ಶ್ರೀದೇವಿ ಅಂತ್ಯಕ್ರಿಯೆ ಇಂದು

7

ಶ್ರೀದೇವಿ ಅಂತ್ಯಕ್ರಿಯೆ ಇಂದು

Published:
Updated:
ಶ್ರೀದೇವಿ ಅಂತ್ಯಕ್ರಿಯೆ ಇಂದು

ದುಬೈ/ಮುಂಬೈ: ದುಬೈನಲ್ಲಿ ಶನಿವಾರ ಮೃತರಾದ ಬಾಲಿವುಡ್‌ ನಟಿ ಶ್ರೀದೇವಿ (54) ಅವರ ಮೃತದೇಹವನ್ನು ಮಂಗಳವಾರ ರಾತ್ರಿ ಮುಂಬೈಗೆ ತರಲಾಯಿತು.ಮೃತದೇಹವನ್ನು ದುಬೈ ಪಬ್ಲಿಕ್‌ ಪ್ರಾಸಿಕ್ಯೂಷನ್‌  ಮಂಗಳವಾರ ಸಂಜೆ ಸಂಬಂಧಿಕರಿಗೆ ನೀಡಿತ್ತು.

ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ಮುಂಬೈಯ ವಿಲೆ ಪಾರ್ಲೆಯ ಸೇವಾ ಸಮಾಜ ಸ್ಮಶಾನದಲ್ಲಿ ಬುಧವಾರ ಮಧ್ಯಾಹ್ನ ನಂತರ 3.30ಕ್ಕೆ ನಡೆಯಲಿದೆ.

ದುಬೈ ಪಬ್ಲಿಕ್‌ ಪ್ರಾಸಿಕ್ಯೂಷನ್‌ ಮೃತದೇಹವನ್ನು ಸಂಬಂಧಿಕರಿಗೆ ಮಂಗಳವಾರ ಸಂಜೆ ನೀಡಿತು. ಬಳಿಕ, ಅನಿಲ್‌ ಅಂಬಾನಿ ಅವರ ಖಾಸಗಿ ವಿಮಾನದಲ್ಲಿ ರಾತ್ರಿ 9.30ಕ್ಕೆ ತರಲಾಯಿತು. ವಿಮಾನವನ್ನು ದುಬೈಗೆ ಭಾನುವಾರವೇ ಕಳುಹಿಸಲಾಗಿತ್ತು.

ವಿಮಾನದಲ್ಲಿ ಶ್ರೀದೇವಿ ಅವರ ಪತಿ ಬೋನಿಕಪೂರ್‌, ಮೈದುನ ಸಂಜಯ್‌ ಕಪೂರ್‌, ಮಲಮಗ ಅರ್ಜುನ್‌ , ಸಂದೀಪ್‌ ಮತ್ತು ರೀನಾ ಮಾರ್ವಾ ಮತ್ತಿತರರು ಜತೆಗಿದ್ದರು.

ಮಕ್ಕಳಾದ ಜಾಹ್ನವಿ ಮತ್ತು ಖುಷಿ, ಬಂಧುಗಳಾದ ಅನಿಲ್‌ಕಪೂರ್‌, ಸೋನಂಕಪೂರ್‌ ಅಲ್ಲದೆ ಸ್ನೇಹಿತರಾದ ಅಂಬಾನಿ, ಅಮರ್‌ಸಿಂಗ್‌ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿದ್ದು ಶವವನ್ನು ಸ್ವೀಕರಿಸಿದರು.

ನಂತರ ಅಂಧೇರಿಯಲ್ಲಿರುವ ಲೋಖಂಡವಾಲಾದ ಶ್ರೀದೇವಿ ಅವರ ಮನೆ ‘ಗ್ರೀನ್‌ ಎಕರ್ಸ್‌’ಗೆ ರಾತ್ರಿ 10.30ರ ಸುಮಾರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಆ ವೇಳೆಗಾಗಲೇ ಸಾವಿರಾರು ಅಭಿಮಾನಿಗಳು ಮನೆಯ ಎದುರು ಜಮಾಯಿಸಿದ್ದರು. ದಾರಿಯುದ್ದಕ್ಕೂ ಹಾಗೂ ಶ್ರೀದೇವಿ ಅವರ ಮನೆಯ ಎದುರು ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿತ್ತು.

ಸಾವಿನ ಬಗ್ಗೆ ಉಂಟಾಗಿದ್ದ ಊಹಾಪೋಹಗಳಿಗೆ ಪ್ರಾಸಿಕ್ಯೂಷನ್‌ ಕಚೇರಿ ತೆರೆ ಎಳೆದಿದೆ. ‘ಪ್ರಜ್ಞೆ ಕಳೆದುಕೊಂಡ ಶ್ರೀದೇವಿ ಸ್ನಾನದ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಪ್ರಕರಣದ ಸಮಗ್ರ ತನಿಖೆಯ ಬಳಿಕ ಪಾರ್ಥಿವ ಶರೀರವನ್ನು ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಅದರೊಂದಿಗೆ ಪ್ರಕರಣ ಮುಕ್ತಾಗೊಳಿಸಲಾಗಿದೆ’ ಎಂದು ಪ್ರಾಸಿಕ್ಯೂಷನ್‌ ಕಚೇರಿ ತಿಳಿಸಿದೆ.

ದುಬೈನ ಜುಮೈರಾ ಎಮಿರೇಟ್ಸ್‌ ಟವರ್ಸ್‌ ಹೋಟೆಲ್‌ನ ತಮ್ಮ ಕೊಠಡಿಯಲ್ಲಿ ಶ್ರೀದೇವಿ ಶನಿವಾರ ಮೃತಪಟ್ಟಿದ್ದರು. ಬೋನಿ ಕಪೂರ್‌, ಮಲಮಗ ಅರ್ಜುನ್‌ ಕಪೂರ್‌ ಮತ್ತು ಸಂಬಂಧಿಕರು ದೇಹವನ್ನು ಪಡೆದುಕೊಂಡರು.

‘ಇಂತಹ ಪ್ರಕರಣಗಳಲ್ಲಿ ಅನುಸರಿಸಬೇಕಾದ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಲಾಗಿದೆ’ ಎಂದು ದುಬೈ ಪಬ್ಲಿಕ್‌ ಪ್ರಾಸಿಕ್ಯೂಷನ್‌ ಹೇಳಿದೆ.

ಹೃದಯ ಸ್ತಂಭನದಿಂದ ಸಾವು ಸಂಭವಿಸಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಬಳಿಕ, ಅವರು ಸ್ನಾನದ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟರು ಎಂದು ಹೇಳಲಾಯಿತು. ಮುಂಬೈಗೆ ಹಿಂದಿರುಗಿದ್ದ ಬೋನಿ ಕಪೂರ್‌ ಮತ್ತೆ ದುಬೈಗೆ ಹೋದದ್ದು ಯಾಕೆ ಎಂಬ ಪ್ರಶ್ನೆಯೂ ಎದ್ದಿತ್ತು.

‌ಅಂತಿಮ ದರ್ಶನ

ಶ್ರೀದೇವಿ ಪಾರ್ಥಿವ ಶರೀರವನ್ನು ಲೋಖಂಡವಾಲಾದ ಸೆಲೆಬ್ರೇಷನ್‌ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಅಂಧೇರಿ ವೆಸ್ಟ್‌ನಲ್ಲಿರುವ ಈ ಕ್ಲಬ್‌ನಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ.

ಮಾಧ್ಯಮ ಪ್ರತಿನಿಧಿಗಳು ಕೂಡ ಅಂತಿಮ ಗೌರವ ಸಲ್ಲಿಸುವುದಕ್ಕೆ ಅವಕಾಶ ಇದೆ. ಆದರೆ ಕ್ಯಾಮೆರಾ, ಧ್ವನಿಮುದ್ರಣ ಸಾಧನಗಳಿಗೆ ಅವಕಾಶ ಇಲ್ಲ ಎಂದು ಕುಟುಂಬ ಹೇಳಿದೆ.

ಮಧ್ಯಾಹ್ನ 2 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಲಿದೆ. ಸ್ಪೋರ್ಟ್‌ ಕ್ಲಬ್‌ನಿಂದ ವಿಲೆ ಪಾರ್ಲೆ ಸೇವಾ ಸಮಾಜ ರುದ್ರಭೂಮಿವರೆಗೆ ಮೆರವಣಿಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry