7

ಜೋಗ ಜಲಪಾತದಲ್ಲಿ ಜ್ಯೋತಿರಾಜ್‌ ನಾಪತ್ತೆ

Published:
Updated:
ಜೋಗ ಜಲಪಾತದಲ್ಲಿ ಜ್ಯೋತಿರಾಜ್‌ ನಾಪತ್ತೆ

ಕಾರ್ಗಲ್‌ (ಸಾಗರ ತಾಲ್ಲೂಕು): ಕಳೆದ ಭಾನುವಾರ ಜೋಗ ಜಲಪಾತದ ನೆತ್ತಿ ಪ್ರದೇಶದಿಂದ ಕಣ್ಮರೆಯಾಗಿದ್ದ ಯುವಕನನ್ನು ಹುಡುಕಲು ಕೊರಕಲು ಪ್ರದೇಶಕ್ಕೆ ಇಳಿದ ಸಾಹಸಿ ಜ್ಯೋತಿರಾಜ್‌ (ಕೋತಿರಾಜ್‌) ಮಂಗಳವಾರ ನಾಪತ್ತೆಯಾಗಿದ್ದಾರೆ.

ಮಂಗಳವಾರ ಮಧ್ಯಾಹ್ನ ಮೈಸೂರು ಬಂಗಲೆ ಬಳಿಯ ಮೆಟ್ಟಿಲುಗಳ ಮೂಲಕ ಜಲಪಾತದ ಗುಂಡಿಗೆ ಇಳಿದಿದ್ದ ಜ್ಯೋತಿರಾಜ್‌ ತಂಡ ತಟದಲ್ಲಿ ಶೋಧ ನಡೆಸಿತ್ತು. ನಂತರ ರಾಜ ಹಾಗೂ ರೋರರ್ ಜಲಪಾತದ ಮಧ್ಯೆ ಗುಹೆಯಂತಿರುವ ಪ್ರದೇಶದ ಬಳಿ ಹೋದ ಜ್ಯೋತಿರಾಜ್‌ ನಾಪತ್ತೆಯಾಗಿದ್ದಾರೆ ಎಂದು ತಂಡದ ಸದಸ್ಯ ಬಸವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕತ್ತಲಾಗಿದ್ದರಿಂದ ಹಾಗೂ ಮಂಜು ಕವಿದಿದ್ದ ಕಾರಣ ತಂಡದ ಉಳಿದ ಐವರು ಮೇಲೆ ಬಂದೆವು. ಜ್ಯೋತಿರಾಜ್ ಧೈರ್ಯಶಾಲಿ. ಬೆಳಿಗ್ಗೆ ಮೇಲೆ ಬರಬಹುದು ಎಂದು ಬಸವರಾಜ್‌ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೊಂದೆಡೆ ಜ್ಯೋತಿರಾಜ್‌ ನಾಪತ್ತೆ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಜಲಪಾತದ ಮೇಲಿನಿಂದಲೇ ದೊಡ್ಡ ಟಾರ್ಚ್‌ ಬೆಳಕನ್ನು ರಾಜಾ– ರೋರರ್‌ ಕೊರಕಲು ಜಾಗಕ್ಕೆ ಬಿಟ್ಟು ಶೋಧ ನಡೆಸಿದರು. ಆದರೂ ಫಲಕಂಡಿಲ್ಲ.

ಹಿನ್ನೆಲೆ: ಫೆ.25ರಂದು ಮಂಜುನಾಥ್‌ ಸಿದ್ದಾಪುರ ತಾಲ್ಲೂಕು ವ್ಯಾಪ್ತಿಯ ಬಾಂಬೆ ಟಿಬಿ (ಜಲಪಾತದ ನೆತ್ತಿ) ಪ್ರದೇಶಕ್ಕೆ ಬಂದಿದ್ದರು. ಸಮೀಪದ ಅಂಗಡಿಯೊಂದರ ಮುಂದೆ ಬೈಕ್‌ ನಿಲ್ಲಿಸಿ, ಮಾಲೀಕನಿಗೆ ಮೊಬೈಲ್‌ ಹಾಗೂ ಹಣ ಕೊಟ್ಟು ವಾಪಸ್‌ ಬರುವುದಾಗಿ ಹೇಳಿದ್ದರು. ನಂತರ ಅವರು

ನಾಪತ್ತೆಯಾಗಿದ್ದರು.

ಮಗ ಕಾಣೆಯಾಗಿದ್ದಕ್ಕೆ ಆತಂಕಗೊಂಡ ಪೋಷಕರು ಫೆ.26ರಂದು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಂದಿದ್ದರು. ನಂತರ ಜ್ಯೋತಿರಾಜ್‌ ಅವರ ತಂಡವನ್ನು ಸಾಗರ ತಾಲ್ಲೂಕಿನ ಜೋಗ ಜಲಪಾತ ಪ್ರದೇಶಕ್ಕೆ ಕರೆತಂದಿದ್ದರು.‌

‌ಹಿಂದೆ ಹುಬ್ಬಳ್ಳಿಯ ಯುವಕರ ತಂಡ ಜಲಪಾತದಲ್ಲಿ ನಾಪತ್ತೆಯಾಗಿತ್ತು. ಆಗಲೂ ಶೋಧ ಕಾರ್ಯಾಚರಣೆ ವೇಳೆ ಕೊರಕಲಿನಿಂದ ಬಿದ್ದಿದ್ದ ಜ್ಯೋತಿರಾಜ್‌ಗೆ ಗಂಭೀರ ಪೆಟ್ಟಾಗಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry