಳ ಮೂಲಕವೇ ನಿರ್ವಹಣೆ ಮಾಡಬಹುದಾದ ಸ್ಮಾರ್ಟ್‌ ಪರಿಕಲ್ಪನೆ ಇದು.

‘ಸ್ಮಾರ್ಟ್‌ ಹೋಂ’ ಕುರಿತು ಕೇಳಿರಬಹುದು. ಬಾಗಿಲು ಮುಚ್ಚುವುದು, ಟಿವಿ ಚಾಲನೆ ಮಾಡುವುದು, ದೀಪ ಆರಿಸುವುದು ಸೇರಿದಂತೆ ಎಲ್ಲವನ್ನೂ ಅತ್ಯಂತ ಜಾಣ್ಮೆಯಿಂದ ಮಾಡುವ ಅಮೇಜಾನ್‌ನ ‘ಅಲೆಕ್ಸಾ’ ಎಂಬ ಧ್ವನಿ ಆಧಾರಿತ ವರ್ಚುವಲ್‌ ತಂತ್ರಜ್ಞಾನದ ಕುರಿತು ಇಲ್ಲಿ ಹೇಳಬೇಕು. ಈ ತಂತ್ರಜ್ಞಾನದ ದೊಡ್ಡ ವಿಶೇಷತೆ ಎಂದರೆ ಇದರ ನೆರವಿನಿಂದ ಮನೆಯ ಯಜಮಾನ ತನ್ನ ಮನೆಯ ಜತೆಗೆ ಸಂವಹನ ನಡೆಸಬಹುದು.‘ಅಲೆಕ್ಸಾ ಲೈಟ್‌ ಆರಿಸು’ ಎಂದ ಕೂಡಲೇ ಮನೆಯ ಎಲ್ಲ ದೀಪಗಳು ಆರುತ್ತವೆ. ‘ಅಲೆಕ್ಸಾ ಏ.ಸಿ ಆನ್‌ ಮಾಡು’ ಎಂದ ಕೂಡಲೇ ಹವಾನಿಯಂತ್ರಣ ವ್ಯವಸ್ಥೆ ಚಾಲನೆಗೊಳ್ಳುತ್ತದೆ. ‘ಅಲೆಕ್ಸಾ ತುಂಬಾ ಚಳಿ ಇದೆ’ ಎಂದ ಕೂಡಲೇ ಮನೆಯೊಳಗಿನ ಶಾಖನಿಯಂತ್ರಕ ಕೆಲಸ ಮಾಡಲು ಪ್ರಾರಂಭಿಸುತ್ತದೆ. ‘ಅಲೆಕ್ಸಾ ಫೋನ್‌ ಅಟೆಂಡ್ ಮಾಡು’ ಎಂದು ಹೇಳುತ್ತಿದ್ದಂತೆ ಮೊಬೈಲ್‌ ಕರೆ ಸ್ವೀಕರಿಸುತ್ತದೆ.

ಹೀಗೆ ನಿತ್ಯ ಬದುಕಿನ ಪ್ರತಿಯೊಂದು ಕಾರ್ಯಕ್ಕೂ ಸ್ಮಾರ್ಟ್‌ ತಂತ್ರಜ್ಞಾನವನ್ನೇ ಅವಲಂಬಿಸಿದರೆ, ಭವಿಷ್ಯದಲ್ಲಿ ದೊಡ್ಡ ಅಪಾಯವೂ ಇದೆ ಎನ್ನುತ್ತಾರೆ ತಂತ್ರಜ್ಞರು. ಸೊಳ್ಳೆಬತ್ತಿ ಉರಿಯಬೇಕಾದರೂ ವೈ–ಫೈ ಸಂಪರ್ಕ ಇರಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅತ್ಯಂತ ಸಣ್ಣ ಕೆಲಸವನ್ನೂ ಅತ್ಯಂತ ಕಷ್ಟವಾಗಿ ಮಾಡಬೇಕಾಗುತ್ತದೆ. ಹೀಗಾಗಿ ಈ ತಂತ್ರಜ್ಞಾನದಲ್ಲಿ ಕೆಲವನ್ನು ಮಾತ್ರ ಬಳಸಬಹುದು, ಇನ್ನು ಕೆಲವನ್ನು ಕೈಬಿಡಬಹುದು, ಇದನ್ನು ಬಳಕೆದಾರರೇ ನಿರ್ಧರಿಸಲಿ ಎಂಬ ಸಲಹೆ ಮುಂದಿಡುತ್ತಾರೆ.

ಆ್ಯಪಲ್‌ನ ಸ್ಮಾರ್ಟ್‌ ವಾಚ್‌ ಸರಣಿ–3 ಇತ್ತೀಚೆಗೆ ಬಿಡುಗಡೆಯಾಗಿದೆ. ಸುದೀರ್ಘ ಬ್ಯಾಟರಿ ಬಾಳಿಕೆ, ಜಲನಿರೋಧಕ ತಂತ್ರಜ್ಞಾನ ಹೊಂದಿರುವ ಇದನ್ನು ನಮ್ಮ ಆರೋಗ್ಯ ಸ್ಥಿತಿಗತಿ ತಿಳಿದುಕೊಳ್ಳಲು ಬಳಸಬಹುದು. ಇದು ಬರಿ ಸಮಯ ಮಾತ್ರ ತೋರಿಸುವುದಿಲ್ಲ. ಸಮಯ ಪರಿಪಾಲನೆ, ಆರೋಗ್ಯ ನಿರ್ವಹಣೆಯನ್ನೂ ಕಲಿಸುತ್ತದೆ. ಆದರೆ, ಇದನ್ನು ಸದಾ ಕೈಗೆ ಕಟ್ಟಿಕೊಂಡಿರಬೇಕು. ಗಡಿಯಾರದ ಸ್ಪರ್ಶ ಪರದೆ ಮೇಲ್ಮುಖವಾಗಿಯೇ ಇರುವಂತೆ ನೋಡಿಕೊಳ್ಳಬೇಕು. ಸ್ವಲ್ಪ ಆಚೆಈಚೆ ಸರಿದರೂ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಮಣ್ಣಿಕಟ್ಟನ್ನು ಸದಾ ಅಲುಗಾಡಿಸುತ್ತಾ ಸರಿಪಡಿಸಿಕೊಳ್ಳುವುದು ಕಿರಿ ಕಿರಿ ಎನಿಸುತ್ತದೆ. ಬಳಕೆದಾರನ ಧ್ವನಿ ಗುರುತಿಸುವ ‘ಸಿರಿ’ ತಂತ್ರಜ್ಞಾನ ಇದರಲ್ಲಿದೆ. ಆದರೆ, ಧ್ವನಿ ಗುರುತಿಸಬೇಕಾದರೆ ಇದನ್ನು ಮುಖಕ್ಕೆ ಹತ್ತಿರ ಹಿಡಿಯಬೇಕು. ಜತೆಗೆ ಉಳಿದ ಕೈಗಡಿಯಾರದಂತೆ ತಕ್ಷಣಕ್ಕೆ ಸಮಯ ನೋಡಲು ಆಗುವುದಿಲ್ಲ. ಹೀಗಾಗಿ ಸಮಯ ನೋಡಲು ಬೇಕಿದ್ದರೆ ಸಾಮಾನ್ಯ ವಾಚ್‌ ಕಟ್ಟಿ, ಜಿಮ್‌ನಲ್ಲಿ ಇದ್ದಾಗ ಮಾತ್ರ ಆ್ಯಪಲ್‌ ಸ್ಮಾರ್ಟ್‌ ವಾಚ್‌ ಬಳಸಿ ಎನ್ನುತ್ತಾರೆ ತಂತ್ರಜ್ಞರು.

ಈಗಂತೂ ಬಹುತೇಕ ಕಾರುಗಳಲ್ಲಿ ಸ್ಪರ್ಶ ಸಂವೇದಿ ಪರದೆಯ ಸ್ಮಾರ್ಟ್‌ ಇನ್ಫೊಟೇನ್‌ಮೆಂಟ್‌ ಸಿಸ್ಟಂ ಅಳವಡಿಸಾಗಿದೆ. ರೂಟ್‌ ಮ್ಯಾಪ್‌ ನೋಡಲು, ಆಡಿಯೊ, ವಿಡಿಯೊ ಪ್ಲೇ ಮಾಡಲು ಇದನ್ನು ಬಳುತ್ತಾರೆ. ಇದನ್ನು ಸ್ಮಾರ್ಟ್‌ಫೋನ್‌ ಜತೆಗೆ ಸಂಪರ್ಕ ಸಾಧಿಸಿ ಕನ್ಸೋಲ್‌ ಆಗಿ ಬಳಸಬಹುದು. ಇದಕ್ಕಾಗಿ ಆಂಡ್ರಾಯ್ಡ್‌ ಆಟೊ, ಐಫೋನ್‌ ಬಳಕೆದಾರರಿಗೆ ಕಾರ್‌ ಪ್ಲೇ ಎಂಬ ತಂತ್ರಾಂಶ ಇದೆ. ಉದಾಹರಣೆಗೆ ಐಫೋನ್‌ ಬಳಕೆದಾರರು ಆ್ಯಪಲ್‌ ಮ್ಯಾಪ್‌, ಆ್ಯಪಲ್‌ ಮ್ಯೂಸಿಕ್‌, ಆ್ಯಪಲ್‌ ಪಾಡ್‌ಕ್ಯಾಸ್ಟ್‌ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡರೆ, ಈ ಕನ್ಸೋಲ್‌ ಮೂಲಕವೇ ತಮಗಿಷ್ಟವಾದ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಪ್ರತಿ ಬಾರಿ ಟಚ್‌ಸ್ಕ್ರೀನ್‌ನಲ್ಲಿ ಹಾಡು ಅಥವಾ ಮ್ಯಾಪ್‌ ಹುಡುಕಲು ತಡಕಾಡುವ ಅಗತ್ಯ ಇಲ್ಲ.

ಆದರೆ, ಬಹುತೇಕ ಕಾರುಗಳಲ್ಲಿ ಈ ಇನ್ಫೊಟೇನ್‌ಮೆಂಟ್‌ ಸಿಸ್ಟಂನ ಸಾಫ್ಟ್‌ವೇರ್‌ ಅಪ್‌ಡೇಟ್‌ಗೆ ಅವಕಾಶ ನೀಡಿಲ್ಲ. ಹೀಗಾಗಿ, ಇದು ಆಗಾಗ್ಗೆ ಕೈಕೊಡಬಹುದು. ಇದರ ಕಿರಿಕಿರಿಯೇ ಬೇಡ ಎನ್ನುವವರಿಗೆ ಸಾಂಪ್ರದಾಯಿಕ ಫೋನ್‌ ಮೌಂಟ್‌ (phone mount ) ವ್ಯವಸ್ಥೆ ಇದೆ. ಅಂದರೆ, ನಿಮ್ಮ ಬಳಿ ಇರುವ ಸ್ಮಾರ್ಟ್‌ಫೋನ್‌ ಅನ್ನೇ ಕಾರಿನ ಡ್ಯಾಷ್‌ಬೋರ್ಡ್‌, ಸಿಡಿ ಪ್ಲೇಯರ್‌ನ ಸ್ಲಾಟ್‌ ಅಥವಾ ಎ.ಸಿ ಕಿಟಕಿ ಬಳಸಿ ಜೋಡಿಸಿ, ಈ ಮೇಲಿನ ಎಲ್ಲ ಸೌಲಭ್ಯಗಳನ್ನು ಆ ಮೊಬೈಲ್‌ನಲ್ಲೇ ಪಡೆಯಬಹುದು. ಸರಳವಾಗಿ ಹೇಳಬೇಕೆಂದರೆ ನಿಮ್ಮ ಮೊಬೈಲ್‌ ಅನ್ನೇ ಸ್ಮಾರ್ಟ್‌ ಇನ್ಫೊಟೇನ್‌ಮೆಂಟ್‌ ಸಿಸ್ಟಂ ಆಗಿ ಬಳಸಬಹುದು. ಕರೆ ಸ್ವೀಕರಿಸಬಹುದು, ರೂಟ್‌ ಮ್ಯಾಪ್‌ ನೋಡಬಹುದು,ಆನ್‌ಲೈನ್‌ ಆಡಿಯೊ, ವಿಡಿಯೊ ಪ್ಲೇ ಮಾಡಬಹುದು. ಮೇಲಾಗಿ ಸಾಫ್ಟ್‌ವೇರ್‌ ಕೂಡ ಅಪ್‌ಡೇಟ್‌ ಮಾಡಿಕೊಳ್ಳಬಹುದು. ಇದರ ಸರಳ, ಅಗ್ಗ ಮತ್ತು ಬಳಕೆದಾರ ಸ್ನೇಹಿ. ನಿಮ್ಮ ಕಾರಿನಲ್ಲಿ ಯಾವುದು ಬೇಕು ಎನ್ನುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು.

ಅಮೆಜಾನ್‌ ಇತ್ತೀಚೆಗೆ ‘ಸ್ಮಾರ್ಟ್‌ ಎಕೊ ಸ್ಪಾಟ್‌’ ಎಂಬ ಸ್ಮಾರ್ಟ್‌ ಅಲಾರಂ ಕ್ಲಾಕ್‌ ಬಿಡುಗಡೆ ಮಾಡಿದೆ. ಇದೊಂದು ಸ್ಪರ್ಶ ಸಂವೇದಿ ಪರದೆ ಹೊಂದಿರುವ ಹಾಗೂ ಬಳಕೆದಾರರ ಧ್ವನಿ ಗುರುತಿಸಿ ಕಾರ್ಯನಿರ್ವಹಿಸುವ ಗಡಿಯಾರ. ರಾತ್ರಿ ಮಲಗುವಾಗ, ಅಲೆಕ್ಸಾ ಬೆಳಗ್ಗಿನ ಜಾವ 5:30ಕ್ಕೆ ನನ್ನನ್ನು ಎಬ್ಬಿಸು ಎಂದು ಹೇಳಿ ಮಲಗಿದರೆ, ಕರಾರುವಾಕ್ಕಾಗಿ ಅದೇ ಸಮಯಕ್ಕೆ ಅಲಾರಂ ಹೊಡೆಯುತ್ತದೆ. ಇದರಲ್ಲಿ ವಿಡಿಯೊ ಕಾಲ್‌ ಮಾಡುವ ಸೌಲಭ್ಯವೂ ಇದೆ. ಕ್ಯಾಮೆರಾ ಕೂಡ ಇದೆ.

ಆದರೆ, ಒಂದು ಅಪಾಯವೆಂದರೆ ರಾತ್ರಿ ವೇಳೆ ಮಂಚದ ಮೇಲೆ ಕೇಂದ್ರೀಕೃತವಾಗಿರುವ ಇದರ ಕ್ಯಾಮೆರಾ ಕಣ್ಣು, ಒಳ ಉಡುಪಿನಲ್ಲಿ ಮಲಗಿರುವ ವ್ಯಕ್ತಿಯ ಚಿತ್ರವನ್ನು ಸೆರೆಹಿಡಿದು, ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡುವ ಅಪಾಯವೂ ಇದೆ. ಹೀಗಾಗಿ, ಸಾಧಾರಣ ಅಲಾರಂ ಬೇಕೇ, ಸ್ಮಾರ್ಟ್‌ ಅಲಾರಂ ಬೇಕೇ ಎನ್ನುವುದನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ಧರಿಸಿ ಎಂಬ ಸಲಹೆ ಮುಂದಿಡುತ್ತಾರೆ ತಂತ್ರಜ್ಞರು.

-ನ್ಯೂಯಾರ್ಕ್ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry