ಶ್ರೀದೇವಿ ಅಸಂತೃಪ್ತ ಮಹಿಳೆ: ಅಭಿಮಾನಿಗಳಿಗೆ ರಾಮ್‌ ಗೋಪಾಲ್ ವರ್ಮಾ ಬಹಿರಂಗ ಪತ್ರ

7

ಶ್ರೀದೇವಿ ಅಸಂತೃಪ್ತ ಮಹಿಳೆ: ಅಭಿಮಾನಿಗಳಿಗೆ ರಾಮ್‌ ಗೋಪಾಲ್ ವರ್ಮಾ ಬಹಿರಂಗ ಪತ್ರ

Published:
Updated:
ಶ್ರೀದೇವಿ ಅಸಂತೃಪ್ತ ಮಹಿಳೆ: ಅಭಿಮಾನಿಗಳಿಗೆ ರಾಮ್‌ ಗೋಪಾಲ್ ವರ್ಮಾ ಬಹಿರಂಗ ಪತ್ರ

ನವದೆಹಲಿ: ಬಹುಭಾಷಾ ನಟಿ ಶ್ರೀದೇವಿ ಅವರೊಬ್ಬ ‘ಅಸಂತೃಪ್ತ’ ಮಹಿಳೆಯಾಗಿದ್ದರು ಎಂದು ಸಿನಿಮಾ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಪ್ರತಿಯೊಬ್ಬ ಮನುಷ್ಯನ ವೈಯಕ್ತಿಕ ಜೀವನವು ಪ್ರಪಂಚ ಆತನ ಬಗ್ಗೆ ತಿಳಿದಿರುವುದಕ್ಕಿಂತಲೂ ಭಿನ್ನವಾಗಿರುತ್ತದೆ ಎಂಬುದಕ್ಕೆ ನಟಿ ಶ್ರೀದೇವಿ ಅವರ ಬದುಕೇ ಉದಾಹರಣೆ ಎಂದು ಅವರು ಹೇಳಿದ್ದಾರೆ.

‘ಮೈ ಲವ್ ಲೆಟರ್ ಟು ಶ್ರೀದೇವಿಸ್ ಫ್ಯಾನ್ಸ್ (ಶ್ರೀದೇವಿ ಅವರ ಅಭಿಮಾನಿಗಳಿಗೆ ನನ್ನ ಪ್ರೀತಿಯ ಪತ್ರ)’ ಎಂಬ ಶೀರ್ಷಿಕೆಯಡಿ ಫೇಸ್‌ಬುಕ್‌ನಲ್ಲಿ ಬಹಿರಂಗ ಪತ್ರ ಬರೆದಿರುವ ವರ್ಮಾ, ‘ಈ ವಿಷಯವನ್ನು ಬಹಿರಂಗಪಡಿಸಬೇಕೇ ಬೇಡವೇ ಎಂದು ಹಲವು ಬಾರಿ ಯೋಚಿಸಿದೆ. ಶ್ರೀದೇವಿ ಅವರ ಅಭಿಮಾನಿಗಳಿಗೆ ಅವರೇ ಎಲ್ಲವೂ ಆಗಿದ್ದಾರೆ. ಹೀಗಾಗಿ, ಅಭಿಮಾನಿಗಳಿಗೆ ಸತ್ಯ ತಿಳಿಯುವ ಹಕ್ಕಿದೆ’ ಎಂದೂ ಉಲ್ಲೇಖಿಸಿದ್ದಾರೆ.

‘ಅನೇಕರ ದೃಷ್ಟಿಯಲ್ಲಿ ಶ್ರೀದೇವಿ ಅವರ ಬದುಕು ಪರಿಪೂರ್ಣವಾದದ್ದು. ಸುಂದರವಾದ ಮುಖ, ಅತ್ಯುದ್ಭುತವಾದ ಪ್ರತಿಭೆ, ಇಬ್ಬರು ಸುಂದರಿ ಪುತ್ರಿಯರನ್ನೊಳಗೊಂಡ ಕುಟುಂಬ. ಎಲ್ಲವೂ ಅಪೇಕ್ಷಣಿಯ. ಆದರೆ, ಅವರು ನಿಜವಾಗಿಯೂ ಸಂತುಷ್ಟರಾಗಿದ್ದರೇ? ಸಂತೃಪ್ತ ಬದುಕನ್ನು ನಡೆಸಿದ್ದರೇ?’ ಎಂದು ಪತ್ರದಲ್ಲಿ ವರ್ಮಾ ಪ್ರಶ್ನಿಸಿದ್ದಾರೆ.

ಜನರು ಶ್ರೀದೇವಿ ಅವರ ಗ್ಲಾಮರಸ್ ಬದುಕನ್ನು ನೋಡಿದ್ದಾರೆ. ಇದರಿಂದಲೂ ಹೆಚ್ಚಿನದ್ದನ್ನು ತಿಳಿದುಕೊಳ್ಳಬೇಕಿದೆ ಎಂದಿರುವ ವರ್ಮಾ, ಶ್ರೀದೇವಿ ಅವರು ಸ್ವತಂತ್ರ ಹಕ್ಕಿಯಾಗಿರುವುದನ್ನು ನಾನೇ ನೋಡಿದ್ದೆ. ಆದರೆ, ತಂದೆಯ ಸಾವಿನ ನಂತರ ಅವರು ಪಂಜರದೊಳಗಣ ಹಕ್ಕಿಯಾದರು ಎಂದು ಬರೆದಿದ್ದಾರೆ. ತಾಯಿಯ ತಪ್ಪು ನಿರ್ಧಾರಗಳು ಮತ್ತು ಜೀವನದಲ್ಲಿ ಬೋನಿ ಕಪೂರ್ (ಶ್ರಿದೇವಿ ಅವರ ಪತಿ) ಅವರ ಪ್ರವೇಶವೇ ಶ್ರೀದೇವಿ ಅವರು ಬಂಧಿಯಾಗಲು ಕಾರಣವಾಗಿತ್ತು ಎಂದು ವರ್ಮಾ ಹೇಳಿದ್ದಾರೆ.

‘ಅಂದು ಬೋನಿ ಕಪೂರ್ ಸಾಲದ ಸುಳಿಯಲ್ಲಿದ್ದು, ಅವರ ಕಷ್ಟದಲ್ಲಿ ಶ್ರೀದೇವಿ ಹೆಗಲು ಕೊಡಬೇಕಿತ್ತು. ಹೀಗಾಗಿ ಶ್ರೀದೇವಿ ಬಡವಾಗಬೇಕಾಯಿತು. ಅಲ್ಲದೆ, ಶ್ರೀದೇವಿ ಅವರನ್ನು ಬೋನಿಯ ತಾಯಿ ಕುಟುಂಬ ಭಂಜಕಿಯಂತೆ ಕಂಡಿದ್ದರು. ಬೋನಿ ಮೊದಲ ಪತ್ನಿ ಮೋನಾ ಪರ ವಹಿಸಿದ್ದ ಅವರ ತಾಯಿ ಒಮ್ಮೆ ಪಂಚತಾರಾ ಹೋಟೆಲೊಂದರಲ್ಲಿ ಸಾರ್ವಜನಿಕವಾಗಿ ಶ್ರೀದೇವಿ ಅವರ ಹೊಟ್ಟೆಗೆ ಗುದ್ದಿದ್ದರು. ಇಂಗ್ಲಿಷ್ ವಿಂಗ್ಲಿಷ್ ಸಿನಿಮಾದ ಸಂದರ್ಭ ಹೊರತುಪಡಿಸಿ ಉಳಿದೆಲ್ಲ ಸಮಯ ಶ್ರೀದೇವಿ ಪಾಲಿಗೆ ಸಂಕಷ್ಟದ್ದಾಗಿತ್ತು. ಭವಿಷ್ಯದ ಬಗೆಗಿನ ಅನಿಶ್ಚಿತತೆ, ಖಾಸಗಿ ಜೀವನದಲ್ಲಿ ಹಠಾತ್ ತಿರುವುಗಳು ಆಕೆಯ ಮನಸ್ಸನ್ನು ಘಾಸಿಗೊಳಿಸಿದ್ದವು. ಹೀಗಾಗಿ ಅವರು ಶಾಂತಿಯಿಂದಿರಲಿಲ್ಲ’ ಎಂದು ವರ್ಮಾ ಬರೆದಿದ್ದಾರೆ.

ಸೌಂದರ್ಯ ಕಾಪಾಡುವುದಕ್ಕಾಗಿ ಶ್ರೀದೇವಿ ಅವರು ಒಳಗಾಗಿದ್ದ ಶಸ್ತ್ರಚಿಕಿತ್ಸೆಗಳು, ಮನದ ದುಗುಡವನ್ನು ಹೊರಜಗತ್ತಿಗೆ ತೋರ್ಪಡಿಸಿಕೊಳ್ಳದೆ ಜೀವನ ನಡೆಸಿದ್ದರ ಬಗ್ಗೆಯೂ ವರ್ಮಾ ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry