ದತ್ತಾಂಶ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ

7

ದತ್ತಾಂಶ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ

Published:
Updated:
ದತ್ತಾಂಶ ಸಂರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ

ಫೇಸ್‌ಬುಕ್‌, ಗೂಗಲ್‌, ಟ್ವಿಟರ್‌, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌ ಹೀಗೆ ಸಾಮಾಜಿಕ ಮಾಧ್ಯಮಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಲೇ ಇತದೆ. ಜನಜೀವನದ ಅವಿಭಾಜ್ಯ ಅಂಗಗಳಾಗಿರುವ ಇವುಗಳು ಮಾಹಿತಿ, ಮನರಂಜನೆ, ಸಂಪರ್ಕ ಜಾಲದ ಕೊಂಡಿಗಳಾಗಿವೆ. ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಜಗಳಗಳಾಗುತ್ತವೆ, ಮದುವೆಗಳ ಹೊಂದಾಣಿಕೆ ಏರ್ಪಡುತ್ತವೆ, ಪ್ರೀತಿ ಬೆಸೆಯುತ್ತದೆ ಹೀಗೆ ಈ ಪಟ್ಟಿಯೂ ಬೆಳೆಯುತ್ತದೆ.

ಇಂತಿಪ್ಪ ಮಾಧ್ಯಮಗಳಲ್ಲಿ ಏನನ್ನು ಹಂಚಿಕೊಳ್ಳಬೇಕು, ಯಾವುದಕ್ಕೆ ನಿರ್ಬಂಧವಿರಬೇಕು, ಯಾರು ಯಾರ ಪೋಸ್ಟ್ ಅನ್ನು ನೋಡಬೇಕು, ಯಾವುದಕ್ಕೆ ಲೈಕ್‌ ಮಾಡಬೇಕು, ಟೀಕೆ ಹಾಕಬೇಕು ಎಂಬುದಕ್ಕೆ ಒಂದು ಕಟ್ಟು ನಿಟ್ಟಿನ ನಿಯಮ ಭಾರತದಲ್ಲಂತೂ ಜಾರಿಯಲ್ಲಿಲ್ಲ. ಯಾವು ಯಾವುದಕ್ಕೊ ಕೊಂಡಿ ಬೆಳೆದು ಎಲ್ಲಿಗೊ ಸಂಪರ್ಕ ಬೆಸೆದು ಯಾರದೊ ಅನಿಸಿಕೆಗೆ ಯಾರೋ ‍ಪ್ರತಿಕ್ರಿಯೆ ನೀಡುತ್ತಾರೆ.

ಆದರೆ, ಇದಕ್ಕೆ ಎಂದೇ ಒಂದು ನಿರ್ದಿಷ್ಟ ನೀತಿಯನ್ನು ಐರೋಪ್ಯ ಒಕ್ಕೂಟ ಸಿದ್ಧಪಡಿಸಲು ಮುಂದಾಗಿದೆ. ಇನ್ನು ಮುಂದೆ ಎಷ್ಟು ವಯಸ್ಸಿನವರು ಏನನ್ನು ನೋಡಬೇಕು ಎನ್ನುವುದನ್ನೂ ಸೇರಿದಂತೆ ಹೀಗೆ ಎಲ್ಲದಕ್ಕೂ ಒಂದು ನಿಯಮ ಜಾರಿಯಾಗಲಿದೆ.

ಕಳೆದ ಕೆಲವು ತಿಂಗಳಿಂದ ಗೂಗಲ್‌ ತನ್ನ ಬಳಕೆದಾರರಿಗೆ ವಿಶ್ವದಾದ್ಯಂತ ಯಾವ ರೀತಿಯ ಮಾಹಿತಿಯನ್ನು ಜಿ–ಮೇಲ್‌ ಮತ್ತು ಗೂಗಲ್‌ ಡಾಕ್‌ನೊಂದಿಗೆ ಹಂಚಿಕೊಳ್ಳುತ್ತೀರಿ ಎಂಬುದನ್ನು ತಿಳಿದುಕೊಳ್ಳಲು ಬಯಸಿತ್ತು.

ಇದೇ ವೇ‌ಳೆ ಫೇಸ್‌ಬುಕ್‌ ಸಹ, ‘ಜಾಗತಿಕ ದತ್ತಾಂಶ ಖಾಸಗಿ ಕೇಂದ್ರ’ವೊಂದನ್ನು ಆರಂಭಿಸಿದೆ. ಬಳಕೆದಾರರು ತಮ್ಮ ಪೋಸ್ಟ್‌ಗಳನ್ನು ಯಾರು ನೋಡಬೇಕು ಮತ್ತು ಯಾವ ರೀತಿಯ ಜಾಹೀರಾತುಗಳನ್ನು ಹಾಕಲಾಗುತ್ತದೆ ಎಂಬ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.

ವಿಶ್ವದಾದ್ಯಂತ ಅನ್ವಯವಾಗುವ ಈ ಬದಲಾವಣೆಗಳಿಗೆ ಮೂಲವೇ ಐರೋಪ್ಯ ಒಕ್ಕೂಟದ ಹೊಸ ನಿಯಮ. ತಂತ್ರಜ್ಞಾನದ ಬೃಹತ್‌ ಕಂಪನಿಗಳು ದತ್ತಾಂಶ ಖಾಸಗಿತನ ರಕ್ಷಿಸಲು  ಹೊಸ ನಿಯಮಗಳನ್ನು ರೂಪಿಸತೊಡಗಿವೆ. ಇದನ್ನೇ ದತ್ತಾಂಶ ಸಂರಕ್ಷಣಾ ಸಾಮಾನ್ಯ ನಿಯಂತ್ರಣ ಕ್ರಮಗಳು (General Data Protection Regulation -GDPR) ಎನ್ನಲಾಗುತ್ತದೆ.

ಈ ನಿಯಮಗಳ ಪ್ರಕಾರ, ಕಠಿಣ ನಿಯಂತ್ರಣಗಳು ಜಾರಿಯಾಗಲಿವೆ. ಯಾವ ರೀತಿಯ ವೈಯಕ್ತಿಕ ಮಾಹಿತಿಯನ್ನು ಕಂಪನಿಗಳು ಸಂಗ್ರಹಿಸಬಹುದು, ಕೂಡಿಡಬಹುದು ಎಂಬ ಪ್ರಸ್ತಾವಗಳಿವೆ. ಇದು ಐರೋಪ್ಯ ಒಕ್ಕೂಟದ 28 ಸದಸ್ಯ ದೇಶಗಳಿಗೆ ಅನ್ವಯವಾಗುತ್ತದೆ.

ಕೆಲವು ಡಿಜಿಟಲ್‌ ಸೇವೆಗಳನ್ನು ಬಳಸಲು ನಿರ್ದಿಷ್ಟ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಪೋಷಕರ ಒಪ್ಪಿಗೆಯನ್ನು ಪಡೆದುಕೊಳ್ಳಬೇಕೇ ಬೇಡವೇ ಎಂಬ ನಿಯಮವೂ ಇದೆ.

ಕೆಲವೇ ತಿಂಗಳಲ್ಲಿ ಹೊಸ ಖಾಸಗಿ ನೀತಿ ಜಾರಿ ಮಾಡಬೇಕಿರುವುದರಿಂದ ಐರೋಪ್ಯ ಒಕ್ಕೂಟದಾದ್ಯಂತ ಫೇಸ್‌ ಬುಕ್‌ ಮತ್ತು ಗೂಗಲ್‌ ತನ್ನ ಬಳಕೆದಾರರಿಗೆ ತಿಳಿವಳಿಕೆ ನೀಡಲು ನೂರಾರು ಜನರನ್ನು ನೇಮಿಸಿವೆ.

ಕೆಲವು ಕಂಪನಿಗಳು ಗರಿಷ್ಠ ಪ್ರಮಾಣದ ಡೇಟಾ ಬಳಸುವ ಉತ್ಪನ್ನಗಳನ್ನು ಮರು ವಿನ್ಯಾಸ ಮಾಡಿವೆ. ಹೊಸ ಖಾಸಗಿ ನೀತಿ ಉಲ್ಲಂಘನೆ ಭಯದಿಂದ ಕೆಲವು ಕಂಪನಿಗಳು ಐರೋಪ್ಯ ಒಕ್ಕೂಟದ ಮಾರುಕಟ್ಟೆಯಿಂದಲೇ ಉತ್ಪನ್ನಗಳನ್ನು ತೆರವುಗೊಳಿಸಿವೆ. 

‘ಯಾರು ನಮಗಾಗಿ ಕೆಲಸ ಮಾಡುತ್ತಾರೊ ಅವರನ್ನೆಲ್ಲ ಜಿಡಿಪಿಆರ್‌ ಸಿದ್ಧಪಡಿಸುವಲ್ಲಿ ಬಳಸಿಕೊಳ್ಳುತ್ತೇವೆ’ ಎನ್ನುತ್ತಾರೆ ಸ್ಯಾನ್‌ ಫ್ರಾನ್ಸಿಸ್ಕೊದ ಕ್ಲೌಡ್‌ ಫ್ಲೇರ್‌ ಕಂಪನಿಯ ಸಲಹೆಗಾರ ಡೌಗ್‌ ಕ್ರಾಮೆರ್‌. ಈಗಾಗಲೇ ಈ ಕಂಪನಿ ತನ್ನ ದತ್ತಾಂಶ ಸಂಗ್ರಹ ಮತ್ತು ಸಂಸ್ಕರಣಾ ಪದ್ಧತಿಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ಇಂಟರ್‌‌ನೆಟ್‌ನ ಕಾರ್ಯವಿಧಾನವನ್ನೇ ಬದಲಾಯಿಸುವ ಶಕ್ತಿ ಜಿಡಿಪಿಆರ್‌ಗೆ ಇದೆ ಎನ್ನುತ್ತಾರೆ ಇವರು.

ದತ್ತಾಂಶ ರಕ್ಷಣೆಗೆ ಫೇಸ್‌ಬುಕ್‌ ನಂತಹ ಬೃಹತ್‌ ಕಂಪನಿಗಳು ತೊಂದರೆ ಅನುಭವಿಸಿದ ನಂತರ ಜಿಡಿಪಿಆರ್‌ ನಿಯಮಗಳಿಗೆ 2015 ರ ಅಂತ್ಯದಲ್ಲಿ ಒಪ್ಪಿಗೆ ನೀಡಿದ್ದರೂ ಈ ವರ್ಷ ಐರೋಪ್ಯ ಒಕ್ಕೂಟ ಆಸಕ್ತಿ ವಹಿಸಿದೆ.

ಯಾವುದೇ ರೀತಿಯಲ್ಲಿ ಹಂಚಿಕೊಳ್ಳುವ ದತ್ತಾಂಶದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಜನರಿಗೆ ನೀಡುತ್ತೇವೆ ಎಂದು ಫೇಸ್‌ಬುಕ್‌ ಮತ್ತು ಗೂಗಲ್‌ನಂತಹ ದೈತ್ಯ ಕಂಪನಿಗಳು ಈಗಾಗಲೇ ಹೇಳಿವೆ.

ಹೊಸ ಖಾಸಗಿ ನೀತಿ ಜಾರಿಯಾಗುವುದರಿಂದ ಆಂತರಿಕವಾಗಿಯೂ ಬದಲಾವಣೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಭದ್ರತೆ ಮತ್ತು ದತ್ತಾಂಶ ರಕ್ಷಣಾ ನಿರ್ದೇಶಕ ಗಿಲಾಡ್‌ ಗೋಲನ್‌ ಅವರು. ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಕಳೆದ ತಿಂಗಳು ಮಾತನಾಡಿರುವ ಅವರು, ‘ಜಿಡಿಪಿಆರ್‌ ಜಾರಿಯಾದರೆ ನಾವು ಅದಕ್ಕೆ ಸಿದ್ಧರಿದ್ದೇವೆ’ ಎಂದೂ ತಿಳಿಸಿದ್ದಾರೆ.

ಖಾಸಗಿ ನೀತಿ ಒಮ್ಮೆ ಜಾರಿಯಾದರೆ ಐರೋಪ್ಯ ಒಕ್ಕೂಟದ ಹೊರಗಿರುವ ದೇಶಗಳೂ ಸಹ ತಮ್ಮ ದತ್ತಾಂಶ ರಕ್ಷಣಗೆ ತಮ್ಮದೇ ಆದ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬಹುದು.

ನಾಲ್ಕು ವರ್ಷಗಳ ಶ್ರಮ

ಸತತ ನಾಲ್ಕು ವರ್ಷಗಳ ಸಿದ್ಧತೆ ಮತ್ತು ಚರ್ಚೆಯ ನಂತರ ಜಿಡಿಪಿಆರ್‌ಗೆ ಐರೋಪ್ಯ ಒಕ್ಕೂಟದ ಸಂಸತ್‌ 2016 ರ ಏಪ್ರಿಲ್‌ನಲ್ಲಿ ಒಪ್ಪಿಗೆ ನೀಡಿದೆ. ಇದರ ಜಾರಿ ದಿನಾಂಕ 2018 ರ ಮೇ 25 ಎಂದು ತಿಳಿಸಲಾಗಿದೆ. ದತ್ತಾಂಶ ರಕ್ಷಣಾ ನಿರ್ದೇಶನ 95/46 ಇಸಿ ಬದಲಿಗೆ ಜಿಡಿಪಿಆರ್‌ ಜಾರಿಗೆ ಬರಲಿದೆ. ಜಿಡಿಪಿಆರ್‌ ಕೇವಲ ಐರೋಪ್ಯ ಒಕ್ಕೂಟದ ಒಳಗಿನ ಕಂಪನಿಗಳಿಗೆ ಮಾತ್ರವೇ ಅನ್ವಯಿಸುವುದಿಲ್ಲ.  ಜಿಡಿಪಿಆರ್‌ ನಿಯಮವನ್ನು ಪಾಲನೆ ಮಾಡದೆ ಉಲ್ಲಂಘಿಸಿದರೆ ಕಂಪನಿಗಳಿಗೆ ಅವುಗಳ ಜಾಗತಿಕ ವಹಿವಾಟಿನ ಶೇ 4 ರಷ್ಟು ದಂಡ ವಿಧಿಸಲು ಅಧಿಕಾರವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry