ಮಣ್ಣಿನಡಿ ಸಿಲುಕಿ ಇಬ್ಬರು ಸಾವು

7

ಮಣ್ಣಿನಡಿ ಸಿಲುಕಿ ಇಬ್ಬರು ಸಾವು

Published:
Updated:
ಮಣ್ಣಿನಡಿ ಸಿಲುಕಿ ಇಬ್ಬರು ಸಾವು

ಪಡುಬಿದ್ರಿ (ಉಡುಪಿ): ಕಾಪು ಪೇಟೆಯಲ್ಲಿ ಒಳಚರಂಡಿ ಕಾಮಗಾರಿಯ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮಂಗಳವಾರ ಮೃತಪಟ್ಟಿದ್ದಾರೆ.

ಗುತ್ತಿಗೆ ಕಾರ್ಮಿಕರಾದ ದಾವಣಗೆರೆಯ ಮೇಸರಹಳ್ಳಿ ನಿವಾಸಿ ದಾಸಪ್ಪ (49) ಮತ್ತು ಚಿತ್ರದುರ್ಗ ನಂದಿಪುರ ನಿವಾಸಿ ಉಮೇಶ್ (41) ಮೃತರು.

ಕಾಪು ಪೇಟೆಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್‌ ಮತ್ತು ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಹೊಂಡ ತೆಗೆಯುವ ವೇಳೆ ಈ ದುರಂತ ಸಂಭವಿಸಿದೆ. ಕಾರ್ಮಿಕರು ಎರಡೂ ಬದಿಯಲ್ಲಿ ನಿಂತು ಹೊಂಡದ ಅಗಲವನ್ನು ಅಳೆಯುತ್ತಿದ್ದರು. ರಸ್ತೆಯ ಮತ್ತೊಂದು ಮಗ್ಗುಲಿನಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಅದರ ಪರಿಣಾಮ ಭೂಮಿ ಅದುರಿದಂತಾಗಿ ಮಣ್ಣು ಕುಸಿದಿದ್ದು, ಇಬ್ಬರೂ ಕೂಡಾ ಗುಂಡಿಗೆ ಬಿದ್ದು ಮಣ್ಣಿನಡಿ ಸಿಲುಕಿಕೊಂಡರು.

ಕೂಡಲೇ ಜೆಸಿಬಿಯಿಂದ ಮಣ್ಣು ಹೊರ ತೆಗೆಯುವ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಜೆಸಿಬಿಯಿಂದ ಕಾರ್ಯಾಚರಣೆ ನಡೆಸಿದರೆ ಕಾರ್ಮಿಕರಿಗೆ ಗಾಯವಾಗಬಹುದು ಎಂಬ ಭೀತಿಯಲ್ಲಿ, ಅಲ್ಲಿದ್ದ ಜನರು ಸೇರಿ ಮಣ್ಣು ಹೊರತೆಗೆಯಲು ಮುಂದಾದರು.

30 ನಿಮಿಷಗಳ ಪ್ರಯತ್ನದ ಬಳಿಕ ಕಾರ್ಮಿಕರನ್ನು ಹೊರಕ್ಕೆ ತೆಗೆಯಲಾಗಿದ್ದು, ಬಳಿಕ ಆಂಬುಲೆನ್ಸ್ ಮೂಲಕ ಅವರನ್ನು ಉಡುಪಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು.

ದೇವಿಪ್ರಸಾದ್ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಯು ಕಾಮಗಾರಿಯ ಗುತ್ತಿಗೆ ವಹಿಸಿದ್ದು, ಉಪ ಗುತ್ತಿಗೆಯನ್ನು ನಾಗರಾಜ್ ಎಂಬವರಿಗೆ ನೀಡಲಾಗಿತ್ತು. ಅವರ ಮೂಲಕ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಸಂದರ್ಭ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದಾಸಪ್ಪ ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಉಮೇಶ್ ಅವರ ಪತ್ನಿ ಈ ಹಿಂದೆ ಮೃತಪಟ್ಟಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry