ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಹಾದಂಗಡಿ ಮಾಲೀಕನ ಪುತ್ರಿಗೆ 7 ಚಿನ್ನ!

Last Updated 27 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಮ್ಮದು ಮಧ್ಯಮ ವರ್ಗದ ಕುಟುಂಬ. ತಂದೆ– ತಾಯಿಗೆ ನಾವು ನಾಲ್ಕು ಜನ ಮಕ್ಕಳು. ತಂದೆ ಚಹಾ ಅಂಗಡಿ ನಡೆಸುತ್ತಾರೆ. ಕಷ್ಟಗಳ ಮಧ್ಯೆಯೂ ಓದಿಗೆ ಪ್ರೋತ್ಸಾಹ ನೀಡಿದ್ದಾರೆ’.

–ಹೀಗೆಂದು ಹೇಳುತ್ತಲೇ ರೇಖಾ ಬಸವರಾಜ ಭಾವುಕರಾದರು.

ಸ್ನಾತಕೋತ್ತರ ಕನ್ನಡ ವಿಷಯದಲ್ಲಿ 7 ಚಿನ್ನದ ಪದಕ ಮುಡಿಗೇರಿಸಿಕೊಂಡಿರುವ ಇವರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು. ಕೊರಳಲ್ಲಿದ್ದ ಪದಕಗಳನ್ನು ಮತ್ತೆ ಮತ್ತೆ ನೋಡಿಕೊಂಡರು. ತಂದೆ– ತಾಯಿಯನ್ನು ಎದುರುಗೊಂಡಾಗ ಅವರ ಕಣ್ಣಲ್ಲಿ ಆನಂದ ಭಾಷ್ಪ.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಜರುಗಿದ 36ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಸ್ವೀಕರಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಚಿಂಚೋಳಿ ತಾಲ್ಲೂಕು ಚಿಂಟಕುಂಟಾದ ಅನಿಲಕುಮಾರ್ ಗಾರಂಪಳ್ಳಿ ಅವರೊಂದಿಗೆ ಎರಡು ವರ್ಷಗಳ ಹಿಂದೆ ಮದುವೆ ಆಗಿದೆ. ಪತಿಯ ಮನೆಯಲ್ಲೂ ಓದಿಗೆ ಬೆಂಬಲ ದೊರಕಿತು. ಚಿನ್ನದ ಪದಕ ಪಡೆಯಬೇಕು ಎಂದು ಓದಿರಲಿಲ್ಲ. ಆದರೆ ಫಲಿತಾಂಶ ಬಂದಾಗ ಅಚ್ಚರಿ ಜತೆಗೆ ಖುಷಿಯಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು.

‘ಬಿ.ಇಡಿ ಓದಿ ಶಿಕ್ಷಕಿಯಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಗುರಿ ಇದೆ. ಬೋಧನಾ ವೃತ್ತಿ ನನಗೆ ಅಚ್ಚುಮೆಚ್ಚು’ ಎಂದರು.

ಕಂಪ್ಯೂಟರ್ ಬಳಕೆ ಗೊತ್ತಿರಲಿಲ್ಲ!

‘ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ಓದಿದ್ದೆ. ಆ ಬಳಿಕ ಬಿಸಿಎಗೆ ಸೇರಿದೆ. ಆರಂಭದಲ್ಲಿ ನನಗೆ ಕಂಪ್ಯೂಟರ್ ಆನ್ ಮಾಡಲು ಬರುತ್ತಿರಲಿಲ್ಲ. ಪ್ರಾಧ್ಯಾಪಕರು ಮತ್ತು ಸಹಪಾಠಿಗಳ ನೆರವಿನಿಂದ ಹಂತ ಹಂತವಾಗಿ ಕಲಿತೆ’ ಎಂದು ಎಂಸಿಎ ವಿಭಾಗದಲ್ಲಿ 6 ಚಿನ್ನದ ಪದಕಗಳನ್ನು ಪಡೆದಿರುವ ಪೂಜಾ ಮಡೆಪ್ಪ ಹೇಳಿದರು.

ಬೀದರ್ ಜಿಲ್ಲೆ ಹುಮನಾಬಾದ್‌ ತಾಲ್ಲೂಕು ಹುಡಗಿ ಗ್ರಾಮದ ಇವರು, ಚಿಟಗುಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಸದ್ಯ ಅತಿಥಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ‘ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ಸಂಯೋಜನೆಯಲ್ಲಿ ಓದಬೇಕು ಎಂಬ ಕನಸು ಇತ್ತು. ಆದರೆ ಬಡತನದ ಕಾರಣಕ್ಕಾಗಿ ಕಲಾ ವಿಭಾಗ ಸೇರಿದೆ. ಬಿಸಿಎಯಲ್ಲಿ 2 ಚಿನ್ನದ ಪಡೆದಿದ್ದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ (ಎನ್‌ಇಟಿ)ಸಿದ್ಧತೆ ನಡೆಸಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT