ಲಾಂಛನ ಬದಲಾಯಿತು...

7

ಲಾಂಛನ ಬದಲಾಯಿತು...

Published:
Updated:
ಲಾಂಛನ ಬದಲಾಯಿತು...

ಬ್ರ್ಯಾಂಡ್ ಮೌಲ್ಯ ಹೆಚ್ಚಿಸಲು, ಮಾರುಕಟ್ಟೆಯ ಬದಲಾವಣೆಗಳಿಗೆ ತಕ್ಕಂತೆ ಸಂಸ್ಥೆಗಳು ಆಗಾಗ್ಗೆ ತಮ್ಮ ಲಾಂಛನವನ್ನು ಬದಲಾಯಿಸುತ್ತಿರುತ್ತವೆ. ವಿನ್ಯಾಸ, ಶೀರ್ಷಿಕೆಗಳಿಗೆ ಹೊಸ ರೂಪ ಕೊಡುತ್ತಿರುತ್ತವೆ. ಹೀಗೆ ಬದಲಾವಣೆಯಾದ ಕೆಲವು ಸಂಸ್ಥೆಗಳ ಲಾಂಛನಗಳು ಇಲ್ಲಿವೆ.

ವಿದ್ಯುತ್ ಉಪಕರಣಗಳ ತಯಾರಿಕಾ ಸಂಸ್ಥೆ, ವಿ–ಗಾರ್ಡ್ ಲಾಂಛನ ಹೆಚ್ಚು ಜನಪ್ರಿಯತೆ ಪಡೆದಿತ್ತು. ಮಗುವನ್ನು ತಾಯಿ ಜೋಪಾನವಾಗಿ ರಕ್ಷಿಸುವಂತೆ ಗ್ರಾಹಕರು ಖರೀದಿಸಿದ ವಿದ್ಯುತ್ ಉಪಕರಣಗಳನ್ನು ವಿ–ಗಾರ್ಡ್‌ ಸ್ಟೆಬಿಲೈಜರ್‌ಗಳು ರಕ್ಷಿಸುತ್ತವೆ, ಎಂಬುದರ ಪ್ರತೀಕವಾಗಿ ಹೊಟ್ಟೆಚೀಲದಲ್ಲಿ ಮಗುವನ್ನು ಇಟ್ಟುಕೊಂಡಿದ್ದ ಕಾಂಗರೂ ಲಾಂಛನದಲ್ಲಿತ್ತು. ಈಚೆಗಷ್ಟೇ ಬದಲಾವಣೆ ಮಾಡಿರುವ ಸಂಸ್ಥೆ, ಓಡುತ್ತಿರುವ ಕಾಂಗರೂವನ್ನು ಪರಿಚಯಿಸಿದೆ. ‘ಉತ್ತಮ ನಾಳೆಗಳಿಗಾಗಿ ಮನೆಗೆ ತನ್ನಿ’ ಎಂದು ಘೋಷವಾಕ್ಯವನ್ನೂ ಬರೆದಿದೆ.

ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆ ವಿಪ್ರೊ, ಈ ಹಿಂದೆ ಐದು ಬಣ್ಣಗಳಲ್ಲಿ ಕಂಗೊಳಿಸುತ್ತಿದ್ದ ಸೂರ್ಯಕಾಂತಿ ಹೂವನ್ನು ಲಾಂಛನವಾಗಿ ರಚಿಸಿತ್ತು. ಕಳೆದ ವರ್ಷ ಬದಲಿಸಿ, ವಿವಿಧ ಬಣ್ಣಗಳಲ್ಲಿ ಚುಕ್ಕಿಗಳನ್ನು ನಾಲ್ಕು ವೃತ್ತಾಕಾರದಲ್ಲಿ ಜೋಡಿಸಿದೆ. ವಿಪ್ರೊ ಎಂಬ ಹೆಸರನ್ನು ವೃತ್ತಗಳ ಮಧ್ಯದಲ್ಲಿ ಕೊನೆಯಾಗುವಂತೆ ರಚಿಸಿ, ಗ್ರಾಹಕರೊಂದಿಗೆ ಸಂಸ್ಥೆ ನಿರಂತರವಾಗಿ ಸಂಪರ್ಕದಲ್ಲಿರುತ್ತದೆ ಎಂಬುದರ ಸೂಚಕ ಈ ಲಾಂಛನ ಎಂದು ಸಂಸ್ಥೆ ಹೇಳಿತ್ತು.

ಭಾರತೀಯರಿಗೆ ಪಿಜ್ಜಾ ರುಚಿ ಪರಿಚಯಿಸಿದ್ದು, ಡೊಮಿನೊಸ್‌ ಪಿಜ್ಜಾ ರೆಸ್ಟೊರೆಂಟ್‌. ಈ ಹಿಂದಿನ ಲಾಂಛನದಲ್ಲಿ ಡೊಮಿನೊಸ್‌ ಪಿಜ್ಜಾ ಎಂಬ ಹೆಸರೂ ಸ್ಪಷ್ಟವಾಗಿ ಇತ್ತು. ಆದರೆ ಪಿಜ್ಜಾದೊಂದಿಗೆ, ಬರ್ಗರ್‌, ನಾನ್‌ನಂತಹ ಖಾದ್ಯಗಳನ್ನೂ ತಯಾರಿಸಲು ಆರಂಭಿಸಿದ ನಂತರ ಲಾಂಛನವನ್ನೂ ಬದಲಾಯಿಸಿದೆ. Dominos ಎಂಬುದನ್ನು ಮಾತ್ರ ಉಳಿಸಿ Pizza ತೆಗೆದಿದ್ದಾರೆ.

ವಿಡಿಯೋ ಕರೆಗಳ ಸೌಲಭ್ಯ ಕಲ್ಪಿಸುವ ಸ್ಕೈಪ್‌ ತಂತ್ರಾಂಶ ತನ್ನ ಮೊದಲಿನ ಲಾಂಛನದಲ್ಲಿ SkypeTM ಎಂಬ ಹೆಸರನ್ನೇ ವಿಶೇಷವಾಗಿ ಬರೆದು ಲಾಂಛನ ಮಾಡಿತ್ತು. ಆನಂತರ ತಂತ್ರಾಂಶದಲ್ಲಿ ಹಲವು ವೈಶಿಷ್ಟ್ಯಗಳನ್ನು ಅಳವಡಿಸಿದ ನಂತರ ಲಾಂಛನವನ್ನೂ ಬದಲಾಯಿಸಿತು. ಈಗಿನ ಲಾಂಛನದಲ್ಲಿ Skype ಎಂಬ ಅಕ್ಷರಗಳಲ್ಲಿ S ಮಾತ್ರ ಮೋಡದಲ್ಲಿ ಬಂದಿಯಾಗಿರುವಂತೆ  ರಚಿಸಿದೆ.’

ಆ್ಯಪ್‌ ಆಧಾರಿತ ಬಾಡಿಗೆ ಟ್ಯಾಕ್ಸಿ ಸೇವೆ ಒದಗಿಸುವ, ಉಬರ್‌, ತನ್ನ ತಂತ್ರಾಂಶದ ಲಾಂಛನವನ್ನು ಮೂರು ಬಾರಿ ಬದಲಿಸಿದೆ. ಆರಂಭದಲ್ಲಿ Uber ನ ಮೊದಲ U ಅಕ್ಷರವನ್ನು ಬಳಸಿ ಲಾಂಛನ ರಚಿಸಲಾಗಿತ್ತು. ನಂತರ ಕಾರ್‌ ಲಾಕ್‌ ಪ್ರತಿಬಿಂಬಿಸುವಂತೆ ಲೋಗೊ ಬದಲಿಸಿತ್ತು. ಪ್ರಸ್ತುತ ಅದನ್ನೇ ಬಳಸುತ್ತಿದ್ದರೂ ಸುತ್ತಲೂ ಇದ್ದ ಕಲರ್ ಬ್ಯಾಕ್‌ಗ್ರೌಂಡ್‌ ತೆಗೆದು ಹಾಕಿದೆ.

ಆಂಡ್ರಾಯ್ಡ್‌ ತಂತ್ರಾಂಶಗಳನ್ನು ಡೌನ್‌ಲೋಡ್‌ಮಾಡಲು ನೆರವಾಗುವ ಪ್ಲೇಸ್ಟೋರ್ ಲಾಂಛನವನ್ನೂ ಬದಲಿಸಲಾಗಿದೆ. ಈ ಮೊದಲು ಒಂದು ಸೂಟ್‌ಕೇಸ್ ಮೇಲೆ ಬಣ್ಣದ ತ್ರಿಭುಜವನ್ನು ರಚಿಸಿ ಲಾಂಛನ ರಚಿಸಿತ್ತು. ಪ್ರಸ್ತುತ ಸೂಟ್‌ಕೇಸ್ ತೆಗೆದುಹಾಕಲಾಗಿದೆ. ಶುಲ್ಕ ಪಾವತಿಸಿ ಡೌನ್‌ಲೋಡ್‌ ಮಾಡಿಕೊಳ್ಳುವ ತಂತ್ರಾಂಶಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಸೂಟ್‌ಕೇಸ್ ತೆಗೆಯಲಾಗಿದೆ ಎಂಬುದು ಕೆಲವರ ಅಭಿಪ್ರಾಯ.

ಪ್ರಮುಖ ಸ್ಪೋರ್ಟ್ಸ್ ಬ್ರ್ಯಾಂಡ್‌ ಆಗಿ ಖ್ಯಾತಿ ಗಳಿಸಿರುವ ಅಡಿದಾಸ್‌ನ ಮೊದಲ ಲಾಂಛನ, ಮೂರು ಎಲೆಗಳನ್ನು ಸೇರಿಸುತ್ತಾ ಅಡ್ಡವಾಗಿ ಮೂರು ಬಿಳಿ ಗೆರೆಗಳು ಗೀಚಿದಂತೆ ಇತ್ತು. ಈಗ ಒಂದು ಕಡೆ ವಾಲಿರುವ ಮೂರು ದೀರ್ಘ ಚತುರ್ಭುಜಗಳ ಕೆಳಗೆ adidas ಎಂದು ಬರೆಯಲಾಗಿದೆ.

ಮೊಬೈಲ್‌ಫೋನ್‌, ಲ್ಯಾಪ್‌ಟಾಪ್‌, ಡೆಸ್ಕ್‌ಟಾಪ್‌ಗಳ ತಯಾರಿಕೆಯಲ್ಲಿ ವಿಶ್ವದಲ್ಲೇ ಅತ್ಯುತ್ತಮ ಬ್ರ್ಯಾಂಡ್ ಎಂಬ ಖ್ಯಾತಿಯನ್ನು ಆ್ಯಪಲ್‌ ಗಳಿಸಿದೆ. ಮೊದಲು ನ್ಯೂಟನ್ ಗುರುತ್ವಾಕರ್ಷಣ ಸಿದ್ಧಾಂತವನ್ನು ಪ್ರತಿಪಾದಿಸಲು ಕಾರಣವಾದ ಆ್ಯಪಲ್ ವೃಕ್ಷವನ್ನು ಲಾಂಛನವಾಗಿ ಬಳಸಿತ್ತು.  ಸದ್ಯಕ್ಕೆ ಒಂದು ಕಡೆ ಕಚ್ಚಿದ ಆ್ಯಪಲ್‌ ಅನ್ನು ಲಾಂಛನವಾಗಿ ಬಳಸುತ್ತಿದೆ.

ಪ್ರಮುಖ ಸರ್ಚ್‌ ಎಂಜಿನ್ ಗೂಗಲ್‌ ತಯಾರಿಸಿದ ವೆಬ್‌ ಬ್ರೌಸರ್ ಗೂಗಲ್‌ ಕ್ರೋಮ್‌ನ ಲಾಂಛನ ಮೊದಲು ರೋಬೊಟಿಕ್ ಚೆಂಡನ್ನು ಪ್ರತಿಬಿಂಬಿಸುವಂತೆ ಇತ್ತು. ಪ್ರಸ್ತುತ ಕೆಂಪು, ಹಳದಿ, ಹಸಿರು ಬಣ್ಣಗಳು ಒಂದಕ್ಕೊಂದು ಸುತ್ತುವರಿದಿರುವ ಪುಟ್ಟ ಗ್ಲೋಬ್ ರೀತಿ ಬದಲಿಸಲಾಗಿದೆ.

ಇ–ಕಾಮರ್ಸ್ ಸಂಸ್ಥೆ ಅಮೇಜಾನ್ ಆರಂಭದಲ್ಲಿ ಕೇವಲ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರಿಂದ ಪುಸ್ತಕ ಪ್ರತಿಬಿಂಬಿಸುವಂತೆ ಲಾಂಛನ ತಯಾರಿಸಿತ್ತು. A ಅಕ್ಷರವನ್ನು ದೊಡ್ಡದಾಗಿ ರಚಿಸಿತ್ತು. ಪ್ರಸ್ತುತ ಲಾಂಛನವನ್ನು ಕೇವಲ amazon.com ಎಂಬ ಅಕ್ಷರಗಳಲ್ಲೇ ರಚಿಸಿದೆ. ಆದರೆ ಸಂಸ್ಥೆಯಲ್ಲಿ ಎಲ್ಲ ವಸ್ತುಗಳೂ ಸಿಗುತ್ತವೆ ಎಂಬುದನ್ನು ಸೂಚಿಸಲು a ಮತ್ತು z ಅಕ್ಷರಗಳನ್ನು ಕೂಡಿಸುವಂತೆ ಬಾಣದ ಗೆರೆ ಎಳೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry