₹50 ಕೋಟಿಗಿಂತ ಹೆಚ್ಚಿನ ಸಾಲಕ್ಕೆ ಕಣ್ಗಾವಲು

7

₹50 ಕೋಟಿಗಿಂತ ಹೆಚ್ಚಿನ ಸಾಲಕ್ಕೆ ಕಣ್ಗಾವಲು

Published:
Updated:
₹50 ಕೋಟಿಗಿಂತ ಹೆಚ್ಚಿನ ಸಾಲಕ್ಕೆ ಕಣ್ಗಾವಲು

ನವದೆಹಲಿ: ಸಾಲ ವಂಚನೆಯಿಂದ ತತ್ತರಿಸಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹೊಣೆಗಾರಿಕೆ ನಿಗದಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ವಂಚನೆ ಪ್ರಕರಣಗಳನ್ನು ಗುರುತಿಸುವಂತೆ ಮತ್ತು ಅದರಿಂದಾಗಿ ಉದ್ದೇಶಪೂರ್ವಕ ಸುಸ್ತಿದಾರರಾಗಿರುವವರನ್ನು ತನಿಖೆಗೆ ಒಳಪಡಿಸುವಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಸೂಚಿಸಿದ್ದಾರೆ.

₹50 ಕೋಟಿಗಿಂತ ಹೆಚ್ಚಿನ ಮೊತ್ತದ ವಸೂಲಾಗದ ಸಾಲ ಖಾತೆಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಅದರಲ್ಲಿ ವಂಚನೆ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಜಾರಿ ನಿರ್ದೇಶನಾಲಯ ಅಥವಾ ಕಂದಾಯ ಗುಪ್ತಚರ ಇಲಾಖೆಯ ಮೂಲಕ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ. ಹಣ ಅಕ್ರಮ ವರ್ಗಾವಣೆ, ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಗಳ ಉಲ್ಲಂಘನೆ ಆಗಿದೆಯೇ ಎಂಬುದರತ್ತ ಗಮನ ಹರಿಸುವಂತೆಯೂ ಅವರು ನಿರ್ದೇಶಿಸಿದ್ದಾರೆ.

ಕಾರ್ಯನಿರ್ವಹಣೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ 15 ದಿನಗಳ ಗಡುವು ನೀಡಲಾಗಿದೆ ಎಂದು ರಾಜೀವ್‌ ಕುಮಾರ್‌ ತಿಳಿಸಿದ್ದಾರೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸೇರಿ ವಿವಿಧ ಬ್ಯಾಂಕುಗಳಿಗೆ ಉದ್ಯಮಿಗಳು ವಂಚನೆ ಮಾಡಿದ ಪ್ರಕರಣಗಳು ಬಯಲಾದ ಬಳಿಕ ಈ ಎಚ್ಚರಿಕೆ ಕೊಡಲಾಗಿದೆ.

ನಷ್ಟದ ಅಪಾಯವನ್ನು ಗುರುತಿಸಿ ಅದನ್ನು ತಡೆಯಲು ಸಜ್ಜಾಗುವಂತೆ ಮತ್ತು ನೀಲನಕ್ಷೆ ಸಿದ್ಧಪಡಿಸುವಂತೆ ಬ್ಯಾಂಕುಗಳ ಕಾರ್ಯನಿರ್ವಾಹಕ ನಿರ್ದೇಶಕರು  ಮತ್ತು ಮುಖ್ಯ ತಾಂತ್ರಿಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.

‘ಅಪಾಯವನ್ನು ಕಡಿಮೆ ಮಾಡುವ ಅತ್ಯುತ್ತಮ ಪದ್ಧತಿಗಳು ಯಾವುವು ಎಂಬುದನ್ನು ಗುರುತಿಸಬೇಕು. ಅಗತ್ಯ ಕಾರ್ಯತಂತ್ರಗಳನ್ನು ಅನುಸರಿಸಬೇಕು. ತಾಂತ್ರಿಕ ಪರಿಹಾರಗಳು ಏನು ಎಂಬುದನ್ನು ಕಂಡುಕೊಳ್ಳಬೇಕು; ಹಿರಿಯ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿ ಮಾಡಬೇಕು’ ಎಂದು ರಾಜೀವ್‌ ಕುಮಾರ್‌ ಟ್ವೀಟ್‌  ಮಾಡಿದ್ದಾರೆ.

ಉತ್ತಮ ಪದ್ಧತಿಗಳು ಯಾವುವು ಮತ್ತು ಈಗ ಇರುವ ವ್ಯವಸ್ಥೆಯಲ್ಲಿ ಇರುವ ದೌರ್ಬಲ್ಯಗಳೇನು ಎಂಬುದನ್ನು ಗುರುತಿಸುವುದು ಬ್ಯಾಂಕುಗಳ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಮುಖ್ಯ ತಾಂತ್ರಿಕ ಅಧಿಕಾರಿಗಳ ಹೊಣೆಗಾರಿಕೆ ಎಂದು ಅವರು ತಿಳಿಸಿದ್ದಾರೆ.

ಅತ್ಯುತ್ತಮ ಪದ್ಧತಿಗಳ ಜತೆಗೆ ತಮ್ಮ ಬ್ಯಾಂಕುಗಳ ವ್ಯವಸ್ಥೆಯನ್ನು ಹೋಲಿಸಿ ನೋಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.

ನೀರವ್‌ ವಂಚನೆ ಮೊತ್ತ ₹12,700 ಕೋಟಿ

‌ಆಭರಣ ವ್ಯಾಪಾರಿ ನೀರವ್‌ ಮೋದಿ ವಂಚನೆ ಮಾಡಿರುವ ಮೊತ್ತ ₹11,400 ಕೋಟಿ ಅಲ್ಲ, ಅದಕ್ಕಿಂತ ₹1,300 ಕೋಟಿಯಷ್ಟು ಹೆಚ್ಚು ಎಂದು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ಹೇಳಿದೆ.

ಈ ಹಗರಣದ ಬಗ್ಗೆ ಹಲವು ಸಂಸ್ಥೆಗಳು ತನಿಖೆ ನಡೆಸುತ್ತಿವೆ. ₹11,400 ಕೋಟಿಯ ವಂಚನೆಯೇ ದೇಶದ ಅತ್ಯಂತ ದೊಡ್ಡ ಬ್ಯಾಂಕಿಂಗ್‌ ಹಗರಣ ಎಂದು ಗುರುತಿಸಲಾಗಿತ್ತು. ಈಗ ಈ ಮೊತ್ತ ₹12,700 ಕೋಟಿಗೆ ಏರಿಕೆಯಾಗಿದೆ.

ನೀರವ್‌ ಮತ್ತು ಅವರ ಸಹಚರರು ವಿದೇಶಿ ಸಾಲ ಪಾವತಿಗಾಗಿ ಪಿಎನ್‌ಬಿ ಮತ್ತು ಇತರ ಬ್ಯಾಂಕುಗಳಿಂದ ಖಾತರಿಪತ್ರಗಳನ್ನು ಪಡೆದು ವಂಚನೆ ಎಸಗಿದ್ದು ಇದೇ 14ರಂದು ಬಯಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry