ರಕ್ಷಣಾ ವಿಜ್ಞಾನಿ ಅತ್ರೆ ಮನದ ಮಾತು

7

ರಕ್ಷಣಾ ವಿಜ್ಞಾನಿ ಅತ್ರೆ ಮನದ ಮಾತು

Published:
Updated:
ರಕ್ಷಣಾ ವಿಜ್ಞಾನಿ ಅತ್ರೆ ಮನದ ಮಾತು

ನನ್ನೂರು ವೈಟ್‌ಫೀಲ್ಡ್‌ನಿಂದ 15 ಕಿ.ಮೀ ದೂರದ ಕಲ್ಕುಂಟೆ ಅಗ್ರಹಾರ. ಹುಟ್ಟಿದ್ದು 1939ರ ಆಗಸ್ಟ್‌ 28ರಂದು. ನನ್ನ ತಂದೆ ಕೆ.ಎನ್.ರಂಗಸ್ವಾಮಿ ಎಲೆಕ್ಟ್ರಿಸಿಟಿ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕಬಳ್ಳಾಪುರ, ಮೈಸೂರು, ಹಾಸನ, ಬೆಂಗಳೂರು, ಜೋಗ ಹೀಗೆ ತಂದೆಗೆ ವರ್ಗವಾದಂತೆ ನನ್ನ ಶಾಲೆಗಳೂ ಬದಲಾಗುತ್ತಿದ್ದವು. 1955ರಲ್ಲಿ ಮಲ್ಲೇಶ್ವರ ಹೈಸ್ಕೂಲ್‌ನಲ್ಲಿ ಹತ್ತನೇ ತರಗತಿ ಓದಿದೆ. ಆನಂದ ರಾವ್‌ ವೃತ್ತದಲ್ಲಿರುವ ರೇಣುಕಾಚಾರ್ಯ ಹೈಸ್ಕೂಲ್‌ನಲ್ಲಿ ಇಂಟರ್‌ ಮೀಡಿಯೆಟ್‌ ಮುಗಿಸಿ 1961ರಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಮುಗಿಸಿದೆ.

ತಮಾಷೆ ಎಂದರೆ, ನಾನ್ಯಾಕೆ ಎಂಜಿನಿಯರಿಂಗ್‌ ಓದಿದೆ ಎಂದು ಇವತ್ತಿಗೂ ನನಗೆ ಗೊತ್ತಿಲ್ಲ. ವಿಜ್ಞಾನದ ಬಗ್ಗೆ ಎಳ್ಳಷ್ಟೂ ಆಸಕ್ತಿ ಇರಲಿಲ್ಲ. ಆದರೆ ಎಂಜಿನಿಯರಿಂಗ್‌ ಮುಗಿದ ನಂತರ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಏನೋ ಇದೆ ಎಂದು ಅನಿಸತೊಡಗಿತು. ಯಾರೋ ನೀಡಿದ ಸಲಹೆಯಂತೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ಗೆ ಇಲೆಕ್ಟ್ರಿಕಲ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಸೇರಿಕೊಂಡೆ. 1961ರಿಂದ 1963ರ ಆ ಎರಡು ವರ್ಷ ನನಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಸಮಗ್ರ ಪರಿಚಯವಾಯಿತು. ನಾನು ಓದಿದ್ದು ಏನೇನೂ ಅಲ್ಲ, ಇನ್ನಷ್ಟು ಅಧ್ಯಯನ ಮಾಡಬೇಕೆಂಬ ಆಸೆಯೂ ಬಲವಾಯಿತು. ನನ್ನ ಜೀವನದ ಬಹಳ ಮುಖ್ಯವಾದ ಅವಧಿಯಿದು. ಆದರೆ ಆಗ ಐಐಟಿ ಖರಗ್‌ಪುರ ಮತ್ತು ಐಐಎಸ್‌ಸಿ ಬಿಟ್ಟರೆ ದೊಡ್ಡ ಸಂಸ್ಥೆಗಳೇ ಇರಲಿಲ್ಲ. ಯಾವ ಐಐಟಿಗಳೂ ಶುರುವಾಗಿರಲಿಲ್ಲ. ಹಾಗಾಗಿ ವಿದೇಶಕ್ಕೇ ಹೋಗಬೇಕಿತ್ತು.

ಕೆನಡಾದಲ್ಲಿ ಶುರುವಾಗಲಿದ್ದ ಯುನಿವರ್ಸಿಟಿ ಆಫ್‌ ವಾಟರ್‌ಲೂನಲ್ಲಿ ಓದು ಎಂಬ ಸಲಹೆ ಬಂತು. ಅಮೆರಿಕಕ್ಕೆ ಹೋಗಲು ಬೇಕಾದಷ್ಟು ದುಡ್ಡು ನಮ್ಮಲ್ಲಿರಲಿಲ್ಲ. ಅದಕ್ಕೆ ಅಲ್ಲಿನ ಮೂರ್ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದೆ. ಎರಡು ವಿವಿಗಳಿಂದ 1964ರಲ್ಲಿ ವಿದ್ಯಾರ್ಥಿ ವೇತನ ಸಿಕ್ಕಿತು. ಒಂದು ವರ್ಷವನ್ನು ವ್ಯರ್ಥ ಮಾಡುವುದು ಬೇಡವೆಂದು ಆಗ ತಾನೇ ಪೀಣ್ಯದಲ್ಲಿ ಶುರುವಾಗಿದ್ದ ಶರಾವತಿ ಸರ್ವಿಸ್‌ ಸ್ಟೇಷನ್‌ನಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಮ್ಮ ಮನೆ ಆಗ ಕುಮಾರಪಾರ್ಕ್‌ನಲ್ಲಿತ್ತು. ಅಲ್ಲಿಂದ ಪೀಣ್ಯಕ್ಕೆ ಬೆಳಿಗ್ಗೆ ಒಂದು ಬಸ್‌ ಮಾತ್ರ ಓಡುತ್ತಿತ್ತು. ಸಂಜೆ ನಡೆದುಕೊಂಡು ಬರಬೇಕಿತ್ತು. ಆರು ತಿಂಗಳು ಮಾತ್ರ ಅಲ್ಲಿ ಕೆಲಸ ಮಾಡಿದೆ.

1964ರಲ್ಲಿ ಪಿ.ಎಚ್‌ಡಿ ಮಾಡಲು ಕೆನಡಾಕ್ಕೆ ಹೋದೆ. ಪಿ.ಎಚ್‌ಡಿ ಮುಗಿದ ಬಳಿಕ ಒಂದು ವರ್ಷ ಅಲ್ಲೇ ವಿಜ್ಞಾನಿಯಾಗಿ ಕೆಲಸ ಮಾಡಿದೆ. 1968ರಲ್ಲಿ ಭಾರತಕ್ಕೆ ಬಂದಾಗ ನನ್ನ ತಾಯಿ ಮದುವೆ ಮಾಡಿಕೊಂಡೇ ಹೋಗುವಂತೆ ಒತ್ತಾಯಿಸಿದ್ದರಿಂದ ಅದೇ ವರ್ಷ ಆಗಸ್ಟ್‌ 28ರಂದು ಕಾಂತಿ ಅವರೊಂದಿಗೆ ನನ್ನ ಮದುವೆಯಾಯಿತು. ಹೆಲಿಫ್ಯಾಕ್ಸ್‌ನಲ್ಲಿ 12 ವರ್ಷ ಅಸಿಸ್ಟೆಂಟ್‌ ಪ್ರೊಫೆಸರ್‌ ಮತ್ತು ಪ್ರೊಫೆಸರ್‌ ಆಗಿ ಕೆಲಸ ಮಾಡಿದೆ. ವಿಜ್ಞಾನದಲ್ಲಿ ಅಮೆರಿಕ ಎಷ್ಟು ಮುಂದೆ ಹೋಗಿದೆ, ಭಾರತವನ್ನು ಈ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಲು ಏನು ಮಾಡಬಹುದು ಎಂದು ಅಲ್ಲಿ ಚಿಂತಿಸುತ್ತಿದ್ದೆ.

ಇದು 1976–77ರ ಕತೆ. ಒಮ್ಮೆ ನನ್ನ ಬಾಲ್ಯಸ್ನೇಹಿತ ರಾಮಕೃಷ್ಣ ನಾವಿದ್ದ ಹೆಲಿಫ್ಯಾಕ್ಸ್‌ಗೆ ವಿಸಿಟಿಂಗ್‌ ಪ್ರೊಫೆಸರ್‌ ಆಗಿ ಬಂದಿದ್ದವನು, ‘ನೀನು ಒಂದು ವರ್ಷಕ್ಕಾದರೂ ಐಐಎಸ್ಸಿಗೆ ವಿಸಿಟಿಂಗ್‌ ಪ್ರೊಫೆಸರ್‌ ಆಗಿ ಬರಬೇಕು’ ಎಂದ. ನಾನು ಬಂದವನೇ ಡಿಜಿಟಲ್‌ ಸಿಗ್ನಲ್‌ ಪ್ರೊಸೆಸಿಂಗ್‌ ಬಗ್ಗೆ ಪಾಠ ಮಾಡಿದೆ. ಇದು ನನ್ನ ಸ್ಪೆಷಾಲಿಟಿ ಕೂಡಾ. ಒಂದು ವರ್ಷವಾಗುತ್ತಲೇ ಕೆನಡಾಗೆ ವಾಸಪ್‌ ಹೋದರೂ ರಾಮಕೃಷ್ಣ ಮತ್ತು ಇತರ ಹಿರಿಯ ಪ್ರೊಫೆಸರ್‌ಗಳು ಇಲ್ಲಿಗೆ ಬರುವಂತೆ ಒತ್ತಡ ಹಾಕುತ್ತಲೇ ಇದ್ದರು. 1980ರ ಜನವರಿ ಒಂದರಂದು ಕೆನಡಾದಲ್ಲಿ ಹೊಸ ವರ್ಷದ ಪಾರ್ಟಿ ಮುಗಿಸಿ ಮನೆಗೆ ವಾಪಸಾಗಿದ್ದೆ. ರಾಮಕೃಷ್ಣ ಫೋನ್‌ ಮಾಡಿ ಡಾ.ರಾಜಾರಾಮಣ್ಣ ಫೋನ್‌ ಮಾಡ್ತಾರೆ ಅಂತಂದ. ಸ್ವಲ್ಪ ಹೊತ್ತಿನಲ್ಲೇ ಅವರು ಫೋನ್‌ ಮಾಡಿ ‘ಭಾರತಕ್ಕೆ ಬಾ’ ಎಂದರು. ಅಂತಹ ನಮ್ಮ ಮಹಾವಿಜ್ಞಾನಿ ಅವರು! ಇಲ್ಲ ಎನ್ನಲಾಗದೆ ಒಪ್ಪಿದೆ. ಹಾಗೆ 1980ರ ಜೂನ್‌ 24ರಂದು ಭಾರತಕ್ಕೆ ಬಂದೆ. ಕೊಚ್ಚಿನ್‌ನ ನೌಕಾ ಸಂಶೋಧನಾ ಪ್ರಯೋಗಾಲಯದಲ್ಲಿ ನನಗಾಗಿ ಹುದ್ದೆಯೊಂದನ್ನು ಸೃಷ್ಟಿಸಿದ್ದರು.

ಜುಲೈ ಏಳಕ್ಕೆ ಅಲ್ಲಿಗೆ ಹೋದೆ. ಧಾರಾಕಾರ ಮಳೆ. ಕರೆಂಟ್‌ ಇಲ್ಲ, ಸೀಮೆಎಣ್ಣೆ ಸ್ಟೌ... ದೊಡ್ಡ ಮಗಳು ರಜನಿಗೆ ಎಂಟೋ ಒಂಬತ್ತೋ ವರ್ಷ. ಶಾಲೆ ಬಿಡಿಸಿ ಕರಕೊಂಡು ಬಂದಿದ್ದೆ; ಕೊಚ್ಚಿನ್‌ನ ಶಾಲೆಯಲ್ಲಿ ಅಡ್ಮಿಶನ್‌ಗೂ, ಸೀಮೆಎಣ್ಣೆಗೂ ರೇಷನ್‌ ಕಾರ್ಡ್‌ ಕೇಳಿದರು. ನಾನು ರಾಜಾರಾಮಣ್ಣ ಅವರಿಗೆ ಪರಿಸ್ಥಿತಿ ವಿವರಿಸಿದೆ. ಅವರು 24 ಗಂಟೆಗಳಲ್ಲಿ ಗ್ಯಾಸ್‌ ಸಂಪರ್ಕ ಮತ್ತು ಮಕ್ಕಳಿಗೆ ನೇವಲ್‌ ಸ್ಕೂಲ್‌ನಲ್ಲಿ ಪ್ರವೇಶ ಕೊಡಿಸಿದರು. ಕೊಚ್ಚಿನ್‌ನಲ್ಲಿದ್ದಷ್ಟು ದಿನ ರಕ್ಷಣಾ ಇಲಾಖೆಗೆ ಬೇಕಾದ ಕೆಲಸ ಮಾಡಲು ಸಾಕಷ್ಟು ಅವಕಾಶಗಳು ಸಿಕ್ಕಿದವು.

ಮರೆಯಲಾಗದ ಅಪೂರ್ವ ಕ್ಷಣಗಳು...

1991ರಲ್ಲಿ ನಾನು ‘ಡಿಆರ್‌ಡಿಒ’ದ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಚೀಫ್‌ ಕಂಟ್ರೋಲರ್‌ ಆದಾಗ ಮತ್ತೆ ಅವ್ಯಾಕ್ಸ್‌ ಶುರು ಮಾಡುವಂತೆ ಜಾರ್ಜ್‌ ಫರ್ನಾಂಡಿಸ್‌ ತಿಳಿಸಿದರು. ಇದರ ಜೊತೆಗೆ ಲಘು ಯುದ್ಧ ವಿಮಾನಗಳನ್ನು ನಿರ್ಮಿಸುವ ಜವಾಬ್ದಾರಿ ನನಗೆ ವಹಿಸಿದರು. ಭಾರತೀಯ ವಾಯುಪಡೆಗಾಗಿ ರೂಪಿಸಿದ ಮಹತ್ವದ ಯೋಜನೆ ಅವ್ಯಾಕ್ಸ್‌’ (ಏರ್‌ಬೋರ್ನ್‌ ವಾರ್ನಿಂಗ್‌ ಅಂಡ್‌ ಕಂಟ್ರೋಲ್‌ ಸಿಸ್ಟಮ್‌).

1999ರಲ್ಲಿ ನನಗೆ 60 ವರ್ಷ. ನಿವೃತ್ತನಾಗಬೇಕಿತ್ತು. ಕಲಾಂ ಬಂದು, ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಕರೀತಾರೆ ಅಂದ್ರು. ಜಾರ್ಜ್‌ ನನ್ನನ್ನು ತಮ್ಮ ವೈಜ್ಞಾನಿಕ ಸಲಹೆಗಾರನಾಗಿ ನೇಮಿಸಿಕೊಂಡರು. ಎರಡು ತಿಂಗಳು ಕಳೆದಿತ್ತು. ಚಳಿಗಾಲದ ಒಂದು ದಿನ. ಇಂಡಿಯಾ ಗೇಟ್‌ ಕಡೆ ವಾಕಿಂಗ್‌ ಹೋಗಿ ವಾಪಸ್‌ ಬರುವಾಗ ಪ್ರಧಾನಿ ವಾಜಪೇಯಿ ಅವರ ಕಚೇರಿಯಿಂದ ಕರೆ ಬಂದಿತ್ತು. ಐದು ವರ್ಷ ಅವಧಿಗೆ ವೈಜ್ಞಾನಿಕ ಸಲಹೆಗಾರನಾಗಿ ನೇಮಕ ಮಾಡಿರುವುದಾಗಿ ಹೇಳಿದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದೆ.

ಅಷ್ಟು ಹೊತ್ತಿಗೆ ಅರುಣಾಚಲಂ ಲಘು ಯುದ್ಧ ವಿಮಾನ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದರು. 2001 ಜನವರಿ 4ರಂದು ಭಾರತದ ಮೊದಲ ಲಘು ಯುದ್ಧ ವಿಮಾನ ಮೊದಲ ಯಶಸ್ವಿ ಹಾರಾಟ ನಡೆಯಿತು. ಅದೇ ವರ್ಷ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನದಲ್ಲಿ ಅದರ ‍ಪ್ರದರ್ಶನ ಹಾರಾಟ ಏರ್ಪಡಿಸಿದೆವು. ಆದರೆ ಅದುವರೆಗೂ ಅದಕ್ಕೆ ಹೆಸರಿಟ್ಟಿರಲಿಲ್ಲ. ನಾನು ಸೂಚಿಸಿದ್ದ ‘ಸಾರಂಗ’ ಮತ್ತು ‘ತೇಜಸ್‌’ ಎಂಬ ಹೆಸರುಗಳಲ್ಲಿ ‘ತೇಜಸ್‌’ನ್ನು ಆಯ್ದುಕೊಂಡರು. ಒಂದು ಮಾತು ಹೇಳ್ತೀನಿ– ವಾಜಪೇಯಿ ಪ್ರತಿಯೊಬ್ಬರಿಗೂ ಮಾತನಾಡಲು ಸ್ವಾತಂತ್ರ್ಯ ಕೊಡೋರು. ಫರ್ನಾಂಡಿಸ್‌, ಪ್ರತಿದಿನ ತಮ್ಮ ಬಟ್ಟೆಗಳನ್ನು ತಾವೇ ಒಗೆದು ಚೆನ್ನಾಗಿ ಕೊಡವಿ ಒಣಗಿಸಿ ತಲೆದಿಂಬಿನಡಿ ಇಟ್ಟುಕೊಳ್ಳುತ್ತಿದ್ದರು. ಅದೇ ಇಸ್ತ್ರಿ! ಈ ಇಬ್ಬರ ವ್ಯಕ್ತಿತ್ವ ನನಗೆ ಬಹಳ ಇಷ್ಟ.

ನಮ್ಮ ಅವಧಿಯಲ್ಲಿ 700 ಕಿ.ಮೀ ದೂರ ಕ್ರಮಿಸಬಲ್ಲ ‘ಅಗ್ನಿ1 ’ ಕ್ಷಿಪಣಿ ಮತ್ತು 1700 ಕಿ.ಮೀ. ದೂರ ಕ್ರಮಿಸಬಲ್ಲ ‘ಅಗ್ನಿ2’ ನಿರ್ಮಿಸಿದೆವು. 2004ರಲ್ಲಿ ಪ್ರಣವ್‌ ಮುಖರ್ಜಿ ರಕ್ಷಣಾ ಸಚಿವರಾದರು. ವಾರಕ್ಕೊಮ್ಮೆ ಭೇಟಿಯಾಗುತ್ತಿದ್ದೆ. ಅಷ್ಟು ಹೊತ್ತಿಗೆ ನನಗೆ ಕೊಟ್ಟಿದ್ದ ಐದು ವರ್ಷದ ಎಕ್ಸ್‌ಟೆನ್ಷನ್‌ ಮುಗಿದಿತ್ತು. ಆಗಸ್ಟ್‌ 28, ನನ್ನ ಹುಟ್ಟುಹಬ್ಬದ ದಿನ ನಿವೃತ್ತಿಯಾಗುವುದು ನನ್ನ ಉದ್ದೇಶವಾಗಿತ್ತು. ಮುಖರ್ಜಿಯವರು ಬಿಡಲಿಲ್ಲ. ಪ್ರಧಾನಿ ಮನಮೋಹನ್ ಸಿಂಗ್‌ ಅವರ ಬಳಿ ಕರೆದೊಯ್ದು, ‘ಅಗ್ನಿ’ಯ ಹೊಸ ಕ್ಷಿಪಣಿ ಉಡಾವಣೆ ಮಾಡಿ ನಿವೃತ್ತನಾಗುವಂತೆ ಸೂಚಿಸಿ ಎರಡು ದಿನಗಳಿಗೆ ವಿಸ್ತರಣೆ ಕೊಟ್ರು. ಅಂತೆಯೇ ಆಗಸ್ಟ್‌ 30ರಂದು ‘ಅಗ್ನಿ’ ಉಡಾವಣೆ ಮಾಡಿಕೊಟ್ಟು ನಿವೃತ್ತನಾದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry